ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸರು ಕುಡಿಕೆಗೆ ಮಳೆಯ ಸಿಂಚನ

Last Updated 23 ಆಗಸ್ಟ್ 2011, 10:55 IST
ಅಕ್ಷರ ಗಾತ್ರ

ಮಂಗಳೂರು: ರಸ್ತೆಯ ಅಲ್ಲಲ್ಲಿ ಕಟ್ಟಿದ್ದ ಮೊಸರು ಕುಡಿಕೆ ಒಡೆಯಲು, ಮಾನವ ಪಿರಮಿಡ್ ರಚಿಸಿ ನಾ ಮುಂದು ತಾ ಮುಂದು ಎಂದು ಮುನ್ನುಗ್ಗುತ್ತಿದ್ದ ಯುವಕರು, ಪಿರಮಿಡ್‌ನ ತುದಿಯಲ್ಲಿದ್ದವ ತನ್ನ ತಲೆಯಿಂದಲೇ ಒಂದೊಂದೇ ಕುಡಿಕೆ ಒಡೆಯಲು ಪಡುತ್ತಿದ್ದ ಸಾಹಸ. ತುಂತುರು ಮಳೆಯಿಂದ ಉತ್ತೇಜಿತರಾಗಿ ಬೀಳುತ್ತಿದ್ದ ಉಂಡೆ, ಚಕ್ಕುಲಿ, ಬಾಳೆಹಣ್ಣು ಕಸಿದುಕೊಳ್ಳಲು ಮುಂದಾದ ಬಾಲಕರು...

ಕುಡಿಕೆ ಒಡೆಯಲು ಮುಂದಾಗುತ್ತಿದ್ದವರ ಮೇಲೆ ಓತಪ್ರೋತವಾಗಿ ನೀರಿನ ಸಿಂಚನ...ಕುಡಿಕೆ ಒಡೆದಾಗ ಕೆಳಗೆ ನಿಂತಿದ್ದವರ ಮೇಲೆ ಬಣ್ಣದ ಓಕುಳಿ, ಮೊಸರಿನ ಅಭಿಷೇಕ. ಮೆರೆದ ಹುಲಿವೇಷ ಆರ್ಭಟ...

ಒಂದನ್ನೊಂದು ಮೀರಿಸುವ ಆಕರ್ಷಕ ಸ್ತಬ್ದಚಿತ್ರ.... ಇವನ್ನೆಲ್ಲಾ ಕಣ್ತುಂಬಿಕೊಳ್ಳಲು ಶೋಭಾಯಾತ್ರೆ ಸಾಗುತ್ತಿದ್ದ ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಜನರು...

ರಂಗಿನಾಟ ಆಡುತ್ತಾ ರಾಧೆಯರನ್ನು ರಂಜಿಸಿದ ಶ್ರೀಕೃಷ್ಣನ ಜನ್ಮದಿನೋತ್ಸವದ ಮರುದಿನ ಮಂಗಳೂರಿನ ಕದ್ರಿ ಮತ್ತು ಅತ್ತಾವರದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು.

ಕದ್ರಿಯ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ವತಿಯಿಂದ ಗೋಪಾಲಕೃಷ್ಣ ಮಠದಿಂದ ಹೊರಟ ಶೋಭಾಯಾತ್ರೆ ಸ್ತಬ್ದ ಚಿತ್ರ, ಕೇರಳದ ಚೆಂಡೆ ವಾದನದೊಂದಿಗೆ ಕದ್ರಿ ಕಂಬಳ ರಸ್ತೆ, ಮಲ್ಲಿಕಟ್ಟೆಯಾಗಿ ಕದ್ರಿ ಮಂಜುನಾಥ ದೇವಳದಲ್ಲಿ ಸಮಾಪನಗೊಂಡಿತು. ಶ್ರೀಕೃಷ್ಣನ ಜೀವನ ಬಿಂಬಿಸುವ ಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ವಿಶಿಷ್ಟವಾಗಿ ಮೂಡಿಬಂದ ಸ್ತಬ್ದಚಿತ್ರ ನೋಡುಗರ ಗಮನಸೆಳೆದವು. ಕೃಷ್ಣ ಮತ್ತು ಸತ್ಯಭಾಮೆ ಗರುಡನ ಮೇಲೆ ಕುಳಿತ ಸ್ತಬ್ದಚಿತ್ರ `ನಂದನ ವನವಿಹಾರಿ~ ಆಕರ್ಷಕವಾಗಿತ್ತು.

ಕದ್ರಿಯಲ್ಲಿ ಅಣ್ಣಾ ಹಜಾರೆ: ಕದ್ರಿ ಮೊಸರು ಕುಡಿಕೆಯಲ್ಲಿ ಪಾಲ್ಗೊಂಡವರು ಕದ್ರಿ ಕಂಬಳ ಬಳಿಯ ವೃತ್ತ ತಲುಪುತ್ತಿದ್ದಂತೆ ಅಲ್ಲಿದ್ದ ಅಣ್ಣಾ ಹಜಾರೆ ಅವರನ್ನು ಕಂಡು ಆಶ್ಚರ್ಯಗೊಂಡರು. ಕದ್ರಿಯ ಹರೀಶ್ ಶೆಟ್ಟಿ ಅವರು ಅಣ್ಣಾ ವೇಷ ಧರಿಸಿ ಗಮನಸೆಳೆದರು. `ಅಣ್ಣಾ~ ಜತೆ ಮಾಜಿ ಸಚಿವ ನಾಗರಾಜ ಶೆಟ್ಟಿ, ಬಿಜೆಪಿ ಮುಖಂಡ ಶ್ರೀಕರ ಪ್ರಭು ಕೆಲಹೊತ್ತು ವೇದಿಕೆಯಲ್ಲಿ ಕಾಣಿಸಿಕೊಂಡರು.

ಅತ್ತಾವರದಲ್ಲಿ ಸಂಭ್ರಮ: ಸಾವಿರಾರು ಭಕ್ತರ `ಕೃಷ್ಣ ಪರಮಾತ್ಮ ಕೀ ಜೈ~ ಘೋಷಣೆಯೊಂದಿಗೆ ಅತ್ತಾವರ ಕೋಟಿ ಚೆನ್ನಯ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ಬೀಳುತ್ತಿದ್ದ ಮಳೆ ಲೆಕ್ಕಿಸದೇ ಮುಂದುವರಿಯಿತು.

ಅತ್ತಾವರ ಮೊಸರು ಕುಡಿಕೆ ಕಟ್ಟೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್. ವಿಜಯಪ್ರಕಾಶ್, ಕೆಪಿಸಿಸಿ ಸದಸ್ಯ ಐವನ್ ಡಿಸೋಜ, ಎ.ಜೆ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ. ದೇವದಾಸ ರೈ, ಎನ್.ಬಲರಾಜ್ ಶೆಟ್ಟಿ, ಪಾಲಿಕೆ ಸದಸ್ಯರಾದ ರಂಗನಾಥ ಕಿಣಿ, ಸುರೇಶ್ ಬಾಬು ಇದ್ದರು.
ಈ ಸಂದರ್ಭ ಅತ್ತಾವರ ಅರಸು ಮುಂಡತ್ತಾಯ ದೈವ ಪಾತ್ರಿ ಭೋಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT