ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ ವಿನೂತನ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ನನ್ನ ರೂಪ ಕೆಟ್ಟದಾಗಿದೆ. ಆದರೆ ಮನಸ್ಸು ಕೆಟ್ಟಿಲ್ಲ’ ಎಂದು ಮುಕ್ತ ಮನಸ್ಸಿನಿಂದ ಹೇಳಿದವರು, ನಟ ಮೋಹನ್ ಜುನೇಜಾ.ಬೆಂಗಳೂರಿನವರಾದ ಮೋಹನ್ ಅವರ ಬಣ್ಣದ ನಂಟಿನ ಮೂಲ ರಂಗಭೂಮಿ. ಅವರ ತಂದೆ ಎಂಜಿನಿಯರ್. ಮಗನೂ ಎಂಜಿನಿಯರ್ ಆಗಬೇಕೆಂಬಾಸೆ ಅವರದು. ಆದರೆ ಮೋಹನ್ ಎಸ್ಸೆಸ್ಸೆಲ್ಸಿ ಮುಗಿಸಿದ ನಂತರ ಬಿದ್ದದ್ದು ಅಭಿನಯದಾಸೆಗೆ.

ನಟನೆ ಕಲಿಸುವ ‘ಅಭಿನಯ ತರಂಗ’ದಲ್ಲಿ ಡಿಪ್ಲೊಮ ಕೋರ್ಸ್ ಮುಗಿಸಿ ರಂಗಭೂಮಿ ಜೊತೆ ಗುರುತಿಸಿಕೊಂಡ ಅವರು ಸಾಕಷ್ಟು ನಾಟಕಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದರು.‘ತಂದೆಯ ಆಸೆಯನ್ನು ಬದಿಗೊತ್ತಿ, ನಾಟಕದ ಗೀಳು ಹತ್ತಿಸಿಕೊಂಡಿದ್ದ ನನ್ನನ್ನು ಸಹಜವಾಗಿಯೇ ಮನೆಯವರು ಹೀಯಾಳಿಸುತ್ತಿದ್ದರು’ ಎಂದು ಹೇಳುವ ಅವರು, ತಮ್ಮ ಆಸೆ ಅತಿರೇಕಕ್ಕೆ ಹೋದಾಗ ಮನೆಯಿಂದ ಹೊರಗೆ ದೂಡಿಸಿಕೊಂಡಿದ್ದನ್ನೂ ನಗುನಗುತ್ತಲೇ ಹೇಳುತ್ತಾರೆ.

ಮನೆಯವರ ಮೂದಲಿಕೆಯನ್ನೇ ಸವಾಲೆಂದು ಸ್ವೀಕರಿಸಿದ ಜುನೇಜಾ- ಇದ್ದರೂ ಸತ್ತರೂ ನಟನಾರಂಗವೇ ಗತಿ ಎಂದು ತೀರ್ಮಾನಿಸಿದರಂತೆ. ನಾಟಕಗಳಲ್ಲಿ ಭಿನ್ನ ಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಲು ಆರಂಭಿಸಿದರು. ಆಮೇಲೆ ಕ್ಯಾಮೆರಾ ಮುಂದೆ.‘ಕಿಂಗ್‌ಲಿಯರ್’, ‘ಚಿಕ್ಕದೇವಭೂಪ’, ‘ಸಂಕ್ರಾಂತಿ’ ಮುಂತಾದ ನಾಟಕಗಳಲ್ಲಿ ನಟಿಸಿದ ಅವರು ‘ಟೊಳ್ಳುಗಟ್ಟಿ’ ನಾಟಕದಲ್ಲಿ ನಾಗತ್ತೆ ಎಂಬ ಮುದುಕಿಯ ಪಾತ್ರಕ್ಕೆ ಜೀವ ತುಂಬಿ ಸೈ ಅನ್ನಿಸಿಕೊಂಡಿದ್ದರು. ರಂಗಭೂಮಿಯಲ್ಲಂತೂ ಎಲ್ಲಾ ರೀತಿಯ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವುದರಿಂದ, ಧಾರಾವಾಹಿ ಮತ್ತು ಸಿನಿಮಾದಲ್ಲಿ ಇದೀಗ ಸಿಗುತ್ತಿರುವ ಏಕತಾನತೆಯ ಪಾತ್ರಗಳ ಬಗ್ಗೆ ಅವರಿಗೆ ಬೇಸರವೇನಿಲ್ಲ.

ಜಿ.ವಿ.ಅಯ್ಯರ್ ಅವರ ಶಂಕರ್‌ನಾಗ್ ನಾಯಕನಾಗಿದ್ದ ‘ವಾಲ್‌ಪೋಸ್ಟರ್’ ಚಿತ್ರದ ಮೂಲಕ ಕಲಾತ್ಮಕ ಸಿನಿಮಾದಲ್ಲಿ ನಟಿಸಿ ಅನುಭವ ಪಡೆದ ಮೋಹನ್, ನಂತರ ‘ಆಟ ಹುಡುಗಾಟ’ ಚಿತ್ರದ ಮೂಲಕ ವ್ಯಾಪಾರಿ ಚಿತ್ರಗಳಲ್ಲೂ ನಟಿಸಲು ಆರಂಭಿಸಿದರು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ದೊಡ್ಡಮನೆ’ ಧಾರಾವಾಹಿಯಲ್ಲಿ ಕೆಲಸದಾಳಿನ ಪಾತ್ರ ಮಾಡುವ ಮೂಲಕ ಕಿರುತೆರೆಗೆ ಪರಿಚಯವಾದರು.

ಹೆಚ್ಚಾಗಿ ಬೀದಿ ನಾಟಕಗಳಿಂದಲೇ ಜನಪ್ರಿಯರಾದ ಮೋಹನ್ ಜುನೇಜಾ, ವಿಭಿನ್ನ ಪಾತ್ರಗಳಿಂದ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡವರು. ಇದರೊಂದಿಗೆ ‘ಸೋಲಿಲ್ಲದ ಸರದಾರ’ ಚಿತ್ರದಲ್ಲಿ ‘ಜಿಗಿಜಿಗಿ ಬೊಂಬೆಯಾಟ..’ ಹಾಡಿನಲ್ಲಿ ಕಾಣಿಸಿಕೊಂಡ ನಂತರ, ಆ ಬೊಂಬೆಯಾಟ ಕಲಿತು ಟೀವಿಯಲ್ಲಿ ಕಾರ್ಯಕ್ರಮ ಕೊಡುವಷ್ಟರ ಮಟ್ಟಿಗೆ ಪಳಗಿದರು.

ನಟನೆಯಷ್ಟೇ ಅಲ್ಲ, ಸಿನಿಮಾ ಮತ್ತು ಧಾರಾವಾಹಿಗಳಿಗೆ ಸಂಭಾಷಣೆಕಾರರಾಗಿಯೂ ಕೆಲಸ ಮಾಡಿರುವ ಮೋಹನ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ‘ವಠಾರ’ ಧಾರಾವಾಹಿಯ ಪರಂಧಾಮಯ್ಯನ ಪಾತ್ರ. ‘ಜೋಗಿ’, ‘ಚೆಲ್ಲಾಟ’, ‘ದುನಿಯಾ’ ಸಿನಿಮಾಗಳ ಪಾತ್ರಗಳು ಅವರ ಜನಪ್ರಿಯತೆಗೆ ಮತ್ತಷ್ಟು ಎಣ್ಣೆ ಎರೆದವು.

‘ಅಪ್ಪ ನಂಜಪ್ಪ ಮಗ ಗುಂಜಪ್ಪ’, ‘ಶ್ರೀ ರೇಣುಕಾಂಬ’ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಅವರು ಇದೀಗ ‘ಕಿರುಬ’ ಚಿತ್ರಕ್ಕೆ ಮಾತುಗಳನ್ನು ಹೊಸೆಯುತ್ತಿದ್ದಾರೆ.

80ರ ದಶಕದ ಆರಂಭದಿಂದಲೂ ಬಣ್ಣದಲ್ಲಿ ಮಿಂದಿರುವ ಅವರಿಗೆ ಯಾವ ಪಾತ್ರಕ್ಕಾದರೂ ಒಗ್ಗಿಕೊಳ್ಳುವ ಆತ್ಮವಿಶ್ವಾಸ ಇದೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕಾಮಿಡಿ ಮತ್ತು ವಿಲನ್ ಪಾತ್ರಗಳೇ ತಮ್ಮನ್ನು ಹುಡುಕಿಕೊಂಡು ಬರುತ್ತಿರುವುದಾಗಿ ಹೇಳುವ ಅವರಿಗೆ, ‘ಮುತ್ತಿನ ತೋರಣ’ ಧಾರಾವಾಹಿಯ ಅಶ್ವತ್ಥ್ ಗೌಡನ ಪಾತ್ರ ಮತ್ತು ‘ಅರಸಿ’ ಧಾರಾವಾಹಿಯಲ್ಲಿ ಮಾಡುತ್ತಿರುವ ಪಾತ್ರ ಇಷ್ಟವಾಗಿವೆ.

ರಂಗಭೂಮಿಯಲ್ಲಿ ಸೆಟ್ ಅಳವಡಿಕೆ (ಕಲಾನಿರ್ದೇಶನ) ಮಾಡಿದ್ದಕ್ಕೆ ರಾಜ್ಯಪ್ರಶಸ್ತಿ ಪಡೆದಿರುವ ಅವರು, ‘ರಂಗಭೂಮಿ ನೆಮ್ಮದಿ ನೀಡಿದರೆ, ಧಾರಾವಾಹಿ ಮತ್ತು ಸಿನಿಮಾ ಬದುಕಾಗಿ, ಬೆನ್ನೆಲುಬಾಗಿ ನಮ್ಮನ್ನು ಕಾಯುತ್ತಿದೆ’ ಎನ್ನುವ ಕಲಾವಿದ.

‘ಅಂದುಕೊಂಡಿದ್ದು ಏನೂ ಆಗಲ್ಲ. ಅದಕ್ಕೆ ಕನಸು ಕಾಣುವುದೇ ಇಲ್ಲ. ಕಾಲ ಕರೆದುಕೊಂಡು ಹಾದಿಯಲ್ಲಿ ಸಾಗುತ್ತಿದ್ದೇನೆ. ಒಳ್ಳೆಯ ಪಾತ್ರಗಳನ್ನು ಮಾಡಬೇಕೆಂಬ ಆಸೆ ನನಗೂ ಇದೆ. ಅಂಥ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇನೆ’ ಎಂದು ನಿರಾಸೆಯ ಮಾತುಗಳನ್ನಾಡುವ ಅವರು ತಕ್ಷಣವೇ, ‘ಜನ ನನ್ನನ್ನು ನೋಡಿ ವಿಲನ್ ಎಂದುಕೊಂಡು ಮಾತನಾಡಿಸಲು ಹೆದರುತ್ತಾರೆ’ ಎನ್ನುತ್ತಾ ಜೋರಾಗಿ ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT