ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸರು ಸರಿಯಿಲ್ಲ ಎಂದ, ಬೆಂಕಿ ಹಚ್ಚಿದ ಗಂಡ

Last Updated 6 ಜುಲೈ 2012, 6:50 IST
ಅಕ್ಷರ ಗಾತ್ರ

ದಾವಣಗೆರೆ: ಊಟ ಮಾಡುವಾಗ ಮೊಸರು ಸರಿಯಿರಲಿಲ್ಲ. ಅದೇ ಸಾಕಾಯ್ತು. ಗಂಡ, ಅತ್ತೆ ಸೇರಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ರು. ನೀವೇ ಹೇಳಿ ಏನೋ ಸ್ವಲ್ಪ ಸರಿಯಿಲ್ಲ ಅಂತಾದ್ರೆ ಹೆಂಡ್ತಿಗೆ ಬೆಂಕಿ ಹಚ್ತಾರಾ?...

- ಇದು ನಗರದ ಸಿಜಿ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಮರಣಶಯ್ಯೆಯಲ್ಲಿ ಮಲಗಿ ಒದ್ದಾಡುತ್ತಿದ್ದ ಸುಮಂಗಲಾ (28) `ಪ್ರಜಾವಾಣಿ~ ಜತೆ ಹೇಳಿದ ಮಾತಿದು.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರಿನಲ್ಲಿ ಬುಧವಾರ ರಾತ್ರಿ ಕ್ಷುಲ್ಲಕ  ಕಾರಣಕ್ಕಾಗಿ ಪತಿ -ಪತ್ನಿ  ಮಧ್ಯೆ ಜಗಳ ಉಂಟಾಗಿ ಹತ್ತು ವರ್ಷಗಳ  ದಾಂಪತ್ಯಕ್ಕೆ  ಅಕ್ಷರಶಃ ಬೆಂಕಿ  ಬಿತ್ತು. ರಾತ್ರಿ 1ರ ವೇಳೆಗೆ ತೀವ್ರ ಗಾಯಗೊಂಡ  ಅವರನ್ನು  ನಗರದ ಸಿಜಿ ಆಸ್ಪತ್ರೆಯ  ಸುಟ್ಟಗಾಯಗಳ  ವಿಭಾಗದಲ್ಲಿ ದಾಖಲಿಸಲಾಗಿದೆ. ಘಟನೆಯಲ್ಲಿ ಸುಮಂಗಲಾ ದೇಹ ಶೇ 95ರಷ್ಟು ಸುಟ್ಟುಹೋಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಸುಮಂಗಲಾ ಮೂಲತಃ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೇರಹಳ್ಳಿ ಸಮೀಪದ ಅಮುಕುಂದಿ ಗ್ರಾಮದವರು. 10 ವರ್ಷಗಳ ಹಿಂದೆ ಅವರನ್ನು ಕೊಟ್ಟೂರಿನ ಟೈಲರ್ ಉಮೇಶ ಎಂಬುವರ ಜತೆ ವಿವಾಹ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಯಾಕೋ ದಾಂಪತ್ಯದಲ್ಲಿ ವಿರಸ ಬಂದು ಘಟನೆಗೆ ಕಾರಣವಾಗಿದೆ. ಇದಕ್ಕೆ ಗಂಡನ ಜತೆ ಅವರ ಮನೆಯವರ ಕುಮ್ಮಕ್ಕೂ ಇದೆ ಎಂದು ಸುಮಂಗಲಾ ಆರೋಪಿಸಿದರು.

ಸುಮಂಗಲಾ ಅವರ ತಂದೆ ನಾಗರಾಜ್ ಹೇಳುವಂತೆ, ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗಿದೆ. ಮದುವೆ ಸಂದರ್ಭ ರೂ 1ಲಕ್ಷ ನಗದು ಮತ್ತು 10 ತೊಲ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ದಂಪತಿಗೆ ಮಕ್ಕಳಾಗಲಿಲ್ಲ ಎಂಬ ಕೊರಗೂ ಇತ್ತು. ಉಮೇಶ್‌ಗೆ ಈ ಸಂಬಂಧ ಚಿಕಿತ್ಸೆ ಪಡೆಯಲು ಹೇಳಿದ್ದರೂ ಆತ ಒಪ್ಪಿರಲಿಲ್ಲ. ಇದೀಗ ತಮ್ಮ ಮಗಳು ಈ ಪರಿಸ್ಥಿತಿಗೆ ಒಳಗಾಗಿದ್ದಾಳೆ ಎನ್ನುತ್ತಾ ಗದ್ಗದಿತರಾದರು.

ಸುಮಂಗಲಾ ಕುಟುಂಬದವರಂತೂ ಉಮೇಶ್ ಕುಟುಂಬದ ಮೇಲೆ ಆರೋಪದ ಸುರಿಮಳೆಗರೆದರು. ತಾಯಿ ಗೌರಮ್ಮನ ಕಣ್ಣೀರು ಹರಿಯುತ್ತಲೇ ಇತ್ತು. ಘಟನೆ ನಡೆದ ಬಳಿಕ ಉಮೇಶ್ ಮತ್ತು ಕುಟುಂಬದವರು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ನಾಗರಾಜ್ ಅವರು ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಜಿ ಆಸ್ಪತ್ರೆಯಲ್ಲಿ ಪೊಲೀಸರು ಮತ್ತು ವೈದ್ಯರೂ ಗಾಯಾಳುವಿನ ಹೇಳಿಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT