ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ನಟಸಾರ್ವಭೌಮ/ ಶೂನ್ಯದಿಂದ ಶಿಖರದೆಡೆಗೆ/ಜಾನ್ ಮತ್ತು ಕಂದುಹಕ್ಕಿ

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೊದಲ ಓದು:

ನಟಸಾರ್ವಭೌಮ
ಸಂ: ಎಸ್.ಜಿ. ಸಿದ್ಧರಾಮಯ್ಯ
ಪು: 305; ಬೆ: ರೂ. 200; ಪ್ರ: ಚಾಲುಕ್ಯ ಡಾ. ರಾಜ್‌ಕುಮಾರ್ ಪ್ರತಿಮೆ ಪ್ರತಿಷ್ಠಾಪನಾ ಟ್ರಸ್ಟ್, ಕುರುಬರಹಳ್ಳಿ, ಬೆಂಗಳೂರು-86

ಕನ್ನಡದ ನಟ ರಾಜ್‌ಕುಮಾರ್ ಬಗ್ಗೆ ಅನೇಕ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿವೆ. ಕೆಲವು ಪತ್ರಕರ್ತರು ತಾವು ನೋಡಿದ ರಾಜ್ ಬಗ್ಗೆ ಬರೆದಿರುವುದುಂಟು. ರಾಜ್ ಒಂದು ರೀತಿಯಲ್ಲಿ ಕುರುಡರು ಮುಟ್ಟಿ ನೋಡಿದ ಆನೆಯ ರೀತಿ. ಅದರಲ್ಲಿ ಸಮಗ್ರ ನೋಟ ಎಂಬುದು ಕಾಣುವುದಿಲ್ಲ. ಎಲ್ಲರೂ ಬರೆದಿರುವುದು ಸೇರಿ ಈಗಿನ ತಲೆಮಾರಿಗೆ ರಾಜ್ ಎಂಬ ಆನೆಯ ಚಿತ್ರಣ ಬರಹಗಳ ಮೂಲಕ ದೊರೆಯಬಹುದು.

ಇದೀಗ ಕವಿ ಎಸ್.ಜಿ. ಸಿದ್ಧರಾಮಯ್ಯ ಅವರು ರಾಜ್ ಕುರಿತಾದ `ನಟಸಾರ್ವಭೌಮ'ಎಂಬ ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಇದು ರಾಜ್ ಚಿತ್ರಬದುಕನ್ನು, ಸಾರ್ವಜನಿಕ ಜೀವನವನ್ನು ಹಿಡಿದಿಡುವ ಗಂಭೀರವಾದ ಪ್ರಯತ್ನವಾಗಿದೆ.

ಕನ್ನಡದ ಲೇಖಕರು, ಪತ್ರಕರ್ತರು ತಮ್ಮ ಅನುಭವಕ್ಕೆ ಬಂದ ರಾಜ್‌ರನ್ನು ಇಲ್ಲಿನ ಲೇಖನಗಳಲ್ಲಿ ಮೂಡಿಸಲು ಪ್ರಯತ್ನಿಸಿದ್ದಾರೆ. ಕೆ.ಪುಟ್ಟಸ್ವಾಮಿ, ಸದಾಶಿವ ಶೆಣೈ, ಕೆ.ವೈ. ನಾರಾಯಣಸ್ವಾಮಿ, ಮನು ಬಳಿಗಾರ್, ಕುಂವೀ, ಕೇಶವ ರೆಡ್ಡಿ ಹಂದ್ರಾಳ, ಕೆ. ಪ್ರವೀಣ್ ನಾಯಕ್ ಮತ್ತಿತರ ಲೇಖಕರು ರಾಜ್ ಬಗ್ಗೆ ಬರೆದಿದ್ದಾರೆ. ಇಲ್ಲೆಲ್ಲ ರಾಜ್ ಅವರ ಸೀದಾ ಸಾದಾ ಆದ ವ್ಯಕ್ತಿತ್ವವೇ ವ್ಯಕ್ತವಾಗಿದೆ. ತಮ್ಮ ವ್ಯಕ್ತಿತ್ವ, ನಡೆ, ನುಡಿಯಿಂದಲೇ ಜನಮಾನಸವನ್ನು ಪ್ರಭಾವಿಸಿದ ಸಿನಿಮಾ ನಾಯಕ ರಾಜ್ ಎಂಬುದು ಇಲ್ಲಿನ ಲೇಖನಗಳಲ್ಲಿ ಮುಖ್ಯವಾಗಿ ಕಾಣುವ ಅಂಶ. ಕನ್ನಡದಲ್ಲಿ ಇಂಥ ಮತ್ತೊಬ್ಬ ನಾಯಕನನ್ನು ಕಾಣುವುದು ಕಷ್ಟ ಎಂದೇ ಈವರೆಗೆ ಬಂದ ಬರಹಗಳಲ್ಲಿ ರಾಜ್‌ರ ಪೂರ್ತಿಯಾದ ಪ್ರತಿಬಿಂಬವನ್ನು ಕಾಣಲಾರೆವು. ಅವುಗಳಲ್ಲಿ ವ್ಯಕ್ತವಾಗಿರುವುದು ಅವರ ಕೆಲವು ಪದರುಗಳಷ್ಟೆ.

ರಾಜ್ ಬದುಕಿನ ಎಲ್ಲ ಆಯಾಮಗಳನ್ನು ದಾಖಲಿಸುವ ಈ ಪುಸ್ತಕ ಸಿದ್ಧರಾಮಯ್ಯ ಹಾಗೂ ಬಿ.ಎನ್. ರಮೇಶ್ ಅವರ ಪ್ರಯತ್ನದಿಂದಾಗಿ ಅತ್ಯುತ್ತಮವಾಗಿ ಸಂಕಲಿತಗೊಂಡಿದೆ. ರಾಜ್‌ರನ್ನು ಹತ್ತಿರದಿಂದ ನೋಡಿದವರು, ಕನ್ನಡಕ್ಕೆ ಅವರ ಕೊಡುಗೆಯನ್ನು ಗಂಭೀರವಾಗಿ ಅಭ್ಯಾಸ ಮಾಡಿದವರು ಇಲ್ಲಿನ ಲೇಖನಗಳನ್ನು ಬರೆದಿರುವುದರಿಂದ ಇದಕ್ಕೊಂದು ಅಧಿಕೃತತೆ ಸಿಕ್ಕಿದೆ. ಕೆಲವು ಮೇಲುಮಟ್ಟದ, ಪುನರಾವರ್ತನೆಗೊಂಡ ಬರಹಗಳನ್ನು ಕೈಬಿಟ್ಟಿದ್ದರೆ ಪುಸ್ತಕ ಇನ್ನೂ ಆಕರ್ಷಕವಾಗುತ್ತಿತ್ತು.

*********

ಶೂನ್ಯದಿಂದ ಶಿಖರದೆಡೆಗೆ
ಲೇ: ಡಾ. ಪಿ. ಬೋರೇಗೌಡ
ಪು: 356; ಬೆ: ರೂ. 132
ಪ್ರ: ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮಾನಸಗಂಗೋತ್ರಿ, ಮೈಸೂರು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕಾಂ)ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿರುವ ಪಿ. ಬೋರೇಗೌಡರ ಆತ್ಮಕಥೆ ಇದು. ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಬೋರೇಗೌಡರು ತಮ್ಮ ಸಾಧನೆಯ ಕಥೆಯನ್ನು ಇಲ್ಲಿನ ಪುಟಗಳಲ್ಲಿ ಹೇಳಿಕೊಂಡಿದ್ದಾರೆ.

ಅಧಿಕಾರಿಯಾಗಿ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕೆಲಸ ಮಾಡಿದ ಲೇಖಕರು ನಾಲ್ಕು ಜನಕ್ಕೆ ತಮ್ಮ ಸಾಧನೆ ಗೊತ್ತಾಗಬೇಕು ಎಂಬ ಉದ್ದೇಶದಿಂದ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಬೋರೇಗೌಡರ ಬಗ್ಗೆ ಕನ್ನಡದ ಎಲ್ಲ ವಾಚಕರಿಗೆ ತಿಳಿದಿರುವ ಸಾಧ್ಯತೆ ಕಡಿಮೆ. ಅವರು ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲ್ಲೂಕಿನ ಕೇತುಪುರದವರು. ಗೌಡರು ಗ್ರಾಮೀಣ ಭಾಗದಿಂದ ಬಂದ ಪ್ರತಿಭೆ. ಸುಮಾರು 30 ದಶಕದ ಕಾಲ ಅಧಿಕಾರಿಯಾಗಿ ಕೆಲಸ ಮಾಡಿದ ಅವರು ತಮ್ಮ ವೃತ್ತಿ ಅನುಭವಗಳನ್ನು ಇಲ್ಲಿ ಬರೆದಿದ್ದಾರೆ. ಈ ವೃತ್ತಿಯ ನೆನಪುಗಳಲ್ಲಿ ಜಲಸಂವರ್ಧನಾ ಇಲಾಖೆಯ ನಿರ್ದೇಶಕರಾಗಿ 2500 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಅವರು ಮಾಡಿದ ಮುಖ್ಯ ಕೆಲಸಗಳಲ್ಲಿ ಒಂದು.

ಈ ಪುಸ್ತಕ ಎಂದಿನ ವ್ಯಕ್ತಿಚಿತ್ರಣದ ರೀತಿಯಲ್ಲೇ ಪ್ರಕಟವಾಗಿದೆ. ಪ್ರಕಟವಾಗಿದ್ದರೆ ತೊಂದರೆಯೇನೂ ಇರಲಿಲ್ಲ. ಅದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ. ಸಾಧನೆಗಳು ವೈಯಕ್ತಿಕವಾಗಿ ವ್ಯಕ್ತಿಯೊಬ್ಬನಿಗೆ ಮಹತ್ವದ್ದಿರಬಹುದು. ಅದು ರಾಜ್ಯದ ಜನತೆಗೆ, ವಿದ್ಯಾರ್ಥಿಗಳಿಗೆ ಅಷ್ಟು ಮಹತ್ವ್ದ್ದದೆ? ಸಾರ್ವಜನಿಕರ ಹಣದಿಂದ ನಡೆಯುವ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗುವಷ್ಟು ಮುಖ್ಯವೆ? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿಲ್ಲ.

ಅಧಿಕಾರಿಯೊಬ್ಬರ ಸಾಮಾನ್ಯ ಅನುಭವಗಳು `ಜನತೆಯ ಕಣ್ತೆರೆಸುವಲ್ಲಿ ನೆರವಾಗುತ್ತವೆ' ಎಂದು ತಮ್ಮ ಮಾತಿನಲ್ಲಿ ಹೇಳಿರುವ ವಿಶ್ವವಿದ್ಯಾಲಯದ ಪ್ರಸಾರಾಂಗದ ಗೌರವ ನಿರ್ದೇಶಕರಾದ ಡಿ.ಕೆ. ರಾಜೇಂದ್ರ, ಅದು ಹೇಗೆ ಎಂಬುದನ್ನು ಹೇಳಿಲ್ಲ. ಸದ್ಯಕ್ಕಂತೂ ಅದು ಗೊತ್ತಾಗುವ ಯಾವ ಸಾಧ್ಯತೆಗಳಿಲ್ಲ!

******

ಜಾನ್ ಮತ್ತು ಕಂದುಹಕ್ಕಿ
ಮರಾಠಿ ಮೂಲ: ಭಾರತ ಸಾಸಣೆ; ಕನ್ನಡಕ್ಕೆ: ಚಂದ್ರಕಾಂತ ಪೋಕಳೆ
ಪು: 160; ಬೆ: ರೂ. 90
ಪ್ರ: ಸಾಹಿತ್ಯ ನಂದನ, ನಂ.9, 4ನೇ `ಇ' ವಿಭಾಗ, 10 `ಎ' ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು- 560 010

ಮರಾಠಿಯ ಮಹತ್ವದ ಕಥೆಗಾರ ಭಾರತ ಸಾಸಣೆಯವರ `ಜಾನ್ ಮತ್ತು ಕಂದುಹಕ್ಕಿ'ಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಇದು ಸಾಸಣೆಯವರ ಮೊದಲ ಕಥಾಸಂಗ್ರಹ. ಈ ಕಥಾಸಂಗ್ರಹ ಪ್ರಕಟವಾದ ಸಮಯದಲ್ಲಿ ಸಾಸಣೆ ಮರಾಠಿಯ ವಿಮರ್ಶಕರ, ಓದುಗರ ಅಪಾರ ಮೆಚ್ಚುಗೆ ಪಡೆದರು.

ಅಪೂರ್ವವಾದ ಕಾವ್ಯಾತ್ಮಕತೆಯಿಂದ, ತೀವ್ರವಾಗಿ ಬರೆಯುವ ಸಾಸಣೆಯವರ ಹನ್ನೊಂದು ಕಥೆಗಳು ಇಲ್ಲಿವೆ. ಮನುಷ್ಯರ ನಡುವಿನ ಸಂಬಂಧಗಳೇ ಅವರ ಕಥೆಗಳ ವಸ್ತು. ಅದು ಸೂಕ್ಷ್ಮವಾಗಿ, ಅಷ್ಟೇ ಶಕ್ತವಾಗಿ ಇಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ. ತಮ್ಮ ವಿಶಿಷ್ಟ ಚಿತ್ರಕ ಶಕ್ತಿಯಿಂದ ಇಲ್ಲಿನ ಕಥೆಗಳು ಹೊಸತೊಂದೇ ಲೋಕವನ್ನು ಓದುಗರಿಗೆ ಕಾಣಿಸಬಲ್ಲವು. `ಜಾನ್ ಮತ್ತು ಕಂದುಹಕ್ಕಿ', `ಕಾಗೆಗಳು ಹಾರಿದವು ಸ್ವಾಮಿ', `ಒಂದು ನಾಣ್ಯದ ಕಥೆ', `ಹೊಗೆ ಹಿಡಿದ ಕಪ್ಪು ಗಿಡಗಳು' ಮತ್ತಿತರ ಕಥೆಗಳು ಎಲ್ಲ ಕಾಲದಲ್ಲೂ ಸಲ್ಲಬಲ್ಲ ಗುಣವನ್ನು ಹೊಂದಿವೆ. ಸಂಕ್ಷಿಪ್ತವಾಗಿ, ಸಂಗ್ರಹವಾಗಿ ಹೇಳುವ ಕಲೆಗಾರಿಕೆ ಇರುವ ಇಲ್ಲಿನ ಕಥೆಗಳು ಆಸಕ್ತರಿಗೆ ಹೊಸ ಲೋಕವೊಂದನ್ನು ಪರಿಚಯಿಸುತ್ತವೆ. ಈಗಾಗಲೇ ಕನ್ನಡಕ್ಕೆ ಅನೇಕ ಕೃತಿಗಳನ್ನು ಮರಾಠಿಯಿಂದ ಅನುವಾದಿಸಿರುವ ಚಂದ್ರಕಾಂತ ಪೋಕಳೆ ಇದನ್ನು ಉತ್ತಮವಾಗಿ, ಮೂಲ ಲೇಖಕರ ದನಿ ಕನ್ನಡದಲ್ಲೂ ಮೂಡುವಂತೆ ಅನುವಾದಿಸಿದ್ದಾರೆ.                        
                            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT