ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡ ಬಿತ್ತನೆಗೆ ಮುಂದಾದ ರೈತರು

Last Updated 23 ಆಗಸ್ಟ್ 2011, 19:00 IST
ಅಕ್ಷರ ಗಾತ್ರ

ಗದಗ: ಮುಂಗಾರು ಮಳೆಗಾಗಿ ಕಾದು ಸುಸ್ತಾದ ರೈತರು ಈಗ ಸ್ವತಃ  ತಾವೇ ಮೋಡ ಬಿತ್ತನೆ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಶಿಗ್ಲಿಯ ಗ್ರಾಮಸ್ಥರು ಉಪ್ಪನ್ನು ಸುಡುವ ಮೂಲಕ ಮೋಡ ಬಿತ್ತನೆ ಮಾಡತೊಡಗಿದ್ದಾರೆ.

ಗ್ರಾಮದ ಗಿರೀಶ ಕುಪ್ಪಸದ ಎಂಬುವರ ಜಮೀನಿನಲ್ಲಿ 5 ಅಡಿ ಉದ್ದ, ಮೂರು ಅಡಿ ಅಗಲದ ಹೋಮದ ಕುಂಡವನ್ನು ನಿರ್ಮಿಸಿರುವ ರೈತರು ಅದರಲ್ಲಿ ವಿವಿಧ ಮರಗಳ ಸೌದೆಯನ್ನು ಹಾಕಿ ಬೆಂಕಿ ಹೊತ್ತಿಸಿದ್ದಾರೆ. ಈ ಕುಂಡಕ್ಕೆ ಉಪ್ಪು ಸುರಿದು ಸುಡಲಾಗುತ್ತಿದೆ.

ಮಂಗಳವಾರ ಮಧ್ಯಾಹ್ನ ಈ ಮೋಡ ಬಿತ್ತನೆ ಕಾರ್ಯ ಪ್ರಾರಂಭವಾಯಿತು. ಹೋಮಕುಂಡದ ಮುಂದೆ ಹತ್ತು-ಹದಿನೈದು ರೈತರು ಉಪ್ಪನ್ನು ಕುಂಡಕ್ಕೆ ಸುರಿಯುತ್ತಿದ್ದಾರೆ. ಉಪ್ಪು ಸಂಪೂರ್ಣವಾಗಿ ಸುಟ್ಟ ನಂತರ ಮತ್ತೊಮ್ಮೆ ಸುರಿಯುತ್ತಾರೆ.

`ಉಪ್ಪು ಸುಡುವ ಮೂಲಕ ಮೋಡ ಬಿತ್ತನೆ ಕಾರ್ಯವನ್ನು 24 ತಾಸು ಸತತವಾಗಿ ಮಾಡಲಾಗುತ್ತದೆ. ಇದಕ್ಕೆ ಈಗಾಗಲೇ 12 ಚೀಲ ಉಪ್ಪು ಖರೀದಿಸಲಾಗಿದೆ. ಅಗತ್ಯವಾದರೆ ಇನ್ನಷ್ಟನ್ನು ತಂದು ಸುಡಲಾಗುತ್ತದೆ` ಎಂದು ರೈತ ಬಸವರಾಜ ಕೂಸನೂರು `ಪ್ರಜಾವಾಣಿ~ಗೆ ತಿಳಿಸಿದರು.

`ಮಳೆ ಬರುತ್ತದೆ ಎಂದು ಕತ್ತೆ ಮದುವೆ, ಕಪ್ಪೆ ಮದುವೆ ಎಲ್ಲವನ್ನೂ ಮಾಡಿದೆವು. ಆದರೆ ಮಳೆ ಮಾತ್ರ ಬರಲಿಲ್ಲ. ಅದಕ್ಕಾಗಿ ಈ ರೀತಿ ಮೋಡ ಬಿತ್ತನೆ ಕಾರ್ಯ ಕೈಗೊಂಡಿದ್ದೇವೆ. ದಾವಣಗೆರೆಯಲ್ಲಿ ಇದೇ ರೀತಿ ಉಪ್ಪು ಸುಟ್ಟು ಮೋಡ ಬಿತ್ತನೆ ಮಾಡಿದ್ದರಿಂದ ಮಳೆಯಾಗಿದೆ. ಅದೇ ಮಾದರಿಯನ್ನು ನಾವು ಅನುಸರಿಸುತ್ತಿದ್ದೇವೆ` ಎಂದು ರೈತ ಕಲ್ಲನಗೌಡ ಪಾಟೀಲ ತಿಳಿಸಿದರು.

ರೈತರ ಕಾರ್ಯ ವೈಜ್ಞಾನಿಕ: ಶಿಗ್ಲಿಯ ರೈತರು ಮಾಡುತ್ತಿರುವ ಮೋಡ ಬಿತ್ತನೆ ಕೆಲಸ ವೈಜ್ಞಾನಿಕವಾಗಿದೆ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಎಲ್.ಜಿ. ಹಿರೇಗೌಡರ `ಪ್ರಜಾವಾಣಿ~ಗೆ ತಿಳಿಸಿದರು.

ಹಿರೇಗೌಡರು 2008ರಲ್ಲಿ ಗದಗ ಜಿಲ್ಲೆಯಲ್ಲಿ ನಡೆದ ಮೋಡ ಬಿತ್ತನೆ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದರು.

ಉಪ್ಪು ಸುಟ್ಟು ಅದರಿಂದ ಬಿಡುಗಡೆಯಾಗುವ ಹೊಗೆಯಲ್ಲಿ ಇರುವ ಅಣುಗಳು ದಟ್ಟವಾದ ಮೋಡಗಳಿಗೆ ತಲುಪಿ, ಅಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಮೋಡ ಹನಿಯಾಗಲು ಸಹಕಾರಿಯಾಗುತ್ತದೆ. ಆದರೆ ಈ ರೀತಿ ಮೋಡ ಬಿತ್ತನೆಗೆ ಅತಿ ಎತ್ತರದ ಗುಡ್ಡ, ಬೆಟ್ಟವಿದ್ದರೆ ಪರಿಣಾಮ ಹೆಚ್ಚಾಗಿರುತ್ತದೆ. ಮೈದಾನ-ಬಯಲು ಪ್ರದೇಶದಲ್ಲಿ ಫಲಿತಾಂಶ ಸಿಗುವುದು ಕಷ್ಟ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT