ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಜಾಹೀರಾತು: ಹೊಸ ಸಾಧ್ಯತೆ, ಸವಾಲು

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಮೊಬೈಲ್ ಚಂದಾದಾರರ ಬಳಕೆ ತೀವ್ರವಾಗಿ ಹೆಚ್ಚುತ್ತಿದ್ದು, ಜಾಹೀರಾತಿನ ಹೊಸ ಸಾಧ್ಯತೆ ಮತ್ತು ಸವಾಲು ಸೃಷ್ಟಿಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಭಾರತವೂ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬಳಕೆ ಹೆಚ್ಚುತ್ತಿದೆ. ಈ ಮಾಧ್ಯಮಕ್ಕೆ ತಕ್ಕಂತೆ ಜಾಹೀರಾತು ನಿರ್ಮಿಸಬೇಕಾದ ಸವಾಲು ಕಂಪೆನಿಗಳಿಗೆ ಎದುರಾಗಿದೆ ಎಂದು ಸಂವಹನ ಮಾರುಕಟ್ಟೆಯಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ `ಡಬ್ಲ್ಯುಪಿಪಿ~ ಹೇಳಿದೆ.

`ಡಬ್ಲ್ಯುಪಿಪಿ~ ಚೀನಾದ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿ ಮ್ಯಾಡ್‌ಹೌಸ್ ಸಹಭಾಗಿತ್ವದಲ್ಲಿ ದೇಶೀಯ ಮಾರುಕಟ್ಟೆ ಪ್ರವೇಶಿಸಿದೆ. ಭವಿಷ್ಯದ ಜಾಹೀರಾತು ಮಾರುಕಟ್ಟೆಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಕ್ಕಿಂತ `ಮೊಬೈಲ್~ ನಿರ್ಧರಿಸಲಿದೆ ಎಂದು `ಡಬ್ಲ್ಯುಪಿಪಿ~ನ ಭಾರತೀಯ ಮುಖ್ಯಸ್ಥ ರಂಜನ್ ಕಪೂರ್ ಅಭಿಪ್ರಾಯಪಟ್ಟಿದ್ದಾರೆ.

ಮೊಬೈಲ್ ಜತೆಗೆ, ಜಾಹೀರಾತು ಕೂಡ ಚಂದಾದಾರರ ಜೇಬಿನಲ್ಲಿರುತ್ತದೆ ಎಂದು ವಿಶ್ಲೇಷಿಸುವ ಅವರು, ಪ್ರವರ್ಧಮಾನಕ್ಕೆ ಬರುತ್ತಿರುವ ಈ  ಹೊಸ ಮಾರುಕಟ್ಟೆಯ  ಸಾಧ್ಯತೆಗಳ ಕುರಿತು ಭರವಸೆ ವ್ಯಕ್ತಪಡಿಸುತ್ತಾರೆ. ಸದ್ಯ 5 ಕೋಟಿ ಜನಸಂಖ್ಯೆಯನ್ನು ಸ್ಮಾರ್ಟ್‌ಫೋನ್ ತಲುಪಿದೆ. 3ಜಿ ಜನಪ್ರಿಯತೆಯಿಂದ ಮುಂದಿನ 2 ವರ್ಷಗಳಲ್ಲಿ ಈ ಸಂಖ್ಯೆ 15 ಕೋಟಿ ದಾಟಲಿದೆ. ಮೊಬೈಲ್ ಜಾಲವು ಸುಮಾರು 7.5 ಲಕ್ಷ ಹಳ್ಳಿಗಳ ನಡುವೆ ಸಂವಹನ ಸೇತುವೆಯಾಗಲಿದೆ.

  ಹೀಗಾಗಿ ಮುಂದಿನ 5 ವರ್ಷಗಳ ನಂತರ ಗ್ರಾಮೀಣ ಮಾರುಕಟ್ಟೆಯ ದಿಕ್ಕನ್ನೆ ಮೊಬೈಲ್ ಬದಲಿಸಲಿದೆ ಎಂದು ಕಪೂರ್ ಹೇಳಿದ್ದಾರೆ. ಸದ್ಯ 125 ಕೋಟಿಗಳಷ್ಟಿರುವ ಮೊಬೈಲ್ ಮಾರುಕಟ್ಟೆಯು, 2025ರ ವೇಳೆಗೆ 1 ಸಾವಿರ ಕೋಟಿ ತಲುಪಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಸದ್ಯ ಮೊಬೈಲ್ ಬಳಕೆದಾರರ ಸಂಖ್ಯೆ ವಾರ್ಷಿಕವಾಗಿ ಶೇ 20ರಷ್ಟು ಬೆಳೆಯುತ್ತಿದ್ದು, ಡಿಜಿಟಲ್ ಮಾರುಕಟ್ಟೆ ಶೇ 40ರಷ್ಟು ಪ್ರಗತಿ ಹೊಂದುತ್ತಿದೆ.

ಆದರೆ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಕ್ಕೆ ಹೋಲಿಸಿದರೆ ಮೊಬೈಲ್ ಜಾಹೀರಾತು ಮಾರುಕಟ್ಟೆಯ ಪಾಲು ನಾಲ್ಕರಲ್ಲಿ ಒಂದು ಭಾಗದಷ್ಟಿದೆ. ಚೀನಾ, ಇಂಡೋನೇಷ್ಯಾ ಸೇರಿದಂತೆ ಏಷ್ಯಾ ಪೆಸಿಫಿಕ್ ವಲಯದಿಂದ ಜಾಹೀರಾತಿಗೆ ಹೆಚ್ಚಿನ ಬಂಡವಾಳ ವ್ಯಯಿಸಲಾಗುತ್ತದೆ ಎಂದು ಮ್ಯಾಡ್‌ಮೌಸ್‌ನ ಮುಖ್ಯ ಕಾರ್ಯನಿರ್ವಾಹಕ ಜೊಶುವಾ ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT