ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಧಾನಿ ಅಭ್ಯರ್ಥಿ: ವಿಜಯೋತ್ಸವ

Last Updated 14 ಸೆಪ್ಟೆಂಬರ್ 2013, 8:27 IST
ಅಕ್ಷರ ಗಾತ್ರ

ಬಳ್ಳಾರಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಘಟಕದಿಂದ ಶುಕ್ರವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ನೇಮರಾಜ ನಾಯ್ಕ ಅವರ ನೇತೃತ್ವದಲ್ಲಿ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸಂಜೆ ಪಕ್ಷದ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಮುಖಂಡ­ರಾದ ಕೆ.ಎ. ರಾಮಲಿಂಗಪ್ಪ, ಎಚ್‌.ಹನು­ಮಂತಪ್ಪ, ಮುರಾರಿಗೌಡ, ದತ್ತಾತ್ರೇಯರೆಡ್ಡಿ, ಜಿ.ಶಿವಾರೆಡ್ಡಿ, ಜಗದೀಶ ಶರ್ಮ, ಹೇಮಿರೆಡ್ಡಿ, ಕರೂರು ಸುಧಾಕರರೆಡ್ಡಿ, ಕೆ.ಎ. ವೇಮಣ್ಣ, ಎಚ್‌.ಎಂ. ಅಮರೇಶ, ಎಚ್‌.ಎಂ. ವಿಶ್ವನಾಥ, ಕುಂದಾಪುರ ನಾಗರಾಜ, ರಾಮಚಂದ್ರಪ್ಪ, ನಜೀರ್‌ ಪಾಷಾ ಮತ್ತಿತರರಿದ್ದರು.

ಮುಖಂಡರ ಅಭಿಪ್ರಾಯಗಳು...

ಹೊಸ ಹುಮ್ಮಸ್ಸು
ನರೇಂದ್ರ ಮೋದಿ ಅವರನ್ನು ಪಕ್ಷವು ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಮೋದಿ ನೇತೃತ್ವದಲ್ಲಿ ಪಕ್ಷ ಚುನಾವಣೆಯಲ್ಲಿ ಜಯ­ಭೇರಿ ಬಾರಿಸುವುದು ನಿಶ್ಚಿತ.
-ನೇಮರಾಜ ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ದೇಶದ ದೌರ್ಭಾಗ್ಯ
ಬಿಜೆಪಿಯು ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಆ ಪಕ್ಷದ ಹಾಗೂ ದೇಶದ ದೌರ್ಭಾಗ್ಯ. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್‌ ಅವರಂತಹ ಮುಖಂಡರು ಪಕ್ಷದಲ್ಲಿದ್ದರೂ ಮೋದಿ ಅವರನ್ನು ಆಯ್ಕೆ ಮಾಡಿರುವುದು ತೀವ್ರ ಬೇಸರ ಮೂಡಿಸಿದೆ. ಗುಜರಾತ್‌ ಅನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದಾರೆ ಎಂಬ ಕಾರಣದಿಂದ ಈ ಆಯ್ಕೆ ನಡೆದಿದ್ದರೂ, ಗುಜರಾತ್‌ನಲ್ಲಿನ ಭಯದ ವಾತಾವರಣ ಅವರ ಪುನರಾಯ್ಕೆಗೆ ಕಾರಣವಾಗಿರುವುದು ಸವರ್ವಿಧಿತ. ರೂಪಾಯಿಯ ಮೌಲ್ಯ ಕುಸಿತಕ್ಕೂ, ಮೋದಿ ಆಯ್ಕೆಗೂ ಬಂಡವಾಳಶಾಹಿ ಧೋರಣೆಯ ಹುನ್ನಾರ ಎನ್ನಿಸುತ್ತಿದೆ.
-ಎಂ.ಪಿ. ರವೀಂದ್ರ, ಜಿಲ್ಲಾ ಕಾಂಗ್ರೆಸ್‌ನ ಗ್ರಾಮೀಣ ಘಟಕದ ಅಧ್ಯಕ್ಷ

ಕಾಂಗ್ರೆಸ್‌ಗೆ ಆತಂಕವಿಲ್ಲ
ಮೋದಿ ಆಯ್ಕೆಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಆತಂಕವಿಲ್ಲ. ಬಿಜೆಪಿಯಲ್ಲಿ ನಾಯಕರೇ ಇಲ್ಲ. ಆ ಪಕ್ಷ ಲೋಕಸಭೆ ಚುನಾವಣೆಯ ನಂತರ ಅಸ್ತಿತ್ವದಲ್ಲೇ ಇರುವುದಿಲ್ಲ. ರಾಹುಲ್‌ ಗಾಂಧಿ ನೇತೃತ್ವದಲ್ಲಿ, ಸೋನಿಯಾ ಗಾಂಧಿ ನಾಯಕತ್ವದಲ್ಲಿ ಚುನಾ­ವಣೆ ಎದುರಿಸ­ಲಿರುವ ಕಾಂಗ್ರೆಸ್‌ ಈ ಬಾರಿ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ. ದೇಶದ ನೂತನ ಪ್ರಧಾನಿಯನ್ನು ಜನತೆ ಆಯ್ಕೆ ಮಾಡಲಿದ್ದಾರೆ. ಬಿಜೆಪಿ ಅಲ್ಲ.
-ಜೆ.ಎಸ್‌. ಆಂಜನೇಯುಲು, ಜಿಲ್ಲಾ ಕಾಂಗ್ರೆಸ್‌ನ ಗ್ರಾಮೀಣ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT