ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೋಹನ'ದಲ್ಲಿ ಅನುಕಂಪದ ಅಲೆ

ಸ್ವತಂತ್ರ ಅಭ್ಯರ್ಥಿಯಾಗಿ ಸೈಲ್ ಇಂದು ನಾಮಪತ್ರ
Last Updated 17 ಏಪ್ರಿಲ್ 2013, 11:16 IST
ಅಕ್ಷರ ಗಾತ್ರ

ಕಾರವಾರ: ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಸತೀಶ ಸೈಲ್ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದ ನಂತರ ಸೈಲ್ ಅನುಕಂಪದ ಅಲೆಯಲ್ಲಿ ತೇಲುತ್ತಿದ್ದಾರೆ.

ಟಿಕೆಟ್ ನಿರಾಕರಣೆ ವಿಷಯ ಪತ್ರಿಕೆಗಳ ಮೂಲಕ ತಿಳಿದ ಅವರ ಬೆಂಬಲಿಗರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕಿನ ಸದಾಶಿವಗಡದಲ್ಲಿರುವ ಅವರ ನಿವಾಸ `ಮೋಹನ'ಕ್ಕೆ ಬಂದು ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತೆ ಧೈರ್ಯ ತುಂಬಿದರು.

ಸೀಬರ್ಡ್ ನಿರಾಶ್ರಿತರು, ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ, ಕೋಸ್ಟ್‌ಗಾರ್ಡ್ ವಿರೋಧ ಹೋರಾಟದಲ್ಲಿ ಪಾಲ್ಗೊಂಡ ಹೋರಾಟಗಾರರು ಹಾಗೂ ಸೈಲ್ ಅವರ ಸಾಮಾಜಿಕ ಸೇವೆ ಮೆಚ್ಚಿದ ಸಾವಿರಾರು ಜನರು `ನೀವೇ ನಿಲ್ಲಬೇಕು. ನಿಮ್ಮ ನಿಲುವಿನಲ್ಲಿ ಬದಲಾವಣೆ ಮಾಡಬೇಡಿ, ನಿಮ್ಮಂದಿಗೆ ನಾವಿದ್ದೇವೆ' ಎಂದು ಪ್ರೋತ್ಸಾಹ ನೀಡಿದರು.

ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ದುಡಿದಿದ್ದರೂ ಕೊನೆಗಳಿಗೆಯಲ್ಲಿ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವುರ ಬಗ್ಗೆ ಸೈಲ್ ಮನೆಗೆ ಬಂದ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸೈಲ್ ಮನೆಗೆ ಬಂದವರಲ್ಲಿ ಅನೇಕರು ಪಕ್ಷದ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ಅವರ ವಿರುದ್ಧ ಕಿಡಿಕಾರಿದರು. ಟಿಕೆಟ್ ಕೊಡಿಸುವ ವಿಷಯದಲ್ಲಿ ದೇಶಪಾಂಡೆಯವರು ಸೈಲ್ ಅವರ ನೆರವಿಗೆ ನಿಲ್ಲುತ್ತಾರೆ ಎಂದು ನಾವು ಭಾವಿಸಿಕೊಂಡಿದ್ದೇವು. ಆದರೆ ಕೊನೆಗೆಯಲ್ಲಿ ದೇಶಪಾಂಡೆ ನಿರೀಕ್ಷೆ ತಲೆಕೆಳಗೆ ಮಾಡಿರುವ ಬಗ್ಗೆ ಕಾರ್ಯಕರ್ತರು, ಬೆಂಬಲಿಗರು ಬೇಸರಪಟ್ಟರು.

ತೀವ್ರ ಅಸಮಾಧಾನಗೊಂಡ ಕಾರ್ಯಕರ್ತರೊಬ್ಬರು `ಪ್ರಜಾವಾಣಿ'ಗೆ ದೂರವಾಣಿ ಕರೆ ಮಾಡಿ ಸೈಲ್ ಅವರಿಗೆ ದೇಶಪಾಂಡೆಯವರು ಮಾಡಿರುವ ಮೋಸದ ಬಗ್ಗೆ ಕಟುವಾಗಿ ಬರೆಯಿರಿ ಎಂದು ಆಕ್ರೋಶವನ್ನು ಹೊರಹಾಕಿದರು.

ತಮ್ಮ ಸ್ವಾರ್ಥಕ್ಕಾಗಿ ದೇಶಪಾಂಡೆಯವರು ಸೈಲ್ ಅವರಿಗೆ ಟಿಕೆಟ್ ಕೊಡಿಸುವುದನ್ನು ತಪ್ಪಿಸಿದ್ದಾರೆ. ಇವರಿಗೆ ಪಕ್ಷದ ಗೆಲುವು ಬೇಕಾಗಿಲ್ಲ. ಸ್ವಾರ್ಥ ಸಾಧನೆಯೇ ಮುಖ್ಯವಾಗಿದೆ ಎಂದು ಜರಿದರು.

ರಮಾನಂದ ನಾಯಕ ಅವರು ಟಿಕೆಟ್‌ಗಾಗಿ ಬಹಳ ಹಿಂದೆಯೇ ಪ್ರಯತ್ನ ನಡೆಸಿದ್ದರೂ ಎನ್ನುವುದು ಈಗ ಬಹಿರಂಗವಾಗಿದೆ, ಅವರಿಗೆ ಒಳ್ಳೆಯದಾಗಲಿದೆ ಎಂದು ಸೈಲ್ ಆಪ್ತರೊಬ್ಬರು ಹೇಳಿದರು.

ತಪ್ಪಿದ ಟಿಕೆಟ್‌ಗಾಗಿ ಚರ್ಚೆ
ಶಿರಸಿ: ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದು ಈಗ ನಿರಾಶೆಗೊಂಡಿರುವ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಪಕ್ಷ ನೀಡಿದ ಶಾಕ್‌ನಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಶಿರಸಿಯ ಇಂದಿರಾ ನಗರದಲ್ಲಿರುವ ಕಾಂಗ್ರೆಸ್ ಕಚೇರಿ ಮಂಗಳವಾರದ ಮಟ್ಟಿಗೆ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು.

ಬೆಳಿಗ್ಗೆಯಿಂದ ಸೂರ್ಯ ಪಶ್ಚಿಮಕ್ಕೆ ಜಾರುವ ವರೆಗೂ ನಾಯ್ಕ ಅವರ ಬೆಂಬಲಿಗರು ಕಚೇರಿಗೆ ಆಗಮಿಸಿ ಟಿಕೆಟ್ ತಪ್ಪಿದ ಬಗ್ಗೆ ಚರ್ಚೆ ನಡೆಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎನ್ನುವುದರ ಕುರಿತ ವಿಷಯವೂ ಚರ್ಚೆಯಲ್ಲಿ ಪ್ರಸ್ತಾಪವಾಯಿತು. ಆದರೆ, ಇದು ಸೂಕ್ತ ಸಮಯ ಅಲ್ಲ ಎನ್ನುವ ಅಭಿಪ್ರಾಯಗಳೂ ಸಭೆಯಲ್ಲಿ ಕೇಳಿಬಂತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT