ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಸವಾಲು, ಬಿಜೆಪಿಗೆ ಪಣ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದೇಶದ ಪ್ರಧಾನ ಪ್ರತಿಪಕ್ಷ ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರು ಏಣಿಯ ತುದಿಗೆ  ಏರಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ ಎಲ್‌.ಕೆ. ಅಡ್ವಾಣಿ ಅವರ ವಿರೋಧ ಲೆಕ್ಕಿಸದೆ, ಮುಂದಿನ ವರ್ಷ ಲೋಕಸಭೆಗೆ ನಡೆಯಲಿರುವ ಚುನಾವಣೆಗೆ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಬಿಜೆಪಿ ಘೋಷಿಸಿದೆ.

ಶಿಷ್ಯನ ಎದುರು ಗುರು ಸೋತಿದ್ದಾರೆ. ಮೋದಿ ‘ಬಡ್ತಿ’ಗೆ ಸಂಬಂಧಿಸಿದಂತೆ ಎದ್ದಿದ್ದ ಊಹಾಪೋಹಗಳಿಗೆ ಈ ಪ್ರಕಟಣೆಯಿಂದ ತೆರೆಬಿದ್ದರೂ ಪ್ರಧಾನಿ ಪಟ್ಟಕ್ಕೆ ಮೋದಿ ಹೆಸರು ಪರಿಗಣಿಸಿರುವುದರ ಸಾಧಕ ಬಾಧಕ ಹಾಗೂ ಸರಿ ತಪ್ಪುಗಳ ಕುರಿತು ಬಿಜೆಪಿ ಒಳಗೂ ಮತ್ತು ಹೊರಗೂ ಚರ್ಚೆ ಮುಂದುವರಿಯಲಿದೆ. ಎರಡು ಲೋಕಸಭಾ ಚುನಾವಣೆಗಳ ಸತತ ಸೋಲಿನಿಂದ ಬಿಜೆಪಿ ಕಂಗೆಟ್ಟಿದೆ. ಕುಸಿದುಬಿದ್ದ ಕೋಟೆಯ ಇಟ್ಟಿಗೆಗಳನ್ನು ಇಟ್ಟುಕೊಂಡೇ ಗೆಲುವಿನ ಮೆಟ್ಟಿಲುಗಳನ್ನು  ಕಟ್ಟಬೇಕಿದೆ. ಅದಕ್ಕೆ ಮತಗಳನ್ನು ಸೆಳೆಯಬಲ್ಲ  ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ಚಿಮ್ಮಿಸಬಲ್ಲ ಹೊಸ ನಾಯಕ ಬೇಕಾಗಿದೆ. ಆ ಹೊಣೆ ನಿಭಾಯಿಸಲು  ಹರಿತ ನಾಲಗೆಯ ಮೋದಿ ಅವರೇ ಸೂಕ್ತ ಎಂದು ಪಕ್ಷ ಭಾವಿಸಿದೆ. ಅವರಿಗೆ ಪಕ್ಷದ ಪ್ರಚಾರ ಸಮಿತಿಯ ನೇತೃತ್ವ ವಹಿಸಿದಾಗಲೇ ಈ ಸಂಕೇತ ಹೊರಬಿದ್ದಿತ್ತು.

ಕಾರ್ಯಕರ್ತರ ಒಲವು ಹಾಗೂ ಬಿಜೆಪಿಯ ಸೈದ್ಧಾಂತಿಕ ಗುರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶಯವೂ ಇದೇ ಆಗಿತ್ತು. ಅದಕ್ಕೆ ಪಕ್ಷದ ಸಂಸದೀಯ ಮಂಡಳಿ ಈಗ ಅಧಿಕೃತ ಮುದ್ರೆ ಒತ್ತಿದೆ. ಬಿಜೆಪಿಯ ಮೂಲ ಸಿದ್ಧಾಂತವನ್ನು ಜೋರು ಧ್ವನಿಯಲ್ಲಿ ಹೇಳುವ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಪಕ್ಷ  ತನ್ನನ್ನು ತಾನು ಪಣಕ್ಕೆ ಒಡ್ಡಿಕೊಂಡಿದೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದ ‘ಕರಿನೆರಳು’ ಮೋದಿ ಬೆನ್ನಿಗಂಟಿದೆ.  ಇಷ್ಟಪಡುವ ಜನರಿಗೆ ಅವರು ಅಭಿವೃದ್ಧಿಯ ಹರಿಕಾರ. ವಿರೋಧಿಗಳಿಗೆ ಒಡಕಿನ ಪ್ರತಿರೂಪ, ಸರ್ವಾಧಿಕಾರಿ. ಬಹುತ್ವವೇ ಜೀವಾಳವಾದ ಭಾರತದ ಚುಕ್ಕಾಣಿ ಹಿಡಿಯಲು ಇವರನ್ನು ಬಿಂಬಿಸುವುದು ಎಷ್ಟರಮಟ್ಟಿಗೆ ಸೂಕ್ತ ಎಂಬ ಪ್ರಶ್ನೆ ಪದೇ ಪದೇ ಎದುರಾಗಲಿದೆ.

ಗುಜರಾತ್‌ನಲ್ಲಿ ಸತತ ಮೂರು ಬಾರಿ ಗೆಲುವು ದಾಖಲಿಸಿದರೂ  ಮುಖ್ಯಮಂತ್ರಿಯಾಗಿ ಅವರ ಸಾಧನೆ ಕುರಿತು ಏಕಾಭಿಪ್ರಾಯ ಇಲ್ಲ. ಆದರೆ ಅಭಿವೃದ್ಧಿ ಕಾರ್ಯಗಳಿಗೆ ತಾವೇ ಮಾದರಿ ಎಂಬಂತೆ ವ್ಯವಸ್ಥಿತವಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿರುವುದು ಸುಳ್ಳಲ್ಲ. ಲೋಕಸಭೆಯಲ್ಲಿ ಬಹುಮತ ಪಡೆಯುತ್ತೇವೆ ಎಂದು ಹೇಳುವ ವಿಶ್ವಾಸ ಯಾವ ಪಕ್ಷಕ್ಕೂ ಇಲ್ಲ.  ಇದು  ಸಮ್ಮಿಶ್ರ ಸರ್ಕಾರದ ಯುಗ.

ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಮೋದಿ ನಾಯಕತ್ವವನ್ನು ಎಷ್ಟು ಪಕ್ಷಗಳು ಬೆಂಬಲಿಸಲಿವೆ ಎಂಬುದು ಒಳಗೊಳಗೆ ಬಿಜೆಪಿಯನ್ನೂ ಕಾಡುತ್ತಿದೆ. ಮೋದಿ ನಾಯಕತ್ವ ವಿರೋಧಿಸಿ ಜೆಡಿ (ಯು) ಈಗಾಗಲೇ ಎನ್‌ಡಿಎ ಕೂಟದಿಂದ ದೂರ ಸರಿದಿದೆ. ಮೋದಿ ನಾಯಕತ್ವ ಒಪ್ಪಿದರೆ  ಅಲ್ಪಸಂಖ್ಯಾತ ಸಮುದಾಯದ ಮತಗಳು ಕೈತಪ್ಪಬಹುದು ಎಂಬ ಆತಂಕ ಕಾಂಗ್ರೆಸ್‌ ವಿರೋಧಿ ನಿಲುವಿನ ಇತರ  ಹಲವು ಪ್ರಾದೇಶಿಕ ಪಕ್ಷಗಳಲ್ಲೂ ಇದೆ. ಈಗಿರುವ ಮಿತ್ರ ಪಕ್ಷಗಳ ವಿಶ್ವಾಸ ಉಳಿಸಿಕೊಳ್ಳುವುದರೊಂದಿಗೆ ಹೊಸದಾಗಿ ಮತ್ತಷ್ಟು ಪಕ್ಷಗಳನ್ನು   ಎನ್‌ಡಿಎ ತೆಕ್ಕೆಗೆ ಸೆಳೆಯುವುದು ಮೋದಿ ಅವರ ಎದುರಿಗಿರುವ ಬಹುದೊಡ್ಡ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT