ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ಓದು

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಕವಿಯ ಮನದೊಳಗೆ ಕಳ್ಳ ಹೆಜ್ಜೆಯ ಕವಿತೆ/ ಆಹಾ ಎಂಥ ಬೆರಗು/ ನನ್ನ ಮನೆ ಅಂಗಳದಿ ನಿನ್ನ ಗೆಜ್ಜೆದನಿ/ ಮೆಲ್ಲನುಲಿಯಬೇಕು, ಕೊಂಚ ನಾಚಬೇಕು~- ಹೀಗೆ ಲಯಬದ್ಧವಾಗಿ ಕವಿತೆ ಕಟ್ಟುವ ರಂಜನಿಪ್ರಭು ಅವರಿಗೆ, ಮೊದಲ ಸಂಕಲನದಲ್ಲಿಯೇ ಪದ್ಯಕ್ಕೆ ಅಗತ್ಯವಾದ ಗೆಜ್ಜೆದನಿಯ ಉಲಿತ ಹಾಗೂ ನಾಚಿಕೆಯ ಅರಿವಿರುವುದು ಗಮನಾರ್ಹ.

`ಒಮ್ಮಮ್ಮೆ ಕಿರಿಕಿರಿಯಾಗುವುದುಂಟು/ ಈ ಸಂಸಾರ ನನಗೂ/ ನಾ ಯಾವ ಕದಳೀಬನಕ್ಕೆ/ ಹೊರಡಲೇ?/ ನನ್ನ `ಚೆನ್ನ~ ಮಲ್ಲಿಕಾರ್ಜುನ/ ಇರುವುದು/ ಇಲ್ಲೆ!~ (ಅಕ್ಕನಿಗೆ) ಎಂದು ತರ್ಕಬದ್ಧವಾಗಿ ಬರೆಯುವ ಕವಯತ್ರಿ, `ಬೀಳುವ ತರಗೆಲೆ ಸದ್ದು ಮಾಡದಿರಿ/ ಬುದ್ಧನಿರಬಹುದು ಧ್ಯಾನದಲಿ/ ಕಲ್ಲಿನ ಮೇಲೂ ಮೆಲ್ಲಗೆ ಸುರಿಮಳೆ/ ಅಹಲ್ಯೆಯ ಅಳಲಿದೆ ಮೌನದಲಿ~ (ಕೋರಿಕೆ) ಎಂದು ಆರ್ದ್ರವಾಗಿಯೂ ಬರೆಯಬಲ್ಲರು. ಈ ಆರ್ದ್ರತೆ ಸಂಕಲನದ ಬಹುತೇಕ ಕವಿತೆಗಳಲ್ಲಿ ಭರಣಿಮಳೆಯಂತೆಯೇ ಜಿನುಗಿದೆ.

ನಲ್ಲನ ಅಪ್ಪುಗೆಯಲ್ಲಿ, ಅತ್ತೆಯೊಂದಿಗೆ ಅಡುಗೆಮನೆಯಲ್ಲಿ, ಸಂಸಾರದ ದೈನಿಕದ ವಿವರಗಳಲ್ಲಿ ಕಳೆದುಹೋಗುವ ಹೆಣ್ಣುಮಗಳು ಇವರಲ್ಲ. ಹೊಸತೇನನ್ನೋ ಹುಡುಕಾಡುತ್ತ, ಆ ಹೊಸತರ ಹಂಬಲದಲ್ಲಿ ಬದುಕಿನ ಅರ್ಥವಂತಿಕೆಯನ್ನು ಕಾಣುವ ಮನಸು ಅವರದು.
 
ಆ ಹಂಬಲ ಬೆಳಕಿನದೂ ಇರಬಹುದು, ಕವಿತೆಯೂ ಆಗಿರಬಹುದು. ಹೀಗೆ, ಹುಡುಕಾಡುವ ಕವಯತ್ರಿಯೇ, `ಪ್ರೇಯಸಿಯ ಮರುಳು~ ರೀತಿಯ ಕವಿತೆಗಳನ್ನೂ ಬರೆಯುವರು. ಅಂಥ ಸಂದರ್ಭದಲ್ಲಿ ದೇಹದಲ್ಲಿನ ರಕ್ತ ಅವರಿಗೆ ಜೇನಿನಂತೆ ಕಾಣುವುದು!
ರಂಜನಿಪ್ರಭುಕವಿತೆಗಳ ಶಕ್ತಿ ಇರುವುದು ಅವುಗಳಿಗೆ ಸಹಜವಾಗಿ ದಕ್ಕಿರುವ ಲಯದಲ್ಲಿ.
 
ಆದರೆ ಕವಿತೆ ಬರೆಯುವಾಗ ಹಾಡುವ ಉದ್ದೇಶವೂ ಕವಿಯ ಮನಸಿನೊಳಗಿದ್ದರೆ ಕವಿತೆ ಹಿಂದಾಗುತ್ತದೆ. ಈ ಹಿನ್ನಡೆ `ಭರಣಿಮಳೆ~ಯ ಕೆಲವು ಕವಿತೆಗಳಲ್ಲೂ ಇದೆ. ಈ ಗೊಂದಲದಿಂದ `ಭರಣಿಮಳೆ~ಯ ಕವಯತ್ರಿ ಪಾರಾದಲ್ಲಿ, ಅವರ ಕವಿತೆಯೂ ಹದಗೊಂಡೀತು.

ಭರಣಿ ಮಳೆ
ಲೇ: ರಂಜನಿಪ್ರಭು
ಪು: 69; ಬೆ: ರೂ. 50; ಪ್ರ: ಸುಂದರ ಪ್ರಕಾಶನ, `ಚಿತ್ರಶ್ರೀ~, 43, ಕಲಾಮಂದರಿ, 5ನೇ ತಿರುವು, ಅ ನ ಸು ರಸ್ತೆ, ಹನುಮಂತನಗರ, ಬೆಂಗಳೂರು- 560 019.

----

ನಾಕು ಬೀದಿನಾಟಕಗಳು
 

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಬಸವರಾಜ ಸಬರದ ಅವರಿಗೆ ನಾಟಕ ಪ್ರಕಾರದಲ್ಲಿ ವಿಶೇಷ ಆಸಕ್ತಿ, ಅದರಲ್ಲೂ ಬೀದಿ ನಾಟಕಗಳ ಬಗೆಗೆ. ಈ ಮೊದಲು ಮೂರು ನಾಟಕಗಳ ಸಂಕಲವೊಂದನ್ನು ಪ್ರಕಟಿಸಿದ್ದ ಅವರು, ಇದೀಗ ನಾಲ್ಕು ನಾಟಕಗಳನ್ನು ಒಗ್ಗೂಡಿಸಿ ಪುಸ್ತಕ ಹೊರತಂದಿದ್ದಾರೆ.

`ಹುಲಿಗೆಮ್ಮ~, `ಎಲೆಮರೆಯ ಹೂಗಳು~, `ಹನುಮ ನಾಯಕ~ ಹಾಗೂ `ಸಾಲದ ಹೆಣ~ ಸಂಕಲನದಲ್ಲಿನ ನಾಟಕಗಳು. ಸಮಾಜದ ಅನಾರೋಗ್ಯವೇ ಈ ಎಲ್ಲ ನಾಟಕಗಳ ವಸ್ತುಗಳಾಗಿದ್ದು, ಸಂವೇದನಾಶೀಲ ಕ್ರಿಯಾಶೀಲ ವ್ಯಕ್ತಿಯೊಬ್ಬರ ಪ್ರತಿಭಟನೆ ಈ ಕೃತಿಗಳಲ್ಲಿ ಒಡಮೂಡಿದೆ. ಸಬರದ ಅವರ ಭಾಷೆ ಸರಳವಾಗಿದ್ದು, ನೋಡುಗರೊಂದಿಗೆ ಸಂವಹನ ಸಾಧಿಸಲು ಅನುಕೂಲವಾಗುವಂತಿದೆ.

ನಾಟಕಗಳ ಜೊತೆಗೆ ಎರಡು ಅನುಬಂಧಗಳನ್ನು ನೀಡಲಾಗಿದ್ದು, ಅವುಗಳಲ್ಲಿ ಸಬರದ ಅವರ ನಾಟಕ ಕೃತಿಗಳನ್ನು ಕುರಿತು ವ್ಯಕ್ತವಾಗಿರುವ ಸಹೃದಯರ ಅನಿಸಿಕೆಗಳು ಹಾಗೂ ಅವರ ಪ್ರಕಟಿತ ಕೃತಿಗಳ ವಿವರಗಳಿವೆ.

ನಾಕು ಬೀದಿನಾಟಕಗಳು
ಲೇ: ಡಾ. ಬಸವರಾಜ ಸಬರದ
ಪು: 84; ಬೆ: ರೂ. 50; ಪ್ರ: ಪಲ್ಲವಿ ಪ್ರಕಾಶನ, ವಿಶ್ವವಿದ್ಯಾಲಯ ಅಂಚೆ, ಗುಲ್ಬರ್ಗ- 585 106.

----

ಕಾರ್ಡಿದ್ರೆ ಕೈಲಾಸ
 

`ಪ್ರಜಾವಾಣಿ~ಯಲ್ಲಿ ಪ್ರಕಟವಾದ `ಡುಂಡಿಮ~ ಅಂಕಣಬರಹಗಳನ್ನು `ಕಾರ್ಡಿದ್ರೆ ಕೈಲಾಸ~ ಶೀರ್ಷಿಕೆಯಲ್ಲಿ ಎಚ್.ಡುಂಡಿರಾಜ್ ಒಟ್ಟು ಮಾಡಿದ್ದಾರೆ. ನಗೆಪುಟಗಳ ಸಂಪುಟ ಎಂದು ತಮ್ಮ ಬರಹಗಳನ್ನು ಅವರು ಕರೆದುಕೊಂಡಿದ್ದಾರೆ.

ಸಮಕಾಲೀನ ಸಂದರ್ಭಕ್ಕೆ ಪ್ರತಿಕ್ರಿಯೆಯಂತಿದ್ದ `ಡುಂಡಿಮ~ದ ಬರಹಗಳು ಈಗಲೂ- ಪುಸ್ತಕ ರೂಪದಲ್ಲೂ- ತಮ್ಮ ಓದಿಸಿಕೊಳ್ಳುವ ಗುಣ ಕಳೆದುಕೊಂಡಿಲ್ಲ. ಒಂದು ನಗೆಯ ಮಿಂಚು, ಭಾಷಾ ಬಳಕೆಯ ಹೊಸ ಸಾಧ್ಯತೆಯೊಂದರ ಹೊಳಹು ಅಲ್ಲಲ್ಲಿ ಕಾಣಿಸಿಕೊಳ್ಳುವುದರಿಂದ `ಕಾರ್ಡಿದ್ರೆ ಕೈಲಾಸ~ ಓದುಗರಿಗೆ ರುಚಿಸುತ್ತದೆ.

ಇಲ್ಲಿನ ಬಹುತೇಕ ಬರಹಗಳ ಬಾಲಂಗೋಚಿಯಂತಿರುವ ಚುಟುಕುಗಳು ಬರಹದ ಸ್ವಾರಸ್ಯವನ್ನು ಹೆಚ್ಚಿಸಿವೆ. ಕೆಲವೊಮ್ಮೆ ಇವು ಬರಹದಿಂದ ಪ್ರತ್ಯೇಕವಾಗಿ ಸ್ವತಂತ್ರ ಅಸ್ತಿತ್ವವನ್ನೇ ಪಡೆದಿವೆ.

`ಉಗ್ರವಾದಿಯ ನಿರ್ಗಮನ~ ಎನ್ನುವ ಬರಹದೊಂದಿಗಿನ `ಪ್ರಶಸ್ತಿ~ ಎನ್ನುವ ಚುಟುಕ ಹೀಗಿದೆ- `ಅರ್ಹರನ್ನು ಪ್ರಶಸ್ತಿ ಗೌರವ/ ಹುಡುಕಿಕೊಂಡು ಬರುತ್ತದೆ/ ಅವರು ಇರುವಲ್ಲಿಗೆ./ ಕೇಂದ್ರ ಸಾಹಿತ್ಯ ಅಕಾಡೆಮಿ/ ಪ್ರಶಸ್ತಿ ಒಲಿದು ಬಂದಿದೆ/ `ಇರುವಂತಿಗೆ~ ಎಂಬ ಮನೆಯಲ್ಲಿ/ ಇರುವಂತಹ/ ಯಾವುದಕ್ಕೂ ದೇಹಿ ದೇಹಿ ಅನ್ನದ/ ವೇದೇಹಿಗೆ!~. ಈ ಚುಟುಕ ವೈದೇಹಿ ಅವರಿಗೆ ಪ್ರಶಸ್ತಿ ಬಂದ ಸಂಭ್ರಮವನ್ನು ಹಿಡಿಯುವುದರೊಂದಿಗೆ ಅವರ ವ್ಯಕ್ತಿತ್ವವನ್ನೂ ಹಾಗೂ ಪ್ರಶಸ್ತಿ ರಾಜಕಾರಣವನ್ನೂ ಧ್ವನಿಸುತ್ತದೆ. ಹೀಗೆ ಪುಟ್ಟ ದೇಹದಲ್ಲಿನ ಬೇರೆ ಬೇರೆ ಆಯಾಮಗಳಿಂದಾಗಿ ಡುಂಡಿ ಅವರ ಕವಿತೆಗಳು ಇಷ್ಟವಾಗುತ್ತದೆ.

ಸಮಕಾಲೀನ ರಾಜಕಾರಣ, ಸಮಾಜದ ಅಪಸವ್ಯಗಳು, ಸಾಂಸ್ಕೃತಿಕ ರಾಜಕಾರಣ- ಯಾವುದೂ ಡುಂಡಿ ಅವರಿಗೆ ವರ್ಜ್ಯವಾಗಿಲ್ಲ. ಆದರೆ ಅವರ ಬರವಣಿಗೆಯ ಹಿಂದೆ ಯಾವುದೇ ಕಹಿಯ ಸೋಂಕಿಲ್ಲ. ಆ ಕಾರಣದಿಂದಲೇ ಅವರ ಬರಹಗಳಿಗೊಂದು ನೈತಿಕ ಪ್ರಭೆ ಒದಗಿದೆ.

ಕಾರ್ಡಿದ್ರೆ ಕೈಲಾಸ

ಲೇ: ಎಚ್.ಡುಂಡಿರಾಜ್
ಪು: 160; ಬೆ: ರೂ. 120; ಪ್ರ: ಅಂಕಿತ ಪುಸ್ತಕ, 53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT