ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು- ಶಿವಮೊಗ್ಗ ಇಂಟರ್‌ಸಿಟಿ ರೈಲು ಆರಂಭ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಮೈಸೂರು:  ‘ನಿಗದಿತ ಕಾಲಮಿತಿಯಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಅಗತ್ಯ ಭೂಮಿ ಮತ್ತು ಹಣವನ್ನು ರಾಜ್ಯ ಸರ್ಕಾರ ನೀಡಬೇಕು’ ಎಂದು ರೈಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಭಾನುವಾರ ಹೇಳಿದರು.

ನಗರದ ರೈಲು ನಿಲ್ದಾಣದಲ್ಲಿ ‘ಮೈಸೂರು-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್’  ರೈಲುಗಾಡಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಕೇಂದ್ರ ಮತ್ತು ರಾಜ್ಯ ಸರ್ಕಾರದದ ಸಹಭಾಗಿತ್ವದಲ್ಲಿ ಕೈಗೆತ್ತಿಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ  ಸರ್ಕಾರ ಶೇಕಡಾ 50 ರಷ್ಟು ಹಣ ಹಾಗೂ ಅಗತ್ಯ ಭೂಮಿಯನ್ನು ನೀಡಬೇಕು. ಇಲ್ಲದೇ ಹೋದರೆ ನಿಗದಿತ  ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.

‘ರಾಮನಗರ-ಮೈಸೂರು (95 ಕಿ.ಮೀ.) ಮಾರ್ಗ ಡಬ್ಲಿಂಗ್‌ಗಾಗಿ ರಾಜ್ಯ ಸರ್ಕಾರ 2/3, ಕೇಂದ್ರ 1/3 ಹಣವನ್ನು ನೀಡಬೇಕು. ಈ ಕಾರ್ಯಕ್ಕೆ ಅಗತ್ಯವಾದ 98 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಇನ್ನೂ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿಲ್ಲ. ಅಲ್ಲದೇ ಶ್ರೀರಂಗಪಟ್ಟಣ ರೈಲು ನಿಲ್ದಾಣದ ಬಳಿ ಟಿಪ್ಟು ಶಸ್ತ್ರಾಗಾರ ವಿದ್ದು ಅದನ್ನು ಸ್ಥಳಾಂತರಿಸುವ ಕಾರ್ಯ ವಿಳಂಬವಾಗಿದೆ. ಇಷ್ಟು ಅಡೆತಡೆಗಳ ನಡುವೆಯೂ ಕಾಮಗಾರಿ ಪ್ರಗತಿಯಲ್ಲಿದ್ದು,    2013ರ ಡಿಸೆಂಬರ್ ಪೂರ್ಣಗೊಳ್ಳಲಿದೆ’ ಎಂದು  ತಿಳಿಸಿದರು.

‘ಬೆಂಗಳೂರು-ಸತ್ಯಮಂಗಲ ರೈಲು ಮಾರ್ಗಕ್ಕಾಗಿ ಚಾಮರಾಜನಗರದ ತನಕ ಸರ್ವೆ ಕಾರ್ಯ ನಡೆದಿದೆ. ಆದರೆ ಸತ್ಯಮಂಗಲ-ತಾಳವಾಡಿ ನಡುವೆ ಸರ್ವೆ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ತಮಿಳುನಾಡು ಸರ್ಕಾರ ಅರಣ್ಯ ಪ್ರದೇಶ    ದಲ್ಲಿ ಸರ್ವೆಗೆ ಅವಕಾಶ ಮಾಡಿಕೊಡುತ್ತಿಲ್ಲ. ಮೈಸೂರು-ಮಡಿಕೇರಿ-ಮಂಗಳೂರು (272 ಕಿ.ಮೀ.), ಬೇಲೂರು- ಶಿವಮೊಗ್ಗ (70 ಕಿ.ಮೀ.) ಸರ್ವೆ ಕಾರ್ಯ ಬಾಕಿ ಉಳಿದುಕೊಂಡಿದೆ. ಈ ಮಾರ್ಗ ಪಶ್ಚಿಮಘಟ್ಟದ ಮೂಲಕ ಹಾಯ್ದು ಹೋಗಲಿದೆ. ಅದ್ದರಿಂದ ರಾಜ್ಯ ಸರ್ಕಾರ ಸರ್ವೆಗೆ ಅಗತ್ಯವಾದ ಸಹಕಾರ ನೀಡಬೇಕು’ ಎಂದು ಮನವಿ  ಮಾಡಿದರು.

‘ಮೈಸೂರು ನಗರದಲ್ಲಿರುವ ರೈಲ್ವೆ ಕಾರ್ಯಾಗಾರವನ್ನು ಮೇಲ್ದರ್ಜೆಗೇರಿಸಲು 50 ಕೋಟಿ ರೂಪಾಯಿ ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ರೈಲ್ವೆ ಮಂಡಳಿ 2011-12 ರ ಕಾರ್ಯಕ್ರಮದಲ್ಲಿ ಮಂಜೂರು  ಮಾಡಲಿದೆ. ರೈಲ್ವೆ ವೈದ್ಯಕೀಯ ಕಾಲೇಜು ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಘೋಷಣೆ: ಆರಂಭಿಕ    ವಿಶೇಷ ರೈಲುಗಾಡಿಗೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ‘ಸರ್ಕಾರ ರಾಜ್ಯದಲ್ಲಿ ಕೈಗೊಳ್ಳುವ ರೈಲ್ವೆ ಯೋಜನೆಗಳ ಸರ್ವೆ ಕಾರ್ಯಕ್ಕೆ ಹಣ ಕೊಡಲು ಸಿದ್ಧರಿದ್ದೇವೆ. ಸರ್ವೆ ಕಾರ್ಯ ಆರಂಭಕ್ಕೂ ಮುನ್ನ ಕೇವಲ 24 ಗಂಟೆ ಮೊದಲು ತಿಳಿಸಿದರೂ ಸಾಕು, ಅಗತ್ಯ ಹಣ ಕೊಡುತ್ತೇವೆ’ ಎಂದು ಘೋಷಿಸಿದರು.

‘ಕೇಂದ್ರ ಮತ್ತು ರಾಜ್ಯ ಸಹಭಾಗಿತ್ವದಂತೆ ಕರ್ನಾಟಕ ತನ್ನ ಪಾಲಿನ ಹಣ ನೀಡುವುದರಲ್ಲಿ ದೇಶದಲ್ಲಿಯೇ  ಪ್ರಥಮ ಸ್ಥಾನದಲ್ಲಿದೆ. ಕಳೆದ ಬಜೆಟ್‌ನಲ್ಲಿ 600 ಕೋಟಿ ರೂಪಾಯಿಗಳನ್ನು ಇಡಲಾಗಿತ್ತು. ಮುಂದೆಯೂ  ಹಣ ನೀಡಲಾಗುವುದು’ ಎಂದ ಅವರು, ರಾಜ್ಯಕ್ಕೆ ಹಿಂದಿನಿಂದಲೂ ರೈಲ್ವೆ ಯೋಜನೆಯಲ್ಲಿ ಅನ್ಯಾಯವಾಗುತ್ತಿತ್ತು. ಸಚಿವ ಕೆ.ಎಚ್.ಮುನಿಯಪ್ಪನವರು ಇದನ್ನು ಮನಗಂಡು ಹೆಚ್ಚಿನ ರೈಲ್ವೆ ಸೌಕರ್ಯವನ್ನು ಒದಗಿಸುವಂತಾಗಬೇಕು. ರಾಜ್ಯ ಸರ್ಕಾರ ಅಗತ್ಯ ಬೆಂಬಲ ನೀಡುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT