ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಮಾತು

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಜೀವನಶೈಲಿಗೆ ನೆರವಾಗುವ ಮೌಲ್ಯವರ್ಧಿತ ಸೇವೆ
ಮುಂದೊಂದು ದಿನ ಮೊಬೈಲ್ ಕೇವಲ ಸಂವಹನ ಸಾಧನವಾಗಿ ಮಾತ್ರ ಉಳಿಯುವುದಿಲ್ಲ. ವೈಯಕ್ತಿಕ ಅಗತ್ಯಗಳನ್ನು ಪೂರೈಸುವ ಅನಿವಾರ್ಯ ಸೇವೆ ಮತ್ತು ಜೀವನಶೈಲಿಯ ಭಾಗವಾಗಲಿದೆ. ವಿಡಿಯೊ ಗೇಮಿಂಗ್, ವಿಡಿಯೊ ಕಾನ್ಫರೆನ್ಸಿಂಗ್, ಪುಶ್ ಟು ಟಾಕ್, ಕಾಮಿಕ್ಸ್, ಗೃಹ ನಿರ್ವಹಣೆ ಮೊದಲಾದ ಸೇವೆಗಳನ್ನು ಮೊಬೈಲ್‌ನಿಂದಲೇ ನಿರ್ವಹಿಸುವ ದಿನಗಳು ಬರಲಿವೆ  ಎಂದು ಟಾಟಾ ಟೆಲಿಸರ್ವೀಸಸ್‌ನ (ಟಿಟಿಎಸ್‌ಎಲ್) ಕರ್ನಾಟಕ ವೃತ್ತದ ಮುಖ್ಯ ನಿರ್ವಹಣಾ  ಅಧಿಕಾರಿ (ಸಿಒಒ) ಶ್ರೀರಾಂ ಹೇಳುತ್ತಾರೆ.

ಗ್ರಾಹಕರ ಸಂಖ್ಯೆ ಹೆಚ್ಚಾದಂತೆ, ದೂರವಾಣಿ ಸಾಂದ್ರತೆ ಕೂಡ ಹೆಚ್ಚಲಿದೆ. ಸ್ಪರ್ಧಾತ್ಮಕ ದರ, ವಲಸೆ ಕೂಡ ಹೆಚ್ಚುತ್ತದೆ. ಹೊಸ ಆವಿಷ್ಕಾರಗಳು ಬರುತ್ತವೆ. ಸಂಶೋಧನೆಯೊಂದೇ ಎಲ್ಲದಕ್ಕೂ ಉತ್ತರವಾಗುತ್ತದೆ. ಟಾಟಾ ಟೆಲಿಕಾಂನಂತಹ ದೂರವಾಣಿ ಸೇವಾ ಸಂಸ್ಥೆ ಎನ್‌ಟಿಟಿ ಡೊಕೊಮೊದಂಥ ಪಾಲುದಾರರನ್ನು ಬಳಸಿಕೊಂಡು ಜೀವನ ಶೈಲಿಗೆ ಸರಿಹೊಂದುವ ಸೇವೆಗಳನ್ನು, ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ತರುತ್ತಿದೆ. ಅದರಲ್ಲೂ ಹೊಸ ಹೊಸ ಮೊಬೈಲ್ ಅಪ್ಲಿಕೇಷ ನ್ಸ್‌ಗಳು ಇಡೀ ಉದ್ಯಮವನ್ನೇ ಬದಲಿಸುತ್ತದೆ ಎನ್ನುವ ಅಭಿಪ್ರಾಯ ಅವರದು.

ಜಪಾನ್‌ನಂತಹ ಮುಂದುವರಿದ ದೇಶಗಳು ಈ ಸೇವೆಗಳನ್ನು ಕಳೆದ ಕೆಲ ವರ್ಷಗಳಿಂದ ಪಡೆಯುತ್ತಿವೆ. ಈ ಜನಪ್ರಿಯತೆ ಭಾರತೀಯ ಮಾರುಕಟ್ಟೆಗೂ ಹೊಸ ವ್ಯಾಖ್ಯಾನ ನೀಡಲಿದೆ.  ಇ-ವಾಲೆಟ್, ಲೈವ್ ಟಿವಿ, ಸರ್ಚ್ ಎಂಜಿನ್ ಮೊದಲಾದವು ಹ್ಯಾಂಡ್‌ಸೆಟ್‌ನಲ್ಲಿ ಲಭ್ಯವಾಗಲಿವೆ. ಇದು ಮೊಬೈಲ್ ಮಾಲೀಕನ ನೈಜ ವಿಸ್ತರಣೆ ಎನ್ನುವ ಶ್ರೀರಾಂ, ದೇಶದ ಅಗ್ರ 3 ನಿಸ್ತಂತು ದೂರವಾಣಿ  ಸೇವಾಸಂಸ್ಥೆಗಳ ಸಾಲಿನಲ್ಲಿ ಸ್ಥಾನ  ಪಡೆಯಲು `ಟಿಟಿಎಸ್‌ಎಲ್~  ಪ್ರಯತ್ನಿಸುತ್ತಿದೆ ಎನ್ನುತ್ತಾರೆ.


ಚಾರ್ಜರ್‌ಗಳಿಗೆ ಇಂಧನ ಕ್ಷಮತೆ ಮೌಲ್ಯಮಾಪನ
ಮೊಬೈಲ್ ಫೋನ್ ಚಾರ್ಜರ್‌ಗಳಿಗೂ ಇಂಧನ ಕ್ಷಮತೆ ಮೌಲ್ಯಮಾಪನ ಮಾಡುವ ತಂತ್ರಜ್ಞಾನವನ್ನು ಸರ್ಕಾರ  ಶೀಘ್ರದಲ್ಲಿಯೇ ಜಾರಿಗೆ ತರಲಿದೆ. ಈ ತಂತ್ರಜ್ಞಾನವು ಅಂತಿಮ ಹಂತದಲ್ಲಿದ್ದು, ಈ ಕುರಿತು ಕರಡು ವರದಿ ಸಿದ್ಧಪಡಿಸಲಾಗಿದೆ. ಹಣಕಾಸು ವರ್ಷದ ಅಂತ್ಯಕ್ಕೆ ಇದನ್ನು ಜಾರಿಗೆ ತರಲಾಗುವುದು ಎಂದು ಭಾರತೀಯ ಇಂಧನ ಕ್ಷಮತೆ ಸಂಸ್ಥೆ (ಬಿಇಇ) ಹೇಳಿದೆ.

ಪ್ರಾರಂಭದಲ್ಲಿ ಸ್ವಯಂಪ್ರೇರಿತವಾಗಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿಗಳಿಗೆ ಸೂಚಿಸಲಾಗುವುದು. ಇದರಿಂದ ಪ್ರತಿ ಕಂಪೆನಿಯ ಚಾರ್ಜರ್ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಸಿಕೊಳ್ಳುತ್ತದೆ ಎಷ್ಟು ಉಳಿಸುತ್ತದೆ ಎನ್ನುವುದು ತಿಳಿಯುತ್ತದೆ. ಮುಂದೆ ಇದನ್ನು ಕಡ್ಡಾಯಗೊಳಿಸಲಾಗುವುದು. ಪರಿಸರ ಸ್ನೇಹಿ ಮತ್ತು ಇಂಧನ ಉಳಿತಾಯ ದೃಷ್ಟಿಯಿಂದ ಇದು ಉತ್ತಮ ತಂತ್ರಜ್ಞಾನ ಎಂದು `ಬಿಇಇ~ ಅಭಿಪ್ರಾಯಪಟ್ಟಿದೆ.

ಚಾರ್ಜರ್‌ಗಳಿಗೆ ಇಂಧನ ಕ್ಷಮತೆ ಮೌಲ್ಯಾಂಕ ನೀಡುವುದಕ್ಕೆ ಸಂಬಂಧಿಸಿದಂತೆ  ಇಂಧನ ಸಚಿವಾಲಯ ಕೆಲವು ಮಾನದಂಡ ಮತ್ತು ವಸ್ತುವಿನ ಗುಣಮಟ್ಟ ಸೂಚಿಸುವ ಚೀಟಿ (ಲೇಬಲಿಂಗ್) ಗಳನ್ನು ಸಿದ್ಧಪಡಿಸಿದೆ. ಷೇರುದಾರರು, ಚಾರ್ಜರ್ ತಯಾರಿಕೆ ಕಂಪೆನಿಗಳು ಮತ್ತು ಬಳಕೆದಾರರ  ಸಲಹೆಗಳನ್ನು ಪಡೆದ ನಂತರವೇ ಈ ಕರಡು ಪ್ರಸ್ತಾವ ಸಿದ್ಧಪಡಿಸಲಾಗಿದೆ. ನಿಯಮಗಳನ್ನು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದಂತೆ `ಬಿಇಇ~  ತಾಂತ್ರಿಕ ಪರಿಣತರ ಸಮಿತಿಯನ್ನೂ ರಚಿಸಿದೆ.

ಇಸ್ತ್ರಿಪೆಟ್ಟಿಗೆ, ಟಿವಿ, ರೆಫ್ರಿಜೇಟರ್, ಏರ್ ಕಂಡೀಷನರ್, ಫ್ಯಾನ್, ವಿದ್ಯುತ್ ದೀಪ ಸೇರಿದಂತೆ ಅನೇಕ ಸರಕುಗಳಿಗೆ ಈಗಾಗಲೇ `ಇಂಧನ ಕ್ಷಮತೆ~ ಅಳಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT