ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸೆಮಿಸ್ಟರ್ ಅರ್ಧ ಮುಗಿದ ನಂತರ ಹೆಚ್ಚುವರಿ ಪಠ್ಯ

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ವಿ.ವಿ ಸುತ್ತೋಲೆಗೆ ಉಪನ್ಯಾಸಕರು ಕಂಗಾಲು

ಬೆಂಗಳೂರು: ಕಾಲೇಜುಗಳು ಆರಂಭಗೊಂಡು ಒಂದೂವರೆ ತಿಂಗಳು ಕಳೆದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಲ್ಲಿ `ನಾಗರಿಕ ಪ್ರಜ್ಞೆ~ ಹೆಚ್ಚುವರಿ ಪಠ್ಯ ವಿಷಯವನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ವಿವಿ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಜೂನ್ 15ಕ್ಕೆ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಜುಲೈ 5ರಂದು ನಡೆದ ಶೈಕ್ಷಣಿಕ ಪರಿಷತ್ತಿನ ಸಭೆಯಲ್ಲಿ `ನಾಗರಿಕ ಪ್ರಜ್ಞೆ~ ಪಠ್ಯ ವಿಷಯ ಅಳವಡಿಕೆಗೆ ಅನುಮೋದನೆ ನೀಡಲಾಗಿತ್ತು.

ಪದವಿಯ ಮೊದಲ ಸೆಮಿಸ್ಟರ್‌ನಲ್ಲಿ ಸಮಾಜಶಾಸ್ತ್ರ ಪಾಠ ಮಾಡುವ ಉಪನ್ಯಾಸಕರು ಈ ಪಠ್ಯವನ್ನು ಬೋಧನೆ ಮಾಡಬೇಕು ಎಂದು ಜುಲೈ 23ರಂದು ಆದೇಶ ಹೊರಡಿಸಲಾಗಿತ್ತು. ಕಾಲೇಜುಗಳಿಗೆ ಸುತ್ತೋಲೆಯ ಪ್ರತಿ ತಲುಪಿದ್ದು ಜುಲೈ ಅಂತ್ಯದ ವೇಳೆಗೆ. ಮೊದಲ ಸೆಮಿಸ್ಟರ್‌ನ ತರಗತಿಗಳು ಅರ್ಧದಷ್ಟು ಪೂರ್ಣಗೊಂಡಿರುವ ಹೊತ್ತಿಗೆ ತಲುಪಿರುವ ಆದೇಶವು ಉಪನ್ಯಾಸಕರು ಕಂಗಾಲಾಗುವಂತೆ ಮಾಡಿದೆ.

`ನಾಗರಿಕ ಪ್ರಜ್ಞೆ~ ಪಠ್ಯದ ಬೋಧನೆಯ ಅವಧಿ 60 ಗಂಟೆಗಳು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಸೆಮಿಸ್ಟರ್ ಪರೀಕ್ಷೆಗಳು ಆರಂಭಗೊಳ್ಳಲಿವೆ. ಬಾಕಿ ಇರುವ ಎರಡು ತಿಂಗಳಲ್ಲಿ 60 ಗಂಟೆಗಳ ತರಗತಿ ನಡೆಸುವುದು ಅಸಾಧ್ಯ ಎಂದು ಉಪನ್ಯಾಸಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

`ಬೆಂಗಳೂರು ವಿವಿ ತೀರ್ಮಾನವು ತೀರಾ ಬಾಲಿಶವಾದುದು. ವಿದ್ಯಾರ್ಥಿಗಳಲ್ಲಿ ನಾಗರಿಕ ಪ್ರಜ್ಞೆ ಬೆಳೆಸಲು ಉಗುಳುವುದು, ಮೂತ್ರ ಮಾಡುವುದು, ಸಾರ್ವಜನಿಕ ಪ್ರದೇಶದಲ್ಲಿನ ವರ್ತನೆ, ಸಾರ್ವಜನಿಕ ಜಾಗದಲ್ಲಿ ಧೂಮಪಾನ ಮಾಡದಿರುವುದು, ರಸ್ತೆ ಸುರಕ್ಷತೆ ಮತ್ತಿತರ ವಿಷಯಗಳ ಪಾಠ ಮಾಡುವಂತೆ ತಿಳಿಸಲಾಗಿದೆ.
 
ಈ ಎಲ್ಲ ವಿಷಯಗಳು ಪದವಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಗೊತ್ತಿರುತ್ತದೆ. ಪ್ರಾಥಮಿಕ ಅಥವಾ ಪ್ರೌಢಶಾಲಾ ಹಂತದಲ್ಲಿ ಬೋಧನೆ ಮಾಡಬೇಕಾದ ವಿಷಯವನ್ನು ಪದವಿಯಲ್ಲಿ ಪಾಠ ಮಾಡಬೇಕು ಎಂದು ಆದೇಶ ಹೊರಡಿಸಿರುವುದು ಸರಿಯಲ್ಲ~ ಎಂದು ವಿವಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ.ಬಿ.ಎಸ್.ಶ್ರೀಕಂಠ `ಪ್ರಜಾವಾಣಿ~ಗೆ ಸೋಮವಾರ ತಿಳಿಸಿದರು.

`ಈಗಾಗಲೇ ಉಪನ್ಯಾಸಕರು ಹೆಚ್ಚುವರಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಆಗಸ್ಟ್ ಆರಂಭದಲ್ಲಿ ತರಗತಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಬೇಕಿದೆ. ಅವರಿಗೆ ಹೆಚ್ಚುವರಿ ತರಗತಿ ನಡೆಸುವುದೋ ಅಥವಾ ನಾಗರಿಕ ಪ್ರಜ್ಞೆ ಪಠ್ಯ ಬೋಧನೆ ಮಾಡುವುದೋ ಎಂಬ ಬಗ್ಗೆ ಗೊಂದಲ ಕಾಡುತ್ತಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷ ಈ ವಿಷಯವನ್ನು ಕೈ ಬಿಡಬೇಕು~ ಎಂದು ಅವರು ಒತ್ತಾಯಿಸಿದರು.

`ನಾಗರಿಕ ಪ್ರಜ್ಞೆಯಲ್ಲಿರುವ ವಿಷಯಗಳು ಈಗಾಗಲೇ ಇರುವ ಹೆಚ್ಚುವರಿ ಪಠ್ಯ ವಿಷಯಗಳಾದ ಭಾರತೀಯ ಸಂವಿಧಾನ ಹಾಗೂ ಪರಿಸರ ವಿಜ್ಞಾನ ವಿಷಯಗಳಲ್ಲಿ ಇವೆ. ಉಪನ್ಯಾಸಕರು ಡಾ.ಪ್ರಿಯದರ್ಶಿನಿ ಪಿಳ್ಳೈ ಹಾಗೂ ಪ್ರಕಾಶ್ ಪಿಳ್ಳಪ್ಪ ಅವರ `ನಾಗರಿಕ ಪ್ರಜ್ಞೆ~, ಡಾ.ಕೆ.ಪಿ.ಪುತ್ತೂರಾಯ ಅವರ `ಸಭ್ಯತೆ- ಸೌಜನ್ಯ~ ಕೃತಿಗಳಿಂದ ಮಾಹಿತಿ ಪಡೆದು ಬೋಧನೆ ಮಾಡಬೇಕು ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ವಿವಿ ನಿರ್ಧಾರದಿಂದ ಕಾಲೇಜುಗಳು ಗೊಂದಲಕ್ಕೆ ಈಡಾಗಿವೆ~ ಎಂದರು.

ಅವೈಜ್ಞಾನಿಕ : ಸಾಮಾನ್ಯವಾಗಿ ವಾರಕ್ಕೆ ಕಾಲೇಜುಗಳ ತರಗತಿ ಅವಧಿ 32 ಗಂಟೆ. ಈಗ ಹೆಚ್ಚುವರಿ ಪಠ್ಯಗಳ ಸೇರ್ಪಡೆಯಿಂದ ವಿದ್ಯಾರ್ಥಿಗಳು ವಾರಕ್ಕೆ 48 ಗಂಟೆಗಳ ಕಾಲ ತರಗತಿಯಲ್ಲಿ ಪಾಠ ಕೇಳಬೇಕಿದೆ. ಬೆಂಗಳೂರು ವಿವಿಯ ಈ ತೀರ್ಮಾನ ಅವೈಜ್ಞಾನಿಕ~ ಎಂದು ವಿವಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎಂ. ಪ್ರಕಾಶ್ ದೂರಿದರು. 

`ಖಾಸಗಿ ಕಾಲೇಜುಗಳಲ್ಲಿ ಈ ವಿಷಯವನ್ನು ಬೋಧನೆ ಮಾಡಲು ಕಾಲೇಜು ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಬೇಕು. ಬಳಿಕ ಜಾಹೀರಾತು ನೀಡಿ ಉಪನ್ಯಾಸಕರನ್ನು ನೇಮಕ ಮಾಡಬೇಕು. ಈ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕನಿಷ್ಠ 20 ದಿನಗಳ ಅವಧಿ ಬೇಕಾಗುತ್ತದೆ. ತರಾತುರಿಯಲ್ಲಿ ಈ ವಿಷಯವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ತಪ್ಪು.

ಈಗ ಬೋಧನೆ ಮಾಡುವುದು ಅಸಾಧ್ಯ~ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಉಪನ್ಯಾಸಕರ ಸಂಘದ (ಬುಕ್ಟಾ) ಅಧ್ಯಕ್ಷ ಪ್ರೊ.ಕೆ.ಎಂ. ನಾಗರಾಜ್ ತಿಳಿಸಿದರು.

`ಸರ್ಕಾರಿ ಕಾಲೇಜುಗಳ ಉಪನ್ಯಾಸಕರ ಸ್ಥಿತಿ ಮತ್ತಷ್ಟು ಕಷ್ಟವಾಗಿದೆ. ಕಾಲೇಜುಗಳು ಆರಂಭಗೊಳ್ಳುವ ಮೊದಲೇ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಹೊಸ ಪಠ್ಯ ವಿಷಯಗಳನ್ನು ಜಾರಿಗೆ ತರಬೇಕು. ನಾಗರಿಕ ಪ್ರಜ್ಞೆ ವಿಷಯವನ್ನು ಪಠ್ಯವಾಗಿ ಮಾಡುವ ಬದಲು ವಿದ್ಯಾರ್ಥಿಗಳಿಗೆ ಒಂದು ಅಥವಾ ಎರಡು ದಿನಗಳ ಕಾರ್ಯಾಗಾರ ನಡೆಸುವುದು ಉತ್ತಮ~ ಎಂದು ಅವರು ಅಭಿಪ್ರಾಯಪಟ್ಟರು.

ಕುಲಪತಿ ಭರವಸೆ
ನಾಗರಿಕ ಪ್ರಜ್ಞೆ ಈ ಪಠ್ಯವನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ವಿವಿ ಪದವಿ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಕುಲಪತಿ ಡಾ.ಎನ್.ಪ್ರಭುದೇವ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡ ಲಾಯಿತು. ಕುಲಪತಿ ಅವರು ಈ ಪಠ್ಯಕ್ರಮವನ್ನು ಈ ವರ್ಷ ಕೈ ಬಿಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ~ ಎಂದು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಿ.ಎಸ್.ಶ್ರೀಕಂಠ ತಿಳಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT