ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸುತ್ತಿನ ಪಲ್ಸ್ ಪೋಲಿಯೊ 19ರಂದು

Last Updated 4 ಫೆಬ್ರುವರಿ 2012, 5:00 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯಾದ್ಯಂತ ಇದೇ 19ರಂದು ಮೊದಲ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಜರುಗಲಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳು, ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜರುಗಿದ  ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ, ಫೆಬ್ರುವರಿ 19ರಂದು ಬೂತ್ ಚಟುವಟಿಕೆ ಹಾಗೂ ಉಳಿದ ಮೂರು ದಿವಸ ಮಾಪ್  ಅಪ್ ಚಟುವಟಿಕೆಗಳು ಜರುಗಲಿದ್ದು, ಹೊಲ, ತೋಟದ ಮನೆಗಳನ್ನು ಗುರುತಿಸಿ, ಈ ಕುಟುಂಬದ  ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ನಿಟ್ಟಿನಲ್ಲಿ ಕಾರ್ಯಕ್ರಮ ಯೋಜಿಸುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳಿಗೆ ಪೋಲಿಯೊ ಲಸಿಕೆಯ ಅಗತ್ಯತೆ ಬಗ್ಗೆ  ಜನರಿಗೆ ಅರಿವು ಮೂಡಿಸಬೇಕು. ಕಾರ್ಯಕ್ರಮದ ಸ್ಥಳ, ದಿನಾಂಕ ಕುರಿತಂತೆ ವ್ಯಾಪಕ ಪ್ರಚಾರದ ಮೂಲಕ ಜನರಿಗೆ ಮಾಹಿತಿ ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ಸಕ್ರಿಯವಾಗಿ ಪೋಲಿಯೊ  ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹೇಳಿದರು. 

 ಗ್ರಾಮೀಣ ಪ್ರದೇಶದಲ್ಲಿ 241932 ಹಾಗೂ ನಗರ ಪ್ರದೇಶದಲ್ಲಿ 87846 ಮಕ್ಕಳು ಸೇರಿದಂತೆ ಜಿಲ್ಲೆಯಲ್ಲಿ 329778 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಬೇಕಾಗಿದೆ. 401261 ಮನೆಗಳಿದ್ದು, ಈ ಪೈಕಿ 2155 ಹೈರಿಸ್ಕ್ ಏರಿಯಾಗಳಿದ್ದು, ಈ ಭಾಗದಲ್ಲಿ 7314 ಮನೆಗಳಿವೆ. ಈ ಮನೆಗಳ 7023 ಐದು ವರ್ಷದೊಳಗಿನ ಮಕ್ಕಳಿಗೆ ಆದ್ಯತೆಯ ಮೇಲೆ ಪೋಲಿಯೊ ಲಸಿಕೆಯನ್ನು ಹಾಕಲು ವಿಶೇಷ ತಂಡವನ್ನು ರಚನೆ ಮಾಡಲು ಸಲಹೆ ನೀಡಲಾಯಿತು.

ಜಿಲ್ಲೆಯ 771 ಗ್ರಾಮಗಳಲ್ಲಿ 1221 ಪೋಲಿಯೋ ಬೂತ್‌ಗಳನ್ನು ತೆರೆದು,  ಫೆಬ್ರುವರಿ 19ರಂದು ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಿದೆ.  26 ಸಂಚಾರಿ ತಂಡಗಳನ್ನು ರಚಿಸಲಾಗಿದೆ. 2562 ಲಸಿಕಾ ಕಾರ್ಯಕರ್ತರ ಅಗತ್ಯವಿದ್ದು, 254 ಮೇಲುಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಬೇಕಾಗಿದೆ. 45 ಸ್ವಯಂ ಸೇವಾ ಸಂಘಗಳನ್ನು  ಪೋಲಿಯೊ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪೋಲಿಯೊ ಜಾಗೃತಿಗಾಗಿ ಶಾಲೆಗಳಲ್ಲಿ ಜಾಥಾ ಕಾರ್ಯಕ್ರಮ, ಮಾಧ್ಯಮಗಳ ಮೂಲಕ ಪ್ರಚಾರ, ಗ್ರಾಮೀಣ ಪ್ರದೇಶದಲ್ಲಿ ಡಂಗುರ ಸಾರಿಸುವುದು, ಪ್ರಚಾರ ಸಾಮಗ್ರಿಗಳ ಅಳವಡಿಕೆ, ಸಾರಿಗೆ ಇಲಾಖೆಯಿಂದ ವಾಹನಗಳ ಸೇವೆ ಪಡೆಯುವುದು, ನಿರಂತರ ವಿದ್ಯುತ್ ಸಂಪರ್ಕ, ಶಾಲಾ ಕೊಠಡಿಗಳ ಅಗತ್ಯತೆ , ಪೋಲಿಸ್ ಸೇವೆ, ಬಸ್ಸಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಲಸಿಕೆ ಹಾಕುವುದು ಕುರಿತಂತೆ ಚರ್ಚಿಸಲಾಯಿತು.
 
ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ, ಕ್ರಿಯಾಯೋಜನೆಯನ್ನು ಸಿದ್ದಪಡಿಸಿ, ತರಬೇತಿ, ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪೋಲಿಯೋ ಕಾರ್ಯಕ್ರಮವನ್ನು  ಜಿಲ್ಲೆಯಲ್ಲಿ ನೂರರಷ್ಟು ಸಾಧನೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎನ್. ಪಾಟೀಲ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಡಿ.ಸಿ.ರಾಜಪ್ಪ, ಉಪವಿಭಾಗಾಧಿಕಾರಿ ಸುರೇಶ ಜಿರಲಿ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿ ಡಾ: ವಿಶ್ವನಾಥ ಗಲಗಲಿ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ: ಆರ್.ಎಂ. ಸಜ್ಜನ, ವಿವಿಧ ಇಲಾಖಾಧಿಕಾರಿಗಳು, ವೈದ್ಯಾಧಿಕಾರಿಗಳು, ಸ್ವಯಂ ಸೇವಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT