ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡದಲ್ಲಿ ಕಣ್ಸೆಳೆದ ಬಾಲಂಗೋಚಿಗಳ ಆಟ.....

Last Updated 19 ಜುಲೈ 2013, 10:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಿರಿ ಮಿರಿ ಮಿಂಚುವ ಗಾಳಿಪಟ, ಮತ್ತೊಂದೆಡೆ ದಾರದ ಉಂಡಿ ಹಿಡಿದ ಪುಟ್ಟ ಕೈಗಳು, ಕಣ್ಣುಗಳು ಒಮ್ಮೆ ಆಕಾಶದತ್ತ, ಮಗದೊಮ್ಮೆ ಶಿಕ್ಷಕರತ್ತ ನೋಡುತ್ತಿದ್ದ ಮುಗ್ಧ ಮುಖಗಳು. ಮೋಡ ಕವಿದಿದ್ದ ಕಾರಣ ಮಳೆ ಬಂದುಬಿಡುತ್ತೆ ಎಂಬ ಆತಂಕ ಕೆಲವರಲ್ಲಿದ್ದರೆ, ಇನ್ನೂ ಕೆಲವರಿಗೆ ವೇದಿಕೆ ಕಾರ್ಯಕ್ರಮ ಯಾವಾಗ ಮುಗಿಯುತ್ತದೆಯೆಂದು ಕಾತರಿಸುತ್ತಿದ್ದರು. ಇದರ ನಡುವೆ ಪುಟಾಣಿ ಮಕ್ಕಳ ಗುಸುಗುಸು ಮಾತುಕತೆಯೂ ಜಾರಿಯಲ್ಲಿತ್ತು.

`ನೀಲಿ ಬಣ್ಣದ ಗಾಳಿಪಟಗಿಂತ ನನ್ನ ಕೆಂಬಣ್ಣದ ಗಾಳಿಪಟವೇ ಚೆಂದ' ಎಂದು ಒಬ್ಬಳು ತನ್ನ ಗೆಳತಿಯ ಕಿವಿಯಲ್ಲಿ ಪಿಸುಗುಟ್ಟಿದರೆ, ನೀಲಿ ಬಣ್ಣದ ಗಾಳಿಪಟ ಹಿಡಿದ ಬಾಲಕಿ, `ನನ್ನ ಗಾಳಿಪಟವೇ ತುಂಬ ಎತ್ತರ ಹಾರುತ್ತೆ' ಎಂದು ಒಂದು ಪದವೂ ಮಾತನಾಡದೇನೆ ಮುಖದಲ್ಲೇ ಎಲ್ಲವನ್ನೂ ವ್ಯಕ್ತಪಡಿಸುತ್ತಿದ್ದಳು.

ಇಂಥ ಹತ್ತು ಹಲವು ದೃಶ್ಯಗಳು ಕಂಡು ಬಂದಿದ್ದು ತಾಲ್ಲೂಕಿನ ಅಗಲಗುರ್ಕಿ ಗ್ರಾಮದ ಬಿಜಿಎಸ್ ವಸತಿಯುತ ಗ್ರಾಮಾಂತರ ಶಾಲೆಯಲ್ಲಿ.

ಶಾಲೆಯ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ `ಜಾನಪದ ಕಲಾ ಮೇಳ ಮತ್ತು ಗಾಳಿಪಟ ಉತ್ಸವ'ದಲ್ಲಿ ಪಾಲ್ಗೊಳ್ಳಲು ಬಂದಿದ್ದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಆಕಾಶದತ್ತೆರಕ್ಕೆ ಗಾಳಿಪಟ ಹಾರಿಸಲು ತುದಿಗಾಲಲ್ಲಿದ್ದರು. ಉದ್ದುದ್ದನೆಯ ಭಾಷಣಗಳನ್ನು ಆಲಿಸುತ್ತಿದ್ದ ಮಕ್ಕಳು ಒಮ್ಮೆ ಕೈಗಡಿಯಾರ, ಮತ್ತೊಮ್ಮೆ ಆಕಾಶ ಮತ್ತ ಇನ್ನೊಮ್ಮೆ ಶಿಕ್ಷಕರತ್ತ ನೋಡುತ್ತ ಕೂತಿದ್ದರು. `ವೇದಿಕೆ ಕಾರ್ಯಕ್ರಮ ಮುಗಿಯಿತು. ಎಲ್ಲರೂ ಗಾಳಿಪಟ ಹಾರಿಸಬಹುದು' ಎಂದು ಹೇಳುವುದನ್ನೇ ಕೇಳಲು ಕಾತರಿಸುತ್ತಿದ್ದ ಮಕ್ಕಳು ಕಾರ್ಯಕ್ರಮ ಮುಗಿದ ಕ್ಷಣವೇ ಗಾಳಿಪಟಗಳನ್ನು ಹಿಡಿದುಕೊಂಡು ಮೈದಾನದತ್ತ ಓಡಿದರು. ಪ್ರೌಢಶಾಲೆಯಲ್ಲಿ ಓದುವವರಿಗಿಂತ ತಾವೇನೂ ಕಡಿಮೆ ಎಂಬಂತೆ 1 ರಿಂದ 7ನೇ ತರಗತಿಯ ಮಕ್ಕಳು ದೊಡ್ಡದೊಡ್ಡ ಗಾಳಿಪಟಗಳನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಸಿದ್ಧಪಡಿಸಿಕೊಂಡು ಬಂದಿದ್ದರು. ಗಾಳಿಪಟಕ್ಕೆ ಬಿಗಿಯಾದ ಸೂತ್ರವನ್ನು ಕಟ್ಟಿಕೊಂಡು ಆಕಾಶದತ್ತ ಹಾರಿಸಲು ಸಜ್ಜಾಗಿದ್ದ ಅವರು ಸ್ನೇಹಿತರಿಗೆ ಪೈಪೋಟಿ ನೀಡುವ ತವಕದಲ್ಲಿದ್ದರು.  ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಪೋಷಕರೂ ಕೂಡ ಆಗಮಿಸಿದ್ದರು.

ತರಗತಿಗಳಿಗೆ ಸಂಪೂರ್ಣವಾಗಿ ರಜೆಯಿದ್ದ ಕಾರಣ ಮಕ್ಕಳು ಬಣ್ಣಬಣ್ಣದ ಉಡುಪುಗಳಲ್ಲಿ ಬಂದಿದ್ದರು. ಶಿಕ್ಷಕರು ಆಗಾಗ್ಗೆ ಗದರಿಸುತ್ತಿದ್ದರೂ ಮಕ್ಕಳು ತಮ್ಮ ತುಂಟಾಟ ಮುಂದುವರಿಸಿದ್ದರು.  ` ಸೂತ್ರ ಕಟ್ಟುವುದು ಗೊತ್ತಿರಲಿಲ್ಲ. ಅದನ್ನ ಪಕ್ಕದ ಮನೆಯವರ ಕಡೆ ತಿಳಿದಕೊಂಡೆ. ಪಟ ತುಂಬ ಎತ್ತರಕ್ಕೆ ಹಾರಬೇಕೆಂದು ದೊಡ್ಡದಾದ ದಾರದ ಉಂಡಿಯನ್ನೇ ಖರೀದಿಸಿದ್ದೇನೆ' ಎಂದು ಶಾಲಾ ವಿದ್ಯಾರ್ಥಿ ಅಜಯ್ ತಮ್ಮ ಮನದಾಳದ ಭಾವನೆ ಹಂಚಿಕೊಂಡರು. `ಹುಡುಗರಷ್ಟೇ ಯಾಕೆ, ಹುಡುಗಿಯರು ಕೂಡ ಗಾಳಿಪಟ ಹಾರಿಸಬಹುದು. ಅದಕ್ಕೆ ನಾನು ಹಸಿರು ಬಣ್ಣದ ಗಾಳಿಪಟ ತಯಾರು ಮಾಡಿಕೊಂಡು ಬಂದಿದ್ದೇನೆ. ನನ್ನ ಜೊತೆ  ಗೆಳತಿ ವರ್ಷಾ ಮತ್ತು ಸ್ನೇಹಾ ಕೂಡ ಇದ್ದಾಳೆ' ಎಂದು 5ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT