ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದೃಶ್ಯ ಕಾದಂಬರಿ ಬಿಡುಗಡೆ

Last Updated 14 ಫೆಬ್ರುವರಿ 2011, 20:35 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ ಚಿತ್ರಗಳ ಮೂಲಕವೇ ‘ದೃಶ್ಯ’ ಕಾದಂಬರಿಯನ್ನು ರಚಿಸಿರುವ ಕಲಾವಿದ ಡಾ. ಎಂ.ಎಸ್. ಮೂರ್ತಿ ಅವರ ಪ್ರಯತ್ನ ಅಪರೂಪದ್ದು ಎಂದು ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಪ್ರಶಂಸಿಸಿದರು.

ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಸೋಮವಾರ ನಡೆದ ‘ದೃಶ್ಯ’ ಕಾದಂಬರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಯಾವುದೇ ಕಲೆಯನ್ನು ಶಬ್ದಗಳಲ್ಲಿ ವಿವರಿಸಿದಾಗ ಅದರ ಮಹತ್ವ ಹೊರಟು ಹೋಗುತ್ತದೆ. ವಿಶೇಷವಾಗಿ ಚಿತ್ರಕಲೆಗೆ ವಿವರಣೆಯಿಂದ ಹೆಚ್ಚಿನ ಅಪಾಯವಿದೆ. ವಿವರಣೆಯನ್ನು ಓದಿದ ನಂತರ ಚಿತ್ರಕಲೆ ಅರ್ಥವಾಯಿತು ಎಂದು ಬಹಳಷ್ಟು ಜನರು ಮತ್ತೆ ಅದರತ್ತ ಕಣ್ಣೆತ್ತಿ ನೋಡಲು ಹೋಗುವುದಿಲ್ಲ’ ಎಂದರು.

‘ಚಿತ್ರಕಲೆಗೆ ಶಬ್ದಗಳು ಸೂತಕವಿದ್ದಂತೆ. ಚಿತ್ರವೊಂದರ ಸ್ವಾರಸ್ಯವನ್ನು ಶಬ್ದಗಳಲ್ಲಿ ವಿವರಿಸಿದಾಗ ಅದರ ಮಹತ್ವ ಕಳೆದು ಹೋಗುತ್ತದೆ. ಇದರಂತೆ ಸಂಗೀತ ಕೂಡ ಹಾಗೆಯೇ. ಕೇವಲ ಸ್ವರಗಳನ್ನು ಕೇಳುವುದಕ್ಕೂ, ಶಬ್ದಗಳಿರುವ ಸಂಗೀತವನ್ನು ಕೇಳುವುದಕ್ಕೂ ಇರುವ ವ್ಯತ್ಯಾಸಕ್ಕೆ ಇದೇ ಕಾರಣ’ ಎಂದರು.

‘ನಿರೀಕ್ಷಿಸಿದ್ದನ್ನು ಕಲಾವಿದರು ನಿರೂಪಿಸದೇ ಇದ್ದಾಗ ಅಭಿಮಾನಿಗಳ ಕುತೂಹಲ ಕೊನೆಯವರೆಗೂ ಉಳಿಯುತ್ತದೆ. ಹೊಸತನವೂ ಕಾಣಿಸಿಕೊಳ್ಳುತ್ತದೆ. ಈ ಕಾದಂಬರಿಯ ಆರಂಭದಲ್ಲಿ ಕೆಲವು ಪುಟಗಳನ್ನು ಖಾಲಿ ಬಿಡಲಾಗಿರುವುದು ಸಹ ಇದೇ ಉದ್ದೇಶಕ್ಕೆಂದು ಅನಿಸುತ್ತದೆ. ಇದು ಓದುಗರನ್ನು ಚಿಂತನೆಗೆ ಹಚ್ಚುತ್ತದೆ’ ಎಂದು ತಿಳಿಸಿದರು.

ಕಾದಂಬರಿಯನ್ನು ಬಿಡುಗಡೆ ಮಾಡಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಹ  ಮಾತನಾಡಿ, ‘ಬದುಕಿನ ವಿವಿಧ ಮಗ್ಗಲುಗಳನ್ನು ತೋರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇದಕ್ಕಾಗಿ ಕಾದಂಬರಿಕಾರ ಯಾವುದೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ದೈನಂದಿನ ಬದುಕಿನ ದೃಶ್ಯಗಳನ್ನೇ ಯಥಾವತ್ತಾಗಿ ಬಳಸಿರುವುದು ಅವರ ಹೆಚ್ಚುಗಾರಿಕೆ’ ಎಂದು ಹೇಳಿದರು.

‘ಮಹಾತ್ಮಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಧಾರ್ಮಿಕ ಗುರು ಓಶೋ ಸೇರಿದಂತೆ ಹಲವು ವ್ಯಕ್ತಿಗಳ ಚಿತ್ರಣಗಳನ್ನು ರೂಪಕಗಳನ್ನಾಗಿ ಬಳಸಿದ್ದಾರೆ. ಪ್ರತಿಯೊಬ್ಬ ಓದುಗ/ನೋಡುಗ ಗ್ರಹಿಸುವ ಸಾಮರ್ಥ್ಯದ ಮೇಲೆ ಒಂದೊಂದು ಪುಟವೂ ವಿವಿಧ ಅರ್ಥಗಳನ್ನು ನೀಡುತ್ತದೆ’ ಎಂದು  ಅವರು ತಿಳಿಸಿದರು.

ಅತಿಥಿಯಾಗಿ ಪಾಲ್ಗೊಂಡ ಹಿರಿಯ ಕಲಾವಿದ ಎಸ್.ಜಿ. ವಾಸುದೇವ್ ಮಾತನಾಡಿ, ‘ನಮ್ಮ ಕಣ್ಮುಂದೆ ನಡೆಯುವ ಸಹಜ ಕ್ರಿಯೆಗಳನ್ನೇ ಬಳಸಿಕೊಂಡಿರುವುದು ವಿಶೇಷ. ನಾವು ಮರೆತಿರುವ ಅಥವಾ ಹೆಚ್ಚಾಗಿ ಗಮನಿಸದ ದೃಶ್ಯಗಳನ್ನು ಬಳಸಿರುವ ರೀತಿ ಬೆರುಗು ಮೂಡಿಸುತ್ತದೆ’ ಎಂದರು.

‘ದೃಶ್ಯ’ ಕಾದಂಬರಿಕಾರ ಡಾ.ಎಂ.ಎಸ್. ಮೂರ್ತಿ ಮಾತನಾಡಿ, ‘ಸಾಮಾನ್ಯರ ಬದುಕಿನಂತೆ ನನ್ನದು ಕೂಡ. ಸಾಮಾನ್ಯರು ನೋಡಿದ ಬದುಕನ್ನೇ ನಾನು ಕೂಡ ನೋಡಿದ್ದೇನೆ. ಇವುಗಳನ್ನೇ ಇಲ್ಲಿ ರೂಪಕಗಳನ್ನಾಗಿ ಇಳಿಸಿದ್ದೇನೆ’ ಎಂದು ಹೇಳಿದರು.

ಕಾದಂಬರಿಯನ್ನು ಬೆಂಗಳೂರಿನ ಥಿನ್‌ಲೈನ್ ಪಬ್ಲಿಕೇಷನ್ಸ್ ಸಂಸ್ಥೆಯು ಪ್ರಕಟಿಸಿದ್ದು, ಬೆಲೆ ರೂ 750. ಕನ್ನಡ ಹಾಗೂ ಇಂಗ್ಲಿಷ್ ಆವೃತ್ತಿಯಲ್ಲೂ ಇದು ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT