ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜಿನ ಯಾನಕ್ಕೆ ಮಹಾರಾಜ್ ಸಜ್ಜು

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು:  ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರು `ಮಹಾರಾಜ~ ಚಿಕ್ಕ ವಿಮಾನದಲ್ಲಿ ಮೋಜಿನ ಯಾನ (ಜಾಲಿ ರೈಡ್) ಮಾಡಬಹುದು. ಜಿಲ್ಲಾಡಳಿತ ಮತ್ತು ಬೆಂಗಳೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ (ಜಿಎಫ್‌ಟಿಎಸ್) ಈ  ವ್ಯವಸ್ಥೆ ಮಾಡಿದೆ.

1983ನೇ ಇಸವಿಯಲ್ಲಿ `ಜಿಎಫ್‌ಟಿಎಸ್~ ಇದೇ ವ್ಯವಸ್ಥೆಯನ್ನು ಮೈಸೂರಿನಲ್ಲಿ ಕಲ್ಪಿಸಿತ್ತು. ಇದೀಗ ಇತಿಹಾಸ ಮರುಕಳಿಸಿದೆ. ಪ್ರವಾಸಿ ತಾಣ ಮತ್ತು ವಿಶ್ವವಿಖ್ಯಾತ ನಾಡಹಬ್ಬ ದಸರಾ ನೋಡಲು ಬರುವ ಪ್ರವಾಸಿಗರು ವಿಮಾನದಲ್ಲಿ ಕುಳಿತು ಒಂದು ಸುತ್ತು ಹಾಕಬಹುದು.

`ಸೆಸ್ನಾ-152~ ಪುಟ್ಟ ವಿಮಾನಕ್ಕೆ `ಮಹಾರಾಜ~ ಎಂದು ಹೆಸರಿಡಲಾಗಿದೆ. ಪೈಲಟ್ ಜೊತೆ ಒಬ್ಬ ಪ್ರಯಾಣಿಕ ಮಾತ್ರ ವಿಮಾನದಲ್ಲಿ ಜಾಲಿ ರೈಡ್ ಮಾಡಬಹುದು. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಮಾನ ಹೊರಟು ಚಾಮುಂಡಿ ಬೆಟ್ಟ, ಲಲಿತ್ ಮಹಲ್ ಪ್ಯಾಲೆಸ್, ಅರಮನೆ ಸುತ್ತಿ 20 ನಿಮಿಷಗಳಲ್ಲಿ ಮತ್ತೆ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪಲಿದೆ~ ಎಂದು ಜಿಎಫ್‌ಟಿಎಸ್ ನಿರ್ದೇಶಕ ನವೀನ್‌ರಾಜ್ ಸಿಂಗ್ ತಿಳಿಸಿದರು.

`ದಸರೆಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಈ ಬಾರಿ `ಮಹಾರಾಜ~ ಮತ್ತು ಪೈಲಟ್ ಮತ್ತು ಮೂರು ಪ್ರಯಾಣಿಕರು ಕುಳಿತುಕೊಳ್ಳುವ `ಯುವರಾಜ~ ವಿಮಾನ ಹಾರಾಟ ನಡೆಸಲು ಯೋಜಿಸಲಾಗಿತ್ತು. ಆದರೆ, ಪೈಲಟ್ ಅಭಾವದಿಂದಾಗಿ `ಯುವರಾಜ~ ವಿಮಾನ ರದ್ದು ಮಾಡಲಾಗಿದೆ. ಮಹಾರಾಜ ವಿಮಾನ ಸುಮಾರು 800-1000 ಅಡಿ ಎತ್ತರದಲ್ಲಿ ಸಂಚರಿಸಲಿದೆ. ವಿಮಾನದಲ್ಲಿ ಕುಳಿತುಕೊಳ್ಳುವವರು ಮೈಸೂರನ್ನು ವೀಕ್ಷಿಸಿ ಚಾಮುಂಡಿ ಬೆಟ್ಟ ಪ್ರದಕ್ಷಿಣೆ ಹಾಕಬಹುದು. ಟಿಕೆಟ್ ದರ ಒಬ್ಬರಿಗೆ ರೂ 2,500 ನಿಗದಿ ಮಾಡಲಾಗಿದೆ~ ಎಂದು ತಿಳಿಸಿದರು.

`ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12, ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೆ ವಿಮಾನ ಹಾರಾಟ ನಡೆಸಲಿದೆ. ದಿನಕ್ಕೆ ವಿಮಾನ-20-30 ಸುತ್ತು ಹಾಕಲಿದೆ. ಅ.30 ರವರೆಗೆ ವಿಮಾನ ಹಾರಾಟ ವ್ಯವಸ್ಥೆ ಇರುತ್ತದೆ. ಅರಮನೆ ಆಡಳಿತ ಮಂಡಳಿ, ಜಿಲ್ಲಾಡಳಿತ ಇಲ್ಲವೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದು ಟಿಕೆಟ್ ಖರೀದಿ ಮಾಡಬಹುದು~ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ ಮೊದಲ ಟಿಕೆಟ್ ಖರೀದಿ ಮಾಡಿ ಮಹಾರಾಜ ವಿಮಾನದಲ್ಲಿ ಜಾಲಿ ರೈಡ್ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT