ನವದೆಹಲಿ (ಪಿಟಿಐ): ದೇಶದ ಜಿಎಸ್ಎಂ ದೂರವಾಣಿ ಚಂದಾದಾರರ ಸಂಖ್ಯೆ ಮೇ ತಿಂಗಳಲ್ಲಿ 61.9 ಲಕ್ಷದಷ್ಟು ಹೆಚ್ಚಿದ್ದು 73.3 ಕೋಟಿಗೆ ಏರಿಕೆ ಕಂಡಿದೆ ಎಂದು ಭಾರತೀಯ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ಹೇಳಿದೆ.
ಭಾರ್ತಿ ಏರ್ಟೆಲ್ ಮತ್ತು ಯುನಿನಾರ್ ಅತಿ ಹೆಚ್ಚು ಗ್ರಾಹಕರನ್ನು ತಮ್ಮ ಸೇವಾ ಜಾಲಕ್ಕೆ ಹೊಸದಾಗಿ ಸೇರ್ಪಡೆ ಮಾಡಿಕೊಂಡಿವೆ. ಏಪ್ರಿಲ್ನಲ್ಲಿ ಒಟ್ಟಾರೆ ‘ಜಿಎಸ್ಎಂ’ ಚಂದಾದಾರರ ಸಂಖ್ಯೆ 72.68 ಕೋಟಿಯಷ್ಟಿತ್ತು.
ಏರ್ಟೆಲ್ ತನ್ನ ಸೇವಾ ವ್ಯಾಪ್ತಿಗೆ 16.5 ಲಕ್ಷ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟಾರೆ ಚಂದಾದಾರರ ಸಂಖ್ಯೆಯನ್ನು 20.82 ಕೋಟಿಗೆ ಹೆಚ್ಚಿಸಿಕೊಂಡಿದೆ. ಕಂಪೆನಿಯ ಮಾರುಕಟ್ಟೆ ಪಾಲು ಶೇ 28.41ಕ್ಕೆ ಏರಿಕೆ ಕಂಡಿದೆ. ನಾರ್ವೆ ಮೂಲದ ದೂರವಾಣಿ ಕಂಪೆನಿ ಯುನಿನಾರ್ 13 ಲಕ್ಷ ಗ್ರಾಹಕರನ್ನು ಹೊಸದಾಗಿ ತನ್ನ ಸೇವಾ ಜಾಲಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಗ್ರಾಹಕರ ಸಂಖ್ಯೆಯನ್ನು 3.78 ಕೋಟಿಗೆ ಹೆಚ್ಚಿಸಿಕೊಂಡಿದೆ. ಅಂದಾಜು ರೂ.780 ಕೋಟಿ ಹೂಡಿಕೆಯ ಲಕ್ಷದೀಪ ಯೋಜನೆಯ ಶೇ 26ರಷ್ಟು ಪಾಲು ಖರೀದಿಸುವ ಮೂಲಕ ಯುನಿನಾರ್ನ ಸಂಪೂರ್ಣ ಷೇರು ಪಾಲು ಖರೀದಿಸಲು ಟೆಲಿನಾರ್ ಯೋಜನೆ ರೂಪಿಸಿದೆ.
ಐಡಿಯಾ ಸೆಲ್ಯೂಲರ್ ಗ್ರಾಹಕರ ಸಂಖ್ಯೆ 11.6 ಲಕ್ಷದಷ್ಟು ಹೆಚ್ಚಿದ್ದು 13.77 ಕೋಟಿಗೆ ಏರಿಕೆ ಕಂಡಿದೆ. ಕಂಪೆನಿಯ ಮಾರುಕಟ್ಟೆ ಪಾಲು ಶೇ 18.79-ರಷ್ಟಿದೆ. ದೇಶದ ಎರಡನೆಯ ಅತಿ ದೊಡ್ಡ ಮೊಬೈಲ್ ದೂರವಾಣಿ ಸೇವಾ ಸಂಸ್ಥೆ ವೊಡಾಫೋನ್ 9.82 ಲಕ್ಷ ಗ್ರಾಹಕರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡಿದ್ದು ಒಟ್ಟು ಚಂದಾದಾರರ ಸಂಖ್ಯೆಯನ್ನು 16.82 ಕೋಟಿಗೆ ಹೆಚ್ಚಿಸಿಕೊಂಡಿದೆ.