ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋರಿ ದುಃಸ್ಥಿತಿ; ನಾಗರಿಕರ ಗೋಳು

Last Updated 3 ಡಿಸೆಂಬರ್ 2012, 8:40 IST
ಅಕ್ಷರ ಗಾತ್ರ

ಹಾಸನ: ಎಲ್ಲೆಂದರಲ್ಲಿ ಚೆಲ್ಲಾಡಿದ ಕಸ, ಪ್ಲಾಸ್ಟಿಕ್ ಚೀಲಗಳು, ಅಥವಾ ಇನ್ಯಾವುದೋ ಪದಾರ್ಥ, ಹೊಗೆಯುಗುಳುವ, ಸೀಮೆ ಎಣ್ಣೆ ಬೆರೆಸಿಕೊಂಡು ಓಡುವ ಆಟೋ ಅಥವಾ ಇತರ ವಾಹನಗಳಿಂದಲೇ ಪರಿಸರ ಮಲಿನವಾಗಬೇಕಾಗಿಲ್ಲ. ಇವು ನಮ್ಮ ಕಣ್ಣಿಗೆ ಕಾಣುವ ಸಮಸ್ಯೆಗಳು ಅಷ್ಟೇ.

ನಮ್ಮ ಕಣ್ಣಿನಿಂದ ಪ್ರತ್ಯಕ್ಷವಾಗಿ ನೋಡಲಾಗದಿದ್ದರೂ ಮನಸ್ಸಿನೊಳಗೆ ಅಸಹ್ಯ ಹುಟ್ಟಿಸುವ, ನಿಂತಲ್ಲೇ ವಾಕರಿಕೆ ಬರಿಸುವಂಥ ಅನೇಕ ಸನ್ನಿವೇಶಗಳು ನಗರದಲ್ಲಿ ಅನೇಕ ಇವೆ. ಇದೂ ಪರಿಸರ ಮಾಲಿನ್ಯವೇ. ಹಾಸನದ ಪ್ರಮುಖ ಬಡಾವಣೆಗಳಲ್ಲಿ ಒಂದು ಸುತ್ತು ಹಾಕಿದರೆ ಇಂಥ ಅನೇಕ ಪ್ರಸಂಗಗಳು ಅನುಭವಕ್ಕೆ ಬರುತ್ತವೆ.

ಇತ್ತೀಚಿನವರೆಗೂ ಅರಕಲಗೂಡು ರಸ್ತೆಯಲ್ಲಿ, ನಗರಸಭೆಯಿಂದ ಸ್ವಲ್ಪ ಮುಂದೆ ವಾಹನದಲ್ಲಿ ಹೋಗುತ್ತಿದ್ದರೂ ಸಾಕು ಉಸಿರಾಡಲೂ ಸಾಧ್ಯವಾಗದ ಮಟ್ಟಿನ ದುರ್ನಾತ. ಈಗ ಸ್ವಲ್ಪಮಟ್ಟಿಗೆ ಅದು ಕಡಿಮೆಯಾಗಿದೆ. ನಗರದ ಇತರ ಹಲವು ಬಡಾವಣೆಗಳಲ್ಲಿ ಈಗಲೂ ಅಂಥ ಸ್ಥಿತಿ ಇದೆ.

ಬಡಾವಣೆಗಳೇಕೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಚನ್ನ ಪಟ್ಟಣದಲ್ಲಿ ನಿರ್ಮಿಸಿರುವ ಹೊಸ ಬಸ್ ನಿಲ್ದಾಣಕ್ಕೆ ನಸುಕಿನಲ್ಲೊಮ್ಮೆ ಹೋಗಿ ನೋಡಿ. ಇಡೀ ಬಸ್ ನಿಲ್ದಾಣದಲ್ಲಿ ಮೋರಿಯ ದುರ್ನಾತ ತುಂಬಿರುತ್ತದೆ. ಬಸ್ ನಿಲ್ದಾಣಕ್ಕೆ ಮೂರು ಕಡೆಗಳಿಂದ ಪ್ರವೇಶಿಸಲು ದಾರಿ ಇದೆ.

ಮೂರೂ ಕಡೆ ಒಳಚರಂಡಿಯ ನೀರು ನಿಂತು ಸದಾ ಕಾಲ ದುರ್ವಾಸನೆಯನ್ನು ಬೀರುತ್ತಲೇ ಇರುತ್ತದೆ. ಈಚೆಗೆ ಈ ಮೋರಿಯೊಳಗೆ ಭಾರಿ ಗಾತ್ರದಲ್ಲಿ ಗಿಡಗಂಟಿಗಳು ಬೆಳೆದು ಅಲ್ಲಿ ಮೋರಿ ಇದೆ ಎಂಬುದೇ ಗೊತ್ತಾಗ ದಂತಾಗಿದೆ.

ನಗರದ ಹತ್ತಾರು ಬಡಾವಣೆಗಳ ಕೊಳಚೆ ನೀರನ್ನು ಹೊತ್ತು ತರುವ ಕೆ.ಆರ್.ಪುರಂ ಮೋರಿ ಎಲ್ಲರಿಗೂ ಪರಿಚಿತ. ಇತ್ತ ಚಿಪ್ಪಿನಕಟ್ಟೆ, ಪೆನ್‌ಶನ್ ಮೊಹಲ್ಲ ಸೇರಿದಂತೆ ಹಳೆಯ ಹಾಸನದ ಇಡೀ ಕೊಳಕನ್ನು ತುಂಬಿಕೊಂಡು ಹರಿಯುವ ಮೋರಿಯೂ ಹಳೇ ಹಾಸನದ ಅರ್ಧಭಾಗಕ್ಕೆ ದುರ್ನಾತ ಪಸರಿಸುತ್ತಲೇ ಇರುತ್ತದೆ.

ಮೊದಲೇ ಕಿಷ್ಕಿಂಧೆಯಂತಾಗಿರುವ ಹಳೆಯ ಹಾಸನದಲ್ಲಿ ಈ ಮೋರಿಗೂ ಉಸಿರುಗಟ್ಟುವಂಥ ಸ್ಥಿತಿ ಇದೆ. ಚಿಪ್ಪಿನಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದ ಒಳಗಿನಿಂದಲೇ (ಅಷ್ಟು ಭಾಗಕ್ಕೆ ಸಿಮೆಂಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ) ಹರಿದು ಹೋಗುವ ಮೋರಿ, ಇಡೀ ನಗರದ ಕೊಳೆಯ ಒಂದಿಷ್ಟನ್ನು ಹುಣಸಿನಕೆರೆಗೂ ಕೊಟ್ಟು ಮುಂದೆ ಸಾಗುತ್ತದೆ.

ಮೊದಲೇ ಇಕ್ಕಟ್ಟಾಗಿರುವ ಈ ಬಡಾವಣೆಗಳಲ್ಲಿ ಜನರು ಮೋರಿಯ  ಜಾಗವನ್ನೂ ಬಿಡದೆ ಒತ್ತುವರಿ ಮಾಡಿಕೊಂಡಿದ್ದಾರೆ. ಆ ದುರ್ನಾತದ ನಡುವೆಯೇ ಜೀವನ ನಡೆಸುತ್ತಿದ್ದಾರೆ.

ಈಚೆಗೆ ನಗರಸಭೆಯವರು ರಸ್ತೆ ಬದಿಯ ಚರಂಡಿ ಕಾಮಗಾರಿ ಕೈಗೊಂಡಿದ್ದರಿಂದ ಕೆಲವೆಡೆ ನೀರು ಸರಾಗವಾಗಿ ಹರಿದು ಹೋಗದಂಥ ಸ್ಥಿತಿ ನಿರ್ಮಾಣವಾಗಿದೆ. ಒಂದೇ ಚರಂಡಿಯನ್ನು ಬೇರೆಬೇರೆ ಯೋಜನೆಯಡಿ ಕೈಗೆತ್ತಿಕೊಂಡಿದ್ದರಿಂದ ಮಧ್ಯದಲ್ಲಿ ಒಂದಿಷ್ಟು ಭಾಗ ಯಾವ ಯೋಜನೆಗೂ ಒಳಪಡದೆ ದುರಸ್ತಿಯೇ ಕಾಣದೆ ಉಳಿದಿದೆ. ಅಂಥ ಭಾಗದಲ್ಲಿ ತುಂಬಿದ್ದ ನೀರು ಹರಿಯದೆ ಕೊಳೆತು ನಾರುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಮನೆಗಳ ಮುಂದೆಯೇ ಇಂಥ ಸ್ಥಿತಿ ನಿರ್ಮಾಣವಾಗಿ ಜನರು ನಗರಸಭೆಯನ್ನು ಶಪಿಸುವಂತಾಗಿದೆ.

ನಗರದ ಎಲ್ಲ ಭಾಗಗಳಲ್ಲೂ ಮೂಗು ಮುಚ್ಚಿಕೊಂಡೇ ಓಡಾಡಬೇಕಾದಂಥ ಒಂದಿಷ್ಟು ಜಾಗ ಇದ್ದೇ ಇದೆ. ನಗರಸಭೆ ಈ ಬಗ್ಗೆ ಚಿಂತನೆ ನಡೆಸಿದೆಯೇ ಇಲ್ಲವೇ ಗೊತ್ತಿಲ್ಲ, ಆದರೆ ನರಪ್ರಾಣಿಯೂ ಓಡಾಡದಂಥ, ಓಡಾಡುವ ಅಗತ್ಯವೂ ಇಲ್ಲದಂಥ ಒಂದಿಷ್ಟು ಜಾಗದಲ್ಲಿ ಚರಂಡಿ ಮುಚ್ಚುವ ಸಲುವಾಗಿ 91 ಲಕ್ಷ ರೂಪಾಯಿ ಎಸ್‌ಎಫ್‌ಸಿ ಅನುದಾನ ಬಳಕೆಯಾಗುತ್ತಿದೆ. ಇದಕ್ಕಾಗಿ ನಮ್ಮ ಜನಪ್ರತಿನಿಧಿಗಳ ಕಾಳಜಿ ಮೆಚ್ಚಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT