ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗರಹಳ್ಳಿಯಲ್ಲಿ ಕೆಐಎಡಿಬಿ ಗುಮ್ಮ!

Last Updated 5 ಡಿಸೆಂಬರ್ 2012, 6:52 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಮೊಗರಹಳ್ಳಿಯ ಜನರದ್ದು ವಿಚಿತ್ರ ಸಮಸ್ಯೆ. ಸೂರು ಕಟ್ಟಿಕೊಂಡಿರುವ ಜಾಗದಿಂದ ಒಕ್ಕಲೆಬ್ಬಿಸುವ ಆತಂಕ ಒಂದೆಡೆ ಕಾಡುತ್ತಿದ್ದರೆ, ಬಡವರಿಗೆ ಹಂಚಿದ್ದ ನಿವೇಶನ ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸದ್ದಿಲ್ಲದೆ ವಶಪಡಿಸಿಕೊಂಡಿದೆ ಎಂಬ ಗುಸುಗುಸು ಶುರುವಾಗಿದೆ.

ವಿವಿಧೆಡೆಗಳಿಂದ ಕೂಲಿ ಅರಸಿಕೊಂಡು ಬಂದ ಸುಮಾರು 500 ಕುಟುಂಬಗಳು ಮೊರಹಳ್ಳಿಯಲ್ಲಿ ನೆಲೆ ನಿಂತಿವೆ. ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಜಾಗ ಖಾಸಗಿ ವ್ಯಕ್ತಿಗಳಿಗೆ ಸೇರಿದೆ ಎಂದು ಕಂದಾಯ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾಗಿ ಅಲ್ಲಿಂದ ತಮ್ಮನ್ನು ಯಾವಾಗ ಬೇಕಾದರೂ ಒಕ್ಕಲೆಬ್ಬಿಸಬಹುದು ಎಂಬ ಕಳವಳ ಇಲ್ಲಿನ ಜನರನ್ನು ಕಾಡುತ್ತಿದೆ. ಮೊರಹಳ್ಳಿಯಲ್ಲಿ ನಿಗದಿತ ಪ್ರದೇಶ ಗುರುತಿಸಿ, 500 ಕುಟುಂಬಗಳ ಪೈಕಿ 202 ಕುಟುಂಬಕ್ಕೆ ಆಶ್ರಯ ಯೋಜನೆಯಡಿ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. ಸರ್ವೆ ನಂ. 128ರಲ್ಲಿ, ಹಿರಿತನದ ಆಧಾರದ ಮೇಲೆ 1994ರಲ್ಲಿ ತಲಾ 30/40 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಸದರಿ ಜಾಗವನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಭೂ ಸ್ವಾಧೀನ ಮಾಡಿಕೊಂಡಿದೆ ಎಂಬ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಯಾರೊಬ್ಬರೂ ಮನೆ ನಿರ್ಮಿಸಲು ಮುಂದಾಗುತ್ತಿಲ್ಲ.

ಹಕ್ಕುಪತ್ರ ವಿತರಿಸಿದಾಗ ತಹಶೀಲ್ದಾರ್ ಆಗಿದ್ದವರು ಈಗಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ.ಜಯಣ್ಣ. ಹಾಗಾಗಿ ಗ್ರಾಮಸ್ಥರು ನಿವೇಶನ ಸಮಸ್ಯೆಯನ್ನು ಅವರ ಬಳಿಗೂ ಕೊಂಡೊಯ್ದಿದ್ದಾರೆ. `ನೀವು ನಿವೇಶನ ಹಂಚಿದ ಕೂಡಲೇ ಗುರುತು ಮಾಡಿದ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಬೇಕಾಗಿತ್ತು. ತಡ ಮಾಡಿದ್ದೀರಿ. ಕಾನೂನು ತೊಡಕುಗಳು ಉಂಟಾಗಿರುವ ಸಾಧ್ಯತೆ ಇದೆ.
ಪರಿಶೀಲಿಸುವ ಅಗತ್ಯವಿದೆ' ಎಂದು ತಮ್ಮನ್ನು ಈಚೆಗೆ ಭೇಟಿ ಮಾಡಿದಾಗ ಪಿ.ಸಿ.ಜಯಣ್ಣ ಹೇಳಿದ್ದಾರೆ ಎಂದು ಪಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಕೋಮಲ ತಿಳಿಸಿದ್ದಾರೆ. ಮೊಗರಹಳ್ಳಿಯ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಿದ್ದ ಜಾಗವನ್ನು ಕೆಐಎಡಿಬಿ ವಶಪಡಿಸಿಕೊಂಡಿರುವ ಸಂಗತಿ ನಮ್ಮ ಗಮನಕ್ಕೆ ಬಂದಿಲ್ಲ ಎನ್ನುವುದು ಬೆಳಗೊಳ ಉಪತಹಶೀಲ್ದಾರ್ ರೇಣುಕುಮಾರ್ ಅವರ ವಿವರಣೆ.
ಇಲ್ಲಿನ ಜನರಿಗೆ ಹಕ್ಕುಪತ್ರದ್ದು ಮಾತ್ರ ಸಮಸ್ಯೆಯಲ್ಲ.

ಊರಿನ ಯಾವ ರಸ್ತೆಯೂ ಅಭಿವೃದ್ಧಿಯಾಗಿಲ್ಲ. ಹಿಂದೆ ಮೆಟ್ಲಿಂಗ್ ಮಾಡಿದ್ದ ವೇಳೆ ಹಾಕಿರುವ ಜಲ್ಲಿ ಕಲ್ಲುಗಳು ಮೇಲೆದ್ದಿದ್ದು ನಡೆದಾಡುವವರು ಎಡವುತ್ತಿದ್ದಾರೆ. ಇಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಸಾಕಷ್ಟು ಕಡೆ ಬೀದಿ ದೀಪಗಳೇ ಇಲ್ಲ. ಹಾಗಾಗಿ ರಾತ್ರಿ ವೇಳೆ ಓಡಾಡುವುದು ಕಷ್ಟವಾಗಿದೆ ಎಂದು ಗ್ರಾಮದ ಸೀಮಾ ಇತರರು ಸಮಸ್ಯೆ ತೋಡಿಕೊಳ್ಳುತ್ತಾರೆ.
- ಗಣಂಗೂರು ನಂಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT