ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಷ್ಟೆ

Last Updated 17 ಸೆಪ್ಟೆಂಬರ್ 2013, 6:53 IST
ಅಕ್ಷರ ಗಾತ್ರ

ಹಾಸನ: ‘ಮೋದಿ ಬಿಜೆಪಿಯವರು ಬಿಂಬಿಸಿದ ಅಭ್ಯರ್ಥಿಯೇ ವಿನಾ ದೇಶದ 130 ಕೋಟಿ ಜನರ ಆಯ್ಕೆಯಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

‘ಒಂದು ವೇಳೆ ಮೋದಿ ಪ್ರಧಾನಿಯಾದರೂ ದೇಶದ ಜಾತ್ಯತೀತ ವ್ಯವಸ್ಥೆಯನ್ನು ನಾಶಮಾಡಲು ಅವರಿಂದ ಸಾಧ್ಯ ಇಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹರಿಯಾಣದ ರೇವಾರಿಯಲ್ಲಿ ಮೋದಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಧ್ರುವೀಕರಣ ಸಾಧ್ಯವಿಲ್ಲ ಎಂಬುದು ಮೋದಿ ಅವರಿಗೆ ಅರ್ಥವಾಗಿದ್ದರೆ, ಅವರ ಪಕ್ಷ ಇಷ್ಟು ವರ್ಷ ಜಾತಿ, ಧರ್ಮದ ಆಧಾರದಲ್ಲೇ ಯಾಕೆ ರಾಜಕೀಯ ಮಾಡುತ್ತ ಬಂದಿದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ತಾಕೀತು ಮಾಡಿದರು.

ಧರ್ಮದ ಹೆಸರಿನಲ್ಲಿ ಮತ ಗಳಿಸಲು ಸಾಧ್ಯವಿಲ್ಲ ಎಂಬುದು ಈ ದೇಶದ ನಾಡಿ ಮಿಡಿತ ಅರಿತ ರಾಜಕಾರಣಿಗೆ ಗೊತ್ತಿದೆ. ಮೋದಿ ಈಗ ಆ ಧಾಟಿಯಲ್ಲಿ ಮಾತನಾಡಿದ್ದಾರೆ ಎಂದರು. ಮೋದಿ ಪ್ರಧಾನಿಯಾಗುವ ಕಾಲಕ್ಕೆ ನಾನು ಬದುಕಿರಲಾರೆ ಎಂದು ಸಾಹಿತಿ ಯು.ಆರ್‌. ಅನಂತಮೂರ್ತಿ ನೀಡಿರುವ ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ಇದು ಅಪ್ರಸ್ತುತ ಹೇಳಿಕೆ. ಒಂದು ವೇಳೆ ಮೋದಿ ಪ್ರಧಾನಿಯಾದರೂ ದೇಶದ ಜಾತ್ಯತೀತ ವ್ಯವಸ್ಥೆಯನ್ನು ನಾಶ ಮಾಡಲು ಅವರಿಂದ ಸಾಧ್ಯ ಇಲ್ಲ. ಅನಂತಮೂರ್ತಿ ಅವರಲ್ಲಿ ಇಂಥ ಭಾವನೆ ಬರಬೇಕಾಗಿರಲಿಲ್ಲ. ಅವರು ನೋವಿನಿಂದ ಆ ಮಾತು ಹೇಳಿರಬಹುದು ಎಂದರು.

‘ತೆಂಗು ಬೆಳೆ ಹಾನಿ: ವರದಿ ಸರಿಯಿಲ್ಲ’
‘ರಾಜ್ಯದಲ್ಲಿ ತೆಂಗು ಬೆಳೆ ಹಾನಿಯ ಬಗ್ಗೆ ಸಂಪುಟ ಉಪಸಮಿತಿ ನೀಡಿದ ವರದಿ ಸರಿಯಾಗಿಲ್ಲ. ಮೂವರು ಸದಸ್ಯರ ಈ ಸಮಿತಿ ಎಲ್ಲ ಗ್ರಾಮಗಳಿಗೆ ಹೋಗಿ ನಷ್ಟದ ಅಂದಾಜು ಮಾಡಿಲ್ಲ. ಕೆಲವೇ ಕಡೆ ಭೇಟಿ ನೀಡಿ ಕೇವಲ 380 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ವರದಿ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸಚಿವ ಶರತ್ ಪವಾರ್‌ ಅವರಿಗೆ ರೈತರ ಸ್ಥಿತಿಯ ಬಗ್ಗೆ ನಾನು ಪತ್ರ ಬರೆದಿದ್ದೆ. ಅದಕ್ಕೆ 48 ಗಂಟೆಯೊಳಗೆ ಸ್ಪಂದಿಸಿದ್ದ ಅವರು ಕೇಂದ್ರದ ತಂಡವೊಂದನ್ನು ಕಳುಹಿಸಿ ಅಧ್ಯಯನ ಮಾಡಿದ್ದಾರೆ. ಈ ಸಮಿತಿ ರಾಜ್ಯದಲ್ಲಿ 1980 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಿದೆ. ಶನಿವಾರ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ ನಡೆಸಿ ಈ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ’ ಎಂದರು.

‘ರಾಜ್ಯದಲ್ಲಿ ಕೆಲವೆಡೆ ಅತಿವೃಷ್ಟಿ, ಕೆಲವೆಡೆ ಅನಾವೃಷ್ಟಿಯಿಂದ ರೈತರಿಗೆ ಸಮಸ್ಯೆಯಾಗಿದೆ. ಜಿಲ್ಲೆಯಲ್ಲೂ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆ ಮಳೆಯ ಕೊರತೆಯಿಂದ ಬಿತ್ತನೆಯೂ ಆಗಿಲ್ಲ. ಮುಖ್ಯಮಂತ್ರಿಯಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಈ ಬಗ್ಗೆ ಸಕಾಲದಲ್ಲಿ ಮಾಹಿತಿ ತರಿಸಿ ಕೇಂದ್ರಕ್ಕೆ ಕಳುಹಿಸಿದ್ದಾರೆಯೇ ಎಂಬುದನ್ನು ಜನರಿಗೆ ತಿಳಿಸಬೇಕು ಎಂದರು.

ಕೊಬ್ಬರಿ ಖರೀದಿ ದಿನಾಂಕ ವಿಸ್ತರಣೆ
‘ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ಜಿಲ್ಲೆಯ ವಿವಿಧೆಡೆ ಆರಂಭಿಸಿದ ನ್ಯಾಫೆಡ್‌ ಕೇಂದ್ರ ಸೋಮವಾರ ಖರೀದಿಯನ್ನು ಸ್ಥಗೊತಗೊಳಿಸಬೇಕಾಗಿತ್ತು.
 ಆದರೆ, ರೈತರಿಗೆ ಇನ್ನೂ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಖರೀದಿಯನ್ನು ಎರಡು ವಾರ ವಿಸ್ತರಿಸುವಂತೆ ನಾನು ಪವಾರ್‌ ಅವರಿಗೆ ಇ–ಮೇಲ್‌ ಮೂಲಕ ಪತ್ರ ರವಾನಿಸಿದ್ದೆ. ಇದಕ್ಕೆ ಸ್ಪಂದಿಸಿದ ಪವಾರ್‌ ಇನ್ನೂ ಎರಡು ವಾರಗಳ ಕಾಲ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮುಂದುವರಿಸುವಂತೆ ಸೂಚಿಸಿದ್ದಾರೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು’ ಎಂದರು.

ಮೂರು ವಾರದಲ್ಲಿ ಘಟಕ ಪುನಾರಚನೆ
ಜೆಡಿಎಸ್‌ ರಾಜ್ಯ ಘಟಕದ ನೂತನ ಅಧ್ಯಕ್ಷರ ಆಯ್ಕೆ ಮುಗಿದಿದ್ದು, ಇನ್ನು ಮೂರು ವಾರದೊಳಗೆ ಎಲ್ಲ ಜಿಲ್ಲಾ ಘಟಕಗಳಿಗೂ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಇದರ ಜತೆಗೆ ಮಹಿಳಾ ಘಟಕ, ಯುವ ಘಟಕ ಸೇರಿದಂತೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಘಟಕಗಳನ್ನೂ ಚುರುಕುಗೊಳಿಸಲಾಗುವುದು ಎಂದರು.

ಶಾಸಕರಾದ ಎಚ್‌.ಎಸ್‌. ಪ್ರಕಾಶ್‌, ಸಿ.ಎನ್‌. ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಪಟೇಲ್‌ ಶಿವರಾಮ್‌, ಮಾಜಿ ಶಾಸಕ ಬಿ.ವಿ. ಕರೀಗೌಡ, ಕೆ.ಎಂ. ರಾಜೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಜಾವಗಲ್‌ ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT