ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲಾ ಸಲ ಐವತ್ತರ ಬೆಳೆ

Last Updated 24 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ತಂದೆ-ತಾಯಿ ಮಕ್ಕಳಿಗಾಗಿ ಪ್ರತೀ ದಿನ ಸಾಯುತ್ತಾರೆ. ಪ್ರತಿಭಾವಂತ ಹೆಂಗಸು ಮಗುವನ್ನು ಸಾಕಲು ಕೆಲಸ ಬಿಡುತ್ತಾಳೆ.ಗೃಹಿಣಿಯಾಗಿ ಬಾಳುವಾಸೆ ಹೊತ್ತ ಮಹಿಳೆ ಮಕ್ಕಳನ್ನು ಸಾಕಲು ಕೆಲಸ ಹುಡುಕುತ್ತಾಳೆ. ಹೀಗೆ ತನ್ನ ಆಸೆ ಆಕಾಂಕ್ಷೆಗಳನ್ನು ಕೊಂದುಕೊಂಡು ತಂದೆತಾಯಿಗಳು ಮಕ್ಕಳಿಗಾಗಿ ಜೀವನ ಬದಲಿಸಿಕೊಳ್ಳುತ್ತಾರೆ. ಅದು ಕೂಡ ಒಂದು ರೀತಿಯ ಆತ್ಮಹತ್ಯೆಯೇ. ಅದರಿಂದ ನಮ್ಮ ‘ಮೊದಲಾ ಸಲ’ ಸಿನಿಮಾದಲ್ಲಿ ಮಕ್ಕಳ ಪ್ರೀತಿಗಾಗಿ ತಂದೆ ತಾಯಿ ಸಾಯುವುದು ತಪ್ಪೇನಲ್ಲ’. ಇದು ನಟಿ ತಾರಾ ಅವರ ಸಮರ್ಥನೆ.

‘ಗೆಲುವು ಇರುವುದೇ ಚರ್ಚೆಯಲ್ಲಿ. ಸಿನಿಮಾ ಈ ರೀತಿ ಕಾಡಬೇಕು. ಹೀಗೆ ಆಗಬಾರದಿತ್ತು. ಹೀಗೆ ಆಗಬೇಕಿತ್ತು ಎಂಬ ಯೋಚನೆ ಅಚ್ಚಬೇಕು. ಗೆಲುವಿರೋದೇ ಅಲ್ಲಿ’ ಎಂದರು ಅವರು. ‘ಮೊದಲಾ ಸಲ’ ಚಿತ್ರ ನಾಲ್ಕು ಥಿಯೇಟರ್‌ಗಳಲ್ಲಿ ಐವತ್ತು ದಿನ ಪೂರೈಸಿದೆ. ಆ ಸಂಭ್ರಮ ಹಂಚಿಕೊಳ್ಳಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಾರಾ ಸಿನಿಮಾದ ವಿಶ್ಲೇಷಣೆಯಲ್ಲಿ ತೊಡಗಿದ್ದರು.ನಿರ್ಮಾಪಕ ಮಲ್ಲಿಕಾರ್ಜುನ್ ಚಿತ್ರದ ಕಲಾವಿದರಿಗೆ, ತಂತ್ರಜ್ಞರಿಗೆ ಕೃತಜ್ಞತೆ ಸಲ್ಲಿಸಿದರು. ‘ಲಾಭದ ಅಂಕಿಅಂಶ ಇನ್ನೂ ಗಮನಿಸಿಲ್ಲ’ ಎಂದರು.

‘ಚಿತ್ರದ ಪ್ರಚಾರಕ್ಕಾಗಿ ಬಳಸಿದ್ದ ಕೂಪನ್‌ನಿಂದ ತುಂಬಾ ಸಹಾಯವಾಯಿತು. ಒಳ್ಳೆಯ ಚಿತ್ರವನ್ನು ಜನರಿಗೆ ತಲುಪಿಸಲು ಅದು ನೆರವಾಯಿತು. ಹಣ ಮಾಡುವುದಕ್ಕಿಂತ ಒಳ್ಳೆಯ ಚಿತ್ರವನ್ನು ಜನರಿಗೆ ತಲುಪಿಸುವುದು ನಮ್ಮ ಉದ್ದೇಶ. ಕೂಪನ್‌ನಿಂದ ಶೇ 22ರಷ್ಟು ಪ್ರೇಕ್ಷಕರನ್ನು ಥಿಯೇಟರ್‌ಗೆ ಎಳೆದೆವು’ ಎಂದು ಮಲ್ಲಿಕಾರ್ಜುನ್ ಹೇಳಿದರು.

 ‘ಒಳ್ಳೆ ಸಿನಿಮಾ ಮಾಡುವಾಸೆ ಇತ್ತು ಮಾಡಿದೆ. ಕೆಟ್ಟ ಮಕ್ಕಳು ಇರುತ್ತಾರೆ. ಆದರೆ ಕೆಟ್ಟ ತಂದೆ ತಾಯಿ ಇರಲ್ಲ. ಮನಸ್ಸಿಗೆ ಆಘಾತವಾದಾಗ ಮೆದುಳಿನ ಒಂದು ಭಾಗ ನಿಷ್ಕ್ರಿಯವಾಗಿ ಬಿಡುತ್ತದೆ. ಪ್ರೀತಿಗಾಗಿ ಹುಡುಗ- ಹುಡುಗಿ ಸತ್ತಿದ್ದಾರೆ, ತಂದೆ ತಾಯಿ ಸಾವು ನಮ್ಮ ಚಿತ್ರದ ಹೈಲೈಟ್. ಅದೇ ಕಾರಣಕ್ಕೆ ಮಲ್ಲಿಕಾರ್ಜುನ್ ಕತೆ ಒಪ್ಪಿದರು. ರವಿಚಂದ್ರನ್ ಅವರ ‘ಪ್ರೇಮಲೋಕ’ ಚಿತ್ರದಲ್ಲಿ ಬರುವ ಸಂಭಾಷಣೆ ಈ ಚಿತ್ರಕ್ಕೆ ಸ್ಫೂರ್ತಿ’ ಎಂದರು ನಿರ್ದೇಶಕ ಪುರುಷೋತ್ತಮ್.

ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್- ‘ಕಪಾಲಿ ಚಿತ್ರಮಂದಿರದಲ್ಲಿ 50 ದಿನ ಓಡುವುದು ಉಳಿದ ಚಿತ್ರಮಂದಿರಗಳಲ್ಲಿ 100 ದಿನ ಓಡುವುದಕ್ಕೆ ಸಮ. ಅಪ್ಪ ಅಮ್ಮ ಸಾಯುವುದು ಒಂದು ವರ್ಗದ ಜನರಿಗೆ ಇಷ್ಟವಾಗುತ್ತದೆ ಎಂದು ನಂಬಿಕೊಂಡು ಸಿನಿಮಾ ಮಾಡಿ ಗೆದ್ದಿದ್ದಾರೆ’ ಎಂದರು.

‘ಇದು ನಿರ್ದೇಶಕ ಪರಿಶ್ರಮದ ಫಲ’ ಎಂದು ಅಭಿಪ್ರಾಯಪಟ್ಟ ನಾಯಕ ಯಶ್- ‘ನಿರ್ದೇಶಕರು ಅಚ್ಚುಕಟ್ಟು ಸಿನಿಮಾ ಮಾಡಿದ್ದಾರೆ. ಅದರಿಂದ ನಾವೆಲ್ಲಾ ಅನ್ನ ತಿನ್ನುತ್ತಿದ್ದೇವೆ. ಇದೊಂದು ಸದಭಿರುಚಿಯ ಚಿತ್ರ. ಅದನ್ನು ಎಲ್ಲರಿಗೂ ತಲುಪಿಸುತ್ತಿರುವ ನಿರ್ಮಾಪಕರ ಕೆಲಸ ದೊಡ್ಡದು’ ಎಂದರು.

‘ಮೊದಲ’ ಜಗಳ
ಸಾಫ್ಟ್‌ವೇರ್ ಎಂಜಿನಿಯರ್ ಯೋಗೀಶ್ ನಾರಾಯಣ್ ಈ ಚಿತ್ರದ ಸಹ ನಿರ್ಮಾಪಕ. ಅವರು ತಮ್ಮ ಹೆಸರನ್ನು ನಿರ್ದೇಶಕರು ಹೇಳದೇ ತಮಗೆ ಮೋಸ ಮಾಡಿದ್ದಾರೆ ಎಂದರು. ‘ಯಾರೂ ನನ್ನ ಹೆಸರನ್ನು ಹೇಳದ ಕಾರಣ ಮಾಧ್ಯಮಗಳು ನನ್ನನ್ನು ಗುರುತಿಸುತ್ತಿಲ್ಲ. ನಾನು ಕತೆ ಕೇಳಿ ನಿರ್ದೇಶಕರು ಯಾರೆಂದೂ ವಿಚಾರಿಸದೇ ಹಣ ನೀಡಿದೆ’ ಎಂದ ಅವರು ನೇರವಾಗಿ ನಿರ್ದೇಶಕರನ್ನು ದೂಷಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕರು- ‘ನಾನು ಫ್ಯಾಷನ್‌ಗಾಗಿ ಸಿನಿಮಾ ಮಾಡಿಲ್ಲ. ನನಗೆ ಸಿನಿಮಾ ಎಂಬುದು ಜೀವನ. ನನ್ನ ಭಾವನೆಗಳಿಗೆ ನೋವಾಗಿದೆ. ಮಲ್ಲಿಕಾರ್ಜುನ್ ನನ್ನ ಸ್ನೇಹಿತ. ಅವರಿಗಾಗಿ ಸಿನಿಮಾ ಮಾಡಿದೆ’ ಎಂದು ವಿಷಾದದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT