ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ರಾಜ್ಯದ `ಅನಾಥರು'

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ದಾಹೋದ್ (ಗುಜರಾತ್): ಅಮಾವಾಸ್ಯೆ ಕತ್ತಲು, ಜೀರುಂಡೆ `ಕಲರವ'ವನ್ನು ಬಿಟ್ಟರೆ ಮಿಕ್ಕಂತೆ ನೀರವ ಮೌನ. ದೂರದಲ್ಲೆಲ್ಲೋ ಬೆಂಕಿಯ ಬೆಳಕು. ಹತ್ತಿರವಾಗುತ್ತಿದ್ದಂತೆ ಹುಲ್ಲಿನ ಜೋಪಡಿಗಳು. ಚಳಿ ಕಾಯಲು ಹಾಕಿದ ಬೆಂಕಿ. ಸುತ್ತಲೂ ಕೂತು ಹಸುಗೂಸುಗಳಿಗೆ ಹಾಲುಣಿಸುವ ಮಹಿಳೆಯರು. ಗೂರಲಿನಿಂದ ಗುಸುಗುಟ್ಟುವ ಹಿರಿಯ ಜೀವ. ಮಾಸಿದ ಬಟ್ಟೆಗಳು, ಎಣ್ಣೆ- ಬಾಚಣಿಗೆ ಕಾಣದ ತಲೆಗೂದಲು. ಗೊಣ್ಣೆ ಸುರಿಸುವ ಚೊಣ್ಣವಿಲ್ಲದ ಚಿಣ್ಣರು...

`ವಿಕಾಸ ಪುರುಷ ಮುಖ್ಯಮಂತ್ರಿ' ನರೇಂದ್ರ ಮೋದಿಯವರ ಮಾದರಿ ರಾಜ್ಯದಲ್ಲಿನ `ಕಾಡಿನ ಮಕ್ಕಳ' (ಆದಿವಾಸಿಗಳು) ನಿರ್ಗತಿಕ ಬದುಕಿದು. ಅಭಿವೃದ್ಧಿಯಲ್ಲಿ ದೇಶದ `ನಂಬರ್ ಒನ್ ರಾಜ್ಯ'ವೆಂದು ಹೇಳಿಕೊಳ್ಳುವ ಗುಜರಾತಿನಲ್ಲಿ ಆದಿವಾಸಿಗಳು ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದಾರೆ. ಇದು ಉತ್ಪ್ರೇಕ್ಷೆಯ ಮಾತಲ್ಲ. ಕೇಳುವವರಿಲ್ಲದೆ `ಅನಾಥ'ವಾಗಿರುವ ಆದಿವಾಸಿಗಳ ಹಾಡಿಗಳಿಗೊಮ್ಮೆ ಇಣಕು ಹಾಕಿದರೆ ನಗ್ನ ಸತ್ಯ ಅನಾವರಣಗೊಳ್ಳುತ್ತದೆ.

ಪಾರ್ಗಿ ಛತ್ರಭಾಯ್,  ಆದಿವಾಸಿ ಹಾಡಿಯ ಹಿರಿಯ ಮನುಷ್ಯ. ಸುಮಾರು 75 ವರ್ಷ. 20 ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ಹೊಟ್ಟೆಯೊಳಗಿನ `ಅಲ್ಸರ್ ಹುಣ್ಣು'  ಕ್ಯಾನ್ಸರ್ ಆಗಿ ಪರಿವರ್ತನೆ ಆಗಿದೆ. ಗೂರಲು ಬೆನ್ನುಬಿಡದೆ ಕಾಡುತ್ತಿದೆ. ಚಿಕಿತ್ಸೆಗೆ 60 ಕಿ.ಮೀ. ದೂರದ ಗೋದ್ರಾಕ್ಕೆ ಹೋಗಿಬರಬೇಕು.

ಆಸ್ಪತ್ರೆಗೆ ಕರೆದೊಯ್ಯಲು ಗಂಡು ಮಕ್ಕಳಿಲ್ಲ. ಅಂಗವಿಕಲ ಮಗಳು ನಾಲ್ಕು ಮಕ್ಕಳ ತಾಯಿ. ಗಂಡ ಬಿಟ್ಟಿದ್ದಾನೆ. ಅಂಗವಿಕಲರ ಪಿಂಚಣಿಯೂ ಬರುವುದಿಲ್ಲ. ಮಹಿಳೆಯ ನಾಲ್ವರು ಮಕ್ಕಳಲ್ಲಿ ಒಂದು ಮಗು ಮಾತ್ರ ದೂರದ ಸರ್ಕಾರಿ ಶಾಲೆಗೆ ಹೋಗುತ್ತಿದೆ. ಉಳಿದವರು ಮನೆಯಲ್ಲೇ ಕಾಲ ಕಳೆಯುತ್ತಾರೆ.

ಕಿತ್ತು ತಿನ್ನುವ ಬಡತನ. ಪಡಿತರ ಕಾರ್ಡ್ ಇದೆ. ಅದರಲ್ಲಿ ಸಿಗುವುದು ಐದು ಕಿಲೊ ಗೋಧಿ, ಮೂರು ಲೀಟರ್ ಚಿಮಣಿ ಎಣ್ಣೆ, 2 ಕಿಲೊ ಅಕ್ಕಿ ಹಾಗೂ 2 ಕಿಲೊ ಸಕ್ಕರೆ. ಒಟ್ಟು 145 ರೂಪಾಯಿ ಕೊಡಬೇಕು. ಒಂದು ಎಕರೆ ಬರಡು ಜಮೀನಿದೆ. ಅಲ್ಪಸ್ವಲ್ಪ ಕಾಳುಕಡಿ ಬೆಳೆಯಲೂ ಮಳೆ ಇಲ್ಲ. ಕುಡಿಯುವುದಕ್ಕೇ ನೀರಿಲ್ಲ; ಜಮೀನಿಗೆ ಎಲ್ಲಿಂದ ಬರಬೇಕು.

ಕಿ.ಮೀ ದೂರದ ಮತ್ತೊಂದು ಜೋಪಡಿಯಲ್ಲಿ ವಿಧವೆ ಮಹಿಳೆ ಇದ್ದಾರೆ. ಮಸೂರಿ ಬೆನ್ ಎಂಬ ಈಕೆಯ ಗಂಡ ಬರ್ಜಿ ಭಾಯ್ ತೀರಿಕೊಂಡು ಎಂಟು ವರ್ಷವಾಗಿದೆ. ವಿಧವಾ ವೇತನವೂ ಇಲ್ಲ. ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಕೂಲಿ ಸಿಗುವುದೇ ಕಷ್ಟ. ದಾಹೋದ್ ಜಿಲ್ಲೆಯ ಜಾಲೋದ್ ತಾಲೂಕಿನ `ರಜಾಯತ' ಹಾಡಿಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ.

ಪ್ರತಿ ಹಾಡಿಯ ಪ್ರತಿ ಜೋಪಡಿಯಲ್ಲೂ ಕರುಳು ಹಿಂಡುವ ಒಂದೊಂದು ಕರುಣಾಜನಕ ಕಥೆ ಇದೆ. ಕಿತ್ತು ತಿನ್ನುವ ದಾರಿದ್ರ್ಯ- ಬಡತನವಿದೆ. ಕಾಡು- ಮೇಡುಗಳ ನಡುವೆ ಬದುಕು ಕಟ್ಟಿಕೊಳ್ಳಲು ಪರದಾಡುವ ಆದಿವಾಸಿಗಳು ಕುರಿ, ಮೇಕೆ, ದನಗಳನ್ನು ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ.

ಕೂಲಿನಾಲಿ ಮಾಡಿದರೂ ದಿನಾ ನೂರು ರೂಪಾಯಿ ಸಿಗುವುದಿಲ್ಲ. ವರ್ಷಕ್ಕೆ ಮೂರು ತಿಂಗಳು ನಿಶ್ಚಿತವಾಗಿ ಉದ್ಯೋಗ ಕೊಡುವ `ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ' ಬಹುತೇಕ ಕಡೆ ಜಾರಿಯಾದಂತೆ ಕಾಣುವುದಿಲ್ಲ. ಕೇಂದ್ರ ಸರ್ಕಾರದ ಈ ಯೋಜನೆ ಜಾರಿಯಾದರೆ ಕನಿಷ್ಠ ದಿನಕ್ಕೆ 150 ರೂಪಾಯಿ ಸಿಗುತ್ತದೆ.

ಈ ಭಾಗದ ಆದಿವಾಸಿಗಳು ಸೌರಾಷ್ಟ್ರದ ಪಟೇಲರ ಜಮೀನಿಗೆ ಕೂಲಿ ಮಾಡಲು ಪ್ರತಿ ವರ್ಷ ವಲಸೆ ಹೋಗುತ್ತಾರೆ.`ಹಾಡಿಗಳ ಸಮೀಪ ಶಾಲೆಗಳು ಇಲ್ಲದೇ ಇರುವುದರಿಂದ ಮಕ್ಕಳಿಗೆ ವಿದ್ಯೆ ಮರೀಚಿಕೆ. ಹತ್ತಿರದಲ್ಲಿ ಆಸ್ಪತ್ರೆಗಳಿಲ್ಲ. ತೋರಿಕೆಗೆಂಬಂತೆ ಎಲ್ಲೋ ಅಪರೂಪಕ್ಕೊಂದು ಜೋಪಡಿಗೆ ದೀಪಗಳಿವೆ.

ಪ್ರತಿ ದೀಪಕ್ಕೆ ತಿಂಗಳಿಗೆ 30 ರೂಪಾಯಿ  ಕೊಡಬೇಕು. ಕಾಸು ಕೊಡಲಾಗದವರು ಚಿಮಣಿ ಬುಡ್ಡಿಗಳಲ್ಲಿ ಕತ್ತಲು ಕಳೆಯುತ್ತಾರೆ. `ನಮಗೆ ಪಕ್ಕಾ ಮನೆಗಳಿಲ್ಲ. ಕೇಂದ್ರ ಸರ್ಕಾರ ಆದಿವಾಸಿಗಳಿಗಾಗಿ ಬೇಕಾದಷ್ಟು ಯೋಜನೆಗಳನ್ನು ರೂಪಿಸಿದೆ. ರಾಜ್ಯದಲ್ಲಿ ಯಾವುದೂ ಜಾರಿಯಾಗಿಲ್ಲ.

ನಮ್ಮ ಮಕ್ಕಳಿಗೆ ನೌಕರಿ ಸಿಗುವುದಿಲ್ಲ. ರಾಜ್ಯದಲ್ಲಿ ಕೆಲವು ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಮೋದಿ ಬರೀ ಹೇಳಿಕೊಳ್ಳುತ್ತಿದ್ದಾರೆ. ಕೆಲಸ ಆಗಿಲ್ಲ. ನಮ್ಮ ಜನ ಮುಗ್ಧರು. ಅವರಿಗೆ ಏನೂ ಅರ್ಥವಾಗುವುದಿಲ್ಲ. ಎಲ್ಲವನ್ನು ನಂಬಿ ಬಿಡುವ ಸ್ವಭಾವದವರು' ಎಂದು ಪದವಿ ಅಪೂರ್ಣಗೊಳಿಸಿ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಶಂಕರಭಾಯ್, ಆದಿವಾಸಿಗಳ ಬದುಕು ಬಿಚ್ಚಿಡುತ್ತಾರೆ.

`ವಿಧಾನಸಭೆ ಚುನಾವಣೆ ಬಿಸಿ ಆದಿವಾಸಿಗಳ ಹಾಡಿಗಳಿಗೂ ತಟ್ಟಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಬಂದು ಬಾಗಿಲು ಬಡಿಯುತ್ತಿದ್ದಾರೆ. ಬಣ್ಣದ ಮಾತು ಆಡಿ ಕೈ ಮುಗಿಯುತ್ತಿದ್ದಾರೆ. ಚುನಾವಣೆ ಹಿಂದಿನ ದಿನ ನೂರೋ, ಇನ್ನೂರೋ ಕೈಗೆ ತುರುಕಿ ಮತಗಳನ್ನು ಖರೀದಿ ಮಾಡುತ್ತಾರೆ. ಮತದಾನದ ದಿನ ಟ್ರ್ಯಾಕ್ಟರ್‌ಗಳಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಾರೆ. ಇದು ನಮ್ಮ ಜನರ ದಯನೀಯ ಸ್ಥಿತಿ' ಎಂಬುದು ಶಂಕರಭಾಯ್ ವಿಷಾದ.

ಗುಜರಾತಿನ ಸಬರಕಾಂತ, ವಡೋದರ, ಪಂಚಮಹಲ್, ದಾಹೋದ್, ನರ್ಮದಾ, ಸೂರತ್, ವಲ್ಸದ್, ನವಸಾರಿ, ಭರೂಚ್ ಹಾಗೂ ಡಂಗ್ಸ್ ಜಿಲ್ಲೆಗಳ 32 ತಾಲೂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಆದಿವಾಸಿ ಜನರಿದ್ದಾರೆ. ಒಟ್ಟಾರೆ ಜನಸಂಖ್ಯೆಯಲ್ಲಿ ಆದಿವಾಸಿಗಳ ಪಾಲು ಶೇ 20ಕ್ಕೂ ಹೆಚ್ಚು. ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಈ ತಾಲೂಕುಗಳನ್ನು `ಆದಿವಾಸಿ ತಾಲೂಕು'ಗಳೆಂದು ಪರಿಗಣಿಸಿದ್ದರೂ ಕಾಡಿನ ಮಕ್ಕಳ ಬದುಕು ಬದಲಾವಣೆ ಆಗಿಲ್ಲ. ಬದಲಿಗೆ ಬುಡಕಟ್ಟು ಜನರ ಉಪ ಸಂಸ್ಕೃತಿ ಕಣ್ಮರೆಯಾಗುತ್ತಿದೆ.

`ಹಿರಿಯಣ್ಣ'ನಂತೆ ನಡೆದುಕೊಳ್ಳುತ್ತಿರುವ `ಗುಜರಾತಿ ಸಂಸ್ಕೃತಿ' ಅವರ ಬದುಕನ್ನು ಆವರಿಸುತ್ತಿದೆ. ಆದಿವಾಸಿಗಳಿಗೆ ಅವರದೇ ಭಾಷೆ ಇಲ್ಲ. ಶಾಲೆಗಳಲ್ಲಿ ಗುಜರಾತಿ ಭಾಷೆಯಲ್ಲೇ ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಧರ್ಮದ ಗಂಧ ಗಾಳಿಯ ಅರಿವಿಲ್ಲದ ಆದಿವಾಸಿಗಳನ್ನು ಜನಗಣತಿ ಸಂದರ್ಭದಲ್ಲಿ `ಹಿಂದು' ಎಂದು ದಾಖಲಿಸಲಾಗುತ್ತಿದೆ. ಶಾಲೆಗಳಲ್ಲಿ,  ಸರ್ಕಾರಿ ದಾಖಲೆಗಳಲ್ಲೂ ಅದನ್ನೇ ಬರೆಯಲಾಗುತ್ತಿದೆ. ಕ್ರೈಸ್ತ ಮಿಷನರಿಗಳು ಹಾಡಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರದ ಮಕ್ಕಳಾದ ಆದಿವಾಸಿ ಜನ ಹಿಂದು ಮತ್ತು ಕ್ರೈಸ್ತ ಮತದ ನಡುವೆ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ.

ಗುಜರಾತಿನಲ್ಲಿ ಮೊದಲಿಗೆ `ಕೈ' ಹಿಡಿತದಲ್ಲಿದ್ದ ಆದಿವಾಸಿಗಳು ರಾಮಜನ್ಮಭೂಮಿ ಹೋರಾಟ- ಗೋದ್ರಾ `ಹತ್ಯಾಕಾಂಡ'ದ ಬಳಿಕ ಬಿಜೆಪಿ ಕಡೆಗೂ ವಾಲಿದ್ದಾರೆ. ಕಾಂಗ್ರೆಸಿನ `ಕ್ಷತ್ರಿಯ- ಹರಿಜನ- ಆದಿವಾಸಿ ಮತ್ತು ಮುಸ್ಲಿಂ' (ಖಾಂ) ಸಮೀಕರಣ ಸೂತ್ರ ಸೋತಿದೆ. ಆದಿವಾಸಿ ಹಾಡಿಗಳಿಗೆ ಹೊಸದಾಗಿ `ಗುಜರಾತ್ ಪರಿವರ್ತನಾ ಪಕ್ಷ'ವೂ ಪ್ರವೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT