ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಶ್ವವಿದ್ಯಾನಿಲಯದ ಕೈಪಿಡಿ

ಹಳತು ಹೊನ್ನು
Last Updated 28 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪಿತ ವರ್ಷದ ಕೈಪಿಡಿಯಾದ ‘A Handbook to the University of Mysore’ ಎನ್ನುವ ಈ ಪುಸ್ತಕವನ್ನು ಮೈಸೂರಿನ ವೆಸ್ಲಿಯನ್ ಮಿಷನ್ ಪ್ರೆಸ್‌ನವರು 1917ರಲ್ಲಿ ಅಚ್ಚು ಮಾಡಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯವು ಆರಂಭಗೊಂಡ 1916-17ರಲ್ಲಿ, ಆ ವರ್ಷದಲ್ಲಿ ವಿಶ್ವವಿದ್ಯಾನಿಲಯದ ಸ್ವರೂಪ ಹಾಗೂ ಸಕಲಕಾರ್ಯ ಕಾರಣಗಳ ದರ್ಶಿನಿ ಈ ಕೈಪಿಡಿ. ಇಂಗ್ಲಿಷ್ ಭಾಷೆಯಲ್ಲಿರುವ ಈ ಕೃತಿ 214 ಪುಟ ಹೊಂದಿದೆ. ಆಗ ದೇಶದಲ್ಲಿ ಇದ್ದದ್ದು ಕಲ್ಕತ್ತಾ, ಬೊಂಬಾಯಿ, ಮದ್ರಾಸು, ಅಲಹಾಬಾದ್ ಮತ್ತು ಪಂಜಾಬ್ ವಿಶ್ವವಿದ್ಯಾಲಯಗಳು ಮಾತ್ರ. ಈ ಐದೂ ಬ್ರಿಟಿಷ್ ಸಾಮ್ರಾಜ್ಯಶಾಹೀ ಇಂಡಿಯಾ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿತ್ತು ಮತ್ತು ಕನ್ನಡನಾಡಿನ ಪ್ರದೇಶಗಳೂ ಸೇರಿದಂತೆ ಇಡೀ ದಕ್ಷಿಣ ಭಾರತದ ಎಲ್ಲ ಕಾಲೇಜುಗಳು ಮದ್ರಾಸು ವಿಶ್ವವಿದ್ಯಾಲಯದ ಅಧೀನ ಸಂಸ್ಥೆಗಳಾಗಿದ್ದವು. ಹೀಗಾಗಿ ನಮ್ಮ ಮೈಸೂರು ಸೀಮೆಯ ಮೈಸೂರಿನ ಮಹಾರಾಜಾ ಕಾಲೇಜು ಹಾಗೂ ಬೆಂಗಳೂರಿನ ಸೆಂಟ್ರಲ್ ಕಾಲೇಜು– ಇವೆರಡೂ ಮದ್ರಾಸು ವಿಶ್ವವಿದ್ಯಾಲಯಕ್ಕೇ ಸೇರಿದ್ದವು. 1916ರ ಜುಲೈ 25ರ ವಿಶೇಷ ಗೆಜೆಟ್‌ನ ಪ್ರಕಟಣೆಯ ಮೂಲಕ ಮೈಸೂರು ವಿಶ್ವವಿದ್ಯಾನಿಲಯವು ಸ್ಥಾಪನೆಗೊಂಡಿತು. ಬ್ರಿಟಿಷ್ ಇಂಡಿಯಾ ಸರ್ಕಾರದ ಹೊರಗೆ ರಚನೆಗೊಂಡ ಭಾರತದ ಮೊಟ್ಟಮೊದಲ ವಿಶ್ವವಿದ್ಯಾಲಯ ಎನ್ನುವ ಹೆಮ್ಮೆ ಇದರದ್ದು.

ಅಂದಿನ ಮೈಸೂರು ಮಹಾರಾಜರಾದ ಶ್ರೀ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್, ಜಿ.ಸಿ.ಎಸ್.ಐ ಈ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಗಳು. ಯುವರಾಜರಾಗಿದ್ದ ಶ್ರೀ ಶ್ರೀ ಕಂಠೀರವ ನರಸರಾಜ ಒಡೆಯರ್ ಬಹದ್ದೂರ್, ಜಿ.ಸಿ.ಐ.ಇ ಅವರು ಮೊದಲ ಪ್ರೊ–ಚಾನ್ಸೆಲರ್ ಹಾಗೂ ರಾಜಮಂತ್ರಪ್ರವೀಣ ಎಚ್.ವಿ. ನಂಜುಂಡಯ್ಯ, ಎಸ್ಕ್ವೈರ್, ಎಂ.ಎ., ಎಂ.ಎಲ್., ಸಿ.ಐ.ಇ ಅವರು ಮೊಟ್ಟಮೊದಲ ವೈಸ್ ಚಾನ್ಸೆಲರ್. ಡೆನ್ಹ್ಯಾಮ್, ಎಸ್ಕೈರ್, ಎಂ.ಎ., ಅವರು ಮೊಟ್ಟ ಮೊದಲ ರಿಜಿಸ್ಟ್ರಾರ್.

ನಂಜುಂಡಯ್ಯ ಅವರು ಕನ್ನಡದ ಖ್ಯಾತ ಲೇಖಕಿ ಎಚ್.ವಿ. ಸಾವಿತ್ರಮ್ಮ ಅವರ ತಾತಂದಿರು. ಅ. 13, 1860ರಂದು ಜನಿಸಿದ ಅವರು ತಮ್ಮ ಷಷ್ಟ್ಯಬ್ದಿ ವರ್ಷ 1920ರ ಮೇ 2ರಂದು ತೀರಿಕೊಂಡರು. ಮದ್ರಾಸ್‌ನ ಕ್ರಿಶ್ಚಿಯನ್ ಕಾಲೇಜಿನ ಪದವೀಧರರಾಗಿದ್ದ ಶ್ರೀಯುತರು 1904ರಲ್ಲಿ ಮೈಸೂರು ಸರ್ಕಾರದ ನ್ಯಾಯಶಾಖೆಯಲ್ಲಿ ಚೀಫ್ ಕೋರ್ಟಿನ ನ್ಯಾಯಾಧೀಶರಾಗಿದ್ದರು. ಮದ್ರಾಸು ವಿಶ್ವವಿದ್ಯಾಲಯದ ಫೆಲೋ ಆಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರು ಹಾಗೂ ಮೊದಲ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ( 1915, 1918- ಬೆಂಗಳೂರು ಹಾಗೂ 1917- ಮೈಸೂರು) ಅಧ್ಯಕ್ಷರಾಗಿದ್ದರು. ‘ಲೇಖ್ಯ ಬೋಧಿನಿ’ (1900), ‘ವ್ಯವಹಾರ ದೀಪಿಕೆ’ (1900) ಹಾಗೂ ‘ಅರ್ಥಶಾಸ್ತ್ರ’ (1901)– ಅವರು ಕನ್ನಡದಲ್ಲಿ ರಚಿಸಿರುವ ಪುಸ್ತಕಗಳು.

ವಿಶ್ವವಿದ್ಯಾನಿಲಯದ ಮುಖ್ಯ ಕಚೇರಿಯಿದ್ದ ಮೈಸೂರಿನ ಮಹಾರಾಜ ಕಾಲೇಜು ಹಾಗೂ 1858ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಸೆಂಟ್ರಲ್ ಕಾಲೇಜು– ಇವೆರಡೂ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟು 1ನೆಯ ಜೂಲೈ 1917ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜು ಸಹ ಇದರ ವ್ಯಾಪ್ತಿಗೆ ಬಂತು. ಮುಂದೆ ಕಲೆ ಹಾಗೂ ಮಾನವಿಕ ಕ್ಷೇತ್ರಗಳಲ್ಲಿ ಮೈಸೂರಿನ ಮಹಾರಾಜ ಕಾಲೇಜು ಹಾಗೂ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಬೃಹತ್ತು ಮಹತ್ತುಗಳೊಂದಿಗೆ ಅಭಿವೃದ್ಧಿಗೊಂಡವು. 1917ರ ಜೂಲೈ ಕೊನೆಯ ಹೊತ್ತಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆ ಕಾಲಕ್ಕೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪದವೀಧರರಾಗಿದ್ದ ಎಚ್.ವಿ. ನಂಜುಂಡಯ್ಯ, ಸರ್ ಎಂ. ವಿಶ್ವೇಶ್ವರಯ್ಯ, ಆರ್. ರಘುನಾಥರಾವ್, ಸಿ.ಎಸ್. ಬಾಲಸುಂದರಂ ಅಯ್ಯರ್ (ಟಿ.ಪಿ.ಕೈಲಾಸಂ ಅವರ ಮಾವಂದಿರು), ಚಾಣಾಕ್ಯನ ಅರ್ಥಶಾಸ್ತ್ರದ ಖ್ಯಾತಿಯ ಆರ್. ಶಾಮಾಶಾಸ್ತ್ರಿ, ಬಿ.ಎಂ. ಶ್ರೀಕಂಠಯ್ಯ, ಎ.ಆರ್. ವಾಡಿಯಾ ಹಾಗೂ ಬೆಳ್ಳಾವೆ ವೆಂಕಟನಾರಣಪ್ಪ ಅವರುಗಳನ್ನೊಳಗೊಂಡಂತೆ 81 ಪದವೀಧರರು ಪದವೀಧರರಾಗಿ ನೊಂದಾಯಿಸಿಕೊಂಡಿದ್ದರು.

ಮೈಸೂರು ಮಹಾರಾಜ ಕಾಲೇಜಿನ ಅಂದಿನ ಕನ್ನಡ ವಿಭಾಗದಲ್ಲಿ ಡಿ. ಶ್ರೀನಿವಾಸಾಚಾರ್, ಸಿ. ನರಸಿಂಹ ಶಾಸ್ತ್ರಿ ಮತ್ತು ಕೆ. ವರದಾಚಾರ್ ಅವರುಗಳು ಅಧ್ಯಾಪಕರುಗಳಾಗಿದ್ದರೆ, ಬಿ.ಎಂ. ಶ್ರೀಕಂಠಯ್ಯ ಅವರು ಇಂಗ್ಲಿಷ್ ವಿಭಾಗದ ಅಧ್ಯಾಪಕರಾಗಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎ.ಆರ್. ಕೃಷ್ಣಶಾಸ್ತ್ರೀ ಅವರು ಕನ್ನಡ ಮತ್ತು ಸಂಸ್ಕೃತ ವಿಭಾಗಗಳಲ್ಲಿ ಅಧ್ಯಾಪಕರಾಗಿದ್ದರು. ಬೆಳ್ಳಾವೆ ವೆಂಕಟನಾರಣಪ್ಪ ಅವರು ಭೌತಶಾಸ್ತದ ವಿಭಾಗದಲ್ಲಿ ಅಧ್ಯಾಪಕರಾಗಿದ್ದರು. ಈ ಮಹನೀಯರುಗಳು ನವೋದಯ ಪೂರ್ವ ಹಾಗೂ ನವೋದಯ ಕಾಲದ ಕನ್ನಡ ಸಾಹಿತ್ಯ ಸೃಷ್ಟಿ ಹಾಗೂ ಪ್ರಸಾರ–ಪ್ರಚಾರಗಳಲ್ಲಿ ತಮ್ಮನ್ನು ತಾವು ನಿಸ್ಪೃಹರಾಗಿ ತೊಡಗಿಸಿಕೊಂಡವರು.

1917-18ರ ಸಾಲಿನ ಮೊದಲ ಬಿ.ಎ. ತರಗತಿ ಕನ್ನಡ ಭಾಷೆ ಅಧ್ಯಯನದ ಪಠ್ಯವಸ್ತು ಇಂತಿದೆ:  ಡೀಟೈಲ್ಡ್–  1. ಪಂಡಿತ ಕರಿಬಸಪ್ಪ ಶಾಸ್ತ್ರಿಗಳು ಸಂಪಾದಿಸಿದ ‘ಜೈಮಿನಿ ಭಾರತ’ (18ರಿಂದ 21ನೆಯ ಸಂಧಿ). 2. ಪಂಡಿತ ಸೋಸಲೆ ಅಯ್ಯಾಶಾಸ್ತ್ರಿಗಳು ರಚಿಸಿದ ‘ಮೈಸೂರು ಮಹಾರಾಜ ಚರಿತಂ’ (1ರಿಂದ 6 ಆಶ್ವಾಸಗಳು), 3. ಲಕ್ಷ್ಮೀನರಸಿಂಹ ಶಾಸ್ತ್ರಿಗಳು ರಚಿಸಿದ ‘ಷೇಕ್ಸ್‌ಪಿಯರನ ಕಥೆಗಳು’. ನಾನ್ ಡೀಟೈಲ್ಡ್– 1. ಬಿ. ವೆಂಕಟಾಚಾರ್ಯರ ‘ವಿಷವೃಕ್ಷ’ ಹಾಗೂ ಎಂ.ವೆಂಕಟಕೃಷ್ಣಯ್ಯ ಅವರ ‘ಬುಕರ್ ವಾಷಿಂಗ್‌ಟನ್’. ಈ ಸಾಲಿನ ತರಗತಿಗಳಿಗೆ ಅಂದು ಪ್ರವೇಶ ಪರೀಕ್ಷೆಗಳಿದ್ದುದು ಒಂದು ವಿಶೇಷ. ಕನ್ನಡಕ್ಕೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆಗೆ ಎಂ.ಎ. ರಾಮಾನುಜ ಅಯ್ಯಂಗಾರ್ ಅವರು ಸಂಪಾದಿಸಿದ ‘ತಿರುಮಲಾರ್ಯನ ಕರ್ಣವೃತ್ತಾಂತ ಕಥೆ’ ಹಾಗೂ ‘ಎಸ್.ಜಿ. ಗೋವಿಂದರಾಜ ಅಯ್ಯಂಗಾರ್ಯ ಅವರು ಅನುವಾದಿಸಿದ ‘ಪ್ರಿಂರೋಜವಿಜಯಂ’ (ಹಳತು ಹೊನ್ನು- 29 ಮೇ 2011) ಪಠ್ಯಗಳಾಗಿದ್ದವು.

ಕನ್ನಡ, ತಮಿಳು ಮತ್ತು ತೆಲುಗು ವಿಭಾಗಗಳಿಗೆ ಎಂಟು ಜನ ವಿದ್ವಾಂಸರ ಒಂದೇ ಅಧ್ಯಯನ ಮಂಡಳಿಯಿದ್ದು ಅದರಲ್ಲಿ ಬಿ.ಎಂ. ಶ್ರೀಕಂಠಯ್ಯ ಹಾಗು ತಮಿಳು ಆಧುನಿಕ ಸಾಹಿತ್ಯದ ಪಿತಾಮಹ ಮಹಾಮಹೋಪಾಧ್ಯಾಯ ಯು.ವಿ.  ಸ್ವಾಮಿನಾಥ ಅಯ್ಯರ್, ಕನ್ನಡದ ಮಹಾಮಹೋಪಾಧ್ಯಾಯ ಆರ್. ನರಸಿಂಹಾಚಾರ್ ಮತ್ತು ಕರಿಬಸಪ್ಪ ಶಾಸ್ತ್ರಿ ಅವರುಗಳು ಇದ್ದದ್ದು ವಿಶೇಷ. ಕನ್ನಡ ವಿಭಾಗದ ಪರೀಕ್ಷಾ ಮಂಡಳಿಯಲ್ಲಿ ಬಿ.ಎಂ. ಶ್ರೀಕಂಠಯ್ಯ ಹಾಗೂ ಆರ್. ರಘುನಾಥ ರಾವ್ ಅವರುಗಳು ಇದ್ದರು.

ಯೂನಿವರ್ಸಿಟಿಯ ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ಒಂದು ಸ್ವಾರಸ್ಯಕರ ಸಂಗತಿಯನ್ನು ಈ ಕೈಪಿಡಿಯಲ್ಲಿ ನೀಡಲಾಗಿದೆ. 1917ರಲ್ಲಿ ಸೆಂಟ್ರಲ್ ಕಾಲೇಜು ಹಾಸ್ಟೆಲಿನಲ್ಲಿನ 96 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಬ್ರಾಹ್ಮಣರಾಗಿದ್ದರೆ, 21 ಜನ ಬ್ರಾಹ್ಮಣೇತರರು. ಮಹಾರಾಜ ಕಾಲೇಜು ಹಾಸ್ಟೆಲ್‌ನ 120 ವಿದ್ಯಾರ್ಥಿಗಳಲ್ಲಿ 97 ಬ್ರಾಹ್ಮಣರು ಹಾಗೂ 23 ಬ್ರಾಹ್ಮಣೇತರರು ಪ್ರವೇಶ ಪಡೆದಿದ್ದರು. ಈ ಅಂಕಿ ಅಂಶಗಳಲ್ಲಿ ಕಂಡುಬರುವ ಸಾಮಾಜಿಕ ಅಸಮಾನತೆ ಕಣ್ಣು ಕುಕ್ಕುವಂತಹುದು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಿದ್ಧ ವಿಸ್ತರಣಾ ಉಪನ್ಯಾಸಗಳು 1917ರಿಂದಲೇ ಸತತವಾಗಿ ನಡೆದುಕೊಂಡು ಬರುತ್ತಿವೆ. ಪುಸ್ತಕ ಪ್ರಕಟಣಾ ವಿಭಾಗ, ಒಳ್ಳೆಯ ಗ್ರಂಥಾಲಯ, ಕ್ರೀಡಾ ವಿಭಾಗ, ವಿದ್ಯಾರ್ಥಿಗಳಿಗಾಗಿ ಮ್ಯಾಗಜೀನ್ ಇತ್ಯಾದಿಗಳ ಬಗ್ಗೆಯೂ ವಿಸ್ತೃತ ಮಾಹಿತಿಗಳು ಈ ಹೊತ್ತಗೆಯಲ್ಲಿದೆ.

2016 ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ವರ್ಷ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದ ಆರಂಭಿಕ ಸ್ವರೂಪ ಹಾಗೂ ಸಕಲ ವಿಷಯ ಸಮಗ್ರ ದರ್ಶಿನಿಯಾಗಿರುವ ಈ ಕೈಪಿಡಿಗೆ ವಿಶೇಷ ಮಹತ್ವವಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT