ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ಫೋನ್ ಸೇವೆಗಳ ಮಾರುಕಟ್ಟೆ ಶೇ 8ರಷ್ಟು ಪ್ರಗತಿ

2013ರಲ್ಲಿ ರೂ.1.2ಲಕ್ಷ ಕೋಟಿ ವರಮಾನ ನಿರೀಕ್ಷೆ
Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಭಾರತದ ಮೊಬೈಲ್ ಫೋನ್ ಸೇವೆಗಳ ಮಾರುಕಟ್ಟೆ 2013ರ ವೇಳೆಗೆ ಶೇ 8ರಷ್ಟು ಬೆಳವಣಿಗೆ ಕಂಡು ್ಙ1.2 ಲಕ್ಷ ಕೋಟಿಗೆ ಮುಟ್ಟುವ ನಿರೀಕ್ಷೆ ಇದೆ.

ಆದರೆ, ಇದು ವಿಶ್ವದಾದ್ಯಂತದ ಮೊಬೈಲ್ ಸೇವೆಗಳ ಉದ್ಯಮದ ವರಮಾನಕ್ಕೆ ಹೋಲಿಸಿದರೆ ಕೇವಲ ಶೇ 2ರಷ್ಟು ಅಲ್ಪ ಪ್ರಮಾಣದ್ದಾಗಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ `ಗಾರ್ಟನರ್' ಹೇಳಿದೆ.

ಭಾರತದ ಮೊಬೈಲ್ ಫೋನ್ ಸೇವಾ ಕಂಪೆನಿಗಳು ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಈಗಲೂ ಕಷ್ಟ ಪಡುತ್ತಲೇ ಇವೆ. 2012ರಲ್ಲಿ ಈ ಮೂಲದಿಂದ ಬಂದ ಒಟ್ಟಾರೆ ವರಮಾನ ರೂ.1.1 ಲಕ್ಷ ಕೋಟಿ. ಪ್ರಸಕ್ತ ವರ್ಷದಲ್ಲಿಯೂ ಭಾರಿ ಬದಲಾವಣೆಯನ್ನೇನೂ ಕಾಣುವಂತಿಲ್ಲ ಎಂದು `ಗಾರ್ಟನರ್' ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

2012ರಲ್ಲಿ ದೇಶದ ಉದ್ದಗಲ ಒಟ್ಟು 71.20 ಕೋಟಿ ಮೊಬೈಲ್ ಫೋನ್ ಸಂಪರ್ಕಗಳಿದ್ದವು. 2013ರಲ್ಲಿ ಇದು ಶೇ 11ರಷ್ಟು ವೃದ್ಧಿ ಕಂಡು 77 ಕೋಟಿಗೆ ಮುಟ್ಟುವ ನಿರೀಕ್ಷೆ ಇದೆ. ಆದರೆ, ಮುಂದಿನ ದಿನಗಳಲ್ಲಿಯೂ ಮೊಬೈಲ್ ಫೋನ್ ಕಂಪೆನಿಗಳು ಪ್ರತಿ ಸಂಪರ್ಕದಿಂದ ವರಮಾನ ಗಳಿಸುವ ವಿಚಾರದಲ್ಲಿ ಹೆಚ್ಚಿನ ಬೆಳವಣಿಗೆ ಸಾಧಿಸಲಾರವು. ಜತೆಗೆ ಹೆಚ್ಚುವರಿ ಸೇವೆಗಳ ವಿಭಾಗದಲ್ಲಿ `ಫೇಸ್‌ಬುಕ್' ಮತ್ತು `ವಾಟ್ಸ್‌ಆ್ಯಪ್'ನಿಂದಲೂ ದೊಡ್ಡ ಸವಾಲು ಎದುರಿಸುತ್ತಿವೆ ಎನ್ನುತ್ತಾರೆ `ಗಾರ್ಟನರ್'ನ ಮಾರುಕಟ್ಟೆ ಸಂಶೋಧನಾ ವಿಭಾಗದ ಪ್ರಧಾನ ವಿಶ್ಲೇಷಕರಾದ ಶಾಲಿನ ವರ್ಮಾ.

ಮೊಬೈಲ್ ಫೋನ್ ಸೇವಾ ವಿಭಾಗದಲ್ಲಿ ಈಗಲೂ ಧ್ವನಿ ಆಧಾರಿತ ಸೌಲಭ್ಯದ್ದೇ ದೊಡ್ಡ ಪಾತ್ರ. ಮೊಬೈಲ್ ಬ್ರಾಡ್‌ಬ್ಯಾಂಡ್ ಮತ್ತು ರಾಷ್ಟ್ರೀಯ ರೋಮಿಂಗ್ ಸೇವೆ ಹೆಚ್ಚು ವರಮಾನ ತಂದುಕೊಡುವ ವಿಭಾಗವಾಗಿದ್ದು, ಈ ದಿಕ್ಕಿನಲ್ಲಿಯೂ ದೂರಸಂಪರ್ಕ ಸಂಸ್ಥೆಗಳು ಹೆಚ್ಚು ಗಮನ ಹರಿಸಬೇಕಿದೆ ಎಂದು ಶಾಲಿನಿ ವರ್ಮಾ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT