ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಗಿದ ಕನ್ನಡ ಪರ ಉದ್ಘೋಷ

ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ
Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಗಾಂಧಿ ಮೈದಾನ (ಮಡಿಕೇರಿ): ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಪುಟ್ಟ ನಗರ ಮಡಿಕೇರಿಯಲ್ಲಿ ಜನಜಾತ್ರೆ. ಸಾವಿರಾರು ಸಂಖ್ಯೆಯ ಕನ್ನಡಿಗರ ಮುಗಿಲು ಮುಟ್ಟುವ ಉದ್ಘೋಷ. ಗುಡ್ಡ ಬೆಟ್ಟವನೇರಿ ನಿಂತ ಉತ್ಸಾಹಿಗಳು. ಎತ್ತ ನೋಡಿದರತ್ತ ಕನ್ನಡ ಬಾವುಟಗಳ ನಡುವೆ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.

ಅತ್ಯಾಕರ್ಷಕವಾಗಿದ್ದ ರಥವನ್ನೇರಿದ ನಾ.ಡಿಸೋಜ ಹಾಗೂ ಪತ್ನಿ ಫಿಲೋಮಿನಾ ಅವರು ಮೆರವಣಿಗೆ­ಯುದ್ದಕ್ಕೂ ನಗುಮುಖದೊಂದಿಗೆ ಕೈಬೀಸುತ್ತಿದ್ದರು. ಮೆರವಣಿಗೆಯ ಮುಂಚೂಣಿ ವಹಿಸಿದ್ದ ಸ್ವಯಂಸೇವಕರು ‘ಕನ್ನಡ ನಾಡು–ನುಡಿಗೆ ಜಯವಾಗಲಿ’, ‘ಕನ್ನಡವೇ ನಿತ್ಯ, ಕನ್ನಡವೇ ಸತ್ಯ’, ‘ಕನ್ನಡ ಕನ್ನಡ... ಬನ್ನಿ ನಮ್ಮ ಸಂಗಡ’, ಎನ್ನುವ ಘೋಷಣೆಗಳನ್ನು ಕೂಗುತ್ತ ಕನ್ನಡದ ಕೆಲಸಕ್ಕಾಗಿ ಕೈಜೋಡಿಸುವಂತೆ ಎಲ್ಲರನ್ನೂ ಆಹ್ವಾನಿಸಿದರು.

ಸ್ತ್ರೀಶಕ್ತಿ ಸಂಘಟನೆಗಳ 2,000ಕ್ಕೂ ಹೆಚ್ಚು ಕಾರ್ಯಕರ್ತೆಯರು ಮೆರವಣಿ­ಗೆಗೆ ಮೆರುಗು ತಂದರು. ಅವರನ್ನು ವಿವಿಧ ಕಲಾತಂಡಗಳು ಹಿಂಬಾಲಿಸಿ­ದವು. ಚಾಮರಾಜನಗರ ಜಿಲ್ಲೆಯ  ಜಾನಪದ ತಂಡದ ಹುಲಿಯಾಟ್, ಮಂಡ್ಯ ಜಿಲ್ಲೆಯ ಕಾಲಭೈರವ ಜಾನಪದ ಕಲಾತಂಡದ ಕಲಾವಿದರು ಪ್ರದರ್ಶಿಸಿದ ಬೆಂಕಿ ಉಗುಳುವ ಸಾಹಸ ನೋಡುಗರ ಮೈ ಜುಂ ಎನ್ನುವಂತಿತ್ತು. ಬೆಳ್ತಂಗಡಿಯ ಗೊಂಬೆ ಬಳಗ, ಸುಬ್ರಹ್ಮಣ್ಯದ ಕಲಾವಿದರ ಯಕ್ಷಗಾನದ ಪಾತ್ರಗಳು, ಕೊಪ್ಪಳದ ಕರಡಿ ಮಜಲು ಕುಣಿತವು ಆಕರ್ಷಿಸಿತು. 

ನಗರದ ಗಾಂಧಿ ಮೈದಾನದಿಂದ ಹೊರಟ ಮೆರವಣಿಗೆಯು ನಗರಸಭೆ, ಖಾಸಗಿ ಬಸ್ ನಿಲ್ದಾಣ, ಚೌಕಿ, ಕಾಲೇಜು ರಸ್ತೆ ಮೂಲಕ ಸಮ್ಮೇಳನದ ಮುಖ್ಯ ಸಭಾಮಂಟಪವಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನಕ್ಕೆ ಬಂದು ಸೇರಿತು.
ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುದ್ರಿಸಿದ್ದ ಹಳದಿ ಬಣ್ಣದ ಟೀ–ಶರ್ಟ್ ಗಳನ್ನು ಧರಿಸಿದ್ದ ಸಾವಿರಾರು ಸ್ವಯಂ­ಸೇವಕರು ಮೆರವಣಿಗೆಯುದ್ದಕ್ಕೂ ಕಾಣುತ್ತಿದ್ದರು. ಮಾರ್ಗ ಮಧ್ಯೆ  ಉಚಿತವಾಗಿ ಮಜ್ಜಿಗೆಯನ್ನು ನೀಡಲಾಗುತ್ತಿತ್ತು.

ಗೊಂದಲ: ಅನಾರೋಗ್ಯದ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಜೊತೆ ರಥವನ್ನೇರಲಿಲ್ಲ. ಈ ಸಂದರ್ಭದಲ್ಲಿ ಸಮ್ಮೇಳನದ ಆತಿಥ್ಯ ವಹಿಸಿಕೊಂಡಿರುವ ಕೊಡಗು ಜಿಲ್ಲೆಯ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್‌ ಅವರು ರಥವನ್ನೇರಿದರು. ಇದಕ್ಕೆ ಕೆಲವು ವ್ಯಕ್ತಿ­ಗಳು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸಮ್ಮೇಳನಾಧ್ಯಕ್ಷರ ಪತ್ನಿ ಫಿಲೋಮಿನಾ ಅವರನ್ನು ಕೂರಿಸ­ಲಾಯಿತು.

‘ಕೊಡಗಿನ ಕಲಾವಿದರ ಮೆರುಗು’
ಕೊಡಗಿನ ವಿಶಿಷ್ಟವಾದ ಸಂಸ್ಕೃತಿಯು ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಅನಾವರಣಗೊಂಡಿತು. ಕೊಡವ, ಅರೆಭಾಷೆ ಗೌಡ,

ಬುಡಕಟ್ಟು ಜನಾಂಗಗಳ ವೈಶಿಷ್ಟ್ಯತೆಯನ್ನು ಕಲಾತಂಡಗಳು ಪ್ರದರ್ಶಿಸಿದವು.

ಸಾಂಪ್ರದಾಯಿಕ ವೇಷಭೂಷಣ­ಗಳನ್ನು ತೊಟ್ಟ ಕೊಡಗಿನ ಮಹಿಳೆಯರು, ಪುರುಷರು ಗಮನ ಸೆಳೆದರು. ಕೋವಿ, ಒಡಿಕತ್ತಿಯನ್ನು ಪ್ರದರ್ಶಿಸ­ಲಾಯಿತು. ದೇಶದ ಅಪ್ರತಿಮ ಸೇನಾನಿ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರ ಸ್ತಬ್ಧಚಿತ್ರವನ್ನು ಕೊಡವ ಸಮಾಜದವರು ಪ್ರದರ್ಶಿಸಿದರು.

ಗೌಡ ಜನಾಂಗಕ್ಕೆ ಸೇರಿದ ಸ್ವಾತಂತ್ರ್ಯ ಸೇನಾನಿ ಗುಡ್ಡೆಮನೆ ಅಪ್ಪಯ್ಯಗೌಡ ಅವರ ವೇಷಧಾರಿಯಾದ ಬಾಲಕ ಗಮನಸೆಳೆದ. ವಿರಾಜಪೇಟೆಯ ಕಲಾವಿದರು ಚಿನಿದುಡಿ, ಮಡಿಕೇರಿ ಕಲಾವಿದರು ಕೋಲಾಟ್‌, ನಾಪೋಕ್ಲು ಕಲಾವಿದರು ಉಮ್ಮತ್ತಾಟ್‌, ಬೊಳಕಾಟ್‌ ಪ್ರದರ್ಶಿಸಿದರು.

ಕೊಡ್ಲಿಪೇಟೆ ಕಸಾಪ ಘಟಕವು ಪ್ರದರ್ಶಿಸಿದ ಕಾಡಾನೆ, ಹುಲಿಗಳ ದಾಳಿಯ ಸ್ತಬ್ಧಚಿತ್ರವು ಮಾನವ–ವನ್ಯಜೀವಿಗಳ ಸಂಘರ್ಷವನ್ನು ನೆನಪಿಸುವಂತಿತ್ತು. ಮಡಿಕೇರಿಯ ಬಂಟರ ಸಮಾಜದವರು ಪ್ರದರ್ಶಿಸಿದ ‘ಬಂಟರ– ಕಂಬಳ’ ಸ್ತಬ್ಧಚಿತ್ರವು ವಿಶೇಷವಾಗಿ ಗಮನಸೆಳೆಯಿತು.

ಉದ್ಘಾಟನಾ ಸಮಾರಂಭದಲ್ಲಿಯೂ ಕೊಡವ ಸಾಂಪ್ರದಾಯಿಕ ವೇಷ ಧರಿಸಿದ್ದ ಕೆಲವರು ಗಮನ ಸೆಳೆದರು.

**ಸಂಚಾರ ಅವ್ಯವಸ್ಥೆ ಪರದಾಡಿದ ಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT