ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರಿಗೆ ಭದ್ರಾ ನೀರು; ಆಶ್ವಾಸನೆ ಹುಸಿ?

ಗೊಂದಲ ಸೃಷ್ಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಹೇಳಿಕೆ
Last Updated 16 ಜುಲೈ 2013, 10:48 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಅಡಿ ಮೊಳಕಾಲ್ಮುರು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು ಎಂಬ ಆಶ್ವಾಸನೆಗಳು ಕಾರ್ಯರೂಪಕ್ಕೆ ಬರಲಿವೆಯೇ ಎಂಬ ಅನುಮಾನ ಇಲ್ಲಿನ ಜನರಲ್ಲಿ ಮೂಡಿದೆ.

ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರು ಹೊಳಲ್ಕೆರೆ ತಾಲ್ಲೂಕಿನ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಸಲು ರಾಜ್ಯಸರ್ಕಾರ ಬಜೆಟ್‌ನಲ್ಲಿ ಮಂಜೂರಾತಿ ನೀಡಿದೆ ಎಂಬ ಹೇಳಿಕೆ ಬೆನ್ನಲ್ಲಿಯೇ ಹೊಳಲ್ಕೆರೆ ತಾಲ್ಲೂಕಿನ ಜತೆಯಲ್ಲಿಯೇ ಮೊಳಕಾಲ್ಮುರು ತಾಲ್ಲೂಕಿಗೂ ಈ ಸೌಲಭ್ಯ ಸಿಗಲಿದೆ ಎಂದು ನಂಬಿದ್ದ ತಾಲ್ಲೂಕಿನ ಜನರ ಬಯಕೆ ಹುಸಿಯಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಈಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಮೊಳಕಾಲ್ಮುರು ತಾಲ್ಲೂಕಿಗೆ `ಎ' ಸ್ಕೀಂನಲ್ಲಿಯೇ ಭದ್ರಾ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಚುನಾವಣೆಗೂ ಮುನ್ನ ತಳಕು ಗ್ರಾಮದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಆಗಿನ ಶಾಸಕ ಎನ್.ವೈ.ಗೋಪಾಲಕೃಷ್ಣ ಈ ಭಾಗದ 20 ಕ್ಕೂ ಹೆಚ್ಚು ಕೆರೆಗಳಿಗೆ ಭದ್ರಾ ಯೋಜನೆಯಲ್ಲಿ ನೀರು ಹರಿಸಲು ನಕ್ಷೆ ಸಿದ್ಧವಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಶೀಘ್ರ ಜಾರಿ ಮಾಡಿಸುವ ಭರವಸೆಯನ್ನೂ ನೀಡಿದ್ದರು.

2012ರ ಏ. 27ರಂದು ತಾಲ್ಲೂಕಿನ ನಾಗಸಮುದ್ರಕ್ಕೆ ರಾಜ್ಯದ ಬರ ವೀಕ್ಷಣೆ ಮಾಡಲು ಬಂದಿದ್ದ ಸೋನಿಯಾಗಾಂಧಿ ಅವರಿಗೂ ತಾಲ್ಲೂಕಿಗೆ ಭದ್ರಾ ನೀರು ಹರಿಸುವ ಬಗ್ಗೆ ಮನವಿ ಮಾಡಲಾಗಿತ್ತು, ಆದರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಲ್ಲೂಕಿಗೆ ಕಳೆದ 5 ವರ್ಷಗಳಿಂದ ಮಳೆ ಬರುವ ಪ್ರಮಾಣ ಪೂರ್ಣ ಕುಂಠಿತವಾಗಿದೆ. ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಅಂತರ್ಜಲ ಸಮಸ್ಯೆ ಎದುರಿಸುವ ತಾಲ್ಲೂಕು ಎಂದು ಗುರುತಿಸಿಕೊಂಡಿದೆ. ಇಲ್ಲಿನ ರಂಗಯ್ಯನದುರ್ಗ ಜಲಾಶಯ, ಪಕ್ಕುರ್ತಿ ಕೆರೆ ಸೇರಿದಂತೆ ಎಲ್ಲಾ ದೊಡ್ಡ, ಚಿಕ್ಕ ಕೆರೆಗಳು ನೀರಿಲ್ಲದೆ ಪೂರ್ಣ ಒಣಗಿ ಹೋಗುವ ಮೂಲಕ ಆತಂಕ ಎದುರಾಗಿದೆ.

ಇಂತಹ ಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಜನರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಸಚಿವರು ಗಮನಹರಿಸಿ ಮೊಳಕಾಲ್ಮುರು ಭಾಗಕ್ಕೂ ನೀರು ಹರಿಸುವ ಕಾರ್ಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮನವಿ ಮಾಡಲಾಗಿದೆ.

ತಾಲ್ಲೂಕಿಗೆ ನೀರು ತರುವ ಕಾರ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು, ರೈತಸಂಘದ ಕಾರ್ಯಕರ್ತರು, ಸಮಾಜ ಸೇವಕರು ಒಗ್ಗಟ್ಟಾಗಿ ಮುಂದಾಗಬೇಕಿದೆ ಎಂದು ಸಿಪಿಐ, ಜನಸಂಸ್ಥಾನ ಸಂಸ್ಥೆ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT