ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪಕ್ಷಪಾತ ಬಯಲು

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತ್‌ನಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಘಟನೆಗಳಿಗೆ ನರೇಂದ್ರ ಮೋದಿ ಅವರ ಸರ್ಕಾರವೇ ಹೊಣೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
 
2002ರ ಕೋಮು ಗಲಭೆಗಳ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಧಾರ್ಮಿಕ ಸಂಸ್ಥೆಗಳ ಕಟ್ಟಡಗಳಿಗೆ ಹಾನಿಯಾಗಲು ಸರ್ಕಾರದ ನಿಷ್ಟ್ರಿಯತೆಯೇ ಕಾರಣ. ಈ ಕಟ್ಟಡಗಳ ದುರಸ್ತಿಗೆ ತಗಲುವ ವೆಚ್ಚವನ್ನು ಪರಿಹಾರ ರೂಪದಲ್ಲಿ ಕೊಡುವಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಆದೇಶ ನೀಡಿದೆ.
 
ಈ ತೀರ್ಪು ಅತ್ಯಂತ ಸ್ವಾಗತಾರ್ಹ ಮತ್ತು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಕೋಮು ಗಲಭೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ನಷ್ಟಕ್ಕೆ ಪರಿಹಾರ ಕೊಡುವ ವಿಷಯದಲ್ಲೂ ನರೇಂದ್ರ ಮೋದಿ ಸರ್ಕಾರ ತಾರತಮ್ಯ ಎಸಗಿದೆ ಎಂದು ಹೈಕೋರ್ಟ್ ಹೇಳಿದೆ.

ಹಿಂಸಾಚಾರದಲ್ಲಿ ಹಾನಿಗೆ ಒಳಗಾದ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳಿಗೆ ಪರಿಹಾರ ನೀಡಲು ಉತ್ಸಾಹ ತೋರಿಸಿದ್ದ ಮೋದಿ ಸರ್ಕಾರ, ಮುಸ್ಲಿಂ ಧಾರ್ಮಿಕ ಸಂಸ್ಥೆಗಳ ಕಟ್ಟಡಗಳಿಗೆ ಆದ ಹಾನಿಯನ್ನು ಉಪೇಕ್ಷಿಸಿತ್ತು. ಸರ್ಕಾರದ ಈ ಪಕ್ಷಪಾತ ಧೋರಣೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
 
ಸರ್ಕಾರದ ಪಕ್ಷಪಾತ ಧೋರಣೆ ಮತ್ತು ನಿಷ್ಕ್ರಿಯ ಆಡಳಿತದಿಂದಾಗಿಯೇ ಹಿಂಸಾಚಾರ ಹೆಚ್ಚಾಯಿತು ಎಂದು ಬೇರೆ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಗಳು ಹೇಳಿವೆ.

ನೂರಾರು ಅಮಾಯಕರ ಸಾವು, ಆಸ್ತಿಪಾಸ್ತಿ ನಷ್ಟಕ್ಕೆ  ಸರ್ಕಾರವೇ ಹೊಣೆ ಎಂಬುದು ಹಲವು ಸಲ ಸಾಬೀತಾದರೂ ನರೇಂದ್ರ ಮೋದಿ ಅವರಿಗೆ ಪಶ್ಚಾತ್ತಾಪವೇನೂ ಆದಂತಿಲ್ಲ. ಅದೇನೇ ಇರಲಿ, ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಯಾವುದೇ ಒಂದು ಧರ್ಮದ  ವಕ್ತಾರನಂತೆ ವರ್ತಿಸುವುದು ಸಂವಿಧಾನಬಾಹಿರ.
 
ಮೋದಿ ಸರ್ಕಾರದ ಸಂವಿಧಾನ ವಿರೋಧಿ ನಡವಳಿಕೆ ಮತ್ತು ಪಕ್ಷಪಾತ ಧೋರಣೆ ಅಕ್ಷಮ್ಯ ಮತ್ತು ಖಂಡನೀಯ.ಧಾರ್ಮಿಕ ಕಟ್ಟಡಗಳಿಗೆ ಆದ ಹಾನಿಗೆ ಸರ್ಕಾರದಿಂದ ಪರಿಹಾರ ಪಡೆಯಲು ಇಸ್ಲಾಮಿಕ್ ಸಂಘ ಸಂಸ್ಥೆಗಳು ಹೈಕೋರ್ಟಿನ ಮೊರೆ ಹೋಗಬೇಕಾಯಿತು.

ಪರಿಹಾರದ ಆದೇಶ ಹೊರಬೀಳಲು ಸುಮಾರು ಹತ್ತು ವರ್ಷ ಕಾಯಬೇಕಾಯಿತು. ಆದರೆ ಪರಿಹಾರ ನೀಡುವ ವಿಷಯದಲ್ಲಿ ಸರ್ಕಾರ ಇನ್ನಷ್ಟು ವಿಳಂಬ ಮಾಡಬಾರದು. ಈ ತೀರ್ಪನ್ನು ಗೌರವಿಸುವ ದೊಡ್ಡತನವನ್ನು ಅದು ಪ್ರದರ್ಶಿಸಬೇಕು. ಹೈಕೋರ್ಟಿನ ಸೂಚನೆಯಂತೆ ಆರು ತಿಂಗಳಲ್ಲಿ ಪರಿಹಾರದ ಮೊತ್ತ ವಿತರಣೆಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲೇಬೇಕು.

ಹಾನಿಗೆ ಒಳಗಾದ ಎಲ್ಲಾ ಕಟ್ಟಡಗಳು ದುರಸ್ತಿಯಾಗಲು ನೆರವು ನೀಡುವ ಮೂಲಕ ಅಲ್ಪ ಸಂಖ್ಯಾತರಿಗೆ ಆಗಿರುವ ನೋವನ್ನು ಶಮನ ಮಾಡಬೇಕು. 2002ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿವೆ.

ಅನ್ಯಾಯಕ್ಕೆ ಒಳಗಾದ ಜನರು ನ್ಯಾಯಾಲಯದ ಮೂಲಕವೇ ಪರಿಹಾರ ಪಡೆದುಕೊಳ್ಳುವಂತಹ ಪರಿಸ್ಥಿತಿ ಸರ್ಕಾರಕ್ಕೆ ಗೌರವ ತರುವ ವಿಷಯ ಅಲ್ಲ. ಗೋಧ್ರಾ ಪ್ರಕರಣದ ನಂತರದ ವಿವಿಧ ನ್ಯಾಯಾಲಯಗಳ ತೀರ್ಪಿನಲ್ಲಿ ಪ್ರಸ್ತಾಪಿಸಿದ ಲೋಪಗಳನ್ನು ಸರಿಪಡಿಸಿಕೊಳ್ಳುವ ವಿಷಯದಲ್ಲಿ ನರೇಂದ್ರ ಮೋದಿ ಸರ್ಕಾರ ಉದಾರ ಹಾಗೂ ಮುಕ್ತ ಮನಃಸ್ಥಿತಿಯನ್ನು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT