ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜು, ಮಸ್ತಿಯ ನಗರ

Last Updated 29 ಜೂನ್ 2011, 19:30 IST
ಅಕ್ಷರ ಗಾತ್ರ

ಕಳೆದ ಒಂದು ದಶಕದ ಅವಧಿಯಲ್ಲಿ ಬೆಂಗಳೂರಿನ ಅಪರಾಧಗಳ ಸ್ವರೂಪ ಬದಲಾಗಿದೆ. ಒಂದು ಕೊಲೆ ನಡೆದರೆ ಇಡೀ ಬೆಂಗಳೂರು ಬೆಚ್ಚಿಬೀಳುವ ಕಾಲವೊಂದಿತ್ತು.

ಬೆಂಗಳೂರಿನಲ್ಲೆಗ ತಿಂಗಳಿಗೆ ಸರಾಸರಿ 25 ಕೊಲೆಗಳು ನಡೆಯುತ್ತವೆ. ನಗರ ಸುರಕ್ಷಿತವಾಗಿರುವಂತೆ ಕಂಡರೂ ಜನ ಮನೆಗೆ ಹಿಂದಿರುವ  ಮಾರ್ಗದಲ್ಲಿ ಹಗಲು ಹೊತ್ತಲ್ಲೇ `ಸುಲಿಗೆ~ಗೆ ಒಳಗಾದರೆ ಆಶ್ಚರ್ಯವಿಲ್ಲ!

ತೊಂಬತ್ತರ ದಶಕದಲ್ಲಿ ರೌಡಿಗಳು ಬಳಸುತ್ತಿದ್ದ ಮಾರಕಾಸ್ತ್ರ ಮಚ್ಚು. ಆಗ ರೌಡಿಸಂ ಈ ಪರಿ ಬೆಳೆದಿರಲಿಲ್ಲ. ನಗರವೂ ಇಷ್ಟು ಬೆಳೆದಿರಲಿಲ್ಲ. ಇಸ್ಪೀಟ್ ಕ್ಲಬ್‌ಗಳು, ಆಯಿಲ್ ದಂಧೆ, ವೇಶ್ಯಾವಾಟಿಕೆ ಮತ್ತಿತರ ಅಕ್ರಮ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸಲು ಹೊಡೆದಾಡಿಕೊಳ್ಳುತ್ತಿದ್ದರು.

ಹಿಂದೆ ನಗರದಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ ಕಡಿಮೆ ಇತ್ತು. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆಯೂ ಕಡಿಮೆ ಇತ್ತು. ಹೊಸ ಸಹಸ್ರಮಾನ ಆರಂಭವಾದ ನಂತರ ಬೆಂಗಳೂರಿನಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. 

ಸರ್ಕಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಬೆಂಗಳೂರಿನ ಬೆಳವಣಿಗೆಯ ಗತಿ ಬದಲಾಯಿತು. ಅದರ ಬೆನ್ನಲ್ಲೇ ಅಪರಾಧಗಳು ಹೆಚ್ಚಿದವು.

ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ಸಿಕ್ಕನಂತರ ಭೂಮಿಗೆ ಬೇಡಿಕೆ ಹೆಚ್ಚಿತು. ರೈತರಿಂದ ಭೂಮಿ ಖರೀದಿಸಿ ಮಾರಾಟ ಮಾಡುವವರು ಹೆಚ್ಚಾದರು.

ಭೂಮಿ ಖರೀದಿಸಿ (ರಿಯಲ್ ಎಸ್ಟೇಟ್)ಮಾರುವವರ ಮಾಫಿಯಾ ತಲೆ ಎತ್ತಿತು. ಸಣ್ಣ ಮೊತ್ತದ ಹಣಕ್ಕೆ ಹೊಡೆದಾಡುತ್ತಿದ್ದವರು ಲಕ್ಷಾಂತರ ರೂಪಾಯಿ ಹಣ ಹರಿದು ಬರುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದರು.

ಬೆಂಗಳೂರು ಹೊರವಲಯದ ಕೃಷಿ ಭೂಮಿ ಪರಿವರ್ತನೆಯಾಯಿತು. ಈ ಪ್ರಕ್ರಿಯೆಯಲ್ಲಿ ಹತ್ತಾರು ಬೆದರಿಕೆ, ಅಪಹರಣ, ಹಲ್ಲೆ, ಕೊಲೆಗಳು ನಡೆದವು. ಅನೇಕ ಬಗೆಯ ಮೋಸ, ವಂಚನೆಯ ಅಪರಾಧಗಳು ತಲೆ ಎತ್ತಿದವು.

ಐಟಿ- ಬಿಟಿ ಕಂಪೆನಿಗಳು ದಿನ 24 ತಾಸುಗಳೂ ಕಾರ್ಯ ನಿರ್ವಹಿಸಲು ಆರಂಭಿಸಿದ ಮೇಲೆ ಬೆಂಗಳೂರು ಚುರುಕಾಯಿತು. `ನಿದ್ರಿಸದ ನಗರ~ ಎಂಬ ಹೆಸರು ಪಡೆದ ಮುಂಬೈಗೆ ಬೆಂಗಳೂರು ಸವಾಲು ಹಾಕ ತೊಡಗಿತು.

ಇಡೀ ಬೆಂಗಳೂರು ಒಂದೆರಡು ತಾಸು ನಿದ್ರೆಗೆ ಜಾರುತ್ತದೋ, ಇಲ್ಲವೋ ಹೇಳುವುದು ಕಷ್ಟ. ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುವ ಜನರನ್ನು ದೋಚುವ ಪ್ರವೃತ್ತಿ ಶುರುವಾಯಿತು. ಮಧ್ಯರಾತ್ರಿ, ಬೆಳಗಿನ ಜಾವ ಸಂಚರಿಸುವ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡುವಂತಹ ತಂಡಗಳು ಹುಟ್ಟಿಕೊಂಡವು.

ನಗರದ ಜನಸಂಖ್ಯೆ ಹೆಚ್ಚಾದಂತೆ ಮನೆ ನಿವೇಶನಗಳಿಗೆ  ಬೇಡಿಕೆ ಹೆಚ್ಚಿತು. ನಿವೇಶನ ಕೊಡಿಸುವ ಮಧ್ಯವರ್ತಿಗಳು ಹುಟ್ಟಿಕೊಂಡರು. ಅನೇಕರು ಅಮಾಯಕರನ್ನು ವಂಚಿಸಿದರು. ಒಂದು ಮೂಲದ ಪ್ರಕಾರ  ಕಳವು, ದರೋಡೆ, ಸುಲಿಗೆ ಮುಂತಾದ ಪ್ರಕರಣಗಳಲ್ಲಿ ಬೆಂಗಳೂರಿನ ಜನರು ವರ್ಷಕ್ಕೆ ನೂರು ಕೋಟಿ ರೂ ಹಣ ಕಳೆದುಕೊಳ್ಳುತ್ತಾರೆ. 

 ಬೆಂಗಳೂರಿನ ಅಪರಾಧ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಬೆಂಗಳೂರು ಬದಲಾದಂತೆ ಅಪರಾಧಗಳ ಸ್ವರೂಪವೂ ಬದಲಾವಣೆ ಕಂಡಿದೆ. ಅಪರಾಧ ಜಗತ್ತು ಬದಲಾಗಬೇಕಾದರೆ ಬೆಂಗಳೂರು ಸಹ ಬದಲಾಗಬೇಕು.

ಸಿರಿವಂತರ  ಸ್ವರ್ಗ


ಬೆಂಗಳೂರು ದಶಕದ `ಮಾಹಿತಿ ತಂತ್ರಜ್ಞಾನ ನಗರ~ವಾಗಿ ವಿಶ್ವದ ಗಮನ ಸೆಳೆದ ನಂತರ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಇಡೀ ಬೆಂಗಳೂರು ಬದಲಾಗಿದೆ ಎಂದಲ್ಲ.

ಇಲ್ಲಿ ಸ್ಥಳೀಯ(ಕನ್ನಡಿಗರು)ರಿಗಿಂತ ಹೊರಗಿನಿಂದ ಬಂದವರೇ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಿರಿವಂತರು, ಮೋಜಿನ  ಪ್ರವೃತ್ತಿಯ ಜನರಿಗೆ ಈ ನಗರ ವಿಲಾಸಿ ನಗರದಂತೆ ಕಾಣಬಹುದು. ಬೆಂಗಳೂರು ಹಗಲಿಗಿಂತ ರಾತ್ರಿ ಅದ್ಭುತವಾಗಿ ಕಾಣುತ್ತದೆ. ಹಗಲಲ್ಲೂ ಬೆಂಗಳೂರು ವರ್ಣಮಯ.

ಸಿರಿವಂತರಿಗೆ ಹಣ ಖರ್ಚು ಮಾಡಲು ಇಲ್ಲಿ ನೂರಾರು ದಾರಿಗಳಿವೆ. ಬಾರ್, ಪಬ್, ಕ್ಲಬ್, ನಾಯಿಕೊಡೆಗಳಂತೆ ತಲೆ ಎತ್ತಿವೆ. ನಗರದಲ್ಲಿ ಸುಮಾರು 2,528 ಬಾರ್‌ಗಳಿವೆ. ಇವುಗಳಲ್ಲಿ 48 ಬಾರ್‌ಗಳಲ್ಲಿ ಬಾರ್  ಗರ್ಲ್ಸ್ ಇದ್ದಾರೆ. ಹೈಟೆಕ್ ವೇಶ್ಯಾವಾಟಿಕೆಯೂ ಬೆಂಗಳೂರಿನ ಭಾಗವಾಗಿದೆ. 
 
ಯೂರೋಪಿಯನ್ ದೇಶಗಳಲ್ಲಿರುವಂತೆ ಗಂಡು,ಹೆಣ್ಣು ವಿವಾಹವಾಗದೆ ಜತೆಯಲ್ಲಿ ಬದುಕುವವರ ಸಂಖ್ಯೆಯೂ ಇಲ್ಲಿ ಹೆಚ್ಚುತ್ತಿದೆ. ಆದರೆ ಅವರ ಸಂಖ್ಯೆ ವಿರಳ. ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗಳಿಗೆ ಒಡ್ಡಿಕೊಂಡಿರುವ ಬೆಂಗಳೂರಿನ ಜನರು ಸದಾ ಒತ್ತಡ ಮತ್ತು ಅನಿಶ್ಚಿತತೆಗಳ ನಡುವೆ ಬದುಕುತ್ತಿದ್ದಾರೆ.

ಜೀವನ ಶೈಲಿ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಲ್ಲಿನ ಸಾಮಾಜಿಕ ಬದುಕು ನಿತ್ಯ ಕವಲೊಡೆಯುತ್ತ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT