ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಮೈಸೂರ ಮಲ್ಲಿಗೆ

ಲೇ: ಕೆ.ಎಸ್. ನರಸಿಂಹಸ್ವಾಮಿ
ಪು: 96; ಬೆ: ರೂ. 50
ಪ್ರ: ಸ್ಟ್ಯಾಂಡರ್ಡ್ ಬುಕ್ ಕಂಪನಿ, ನಂ. 16, 1ನೇ ಮುಖ್ಯರಸ್ತೆ, ಕೃಷ್ಣಪ್ಪ ಗಾರ್ಡನ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560 041
 

ಕನ್ನಡದ ಜನಪ್ರಿಯ ಹಾಗೂ ಬಹುಮುಖ್ಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಮೊದಲ ಕವನ ಸಂಗ್ರಹ `ಮೈಸೂರ ಮಲ್ಲಿಗೆ' ಈಗ 36ನೇ ಮುದ್ರಣ ಕಂಡಿದೆ. ಕನ್ನಡದ ಮನಸ್ಸುಗಳನ್ನು ಬೆಳೆಸಿದ, ಪ್ರೇಮಿಗಳ ಪಿಸುಮಾತುಗಳಿಗೆ ಹೊಸರೂಪವನ್ನು ಕೊಟ್ಟ ಇದರ ಕವನಗಳು ಕನ್ನಡಿಗರ ನುಡಿಗಟ್ಟಿನಲ್ಲಿ ಬೆರೆತು ಹೋಗಿದ್ದು, ಸಾಹಿತ್ಯ ಚರಿತ್ರೆಯ, ಕನ್ನಡ ಭಾಷೆಯ ಒಂದು ಭಾಗವಾಗಿದೆ. ಸಹಜ ಕವಿ ನರಸಿಂಹಸ್ವಾಮಿಯವರನ್ನು ಅನುಕರಿಸಲೆತ್ನಿಸಿ ಅನೇಕರು ವಿಫಲರಾಗಿದ್ದು ಕೂಡ ಇದರ ಭಾಗವೇ. ಇದನ್ನು ಮೊದಲು ಪ್ರಕಟಿಸಿದ್ದು ಮೈಸೂರು ಮಹಾರಾಜ ಕಾಲೇಜಿನ ಕರ್ಣಾಟಕ ಸಂಘ.

ಕನ್ನಡದಲ್ಲಿ ಈ ಪುಸ್ತಕಕ್ಕೆ ಸಿಕ್ಕಿರುವ ಸ್ವಾಗತವನ್ನು, ಮಸುಕಾಗದ ಅದರ ಜನಪ್ರಿಯತೆಯನ್ನು ಅದರ ಮರುಮುದ್ರಣಗಳೇ ಹೇಳುತ್ತವೆ. 1942ರಲ್ಲಿ ಮೊದಲ ಬಾರಿಗೆ ಡಿ.ವಿ. ಗುಂಡಪ್ಪ ಅವರ ಮುನ್ನುಡಿಯೊಂದಿಗೆ ಮುದ್ರಣವಾದ ಈ ಕವನ ಸಂಗ್ರಹದ `ಬಳೆಗಾರ ಚೆನ್ನಯ್ಯ', `ಶ್ಯಾನುಭೋಗರ ಮಗಳು', `ಬಾರೆ, ನನ್ನ ಶಾರದೆ', `ಹಳ್ಳಿಯ ಚೆಲುವೆಗೆ', `ಹೂವಾಡಗಿತ್ತಿ', `ಮಾವನ ಮನೆಯಲ್ಲಿ', `ತೊಟ್ಟಿಲ ಹಾಡು', `ಒಬ್ಬಳೇ ಮಗಳು!', `ಪ್ರಶ್ನೆಗೆ ಉತ್ತರ' ಕವಿತೆಗಳನ್ನು ಕನ್ನಡ ಕಾವ್ಯ ರಸಿಕರು ಮರೆತಿರಲಾರರು. ಕವಿಯಾಗಿ ಈ ಸಂಕಲನದ ಬಳಿಕ ನರಸಿಂಹಸ್ವಾಮಿಯವರು ಕಾವ್ಯದ ವಿವಿಧ ಸ್ತರಗಳಲ್ಲಿ ಎತ್ತರಕ್ಕೆ ಬೆಳೆದರು. ಆದರೆ, ಈ ಸಂಕಲನದ ಮಟ್ಟದ ಜನಪ್ರಿಯತೆ, ಜನಪ್ರೀತಿ ಅವರ ಉಳಿದ ಸಂಗ್ರಹಗಳಿಗೆ ಸಿಗಲಿಲ್ಲ.

ಈ ಸಂಗ್ರಹದಲ್ಲಿ ಮೊದಲ ಸಂಗ್ರಹದಲ್ಲಿ ಬಳಕೆಯಾದ ಪುರುಷೋತ್ತಮರಾಯರು ಬರೆದ ಚಿತ್ರಗಳನ್ನು ಉಳಿಸಿಕೊಳ್ಳಲಾಗಿದೆ. ಕೆ.ಎಸ್.ನ ಅವರ ಪುತ್ರ ಕೆ.ಎನ್. ಹರಿಹರ ಅವರ ಪ್ರಯತ್ನದ ಫಲವಾಗಿ ಮಲ್ಲಿಗೆಯ ಘಮ ನಿರಂತರವಾಗಿ ಕನ್ನಡಿಗರಿಗೆ ಸಿಗುವಂತಾಗಿದೆ.

ಕಾವಿಕಲೆ
ಡಾ. ಕೃಷ್ಣಾನಂದ ಕಾಮತ್
ಪು: 128
ಪ್ರ: ಪ್ರಗತಿ ಗ್ರಾಫಿಕ್ಸ್, ನಂ.119, 3ನೇ ತಿರುವು, 8ನೇ ಮುಖ್ಯ ರಸ್ತೆ, ಹಂಪಿನಗರ, ಬೆಂಗಳೂರು- 560 104

ಕೃಷ್ಣಾನಂದ ಕಾಮತರು ಕನ್ನಡದ ವಿಶಿಷ್ಟ ಲೇಖಕರಲ್ಲಿ ಒಬ್ಬರು. ಛಾಯಾಗ್ರಹಣ, ಪ್ರವಾಸ ಸಾಹಿತ್ಯ, ವಿಜ್ಞಾನ ಬರಹಗಳನ್ನು ಮಾಡಿದ ಅವರು ತಾವು ಕೆಲಸ ಮಾಡಿದ ಕ್ಷೇತ್ರಗಳಲ್ಲಿ ಉತ್ತಮ ಬರಹಗಳನ್ನು ಬಿಟ್ಟು ಹೋಗಿದ್ದಾರೆ. `ನಾನೂ ಅಮೆರಿಕೆಗೆ ಹೋಗಿದ್ದೆ', `ಬಸ್ತರ ಪ್ರವಾಸ', `ವಂಗ ದರ್ಶನ', `ಪಶು ಪಕ್ಷಿ ಪ್ರಪಂಚ', `ಕೀಟ ಜಗತ್ತು' ಪುಸ್ತಕಗಳನ್ನು ಕನ್ನಡ ವಾಚಕರು ಮರೆಯುವಂತಿಲ್ಲ. ಅವರು ಸುಮಾರು 20 ವರ್ಷಗಳ ಹಿಂದೆ ಬರೆದು ಪ್ರಕಟಿಸಿದ `ಕಾವಿ ಕಲೆ' ಪುಸ್ತಕ ಈಗ ಮರುಮದ್ರಣಗೊಂಡಿದೆ.

ಸರಳ, ನೇರ, ನಿಖರವಾಗಿ ತಮ್ಮದೇ ಛಾಪಿನ ತಿಳಿಹಾಸ್ಯದಲ್ಲಿ ಬರೆಯುವುದು ಕಾಮತರ ಶೈಲಿ. ಈ ಪುಸ್ತಕ `ಕಾವಿ ಕಲೆ' ಗೋವಾ ರಾಜ್ಯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿದ್ದ ಕಾವಿ ಕಲೆಯ ಕುರಿತಾಗಿ ಇದೆ. ಕೆಂಪು ಮಣ್ಣಿನಿಂದ (ಹುರಮುಂಜಿ) ಮನೆ, ದೇವಾಲಯಗಳ ಗೋಡೆಯ ಮೇಲೆ ಬರೆಯಲಾಗುವ ಈ ಚಿತ್ರಗಳು ಈಗ ಅಪರೂಪ. ಬಹುಪಾಲು ನಶಿಸಿ ಹೋಗಿರುವ ಈ ಕಲೆಯ ಕುರಿತಂತೆ ಕಾಮತರು ವಿವರವಾಗಿ ಬರೆದಿದ್ದಾರೆ. ಕಾವಿ ಚಿತ್ರಗಳನ್ನು ಹುಡುಕಿಕೊಂಡು ಗೋವೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವರು ಪ್ರವಾಸ ಮಾಡಿ ಸ್ವತಃ ತಾವೇ ತೆಗೆದ ಚಿತ್ರಗಳೊಂದಿಗೆ ಪ್ರಕಟಿಸಿದ್ದಾರೆ.

ಈ ಕಲೆ ಎಲ್ಲಿಂದ ಹೇಗೆ ಬಂತು, ಅದರ ಆರಂಭ ಎಲ್ಲಿಂದ ಆಯಿತು ಎಂಬುದರ ಕುರಿತಂತೆ ಕೇವಲ ಊಹೆಗಳಿವೆ. ಸಿಮೆಂಟ್, ಪೇಂಟ್‌ಗಳ ಹೊಡೆತದಿಂದ ಕಣ್ಮರೆಯಾಗಿರುವ ಈ ಕಲೆ ಈಗ ಉಳಿದಿರುವುದು ಕಾಮತರ ಈ ಪುಸ್ತಕದ ಚಿತ್ರಗಳಲ್ಲಷ್ಟೆ. ಕಾವಿ ಕಲೆಯ ಕುರಿತಂತೆ ಕನ್ನಡದಲ್ಲಿ (ಬೇರೆ ಭಾಷೆಗಳಲ್ಲಿ ಕೂಡ) ಬಂದ ಏಕೈಕ, ಬಹುಶಃ ಕೊನೆಯ ಪುಸ್ತಕ ಇದು ಎಂಬುದು ಅದರ ಮಹತ್ವವನ್ನು ಹೇಳುತ್ತದೆ.

ಗ್ರಂಥಾಲಯಗಳ ಲೋಕದಲ್ಲಿ ಕೆ.ಜಿ. ವೆಂಕಟೇಶ್
ಸಂ: ಶೂದ್ರ ಶ್ರೀನಿವಾಸ್
ಪು: 256; ಬೆ: ರೂ. 200
ಪ್ರ: ಅಕ್ಷರ ಮಂದಿರ, ನಂ. 277/3, 5ನೇ ತಿರುವು, ವಿಧಾನಸೌಧ ಬಡಾವಣೆ ವಿ್ತೆರಣೆ, ಬೆಂಗಳೂರು- 560 058
 

ಗ್ರಂಥಾಲಯ ಇಲಾಖೆಯ ಅಧಿಕಾರಿಯಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿರುವ ಕೆ.ಜಿ. ವೆಂಕಟೇಶ್ ಅವರ ಕುರಿತಾಗಿರುವ ಈ ಪುಸ್ತಕವನ್ನು ಲೇಖಕ ಶೂದ್ರ ಶ್ರೀನಿವಾಸ್ ಸಂಪಾದಿಸಿದ್ದಾರೆ. ವೆಂಕಟೇಶ್ ಸಂಪರ್ಕಕ್ಕೆ ಬಂದವರು, ಅವರ ನಿಕಟ ಸ್ನೇಹಿತರು, ಲೇಖಕರು ತಾವು ಕಂಡ ವೆಂಕಟೇಶ್ ಕುರಿತಾಗಿ ಇಲ್ಲಿ ಬರೆದಿದ್ದಾರೆ. ಮೊದಲನೆಯದಾಗಿ ಇಲ್ಲಿ ವೆಂಕಟೇಶ್ ಅವರ ಸಂದರ್ಶನ, ಅವರೇ ಬರೆದ ಒಂದೆರಡು ಲೇಖನಗಳಿವೆ. ಇನ್ನುಳಿದಂತೆ ಲೇಖಕರಾದ ಬಿ. ಚಂದ್ರೇಗೌಡ, ಹೊ. ಶ್ರೀನಿವಾಸಯ್ಯ, ಅಗ್ರಹಾರ ಕೃಷ್ಣಮೂರ್ತಿ ಮತ್ತಿತರರು ಬರೆದಿದ್ದಾರೆ. ಇವರೆಲ್ಲ ವೆಂಕಟೇಶ್ ಅವರ ಸರಳ ವ್ಯಕ್ತಿತ್ವವನ್ನು, ಅವರು ಓದುಗರಿಗೆ ನೆರವಾಗುವ ರೀತಿಯನ್ನು, ಗ್ರಂಥಾಲಯವೊಂದನ್ನು ಬೆಳೆಸಲು ಬೇಕಾದ ಅವರಿಗಿರುವ ಒಳನೋಟಗಳನ್ನು ಇಲ್ಲಿ ವಿವರಿಸಿದ್ದಾರೆ. ಇದು ಈ ಪುಸ್ತಕದ ಮುಖ್ಯಭಾಗ. ಅವರು ಗ್ರಂಥಾಲಯ ಇಲಾಖೆಯಲ್ಲಿ ಮಾಡಿರುವ ಕೆಲಸ, ಸುಧಾರಣೆ ಕುರಿತೂ ಇಲ್ಲಿ ಉಲ್ಲೇಖಗಳಿವೆ.

ಇನ್ನುಳಿದಂತೆ ಅವರ ಕುರಿತಾಗಿ ಬಂದಿರುವ ಪತ್ರಿಕಾ ವರದಿಗಳನ್ನು ಅವುಗಳ ಮೂಲ ಸ್ವರೂಪದಲ್ಲೇ ಮರುಮುದ್ರಿಸಲಾಗಿದೆ. ಸುಮಾರು 50 ಪುಟಗಳಲ್ಲಿ ಹರಡಿರುವ ಈ ವರದಿಗಳು ಗ್ರಂಥಾಲಯ ಇಲಾಖೆಯ ಬೆಳವಣಿಗೆಯ ದಾಖಲೆಗಳೂ ಆಗಿವೆ. ಅಧಿಕಾರಿಯೊಬ್ಬ ರಾಜ್ಯದ ಗ್ರಂಥಾಲಯದಲ್ಲಿ ಮಾಡಿದ ಕೆಲಸ, ಬದಲಾವಣೆಯ ವಿಶಿಷ್ಟ ದಾಖಲೆಯಾಗುವಂತೆ ಶ್ರೀನಿವಾಸ್ ಇದನ್ನು ಸಂಪಾದಿಸಿದ್ದಾರೆ.

ದೈತ್ಯಪ್ರತಿಭೆಗಳ ಹೆಗಲ ಮೇಲೆ
(ಸೂಕ್ಷ್ಮಜೀವಿ ಲೋಕದಲ್ಲಿ ಸಾಹಸ ಯಾನ)
ಲೇ: ಟಿ.ಆರ್. ಅನಂತರಾಮು
ಪು: 185; ಬೆ: ರೂ. 110
ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯ ರಸ್ತೆ, ಗಾಂಧಿ ನಗರ, ಬೆಂಗಳೂರು- 560 009
 

ಕನ್ನಡದ ವಿಜ್ಞಾನ ಬರಹಗಾರರಾದ ಟಿ.ಆರ್. ಅನಂತರಾಮು ನಮ್ಮ ಸುತ್ತಲೂ ಇರುವ ಸೂಕ್ಷ್ಮಜೀವಿಗಳು, ಅವುಗಳ ಕುರಿತಾಗಿ ನಡೆಸಿದ ಸಂಶೋಧನೆಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸೂಕ್ಷ್ಮಜೀವಿಗಳ ಬಗ್ಗೆ ಲ್ಯುವೆನ್ ಹೋಕ್, ಸ್ಪೆಲನ್ಸಾನಿ, ಲೂಯಿ ಪಾಸ್ತರ್, ಎಡ್ವರ್ಡ್ ಜೆನ್ನರ್, ರಾಬರ್ಟ್ ಕಾಖ್ ನಡೆಸಿದ ಸಂಶೋಧನೆಗಳು ಮನುಕುಲದ ದೃಷ್ಟಿಯನ್ನು, ವಿಜ್ಞಾನದ ಅರಿವಿನ ಹಾದಿಯನ್ನು ಬದಲಿಸಿದವು. ಸೂಕ್ಷ್ಮಜೀವಿಗಳ ಈಗಿನ ಅಧ್ಯಯನ ಅವರ ಸಂಶೋಧನೆಗಳ ಅಡಿಪಾಯದ ಮೇಲೆಯೇ ನಿಂತಿದೆ. ಅದು ಜೀವಸಂಕುಲಗಳ ಬಗ್ಗೆ ತಿಳಿದುಕೊಳ್ಳಲು, ಮಾನವನ ಉಳಿವಿಗೆ ಕಾರಣವಾಗಿದೆ.

ಇಂಥ ವಿಜ್ಞಾನಿಗಳ ಸಂಶೋಧನೆ, ವಿಜ್ಞಾನದಲ್ಲಿನ ಅವರ ಅಭೂತಪೂರ್ವ ಸಾಧನೆಯನ್ನು ಸರಳವಾಗಿ ವಿವರಿಸುವ ಉದ್ದೇಶವನ್ನಿಟ್ಟುಕೊಂಡು ಅನಂತರಾಮು ಈ ಬರಹವನ್ನು ಮಾಡಿದ್ದಾರೆ. ಜನರಲ್ಲಿ ಆಳವಾಗಿ ಬೇರೂರಿದ್ದ ಮೂಢನಂಬಿಕೆಗಳನ್ನು ಪಲ್ಲಟಗೊಳಿಸಿದ್ದು ಈ ವಿಜ್ಞಾನಿಗಳ ಸಂಶೋಧನೆಗಳು. ಸುಮಾರು 400 ವರ್ಷಗಳ ಇತಿಹಾಸವಿರುವ ಈ ಸಂಶೋಧನೆಗಳು  ಸೂಕ್ಷ್ಮಜೀವಿಗಳಿಂದ ಆಗುವ ರೋಗಗಳಿಂದ ಮನುಷ್ಯ ಜೀವಗಳ ಉಳಿವಿಗೆ ಕಾರಣವಾಗಿವೆ. ವಿಜ್ಞಾನಿಗಳ ಈ ಸಾಧನೆಯನ್ನು ಕಥೆಯಂತೆ ಲೇಖಕರು ಇಲ್ಲಿ ನಿರೂಪಿಸಿದ್ದಾರೆ. ವಿಜ್ಞಾನಿಗಳು ಪ್ರಯೋಗ ನಡಸುವ ಸಂದರ್ಭದಲ್ಲಿ ನಡೆದದ್ದನ್ನು ಕುತೂಹಲಕರವಾಗಿ ಇಲ್ಲಿ ಹೇಳಲಾಗಿದೆ.

ಇದೊಂದು ವಿದ್ಯಾರ್ಥಿಗಳಿಗೆ, ವಿಜ್ಞಾನದಲ್ಲಿ ಪ್ರಾಥಮಿಕ ಕುತೂಹಲ ಇರುವ ಓದುಗರಿಗೆ ಉಪಯುಕ್ತವಾಗಬಹುದಾದ ಪುಸ್ತಕ. ಹೆಚ್ಚಿನ ಮಾಹಿತಿ ಇರುವ, ಬೌದ್ಧಿಕತೆಯ ಭಾರವಿಲ್ಲದ ಇಲ್ಲಿನ ಬರಹಗಳು ಓದುಗರ ಅರಿವಿನ ದಿಗಂತವನ್ನು ವಿಸ್ತರಿಸುತ್ತವೆ.                            
                                                                                                                                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT