ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಣಕಾಲು ಕೃತಕ ಮರುಜೋಡಣೆ ಶಸ್ತ್ರಚಿಕಿತ್ಸೆ

ಆಸ್ಟ್ರೇಲಿಯಾ ತಜ್ಞರಿಂದ ಶಿಬಿರ ನವೆಂಬರ್‌ನಲ್ಲಿ
Last Updated 9 ಜುಲೈ 2013, 4:57 IST
ಅಕ್ಷರ ಗಾತ್ರ

ಕೋಲಾರ: ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯು ಆಸ್ಟ್ರೇಲಿಯಾದ ಬಾಂಗ್ ಬಾಂಗ್ ಮೂಳೆ ಕೀಲುಗಳ ಆಸ್ಪತ್ರೆ, ಬೌರಲ್ ಆಸ್ಪತ್ರೆ ಮತ್ತು ಗೌಲ್‌ಬರ್ನ್ ಬೇಸ್ ಆಸ್ಪತ್ರೆಯ ಸಹಯೋಗದಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಕೃತಕ ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ನವೆಂಬರ್‌ನಲ್ಲಿ ಹಮ್ಮಿಕೊಳ್ಳಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿ.ಲಕ್ಷ್ಮಯ್ಯ ತಿಳಿಸಿದರು.

ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಲ್‌ಬರ್ನ್ ಬೇಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಜಾಲಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಡಾ.ನಿರಂಜನ್ ಅವರ ವಿಶೇಷ ಕಾಳಜಿಯ ಮೇರೆಗೆ ಈ ಶಸ್ತ್ರಚಿಕಿತ್ಸಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕೃತಕ ಮರುಜೋಡಣೆಯಿಂದ ಯಾವುದೇ ವ್ಯಕ್ತಿಯು 10ರಿಂದ 15 ವರ್ಷ ಸಮಸ್ಯೆಯಿಂದ ಮುಕ್ತವಾಗಿರಬಹುದು. ಕಡಿಮೆ ವಯಸ್ಸಿನಲ್ಲೇ ಕೃತಕ ಮರುಜೋಡಣೆ ಮಾಡಿದರೆ ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ 40 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಮತ್ತು ಮಂಡಿನೋವಿನಿಂದ ನಿದ್ದೆಗೆಡುವವರನ್ನು ತಪಾಸಣೆಗೆ ಒಳಪಡಿಸಿ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗುವುದು. ಶಸ್ತ್ರಚಿಕಿತ್ಸೆಯನ್ನು ಸಾಧ್ಯವಾದಷ್ಟು ಮುಂದೂಡುವುದೇ ಉತ್ತಮ ಎಂಬ ನಿಲುವಿನಿಂದಲೇ ತಪಾಸಣೆ ಮಾಡಲಾಗುವುದು ಎಂದರು.

ರೋಗಿಸ್ನೇಹಿ ಚಿಕಿತ್ಸೆ: ಮೊಣಕಾಲು ಮತ್ತು ಸೊಂಟದ ಕೀಲು ಕೃತಕ ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು ಪ್ರತಿರೋಗಿಯ ಅವಶ್ಯಕತೆಗೆ ತಕ್ಕಂತೆ ಮಾಡುವ ಹೊಸ ತಂತ್ರವನ್ನು (ಪೇಷೆಂಟ್ ಸ್ಪೆಸಿಫಿಕ್ ಟೆಕ್ನಿಕ್) ಅನುಸರಿಸಲಾಗುವುದು ಎಂದು ಡಾ.ನಿರಂಜನ್ ತಿಳಿಸಿದರು.
ಆಸ್ಟ್ರೇಲಿಯಾದಲ್ಲಿ ಈ ಚಿಕಿತ್ಸೆಗೆ 30 ಸಾವಿರ ಡಾಲರ್, ಭಾರತೀಯ ಲೆಕ್ಕದಲ್ಲಿ ಅಂದಾಜು 18 ಲಕ್ಷ ರೂಪಾಯಿ ವೆಚ್ಚವಾಗುತ್ತದೆ.

ಅಷ್ಟೊಂದು ಹಣಕಾಸಿನ ಭಾರವನ್ನು ಹೊರಲು ಸಾಧ್ಯವಿಲ್ಲದ ಕೋಲಾರದ ಜನರಿಗೆಂದೇ ವಿಶೇಷ ರಿಯಾಯಿತಿಯನ್ನು ನೀಡುವ ಪ್ರಯತ್ನ ನಡೆದಿದೆ. ಉಚಿತವಾಗಿ ಕೃತಕ ಕೀಲು ಮತ್ತು ಮಂಡಿ ತಯಾರಿಸಿಕೊಡಬೇಕು ಎಂದು ಸಂಸ್ಥೆಯೊಂದನ್ನು ಕೋರಲಾಗಿದೆ. ಜಾಲಪ್ಪ ಆಸ್ಪತ್ರೆಯೂ ಚಿಕಿತ್ಸಾ  ವೆಚ್ಚದಲ್ಲಿ ರಿಯಾಯಿತಿ ನೀಡುತ್ತದೆ ಎಂದರು.

ಶಸ್ತ್ರಚಿಕಿತ್ಸೆಗೆ ಬೇಕಾದ ಅತ್ಯುತ್ತಮವಾದ 3 ಕೊಠಡಿಗಳನ್ನು ಆಸ್ಪತ್ರೆಯಲ್ಲಿ ರೂಪಿಸಲಾಗಿದೆ. 1 ವರ್ಷದಿಂದ ಆ ಕೊಠಡಿಗಳಲ್ಲಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ ಎಂದು ಆಸ್ಪತ್ರೆಯ ಮೂಳೆ-ಕೀಲು ವಿಭಾಗದ ಡಾ.ಮನೋಹರ್ ತಿಳಿಸಿದರು.

ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಆಡಳಿತಾಧಿಕಾರಿ ಡಾ.ಎಂ.ಎಚ್.ಚಂದ್ರಪ್ಪ ಉಪಸ್ಥಿತರಿದ್ದರು.

ಸೆ.8ರವರೆಗೆ ಆಸಕ್ತರು ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಆಸ್ಪತ್ರೆ ಮೂಳೆ ಮತ್ತು ಕೀಲು ವಿಭಾಗದ ಡಾ.ಪಿ.ವಿ,.ಮನೋಹರ್ (98453 13736), ಡಾ.ಎಚ್.ಎಸ್.ಅರುಣ್ (98456 84667) ಮತ್ತು ಡಾ.ಅನಿಲ್ (81231 79290) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT