ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಕರೆ ಕದ್ದಾಲಿಕೆ– ಎನ್‌ಎಸ್‌ಎ ಸಮರ್ಥನೆ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ತಾನು ಜಾಗತಿಕ ಮಟ್ಟದಲ್ಲಿ ನಡೆಸುತ್ತಿರುವ ಮೊಬೈಲ್‌ ಕರೆಗಳ ಕದ್ದಾಲಿಕೆ ಕಾನೂನು ಬದ್ಧವಾಗಿದ್ದು, ಶ್ವೇತಭವನದ ಆದೇಶದ ಪ್ರಕಾರವೇ ಇದನ್ನು ಮಾಡಲಾಗುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಸಮರ್ಥಿಸಿಕೊಂಡಿದೆ.

‘ಜಗತ್ತಿನ ಅಪಾಯಕಾರಿ ಪ್ರದೇಶ ಗಳಲ್ಲಿನ ಕರೆಗಳನ್ನು ಕದ್ದಾಲಿಸಿ ಮಾಹಿತಿ ಕಲೆಹಾಕಲಾಗುತ್ತಿದೆ. ಇದು ‘ವಿದೇಶಿ ಬೇಹುಗಾರಿಕಾ ನಿಗಾ ಕಾಯ್ದೆ’ಯನ್ನು ಉಲ್ಲಂಘಿಸುವುದಿಲ್ಲ’ ಎಂದು ಎನ್‌ಎಸ್‌ಎ ವಕ್ತಾರೆ ವ್ಯಾನಿ ವೈನ್ಸ್‌ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಎನ್‌ಎಸ್‌ಎ ಪ್ರತಿದಿನ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಸೇರಿದ 500 ಕೋಟಿ ಕರೆಗಳನ್ನು ಕದ್ದಾಲಿಸುತ್ತಿದೆ ಎಂದು ಅಮೆರಿಕದ ‘ದಿ ವಾಷಿಂಗ್ಟನ್‌ ಪೋಸ್‌್ಟ’ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ.

‘ಈ ಕದ್ದಾಲಿಕೆಯನ್ನು ಎಲ್ಲೆಡೆ ನಡೆಸುತ್ತಿಲ್ಲ. ಅಮೆರಿಕದ ಮೇಲೆ ದಾಳಿಗೆ ಹೊಂಚು ಹಾಕಿ ಉಗ್ರರು ಎಲ್ಲೆಲ್ಲೆ ಹೆಚ್ಚು ಚಟುವಟಿಕೆ ನಡೆಸುತ್ತಿದ್ದಾರೋ ಅಂತಹ ಅಪಾಯಕಾರಿ ಪ್ರದೇಶಗಳು ಹಾಗೂ ಯುದ್ಧಪೀಡಿತ ವಲಯಗಳಲ್ಲಿ ಮಾತ್ರ ನಡೆಸಲಾಗುತ್ತಿದೆ. ಸಂಸ್ಥೆಯು ದೇಶೀಯ ಮೊಬೈಲ್‌ ಕರೆಗಳನ್ನು ಕದ್ದಾಲಿಸುತ್ತಿಲ್ಲ.  ವಿದೇಶಿ ಕರೆಗಳಿಗೆ ಮಾತ್ರ ಇದನ್ನು ಸೀಮಿತಗೊಳಿಸಲಾಗಿದೆ’ ಎಂದು ವೈನ್ಸ್‌ ಹೇಳಿದ್ದಾರೆ.

ಅಮೆರಿಕದ ವಿರುದ್ಧ ನಡೆಯುವ ಎಲ್ಲಾ ಬೇಹುಗಾರಿಕೆ ಮೇಲೆ ನಿಗಾ ವಹಿಸುವ ಶ್ವೇತಭವನದ ಆಡಳಿತಾತ್ಮಕ ಆದೇಶ– 12333 ಪ್ರಕಾರವೇ ಈ ಕದ್ದಾಲಿಕೆ ನಡೆಯುತ್ತಿದೆ ಎಂದೂ ವೈನ್‌ ತಿಳಿಸಿದ್ದಾರೆ.

‘ದೇಶೀಯ ಮೊಬೈಲ್‌ ಕರೆಗಳನ್ನು ಕದ್ದಾಲಿಸಲು ಎಫ್‌ಐಎಸ್‌ಎ ದೃಢೀಕರಣ ಬೇಕಾಗುತ್ತದೆ. ಆದರೆ ನಾವು ಕೇವಲ ವಿದೇಶಿ ಕರೆಗಳ ಮೇಲೆ ನಿಗಾ ಇರಿಸಿದ್ದೇವೆ’ ಎಂದೂ ಹೇಳಿದ್ದಾರೆ. ಕೇಂದ್ರೀಯ ತನಿಖಾ ಸಂಸ್ಥೆಯ (ಸಿಐಎ) ಮಾಜಿ ಗುತ್ತಿಗೆದಾರ ಎಡ್ವರ್ಡ್‌ ಸ್ನೋಡೆನ್‌ ಬಹಿರಂಗಗೊಳಿಸಿದ ಗೋಪ್ಯ ದಾಖಲೆಗಳನ್ನು ಆಧರಿಸಿ ‘ದಿ ವಾಷಿಂಗ್ಟನ್‌ ಪೋಸ್‌್ಟ’ ಈ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT