ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರಾರ್ಜಿ ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ

Last Updated 21 ಜುಲೈ 2012, 6:25 IST
ಅಕ್ಷರ ಗಾತ್ರ

ಹಾನಗಲ್: ಶಿಕ್ಷಣದಿಂದ ಸಮಗ್ರ ವಿಕಾಸ ಸಾಧ್ಯವಿದೆ ಎಂಬ ಉದ್ದೇಶದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಹಾನಗಲ್ ತಾಲ್ಲೂಕಿನ ಶಿಕ್ಷಣ ವಲಯಕ್ಕೆ ಮತ್ತೊಂದು ಗರಿ ಮೂಡಿದ್ದು, ಇದೇ 21ರಂದು ತಾಲ್ಲೂಕಿನ ಯಳವಟ್ಟಿಯ ಸಮೀಪದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಉದ್ಘಾಟನೆಗೊಳ್ಳಲಿದೆ.

ಹಾನಗಲ್ ತಾಲ್ಲೂಕಿನ ಯಳವಟ್ಟಿ ಸಮೀಪದ ಹಾನಗಲ್-ತಡಸ ರಾಜ್ಯ ಹೆದ್ದಾರಿಗೆ ಅಂಟಿಕೊಂಡು 20 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ರೂ 4.20 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಚಾಲನೆ ನೀಡುವರು.

2007ರ ಜೂನ್ 1ರಂದು ಆರಂಭವಾಗಿದ್ದ ಯಳವಟ್ಟಿ ಮೊರಾರ್ಜಿ ದೇಸಾಯಿ ಮಾದರಿ ವಸತಿಯುತ ಶಾಲೆ, ಮೊದಲು ತಾಲ್ಲೂಕಿನ ಬೊಮ್ಮನಹಳ್ಳಿಯ ವಿರಕ್ತಮಠದಲ್ಲಿ ನಡೆಸಿತು. ಆಗ 30 ವಿದ್ಯಾರ್ಥಿಗಳು ಮೂವರು ಶಿಕ್ಷಕರು ಮಾತ್ರ ಇದ್ದರು. ಒಂದೇ ವರ್ಷದಲ್ಲಿ ಅತ್ಯುತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿತು.

ಪ್ರತಿವರ್ಷ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲಿದ್ದರಿಂದ ಮೂಲ ಸೌಕರ್ಯ ಮಠದ ಆವರಣದಲ್ಲಿ ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ಎದುರಾಯಿತು. ಸಮೃದ್ಧ ಶೈಕ್ಷಣಿಕ ವಾತಾವರಣ ನೀಡಲು ಸಚಿವ ಸಿ.ಎಂ. ಉದಾಸಿ ಮತ್ತು ಜಿ.ಪಂ. ಸದಸ್ಯ ಪದ್ಮನಾಭ ಕುಂದಾಪೂರ ಗಮನ ನೀಡಿದರು. ಯಳವಟ್ಟಿ ಹೊರ ಭಾಗದಲ್ಲಿನ ಮುಖ್ಯ ರಸ್ತೆಗೆ ಹೊಂದಿಕೊಂಡ ಗುಡ್ಡದ ಪರಿಸರದಲ್ಲಿ ಸಕಲ ವ್ಯವಸ್ಥೆಯುಳ್ಳ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನೆರವಾದರು.

ಎರಡು ವರ್ಷಗಳ ನಿರಂತರ ಕಾಮಗಾರಿಯ ಫಲವಾಗಿ ಅತ್ಯುತ್ತಮ ಕಟ್ಟಡ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತಾಗಿದೆ. ಈ ಸಂಕೀರ್ಣದಲ್ಲಿ ವರ್ಗ ಕೋಣೆಗಳ ಪ್ರತ್ಯೇಕ ಕಟ್ಟಡವಿದೆ. ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಸುಸಜ್ಜಿತ ವಸತಿ ಗೃಹಗಳು ಮನೆಯ ವಾತಾವರಣ ನೀಡುವಂತಿವೆ. ಪ್ರತಿ ವಸತಿ ಗೃಹದಲ್ಲಿ 24 ಕೋಣೆಗಳಿವೆ. ಒಂದು ಕೋಣೆಯಲ್ಲಿ  6 ವಿದ್ಯಾರ್ಥಿಗಳು ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿ ನೀರು ಹಾಗೂ ವಿದ್ಯುತ್ ವ್ಯವಸ್ಥೆಗಾಗಿ ಸೋಲಾರ ವ್ಯವಸ್ಥೆ ಅಳವಡಿಸಲಾಗಿದೆ. ಇಡೀ ಕಟ್ಟಡಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಇದೆ.

ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯ ಚಿಂತನೆ ನಡೆದಿದೆ. ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 6ರಿಂದ 10ನೇ ತರಗತಿಯವರೆಗಿನ ಒಟ್ಟು 250 ವಿದ್ಯಾರ್ಥಿಗಳು ಈಗ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕಳೆದ ವರ್ಷ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 92ರಷ್ಟು ಫಲಿತಾಂಶದ ಪಡೆದಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ, ಕ್ರೀಡಾ ಸ್ಪರ್ಧೆಗಳಲ್ಲಿಯೂ ಸಾಧನೆ ಮಾಡಿದ್ದಾರೆ. ನೂತನ ಕಟ್ಟಡದ ಸೌಲಭ್ಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮತ್ತಷ್ಟು ಇಂಬು ನೀಡಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT