ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಪಯಣದ ಅನನ್ಯ ಅನುಭವ

ಬೆಂಗಳೂರಿನತ್ತ ರೈಲು: ಬೀದರ್ ನಿಲ್ದಾಣದಲ್ಲಿ ಹಬ್ಬದ ವಾತಾವರಣ
Last Updated 5 ಸೆಪ್ಟೆಂಬರ್ 2013, 5:10 IST
ಅಕ್ಷರ ಗಾತ್ರ

ಬೀದರ್: ದೇಶದಲ್ಲಿ ರೈಲು ಸೇವೆ ಆರಂಭವಾಗಿ ದಶಕಗಳೇ ಕಳೆದಿದ್ದರೂ ಮೊದಲ ರೈಲು ಆರಂಭವಾದ ಕ್ಷಣಕ್ಕಿಂತಲೂ ಹೆಚ್ಚಿನ ಸಂಭ್ರಮ ಬುಧವಾರ ಬೀದರ್ ರೈಲ್ವೆ ನಿಲ್ದಾಣದಲ್ಲಿ ಮನೆ ಮಾಡಿತು. ಅದು, ಬೀದರ್- ಬೆಂಗಳೂರು ನಡುವೆ ನೇರ ರೈಲು ಸಂಪರ್ಕ ಬೇಕು ಎಂಬ ವರ್ಷಗಳ ಹೋರಾಟದ ಗುರಿ ಈಡೇರಿದ ಸಂಭ್ರಮವೂ ಹೌದು.

ಬೀದರ್ ಮತ್ತು ಬೆಂಗಳೂರು ನಡುವಣ ನೂತನ ರೈಲು ಸೇವೆಯ ಮೊದಲ ಪ್ರಯಾಣ ಬುಧವಾರ ಸಂಜೆ ಆರಂಭವಾಗಿದ್ದು, ಸಹಜ ವಾಗಿಯೇ ಅನೇಕ ಪ್ರಯಾಣಿಕರು ಮತ್ತು ಅವರನ್ನು ಕಳುಹಿಸಲು ಆಗಮಿಸಿದ್ದ ಸಂಬಂಧಿ ಕರಲ್ಲಿ ಕುತೂಹಲ, ಸಂಭ್ರಮ ಕಂಡುಬಂದಿತು.

ರೈಲು ಪ್ರಯಾಣಕ್ಕೂ ನಿರೀಕ್ಷೆಯಂತೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಸಾಮಾನ್ಯ ಬೋಗಿಗಳು ಮತ್ತು ಸ್ಲೀಪರ್ ದರ್ಜೆಯ ಬೋಗಿಗಳು ಬಹುತೇಕ ಭರ್ತಿಯಾಗಿದ್ದವು. ಈ ಮಾರ್ಗದಲ್ಲಿ ಮೊದಲ ಪ್ರಯಾಣದ ಸಂಭ್ರಮದಲ್ಲಿ ಭಾಗಿಯಾಗುವ ಗುರಿಯೊಂದಿಗೆ ಅನೇಕ ಮಂದಿ ಟಿಕೆಟ್ ಕಾದಿರಿಸಿದ್ದರು.

ಮೊದಲದಿನ ಪ್ರಯಾಣಿಸಿದವರಲ್ಲಿ ಅನೇಕ ಪ್ರಮುಖರು ಸೇರಿದ್ದುದು ವಿಶೇಷವಾಗಿತ್ತು. ಶಾಸಕ ರಘುನಾಥ ರಾವ್ ಮಲ್ಕಾಪುರೆ, ಪ್ರಮುಖರಾದ ಶೈಲೇಂದ್ರ ಬೆಲ್ದಾಳೆ, ಡಿ.ಕೆ. ಸಿದ್ರಾಮ, ಗುರಮ್ಮ ಸಿದ್ದಾರೆಡ್ಡಿ, ಡಾ. ಮಕ್ಸೂದ್ ಚಂದಾ ಹೀಗೆ ಅನೇಕ ಪ್ರಮುಖರು ಪ್ರಯಾಣಿಕರಲ್ಲಿ ಸೇರಿದ್ದರು.

ಬಹುತೇಕ ಪ್ರಯಾಣಿಕರು ರೈಲು ಏರಿ ಅಲ್ಲಿ ಇರುವ ಸೌಲಭ್ಯಗಳನ್ನು ಗಮನಿಸಲು ಉತ್ಸಾಹದಲ್ಲಿದ್ದರು. `ರೈಲು ಛಲೋ ಇದೆ. ಹೊಸ ಟ್ರೈನು ಹಾಕಿದ್ದಾರೆ. ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಅವಕಾಶವಿದೆ' ಇತ್ಯಾದಿ ಸಂಭಾಷಣೆ ಕೇಳಿ ಬಂದವು.

ನಿಗದಿತ ಸಂಜೆ 6.25 ಗಂಟೆಗೆ ರೈಲು ನಿರ್ಗಮಿಸಬೇಕಿದ್ದರೂ ಸಂಜೆ 5.30ಗಂಟೆ ಯಿಂದಲೇ ಪ್ರಯಾಣಿಕರು ಆಗಮಿಸಲು ಶುರು ಮಾಡಿದ್ದು, ಬೋಗಿಗಳಲ್ಲಿ ಆಸೀನರಾಗಿದ್ದರು. ಸಂಜೆ 6.40ಕ್ಕೆ ಬೆಂಗಳೂರಿನತ್ತ ರೈಲು ನಿರ್ಗಮಿಸುತ್ತಿದ್ದಂತೆ ಪ್ರಯಾಣಿಕರ ಸಂಭ್ರಮ ಮೇರೆ ಮೀರಿತು. ನಿಲ್ದಾಣದ ಆವರಣದ ಲ್ಲಿಯೂ ಹೆಚ್ಚಿನ ಜನಸಂಚಾರ ಇದ್ದು, ಕೆಲವು ಸಂಚಾರಿ ಅಂಗಡಿಗಳು ಕಂಡುಬಂದವು. ದಶಕಗಳ ಕನಸು ಸಾಕಾರ ಗೊಂಡ ಖುಷಿಯಲ್ಲಿ ಹಬ್ಬದ ಸಂಭ್ರಮ ನಿಲ್ದಾಣವನ್ನು ಆವರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT