ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಮರ್ಥನೆಗೆ ನಿಂತ ರಾಜ್‌ನಾಥ್

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್/ಪಿಟಿಐ): `ಬಿಜೆಪಿ ಜಾತ್ಯತೀತ ನಿಲುವಿಗೆ ಬದ್ಧವಾಗಿರುವ ಪಕ್ಷ. ಕೋಮುವಾದ ಮಾಡುವವರು ಪಕ್ಷದಲ್ಲಿ ಹೆಚ್ಚುದಿನ ಉಳಿಯಲಾರರು. 2002ರ ಗಲಭೆಗೆ ಗುಜರಾತ್ ಮುಖ್ಯಮಂತ್ರಿ ಖಂಡಿತವಾಗಿಯೂ ಹೊಣೆಗಾರರಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ರಾಜ್‌ನಾಥ್ ಸಿಂಗ್, ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. 

`ಯಾವುದೇ ಮುಖ್ಯಮಂತ್ರಿಯು ರಾಜ್ಯದಲ್ಲಿ ಗಲಭೆ ಇಲ್ಲವೆ ಕಾನೂನು ಸುವ್ಯವಸ್ಥೆಗೆ ಭಂಗವಾಗುವುದನ್ನು ಬಯಸುವುದಿಲ್ಲ. ಆದ್ದರಿಂದ ಅವರು (ಮೋದಿ) ಶಾಂತಿ, ಸಾಮರಸ್ಯ ಕದಡುವುದಕ್ಕೆ ಪ್ರಚೋದನೆ ನೀಡಿದ್ದರು ಎನ್ನುವುದನ್ನು ನಾನು ನಂಬುವುದಿಲ್ಲ' ಸುದ್ದಿಗಾರರಿಗೆ ತಿಳಿಸಿದ್ದಾರೆ.

`ಮೋದಿ ಅವರನ್ನು ಪಕ್ಷದ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿರುವುದರ ಹಿಂದೆ ಅವರಿಗೆ ದೇಶವನ್ನು ಮುನ್ನಡೆಸುವ ನಾಯಕನ ಸ್ಥಾನ ನೀಡುವ ಇರಾದೆ ಇದೆಯೇ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಮುಂಚೂಣಿಯ ನಾಯಕತ್ವ ನೀಡಿರೆಂದು ಮೋದಿ ಅವರು ಎಂದೂ ನನ್ನನ್ನು ಕೇಳಿಲ್ಲ. ಪ್ರಧಾನಿಯನ್ನಾಗಿ ಮಾಡಿ ಎಂದೂ ಬೇಡಿಕೆ ಇಟ್ಟವರಲ್ಲ. ಪ್ರಧಾನಿ ಸ್ಥಾನದ ಅಭ್ಯರ್ಥಿಯನ್ನು ಪಕ್ಷದ ಸಂಸದೀಯ ಮಂಡಳಿಯು ಸೂಕ್ತ ಸಮಯದಲ್ಲಿ ಆಯ್ಕೆ ಮಾಡಲಿದೆ' ಎಂದಿದ್ದಾರೆ.

`ಮೋದಿ ಪಕ್ಷದ ಹಿರಿಯ ನಾಯಕ ಮತ್ತು ಸದ್ಯ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಯಾಗಿರುವವರು. ಆದ್ದರಿಂದ ಅವರನ್ನು ಪಕ್ಷದ ಸಂಸದೀಯ ಮಂಡಳಿಗೆ ನೇಮಕ ಮಾಡಲಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಆರೋಪ: ನರೇಂದ್ರ ಮೋದಿ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ. ಗುಜರಾತ್ ಅಭಿವೃದ್ಧಿಗೆ ಮಾದರಿ ಎಂಬುದು ಪ್ರಚಾರದ ಬೂಟಾಟಿಕೆಯೇ ಹೊರತು ವಾಸ್ತವ ಅಲ್ಲ ಎಂದು ಗುಜರಾತ್ ವಿಧಾನಸಭೆ ಕಾಂಗ್ರೆಸ್ ನಾಯಕ ಶಂಕರ್‌ಸಿಂಗ್ ವಘೇಲಾ ಆರೋಪಿಸಿದ್ದಾರೆ.

`ಮೋದಿ ಅವರು ಅಭಿವೃದ್ಧಿ ಎಂದು ಮಾಡುತ್ತಿರುವ ಪ್ರಚಾರ ಒಂದು ಕಥೆ ಮತ್ತು ಸೃಜನಾತ್ಮಕ ಬರವಣಿಗೆಯ ಸರಕಷ್ಟೆ. ಕುಡಿಯುವ ನೀರಿನ ಸಮಸ್ಯೆಗಮನಿಸಿದರೆ ಸಾಕು ರಾಜ್ಯದ ಅಭಿವೃದ್ಧಿ ವಾಸ್ತವಗಳು ಗೊತ್ತಾಗುತ್ತದೆ' ಎಂದೂ ಹೇಳಿದ್ದಾರೆ.

ಶಿವಸೇನೆ ಎಚ್ಚರಿಕೆ (ಮುಂಬೈ ವರದಿ): ಎನ್‌ಡಿಎ ಅಂಗ ಪಕ್ಷಗಳನ್ನು ಅರ್ಜುನನ ರಥದ ಕುದುರೆಗಳಿಗೆ ಹೋಲಿಸಿರುವ ಶಿವಸೇನೆ, ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಬಿಜೆಪಿ ತನ್ನ ಮೈತ್ರಿ ಪಕ್ಷಗಳನ್ನು ಕಡೆಗಣಿಸಿದರೆ ಮತ್ತೊಂದು `ಮಹಾಭಾರತ' ನಡೆಯಲಿದೆ ಎಂದು ಎಚ್ಚರಿಸಿದೆ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ವಿಚಾರ ಕುರಿತಂತೆ ಬಿಜೆಪಿ ಮತ್ತು ಜೆಡಿಯು ನಡುವಿನ ಅಂತರ ಹೆಚ್ಚಾಗುತ್ತಿರುವ ನಡುವೆಯೇ, `ಗೊಂದಲ' ಪರಿಹರಿಸುವ ನಿಟ್ಟಿನಲ್ಲಿ ಎನ್‌ಡಿಎ ಪಕ್ಷಗಳ ಸಭೆ ಕರೆಯಬೇಕು ಎಂದೂ ಹೇಳಿದೆ. 

`ಪ್ರಧಾನಿ ಅಭ್ಯರ್ಥಿ ಹೆಸರನ್ನು ಸೂಚಿಸುವ ಹಕ್ಕು ಬಿಜೆಪಿಗೆ ಇದೆ. ಆದರೆ ಎನ್‌ಡಿಎ ವಿಚಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಇದು (ಎನ್‌ಡಿಎ) ಅರ್ಜುನನ ರಥ, ಹಲವು ಅಶ್ವಗಳಿವೆ (ಮಿತ್ರ ಪಕ್ಷಗಳು). ಪ್ರತಿ ಕುದುರೆಯೂ ಮುಖ್ಯ. ಹಾಗಾಗದೇ ಹೋದರೆ, ಭಿನ್ನವಾದ ಮಹಾಭಾರತ ನಡೆಯಲಿದೆ  ಎಂದು `ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದಿದೆ.

ಮೈತ್ರಿ ಮುರಿಯಲು ಬಯಸೆವು- ಬಿಜೆಪಿ
ನವದೆಹಲಿ (ಪಿಟಿಐ/ಐಎಎನ್‌ಎಸ್): ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ದೂಷಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿಷಯದಲ್ಲಿ ಬಿಜೆಪಿ ತೆಪ್ಪಗಿರಲು ಬಯಸಿದಂತೆ ತೋರುತ್ತಿದೆ. ಹಾಗೆಯೇ ಜೆಡಿಯು ಜೊತೆಗಿನ ಮೈತ್ರಿ ಗಟ್ಟಿಯಾಗಿರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

ಎನ್‌ಡಿಎ ಮೈತ್ರಿ ಕೂಟದಲ್ಲಿರುವ ಯಾವುದೇ ಪಕ್ಷದ ಮೈತ್ರಿ ಮುರಿದುಕೊಳ್ಳುವುದಕ್ಕೆ ಬಿಜೆಪಿ ಬಯಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಬುಧವಾರ ಸ್ಪಷ್ಟಪಡಿಸಿದ್ದಾರೆ.

`ಬಿಹಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ದುರದೃಷ್ಟಕರ. ನಾವು ಮಿತ್ರ ಪಕ್ಷಗಳ ಸಖ್ಯ ತೊರೆಯಲು ಬಯಸುವುದಿಲ್ಲ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತೊಂದೆಡೆ ಪಕ್ಷದ ವಕ್ತಾರ ಷಾನವಾಜ್ ಹುಸೇನ್, ಗೋಧ್ರಾ ರೈಲು ದುರಂತ ದುರದೃಷ್ಟಕರ ಘಟನೆ. ಇದನ್ನು ಮತ್ತೆ ಮತ್ತೆ ಕೆದಕುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಬಗ್ಗೆ ಈಗಾಗಲೇ ಹಲವಾರು ಚರ್ಚೆಗಳು ನಡೆದಿವೆ ಎಂದಿದ್ದಾರೆ.

`ಗೋಧ್ರಾ ರೈಲು ಅಗ್ನಿ ಅನಾಹುತದ ಘಟನೆ ಬಗ್ಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪ್ರಸ್ತಾಪಿಸಿ ದಕ್ಕೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದನ್ನು ಮಾಧ್ಯಮ, ಗುಜರಾತ್ ಮುಖ್ಯಮಂತ್ರಿ ವಿರುದ್ಧ ನಿತೀಶ್ ದಾಳಿ ನಡೆಸಿದ್ದಾರೆ ಎಂದು ಬಿಂಬಿಸಿದೆ ಅಷ್ಟೆ' ಎಂದು ಹುಸೇನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT