ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ರಾಹುಲ್‌ ಸರಿಸಮರಲ್ಲ

ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್ಸಿಗರಿಗೆ ಜೇಟ್ಲಿ ಸವಾಲು
Last Updated 14 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಅವ­ರನ್ನು ಟೀಕಿಸಿರುವ ಬಿಜೆಪಿ, ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಮುಂದೆ ಆ ಪಕ್ಷದ ನಾಯಕತ್ವ ಮುಗ್ಗರಿಸಿತು ಎಂದು ಕಾಂಗ್ರೆಸಿಗರು ಒಪ್ಪಿಕೊಳ್ಳುವ ಧೈರ್ಯ ತೋರುವರೇ ಎಂದು ಸವಾಲು ಹಾಕಿದೆ.

‘ಕಾಂಗ್ರೆಸ್‌ನ ಅಘೋಷಿತ ಪ್ರಧಾನಿ ಅಭ್ಯರ್ಥಿ ರಾಹುಲ್‌ ಗಾಂಧಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸರಿಸಮನಾದ ನಾಯ­ಕರಲ್ಲ ಎನ್ನುವುದನ್ನು  ಪ್ರಾಮಾಣಿಕ­ವಾಗಿ ಒಪ್ಪಿಕೊಳ್ಳುವ ಸಾಮರ್ಥ್ಯ ಕಾಂಗ್ರೆಸಿಗರಿಗೆ ಇದೆಯೇ’ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಅವರು ತಮ್ಮ ‘ಬ್ಲಾಗ್‌’ನಲ್ಲಿ ಬರೆದಿದ್ದಾರೆ.

‘ವಂಶಪಾರಂಪರ್ಯ ಆಡಳಿತದ ಕಾಂಗ್ರೆಸ್‌ನಲ್ಲಿ ಒಂದು ಕುಟುಂಬದಿಂದ ತಪ್ಪೇ ಆಗುವುದಿಲ್ಲ ಎಂಬ ಬಲವಾದ ನಂಬಿಕೆ ಇದೆ. ಗಾಂಧಿ ಕುಟುಂಬದವರು ಅಪ್ಪಿತಪ್ಪಿಯೂ ತಪ್ಪು ಮಾಡುವವರಲ್ಲ. ಒಂದು ವೇಳೆ ಪ್ರಮಾದಗಳಾದರೆ ಅದಕ್ಕೆ  ಕಾರಣ ಆ ಕುಟುಂಬದವರಿಗೆ ಯಾರೋ ದಾರಿ ತಪ್ಪಿಸುವಂತಹ ಸಲಹೆ ನೀಡಿರ­ಬೇಕು ಅಥವಾ ವೈಫಲ್ಯಕ್ಕೆ ಮತ್ತ್ಯಾರೋ ಹೊಣೆಗಾರರು ಇರು­ತ್ತಾರೆ’ ಎಂದು ಜೇಟ್ಲಿ ಲೇವಡಿ ಮಾಡಿದ್ದಾರೆ.

‘ಕಾಂಗ್ರೆಸ್‌ ತನ್ನ ತಪ್ಪುಗಳನ್ನು ತಿದ್ದಿ­ಕೊಳ್ಳದೆ ಅದನ್ನು ಸಮರ್ಥಿಸಿಕೊ­ಳ್ಳು­ತ್ತಲೇ ಬಂದಿದ್ದರಿಂದ ಈ ಚುನಾವಣೆ­ಯಲ್ಲಿ ತಕ್ಕ ಬೆಲೆ ತೆರಬೇಕಾಗಿದೆ’ ಎಂದು ಅವರು ಮತಗಟ್ಟೆ ಸಮೀಪ ಸಮೀಕ್ಷೆ­ಗಳ ಅಂಕಿಅಂಶಗಳನ್ನು ಉಲ್ಲೇ­ಖಿಸಿ ಹೇಳಿದ್ದಾರೆ.

‘ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಬಗ್ಗೆ ನನ್ನ ಅನಿಸಿಕೆಯನ್ನು ಸಚಿವ ಸಲ್ಮಾನ್‌ ಖುರ್ಷಿದ್‌ ಅವರು ಟೀಕಿಸಿರು­ವುದು ಬೇಸರ ತಂದಿದೆ. ಸಿಂಗ್‌ ಅವರು ಪ್ರಧಾನಿ ಕಚೇರಿಯಿಂದ ನಿರ್ಗಮಿಸುತ್ತಿ­ರುವ ಹೊತ್ತಿನಲ್ಲಿ ಒರಟುತನದ ಇಂತಹ ಟೀಕೆ ಬೇಕಿರಲಿಲ್ಲ. ಹಾಗೆಯೇ ಸೇನಾ ಮುಖ್ಯಸ್ಥರ ನೇಮಕ ಕುರಿತ ನನ್ನ ಅಭಿಪ್ರಾಯಕ್ಕೆ ಸಚಿವ ಆನಂದ ಶರ್ಮಾ ಅವರು ಮಾಡಿರುವ ಟೀಕೆ ಗರ್ವದಿಂದ ಕೂಡಿದೆ’ ಎಂದಿದ್ದಾರೆ.

‘ಆನಂದ ಶರ್ಮಾ ಸುದ್ದಿ ವಾಹಿನಿಗಳಲ್ಲಿ ಸಂವಾದಕ್ಕೆ ಬಂದಾಗ­ಲೆಲ್ಲಾ ಹಿಂದಿನ ಸಲಕ್ಕಿಂತಲೂ ಆಕ್ರೋಶ ಭರಿತರಾಗಿರುತ್ತಾರೆ. ತಾವು ಹುಟ್ಟಿರುವುದೇ ಆಡಳಿತ ನಡೆಸಲು ಎಂಬ ಧೋರಣೆ ಅವರಲ್ಲಿ ಮನೆಮಾಡಿದಂತಿದೆ ಮತ್ತು ಯಾರೋ ತಮ್ಮ ಈ ಹಕ್ಕನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದಾರೆ ಎಂಬ ಕೋಪವು ಅವರಲ್ಲಿ ಎದ್ದು ಕಾಣುತ್ತದೆ’ ಎಂದು ಜೇಟ್ಲಿ ಹೇಳಿದ್ದಾರೆ.

ಪ್ರಧಾನಿ ಸಿಂಗ್‌ ಪ್ರಾಮಾಣಿಕರು ಆದರೆ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ, 2ಜಿ ತರಂಗಾಂತರ ಹಂಚಿಕೆ ಹಗರಣಗಳ ವಿಷಯಗಳಲ್ಲಿ ಸಿಂಗ್‌ ದೃಢ ನಿರ್ಧಾರ ಕೈಗೊಂಡಿದ್ದರೇ ಇತಿಹಾಸದಲ್ಲಿ ಅವರು ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದರು ಎಂದು ಅರುಣ್‌ ಜೇಟ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT