ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹಾಲಿಯಲ್ಲಿ ಬಿಗಿ ಭದ್ರತೆ!

Last Updated 29 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಚಂಡೀಗಡ (ಐಎಎನ್‌ಎಸ್): ಭಾರತ-ಪಾಕಿಸ್ತಾನ ತಂಡಗಳ ಮಧ್ಯೆ ಬುಧವಾರ ಮೊಹಾಲಿಯಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಚಂಡೀಗಡ ಮತ್ತು ಮೊಹಾಲಿಯ ಎಲ್ಲ ಹೋಟೆಲ್‌ಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಸೋಮವಾರ ರಾತ್ರಿ ಶುರುವಾದ ಕಾರ್ಯಾಚರಣೆ ಮಂಗಳವಾರವೂ ಮುಂದುವರಿಯಿತು. ‘ಅತಿಥಿಗಳ ದಾಖಲೆಗಳನ್ನು ಪರಿಶೀಲಿಸಿದ್ದು, ಬೇರೆ ಕಡೆಯಿಂದ ಬಂದ ಪ್ರವಾಸಿಗರ ಮಾಹಿತಿಯನ್ನು ಕಲೆಹಾಕಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಂಡೀಗಡದಲ್ಲಿ 40 ಚಿಕ್ಕ ಹಾಗೂ ದೊಡ್ಡ ಹೋಟೆಲ್‌ಗಳಿದ್ದು, 1,400 ಕೋಣೆಗಳು ಅತಿಥಿಗಳಿಗೆ ಲಭ್ಯವಿವೆ. ಹೋಟೆಲ್ ತಾಜ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ವಾಸ್ತವ್ಯ ಹೂಡಲಿದ್ದು, ಭಾರಿ ಬಿಗಿಭದ್ರತೆಯಿಂದ ಕೋಟೆಯಂತೆ ಭಾಸವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ಇದೇ ಹೋಟೆಲ್‌ನಲ್ಲಿ ತಂಗಿದ್ದಾರೆ.

ಮೊಹಾಲಿ ಹೋಟೆಲ್‌ಗಳನ್ನು ಪೊಲೀಸರು ತಲಾಶೆಗೆ ಒಳಪಡಿಸಿದ್ದಾರೆ. ‘ಪಂದ್ಯದ ಭದ್ರತಾ ವ್ಯವಸ್ಥೆ ಭಾಗವಾಗಿ ಈ ಪರಿಶೀಲನೆ ನಡೆಸಲಾಗಿದೆ. ವಿದೇಶಿ ಪ್ರವಾಸಿಗರ ಆಗಮನದ ಎಲ್ಲ ದಾಖಲೆಗಳನ್ನು ಸರಿಯಾಗಿಡುವಂತೆ ಹೋಟೆಲ್ ಮಾಲೀಕರಿಗೆ ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದಿಂದ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಆಗಮಿಸುವ ನಿರೀಕ್ಷೆ ಇದೆ. ಐದು ಹಂತದ ಭದ್ರತಾ ವ್ಯವಸ್ಥೆಯನ್ನು ಕ್ರೀಡಾಂಗಣಕ್ಕೆ ಒದಗಿಸಲಾಗಿದ್ದು, ಕ್ರೀಡಾಂಗಣ ಸುತ್ತಲಿನ 2.5 ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT