ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಬಿತ್ತನೆಗೆ ವೈಜ್ಞಾನಿಕ ಪುರಾವೆಗಳೂ ಲಭ್ಯ

Last Updated 5 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನಮ್ಮ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಮಳೆಯ ತೀವ್ರ ಅಭಾವ ಪರಿಸ್ಥಿತಿ ಎದುರಿಸುತ್ತಿದೆ. ರಾಜ್ಯದಲ್ಲಿ ಪ್ರತಿಶತ 70ರಷ್ಟು ಭೂಪ್ರದೇಶವು ಬರ ಸಂಭವನೀಯ ಪ್ರದೇಶವಾಗಿದೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕವನ್ನು ಮಳೆಯ ಛಾಯಾ ಪ್ರದೇಶವೆಂದು ಮತ್ತು ಪದೇ ಪದೇ ಬರಗಾಲಕ್ಕೆ ತುತ್ತಾಗುವ ಪ್ರದೇಶವೆಂದು ವರ್ಗೀಕರಿಸಲಾಗಿದೆ.
 
ಈ ವರ್ಷ ಪ್ರತಿಶತ 80 ರಷ್ಟು ಭಾಗ ಬರಗಾಲ ಪೀಡಿತವಾಗಿದೆ. ಕಳೆದ 10 ವರ್ಷಗಳಲ್ಲಿ ಕೇವಲ 2005 ಮತ್ತು 2008 ಇಸವಿಗಳನ್ನು ಹೊರತುಪಡಿಸಿದರೆ, ಯಾವ ವರ್ಷವೂ ಉತ್ತಮ ಮಳೆಯಾಗಿಲ್ಲ. ಒಂದು ದಶಕದಿಂದ ನಮ್ಮ ರೈತ ಸಮುದಾಯ ತೀವ್ರ ಬರಗಾಲ ಪರಿಸ್ಥಿತಿಯನ್ನು ಎದುರಿಸಿದೆ.

ಈ ಸಂದರ್ಭದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಆಗಿರುವ ಮತ್ತು ಆಗುತ್ತಿರುವ ಹೊಸ ಹೊಸ ಆವಿಷ್ಕಾರಗಳ ಲಾಭವನ್ನು ನಮ್ಮ ರೈತರಿಗೆ ಮುಟ್ಟಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಬೇಕು.

ವೈಜ್ಞಾನಿಕ ಕ್ಷೇತ್ರದಲ್ಲಿ ಆಗಿರುವ ಮತ್ತು ಆಗುತ್ತಿರುವ ಹೊಸ ಹೊಸ ಅವಿಷ್ಕಾರಗಳನ್ನು ರೈತ ಸಮುದಾಯಕ್ಕೆ ನೇರವಾಗಿ ಮುಟ್ಟಿಸಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರವು 2003ರಲ್ಲಿ  83 ದಿನಗಳ  ಪ್ರಾಜೆಕ್ಟ್ ವರುಣ  ಕಾರ್ಯಾಚರಣೆ ನಡೆಸಿ ಮೋಡ ಬಿತ್ತನೆಯಂತಹ ವೈಜ್ಞಾನಿಕ ತಂತ್ರಜ್ಞಾನದ ಬಳಕೆ ಪ್ರಯೋಗಿಸಿತ್ತು.

ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಾಚರಣೆ ಅಂದಿನ ಮಟ್ಟಿಗೆ ರೈತನ ಅವಶ್ಯಕತೆಯನ್ನು ಪೂರೈಸಿತ್ತು. ಅದೂ ಅಲ್ಲದೆ, 2008ರ ಜುಲೈ ನಲ್ಲಿ ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಯಶಸ್ವಿ ಮೋಡ ಬಿತ್ತನೆ ಕಾರ್ಯಕ್ರಮವನ್ನು ಕೈಗೊಂಡಿತ್ತು.

ಮೋಡಗಳಲ್ಲಿ ತೇವಾಂಶವಿದ್ದಾಗಲೂ ಮಳೆ ಬಾರದಿರುವಿಕೆಯಾದಾಗ ತೇವಾಂಶವನ್ನು ಹನಿಯಾಗಿ ಪರಿವರ್ತನೆಗೊಳಿಸಲು ವೈಜ್ಞಾನಿಕವಾಗಿ ಪ್ರೇರೇಪಿಸುವ ತಂತ್ರಜ್ಞಾನವೇ ಮೋಡ ಬಿತ್ತನೆ. ಮೋಡ ಬಿತ್ತನೆಯು ಮಳೆ ಪ್ರಮಾಣವನ್ನು ಹೆಚ್ಚಿಸುವ ಒಂದು ವಿಧಾನ. ಮೋಡಗಳಲ್ಲಿ ಸಾಕಷ್ಟು ತೇವಾಂಶ ಇದ್ದಾಗಲೂ ಮಳೆಬಾರದಿರುವಿಕೆಗೆ ಅತಿ ಸೂಕ್ಷ್ಮಕಣಗಳ ಅಭಾವವೇ ಕಾರಣವೆಂದು ಮೋಡ ಭೌತಶಾಸ್ತ್ರ ಹೇಳುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಮೋಡದ ಗುಣಧರ್ಮವನ್ನು ಗಮನಿಸಿ ಸಿಲ್ವರ್ ಐಯೋಡೈಡ್ ಅಥವಾ ಸೋಡಿಯಂ ಕ್ಲೋರೈಡ್ ಇವುಗಳನ್ನು ಸಣ್ಣ ಕಣಗಳಾಗಿ ಮೋಡದಲ್ಲಿ ಬಿತ್ತುವ ಮೂಲಕ ಮೋಡದಲ್ಲಿರುವ ತೇವಾಂಶವು ಹನಿಯಾಗಿ ಪರಿವರ್ತನೆಗೊಂಡು ಮಳೆಯ ರೂಪದಲ್ಲಿ ಧರೆಗೆ ಇಳಿಯುವಂತೆ ಮಾಡುವುದೇ ಮೋಡ ಬಿತ್ತನೆ.

ಮಳೆಗಾಲದಲ್ಲಿ ಮೋಡವಿದ್ದರೂ ಮಳೆ ಬಾರದೆ ಮೋಡ ಮುಂದೆ ಚಲಿಸಿ ಹೋಗುವ ಅನುಭವ ಕರ್ನಾಟಕದ ರೈತ ಬಾಂಧವರಿಗೆ ಪದೇ ಪದೇ ಆಗುತ್ತಿರುವ ಬವಣೆಯಾಗಿದೆ. ಬರಗಾಲದ ತೀವ್ರತೆಯನ್ನು ಕಡಿಮೆ ಮಾಡುವ ಎಲ್ಲ ವಿಧಾನಗಳಲ್ಲಿ ಮೋಡ ಬಿತ್ತನೆ ಅತಿ ಕಡಿಮೆ ವೆಚ್ಚದಿಂದ ಮಾಡುವ ವಿಧಾನ.

ನಮ್ಮ ದೇಶಕ್ಕೆ ಕೃಷಿ ಚಟುವಟಿಕೆಯೇ ಬೆನ್ನೆಲುಬು. ಆದರೆ ಮಾನ್ಸೂನ್ ವೈಫಲ್ಯ, ಅನಿಯಮಿತ ಮತ್ತು ಕೊರತೆ ಮಳೆ, ಅಕಾಲಿಕ ಮಳೆಗಳಿಂದಾಗಿ ಕೃಷಿ ಚಟುವಟಿಕೆಗಳು ಭಾರೀ ಪ್ರಮಾಣದ ಪರಿಣಾಮಗಳನ್ನು ಎದುರಿಸಿ ಅರ್ಥವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತಿವೆ. ಕರ್ನಾಟಕದ ಸ್ಥಿತಿ ಭಿನ್ನವಾಗೇನಿಲ್ಲ. ರಾಷ್ಟ್ರದಲ್ಲಿಂದು 300 ಜಿಲ್ಲೆಗಳು ಸತತವಾಗಿ ಬರಗಾಲ ಪೀಡಿತ ಪ್ರದೇಶಗಳಾಗಿರುತ್ತವೆ.

ನಮ್ಮ ರಾಷ್ಟ್ರದಲ್ಲಿ ಮೋಡ ಬಿತ್ತನೆ ತಂತ್ರಜ್ಞಾನ 50 ವರ್ಷಗಳ ಇತಿಹಾಸವನ್ನು ಹೊಂದಿದೆ. ರಾಜ್ಯವೂ ಸೇರಿ ರಾಷ್ಟ್ರದಾದ್ಯಂತ ಹಲವಾರು ಬಾರಿ ಈ ಪ್ರಯೋಗ ನಡೆದಿದೆ.

2003ರಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ 83 ದಿನಗಳ ಮೋಡಬಿತ್ತನೆ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ರಾಜ್ಯ ಸರ್ಕಾರವು ಈ ಉದ್ದೇಶಕ್ಕಾಗಿಯೇ ಸಿ ಬ್ಯಾಂಡ್ ಚಾಲಿತ 2 ರಾಡಾರ್‌ಗಳನ್ನು ಸ್ಥಾಪಿಸಿತು.

ಬೆಂಗಳೂರಿನಲ್ಲಿ ಸ್ಥಾಪಿತವಾಗಿದ್ದ ಒಂದು ರಾಡಾರ್ ಇಡೀ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆಯ ಮತ್ತು ಹವಾಮಾನ ಮುನ್ಸೂಚನೆಯನ್ನು ನಿಖರವಾಗಿ ನೀಡುವ ಉದ್ದೇಶದಿಂದ ಸ್ಥಾಪನೆಯಾಗಿತ್ತು.

ಉತ್ತರ ಕರ್ನಾಟಕದ ಬರ ಸಂಭವನೀಯ ಪ್ರದೇಶಗಳಲ್ಲಿ ಹವಾಮಾನದ ಮುನ್ಸೂಚನೆಯನ್ನು ಪಡೆಯಲು ಮತ್ತು ಮಳೆ ತರಿಸುವ ಸಾಧ್ಯತೆ ಇರುವ ಮೋಡಗಳ ಬಗ್ಗೆ ಮಾಹಿತಿ ಪಡೆಯಲು ಎರಡನೇ ರಾಡಾರ್‌ನ್ನು ಗದಗ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮೇಲೆಯೇ ಸ್ಥಾಪಿಸಲಾಗಿತ್ತು.

ಈ ರಾಡಾರ್ ಕೇಂದ್ರಗಳ ಮೂಲಕ ನಿಖರವಾದ ಮತ್ತು ಅಗತ್ಯದ ಮಾಹಿತಿಯನ್ನು ಪಡೆದು ಮೋಡಗಳ ಲಭ್ಯತೆಯನ್ನು ಆಧರಿಸಿ ಕೈಗೊಳ್ಳಲಾದ ಪ್ರಾಜೆಕ್ಟ್ ವರುಣದ ಮೂಲಕ ರಾಜ್ಯದಲ್ಲಿ ಪ್ರತಿಶತ 20 ರಷ್ಟು ಮಳೆಯ ಪ್ರಮಾಣವನ್ನು ಹೆಚ್ಚಿಸಲಾಯಿತು ಎಂದು ಸಿ.ಎಂ.ಐ.ಇ. ಅಂದಾಜು ಮಾಡಿದೆ.
 
ವೈಜ್ಞಾನಿಕ ತಂತ್ರಜ್ಞಾನವನ್ನು ಉಪಯೋಗಿಸಿ ರಾಜ್ಯದಲ್ಲಿ ಮಳೆಯ ಪ್ರಮಾಣವನ್ನು ಹೆಚ್ಚಿಸಿದ ಯಶಸ್ವೀ ಮೋಡಬಿತ್ತನೆ ಕಾರ್ಯಕ್ರಮ ಕರ್ನಾಟಕದ ಕಿರೀಟಕ್ಕೆ ಗರಿ ಮೂಡಿಸಿತು.

ಇಷ್ಟು ವೈಜ್ಞಾನಿಕ ಪುರಾವೆ ಲಭ್ಯವಿದ್ದಾಗಲೂ ಅನುಭವಿ ಬರಹಗಾರರಾಗಿರುವ ನಾಗೇಶ ಹೆಗಡೆಯವರು ತಮ್ಮ ಅಂಕಣದಲ್ಲಿ (ಜುಲೈ 26) `ಎಸ್. ಎಂ. ಕೃಷ್ಣ ಅವರ ಅವಧಿಯಲ್ಲಿ ಅಮೆರಿಕಾದ ಕಂಪನಿಗಳು ವಿಮಾನದ ಮೂಲಕ ಮೋಡಬಿತ್ತನೆ ಮಾಡಿಸಿದ್ದು, ಯತ್ನಿಸಿದ್ದು ಸುಳ್ಳಲ್ಲ, ಆದರೆ ಇದರಿಂದಾಗಿಯೇ ಮಳೆ ಬಿತ್ತು ಎಂಬುದಕ್ಕೆ ಯಾವ ವೈಜ್ಞಾನಿಕ ದಾಖಲೆಗಳೂ ಇಲ್ಲ~ ಎಂದು ಅಭಿಪ್ರಾಯಪಟ್ಟಿದ್ದಾರೆ. ಪೂರ್ಣ ಅಧ್ಯಯನ ಮತ್ತು ಮಾಹಿತಿ ಕೊರತೆಯಿಂದ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ ಎನಿಸುತ್ತದೆ.  

 ರಾಜ್ಯದ 34 ಸಾವಿರ ದೇವಾಲಯಗಳಲ್ಲಿ 17 ಕೋಟಿ ರೂಪಾಯಿಗಳನ್ನು ರಾಜ್ಯದ ಬೊಕ್ಕಸದಿಂದ ವ್ಯಯ ಮಾಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಬದಲು ವೈಜ್ಞಾನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಕೇವಲ 10 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಾಗುವ ಮಳೆಯ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯತ್ತ ಗಮನ ಹರಿಸಬೇಕು.

ಮುಂಗಾರು ವೈಫಲ್ಯವನ್ನು ಮೋಡಬಿತ್ತನೆಯ ಮೂಲಕ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಮೋಡಬಿತ್ತನೆಯ ಕಾರ್ಯಕ್ರಮ ಕೈಗೊಂಡರೆ ಕರ್ನಾಟಕದಲ್ಲಿ ಮಳೆಯ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ.

ಹೋದ ವರ್ಷದ ಬರ ಈ ವರ್ಷದ ತೀವ್ರ ಮಳೆಯ ಅಭಾವದ ಕಾರಣ ಅಂತರ್ಜಲ ಕೊರತೆ ಹಾಗೂ ಅತೀ ಆಳಕ್ಕೆ ನೀರು ಇಳಿದಿರುವುದು ಎಲ್ಲರನ್ನೂ ದಿಗ್ಬ್ರಾಂತಗೊಳಿಸಿದೆ. ಇಂತಹ ಸಂದರ್ಭದಲ್ಲಿ ವಿಜ್ಞಾನದ ನೆರವನ್ನು ಪಡೆಯುವುದು ವಿವೇಕದ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT