ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನಸ್ವಾಮಿ ಎನ್ನುವ ಮಿಥ್ಯೆಯೂ ನಿಜವೂ...

ಉಭಯಕುಶಲೋಪರಿ * ವಸುಧೇಂದ್ರ ಅವರೊಂದಿಗೆ ಪಟ್ಟಾಂಗ
Last Updated 16 ಜನವರಿ 2016, 19:40 IST
ಅಕ್ಷರ ಗಾತ್ರ

‘‘ಹದಿನೆಂಟು ವರ್ಷಕ್ಕೆ ಆಗಬೇಕಿದ್ದ ವಿಮೋಚನೆ ನಲವತ್ತೈದನೇ ವಯಸ್ಸಿಗೆ ಆಯ್ತು. ನನ್ನಂತೆ ಇನ್ನೊಂದು ಮಗು ಕಷ್ಟ ಪಡಬಾರದು. ಕೆಲವು ಮಕ್ಕಳು ತಮ್ಮ ಸಂಕಟಗಳನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗಾಗಬಾರದು’’.

ಕಥೆಗಾರ ವಸುಧೇಂದ್ರ ನಿಟ್ಟುಸಿರು ಬಿಡುತ್ತ ಇಡ್ಲಿಯ ತುಣುಕೊಂದನ್ನು ಬಾಯಿಗೆ ಇಟ್ಟುಕೊಂಡರು. ಬೆಂಗಳೂರಿನ ಗಾಂಧಿಬಜಾರಿನ ‘ಆನಂದ ಭವನ್‌’ ಹೋಟೆಲ್‌ನಲ್ಲಿ ಹರಟೆಯ ಹುಮ್ಮಸ್ಸಿನಲ್ಲಿ ಕುಳಿತ ಅವರು, ಮೂರು ದಶಕಗಳ ಕಾಲ ಅದುಮಿರಿಸಿಕೊಂಡಿದ್ದ ತಮ್ಮ ಸಂಕಟವನ್ನು ಹೇಳಿಕೊಳ್ಳುತ್ತಿದ್ದರು. ಪಿಂಗಾಣಿ ತಟ್ಟೆಯಲ್ಲಿದ್ದ ಬಿದಿಗೆ ಚಂದ್ರಮನಂಥ ಎರಡು ಇಡ್ಲಿಗಳಲ್ಲಿ ಒಂದು ಮುಗಿಯುವ ವೇಳೆಗೆ ಒಂದು ತಾಸು ಉರುಳಿತ್ತು. ಕಥೆಗಳೊಳಗಿನ ಕಥೆಗಾರನ ಬದುಕು ತೆರೆದುಕೊಂಡ ಕ್ಷಣವದು.

‘ನಮ್ಮ ಹರಟೆ ಗಂಭೀರವಾಗುತ್ತಿದೆ’ ಎನ್ನುತ್ತಲೇ ವಸುಧೇಂದ್ರ ತಮ್ಮ ಬದುಕಿನ ಕೆಲವು ಸಂಗತಿಗಳನ್ನು ಹೇಳಿಕೊಳ್ಳತೊಡಗಿದರು!

ಚಿಕ್ಕಂದಿನಲ್ಲಿ ಏನೋ ಅನಿಸಿದ್ದನ್ನು ಗೀಚಿಕೊಂಡು, ಕನ್ನಡ – ತೆಲುಗು ಸಿನಿಮಾಗಳನ್ನು ನೋಡಿಕೊಂಡಿದ್ದ ಬಳ್ಳಾರಿಯ ಹುಡುಗ ವಸುಧೇಂದ್ರ ಬರವಣಿಗೆಯನ್ನು ಗಂಭೀರವಾಗಿ ಹಚ್ಚಿಕೊಂಡಿದ್ದು ಕೊಚ್ಚಿನ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾಗ. 1996ರ ಸಮಯವದು. ತನ್ನದಲ್ಲದ ನಾಡಿನಲ್ಲಿ ಯಾರಾದರೂ ಅನುಭವಿಸುವ ಒಂಟಿತನ ಅವರನ್ನೂ ಕಾಡುತ್ತಿತ್ತು.

ಆ ಒಂಟಿತನದಿಂದ ಹೊರಬರಲು ಹಾಗೂ ‘ಕಳೆದುಹೋಗುತ್ತಿದ್ದೇನೆ’ ಎಂದು ತನ್ನೊಳಗೆ ಬಲಿಯುತ್ತಿದ್ದ ಭಾವಕ್ಕೆ ಉತ್ತರದ ರೂಪದಲ್ಲಿ ಅವರಿಗೆ ಕಾಣಿಸಿದ್ದು ಬರವಣಿಗೆ. ಸುಮಾರು ಒಂದೂವರೆ ತಿಂಗಳ ಕಾಲ ಪ್ರತಿದಿನ ಬೆಳಗ್ಗೆ ಐದರಿಂದ ಏಳು ಗಂಟೆಯವರೆಗೆ ವ್ರತದಂತೆ ಬರೆದರು. ಹಾಗೆ ಬರೆದದ್ದು ‘ಮನೀಷೆ’ ಸಂಕಲನದ ಕಥೆಗಳನ್ನು. ಕಥೆಯ ಯಾವ ತಂತ್ರಗಳನ್ನೂ ಅರಿಯದ ತರುಣನೊಬ್ಬ ತನ್ನಷ್ಟಕ್ಕೆ ತಾನು ಹಾಡಿಕೊಂಡ ಸಹಜವಾದ ಕಥೆಗಳಂತೆ ‘ಮನೀಷೆ’ಯ ರಚನೆಗಳು ಹೊರಹೊಮ್ಮಿದ್ದವು.

ಪ್ರಕಾಶಕರೊಬ್ಬರಿಗೆ ದುಡ್ಡು ಕೊಟ್ಟು ‘ಮನೀಷೆ’ಯನ್ನು ಪ್ರಕಟಿಸುವ ಸಾಹಸಕ್ಕೂ ವಸುಧೇಂದ್ರ ಮುಂದಾದರು. ಆದರೆ ಸಂಕಲನದ ಕಥೆಗಳನ್ನು ಮನೆಯಲ್ಲಿಟ್ಟುಕೊಂಡಿದ್ದೇ ಬಂತು. ಆ ನಡುವೆ ಉದ್ಯೋಗ ನಿಮಿತ್ತ ಇಂಗ್ಲೆಂಡ್‌ಗೆ ಹೋಗಬೇಕಾಯಿತು. ಅಲ್ಲಿದ್ದ ಮೂರುನಾಲ್ಕು ವರ್ಷಗಳು ವಸುಧೇಂದ್ರ ಅವರ ಪಾಲಿಗೆ ಬರವಣಿಗೆಯ ಸುಗ್ಗಿಕಾಲ.

‘ಯುಗಾದಿ’ ಸಂಕಲನದ ಕಥೆಗಳು, ತೆಲುಗು ಕಥೆಗಳ ಕನ್ನಡ ಅನುವಾದ ‘ಮಿಥುನ’ ಹಾಗೂ ‘ಕೋತಿಗಳು’ ಸಂಕಲನದ ಪ್ರಬಂಧಗಳು ರೂಪುಗೊಂಡಿದ್ದು ಅಲ್ಲಿಯೇ. ಮತ್ತೆ ಬೆಂಗಳೂರಿಗೆ ಬಂದ ಮೇಲೆ ಬರೆದುದನ್ನು ಪ್ರಕಟಿಸುವ ಹುಕಿ ಶುರುವಾಯಿತು. ಆದರೆ, ಜನಪ್ರಿಯನಲ್ಲದ ಬರಹಗಾರನನ್ನು ಯಾವ ಪ್ರಕಾಶಕ ಮೂಸಬೇಕು? ಆಗ ಬೆಂಬಲಕ್ಕೆ ಬಂದದ್ದು ಪತ್ರಕರ್ತ ಅಪಾರ. ಡಿಜಿಟಲ್ ಮಾಧ್ಯಮದ ಬಗ್ಗೆ ಕುತೂಹಲ ಹೊಂದಿದ್ದ ಅಪಾರ, ‘ನಿನ್ನ ಪುಸ್ತಕಗಳನ್ನು ನೀನೇ ಪ್ರಕಟಿಸು. ಪುಸ್ತಕ ವಿನ್ಯಾಸ ನಾನು ಮಾಡಿಕೊಡುತ್ತೇನೆ’ ಎಂದು ಹುರಿದುಂಬಿಸಿದರು. ವಸುಧೇಂದ್ರ ಕೊಂಚ ಅಳುಕು ಹಾಗೂ ಸಂಕೋಚದಿಂದ ಪ್ರಕಟಣೆಯ ಕೆಲಸದಲ್ಲಿ ತೊಡಗಿಕೊಂಡರು. ಫಲಿತಾಂಶ ಅವರ ನಿರೀಕ್ಷೆಗೆ ಮೀರಿದ್ದಾಗಿತ್ತು.

‘‘ನನ್ನ ಪುಸ್ತಕಗಳಿಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತನಾಗಿ ಬೇರೆಯವರ ಪುಸ್ತಕಗಳನ್ನೂ ಪ್ರಕಟಿಸತೊಡಗಿದೆ. ಯುವ ಕಥೆಗಾರರ ಚೊಚ್ಚಿಲ ಕಥಾ ಸಂಕಲನಗಳಿಗೆ ‘ಛಂದ ಪ್ರಶಸ್ತಿ’ ಆರಂಭಿಸಿದೆ. ಎರಡು ಸಾವಿರ ರೂಪಾಯಿಯಿಂದ ಆರಂಭವಾದ ಪ್ರಶಸ್ತಿ ಈಗ ಇಪ್ಪತ್ತು ಸಾವಿರ ರೂಪಾಯಿಗೆ ಮುಟ್ಟಿದೆ’’ ಎಂದು ‘ಛಂದ’ದ ಕ್ಷಣಗಳನ್ನು ವಸುಧೇಂದ್ರ ಮೆಲುಕುಹಾಕಿದರು.

ಈಗ ಕನ್ನಡದ ಜನಪ್ರಿಯ ಬರಹಗಾರರಲ್ಲಿ ಒಬ್ಬರಾಗಿರುವ ವಸುಧೇಂದ್ರ, ‘ಬರೆಯುವುದು ತಮ್ಮ ಸಾಮಾಜಿಕ ಜವಾಬ್ದಾರಿ’ ಎಂದು ನಂಬಿದ್ದಾರೆ. ‘‘ಬರವಣಿಗೆ ನನಗೆ ದೇವರು ನೀಡಿರುವ ಕೌಶಲ. ಬರೆಯದೆ ಹೋದರೆ ನನಗೆ ದೊರೆತ ವರವನ್ನು ಅವಮಾನಿಸಿದಂತೆ’’ ಎನ್ನುವ ನಿಲುವು ಅವರದು.

ಅಂದಹಾಗೆ, ಸಾಹಿತ್ಯದ ಜೊತೆಗೆ ವಸುಧೇಂದ್ರರ ಮತ್ತೊಂದು ವ್ಯಸನ ಸಿನಿಮಾ. ಈ ಸಿನಿಮಾಕ್ಕೆ ಅವರು ಮರುಳಾದುದು ಹೇಗೆ? ನೆನಪು ಗಾಂಧಿಬಜಾರ್‌ನಿಂದ ಇಂಗ್ಲೆಂಡ್‌ಗೆ ಹೊರಳಿತು.

‘‘ಇಂಗ್ಲೆಂಡ್‌ನಲ್ಲಿ ಇದ್ದಾಗ ದಿನಕ್ಕೆ ಮೂರು ಸಿನಿಮಾ ನೋಡುತ್ತಿದ್ದೆ. ವಾರಾಂತ್ಯದಲ್ಲಿ ನಾಲ್ಕೈದು ಸಿನಿಮಾ ನೋಡಿರುವುದೂ ಇದೆ. ನನ್ನ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿರಲಿಲ್ಲ. ಇಂಗ್ಲಿಷ್ ಪುಸ್ತಕಗಳನ್ನು ಓದುವುದು ಹಿತವಾದ ಅನುಭವ ಅನ್ನಿಸುತ್ತಿರಲಿಲ್ಲ. ಆಗ ಸ್ನೇಹಿತರಂತೆ ಕಾಣಿಸಿದ್ದು ಸಿನಿಮಾಗಳು! ‘ಬ್ರಿಟಿಷ್ ಲೈಬ್ರರಿ’ಗಳು ಸಿನಿಮಾ ಡಿವಿಡಿಗಳನ್ನು ಹಾಗೂ ಪುಸ್ತಕಗಳನ್ನು ಉಚಿತವಾಗಿ (ಶುಲ್ಕ ವಿಧಿಸಿದರೂ ಅದು ತೀರಾ ಕಡಿಮೆ) ವಿತರಿಸುತ್ತವೆ. ಅದರ ಉಪಯೋಗವನ್ನು ಚೆನ್ನಾಗಿ ಬಳಸಿಕೊಂಡೆ. ಸಬ್ ಟೈಟಲ್‌ಗಳ ಮೂಲಕ ಸಿನಿಮಾ ಅನುಭವಿಸುವುದು ಕಷ್ಟವೆನ್ನಿಸಲಿಲ್ಲ. ಸಿನಿಮಾಗಳಲ್ಲಿನ ಸೈಲೆನ್ಸ್ ಕೂಡ ಇಷ್ಟವಾಗತೊಡಗಿತು.

ಸಿನಿಮಾಗಳ ನಾಟಕೀಯ ಗುಣ ನನ್ನ ಮೇಲೆ ಪರಿಣಾಮ ಬೀರಿದೆ. ಕಥೆ ಬರೆಯುವುದು ಹೇಗೆ, ಪಾತ್ರಗಳನ್ನು ಚಿತ್ರಿಸುವುದು ಹೇಗೆ ಎನ್ನುವುದನ್ನು ಸಿನಿಮಾ ನೋಡಿ ಕಲಿತೆ’’ ಎಂದರು. (ತಮ್ಮ ವಿದ್ಯಾರ್ಥಿಗಳಿಗೆ ಅವರು ‘ಸಿನಿಮಾ ನೋಡಿ’ ಎಂದು ಶಿಫಾರಸು ಮಾಡುತ್ತಾರಂತೆ).

‘ಮೋಹನಸ್ವಾಮಿ’ ಕಥಾಸಂಕಲನ ಕನ್ನಡ ಸಾಹಿತ್ಯಲೋಕಕ್ಕೆ ‘ಸಲಿಂಗಿ’ಗಳ ಜಗತ್ತನ್ನು ಪರಿಚಯಿಸಿದ ಕೃತಿ. ಈ ಕೃತಿಗೆ ಏನು ಪ್ರೇರಣೆ? ‘ಮೋಹನಸ್ವಾಮಿ’ ಕಥೆಗಳನ್ನು ಓದುಗರು ಹೇಗೆ ಸ್ವೀಕರಿಸಿದರು?

ಪ್ರಶ್ನೆಗಳಲ್ಲಿನ ಹಿಂಜರಿಕೆಯನ್ನು ನಿವಾರಿಸುವಂತೆ– ‘‘ಮೋಹನಸ್ವಾಮಿ ನನ್ನದೇ ಬದುಕಿನ ಕಥೆ. ಆ ಸಂಕಲನದ ಕಥೆಗಳಲ್ಲಿ ನನ್ನ ಬದುಕು ಹಾಗೂ ಕಲ್ಪನೆ ಎರಡೂ ಇದೆ. ನಾನು ‘ಗೇ’ ಎನ್ನುವುದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಆದರೆ ಅದನ್ನು ಒಪ್ಪಿಕೊಳ್ಳುವುದು ತುಂಬಾ ತಡವಾಯಿತು. ವಿಷಯವನ್ನು ಮುಚ್ಚಿಟ್ಟುಕೊಂಡ ಕಾರಣದಿಂದಲೇ ಖಿನ್ನತೆಗೆ ಒಳಗಾದೆ’’ ಎಂದರು ವಸುಧೇಂದ್ರ.

‘‘ಹದಿಮೂರನೆ ವಯಸ್ಸಿನ ವೇಳೆಗಾಗಲೇ ನನ್ನ ದೇಹದ ಭಾಷೆ ನನಗೆ ಅರ್ಥವಾಯಿತು. ಆದರೆ ನನ್ನದಲ್ಲದ ತಪ್ಪಿಗಾಗಿ ದೀರ್ಘ ಕಾಲ ಶಿಕ್ಷೆ ಅನುಭವಿಸಿದೆ. ಆ ತಳಮಳದಿಂದ ಹೊರಬರುವುದು ಸಾವು ಬದುಕಿನ ಪ್ರಶ್ನೆ ಅನ್ನಿಸಿತು. ಇ.ಎಂ. ಫಾಸ್ಟರ್ ಕೂಡ ಇಂತಹುದೇ ಸಂಕಟ ಅನುಭವಿಸಿದ್ದ. ಅವನು ಕಾದಂಬರಿಯೊಂದರ ಮೂಲಕ ತನ್ನ ಸಾವಿನ ನಂತರ ‘ತಾನು ಗೇ’ ಎನ್ನುವ ವಿಷಯ ಪ್ರಕಟಗೊಳಿಸಿದ. ಆದರೆ ನಾನು ಸತ್ತ ನಂತರ ಸತ್ಯ ಬಯಲಾಗುವುದು ಬೇಕಿರಲಿಲ್ಲ. ಸತ್ಯ ಹೇಳಿಕೊಳ್ಳಲಿಕ್ಕೆ ಬರವಣಿಗೆಯೊಂದೇ ದಾರಿ ಎನ್ನಿಸಿತು. ಈ ರೀತಿ ‘ಮೋಹನಸ್ವಾಮಿ’ ಕಥೆಗಳು ನನ್ನಿಂದ ಬರೆಸಿಕೊಂಡವು.


ನನ್ನ ಸಂಕಲನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾಹಿತ್ಯ ವಿಮರ್ಶಕರೂ ಸೇರಿದಂತೆ ಗಂಡಸರೆಲ್ಲ ಮೌನವಾಗಿದ್ದರು. ಅವರಿಗೇನೋ ಕಸಿವಿಸಿ. ಮಾಧ್ಯಮಗಳು ಕೂಡ ಮೌನವಾಗಿದ್ದವು. ಆದರೆ, ಮಹಿಳೆಯರಿಂದ ಬಂದ ಪ್ರತಿಕ್ರಿಯೆಗಳು ಉತ್ತೇಜಕವಾಗಿದ್ದವು. ಪತ್ರಿಕೆಗಳಲ್ಲಿ ವಿಮರ್ಶೆಗಳು ಪ್ರಕಟವಾಗದಿದ್ದರೂ ಬ್ಲಾಗ್ ಗಳಲ್ಲಿ ಹದಿನೈದು ಬರಹಗಳು ಪ್ರಕಟವಾದವು. ಅವುಗಳಲ್ಲಿ ಶೇ 99 ಬರಹಗಳನ್ನು ಬರೆದದ್ದು ಮಹಿಳೆಯರೇ’’ ಎಂದರು.

‘‘ಮೋಹನಸ್ವಾಮಿ ಮೂರು ಮುದ್ರಣಗಳನ್ನು ಕಂಡಿದೆ. ಈಗ ಅದರ ಇಂಗ್ಲಿಷ್ ಆವೃತ್ತಿ (ಅನುವಾದ: ರಶ್ಮಿ ತೇರದಾಳ) ಕೂಡ ‘ಹಾರ್ಪರ್ ಕಾಲಿನ್ಸ್’ನಿಂದ ಪ್ರಕಟಣೆಗೆ ಸಿದ್ಧವಾಗಿದೆ. ಇದೆಲ್ಲ ಸಾಹಿತ್ಯಲೋಕದ ಮಾತಾಯಿತು. ಇದರಾಚೆಗೆ, ‘ಮೋಹನಸ್ವಾಮಿ’ ಪುಸ್ತಕದ ಮೂಲಕ ಕರ್ನಾಟಕದ ‘ಗೇ’ ಸಮುದಾಯ ನನ್ನೊಂದಿಗೆ ಮಾತನಾಡತೊಡಗಿತು. ಅವರ ಬಗ್ಗೆ ಆವರೆಗೆ ಕನ್ನಡದಲ್ಲಿ ಯಾರೂ ಬರೆದಿರಲಿಲ್ಲ. ಇಂಗ್ಲಿಷ್ ಗೊತ್ತಿಲ್ಲದವರಿಗೆ ತಾವು ಅನುಭವಿಸುತ್ತಿರುವ ಯಾತನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಾಗಿರಲಿಲ್ಲ.

ಅಂಥ ಜನರೆಲ್ಲ ನನ್ನೊಂದಿಗೆ ಮಾತನಾಡತೊಡಗಿದರು. ಫೋನ್ ಮೂಲಕ, ಭೇಟಿಯಾಗಿ ತಮ್ಮ ಕಥೆಗಳನ್ನು ಹೇಳಿಕೊಳ್ಳತೊಡಗಿದರು. ‘ನನ್ನ ಮಗನಲ್ಲಿ ಇಂಥ ಲಕ್ಷಣಗಳಿವೆ. ಇದನ್ನು ಗಂಡನಿಗೆ ಹೇಳಿಲ್ಲ. ಈಗ ನಾನು ಏನು ಮಾಡಲಿ?’ ಎಂದು ತಾಯಂದಿರು ಕೇಳಿದ್ದಾರೆ. 18ರಿಂದ 65ರ ವಯೋಮಾನದವರೆಗಿನ ಜನರ ಮಾತುಗಳಿಗೆ ಕೇಳಿಸಿಕೊಂಡೆ.

ಆ ವೇಳೆಗೆ ‘ಆಪ್ತಸಲಹೆ’ಗೆ (ಕೌನ್ಸೆಲಿಂಗ್) ಸಂಬಂಧಿಸಿದ ಕೋರ್ಸ್ ಒಂದನ್ನು ನಾನು ಮಾಡಿದ್ದರಿಂದ, ಎಲ್ಲವನ್ನೂ ಕೇಳಿಸಿಕೊಳ್ಳುವ ಶಕ್ತಿ ನನಗೆ ಬಂದಿತ್ತು’’ ಎನ್ನುವ ವಸುಧೇಂದ್ರ, ತಮ್ಮ ‘ಮೋಹನಸ್ವಾಮಿ’ ಕೃತಿ ಒಂದು ಬಗೆಯ ಸಾಮಾಜಿಕ ಚಳವಳಿ ಎಂದೇ ನಂಬಿದ್ದಾರೆ.

ಮೋಹನಸ್ವಾಮಿ ಎನ್ನುವ ಹೆಸರು ಆಕರ್ಷಕವಾಗಿದೆ ಅಲ್ಲವೇ? ಈ ಹೆಸರಿನ ಹಿಂದೆಯೂ ಒಂದು ಸ್ವಾರಸ್ಯಕರ ಕಥೆ ಇದೆ. ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡುವವರು ಸೂಡೊ ನೇಮ್ (ಗುಪ್ತ ನಾಮ, ಸುಳ್ಳು ಹೆಸರು) ಬಳಸುವುದು ಸಹಜ. ಅದೇ ರೀತಿ, ವಸುಧೇಂದ್ರ ಅವರು ರೂಪಿಸಿಕೊಂಡ ಸುಳ್ಳು ಹೆಸರು ‘ಮೋಹನಸ್ವಾಮಿ’. ಈ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ವ್ಯವಹರಿಸುತ್ತಿದ್ದ ಅವರು– ಪುಸ್ತಕ ಬಂದ ಮೇಲೆ ‘ಮೋಹನಸ್ವಾಮಿ’ ಹೆಸರಿನ ಅಕೌಂಟ್‌ ಅನ್ನು ಅಳಿಸಿಹಾಕಿದ್ದಾರಂತೆ.

‘ಮೋಹನಸ್ವಾಮಿ’ ಕೃತಿಯ ಬಗ್ಗೆ ವಿಮರ್ಶಕರು ತಳೆದ ಮೌನ ವಸುಧೇಂದ್ರ ಅವರಿಗೆ ನೋವು ತಂದಿದೆ. ‘‘ನಮ್ಮ ವಿಮರ್ಶಕರು ಅಲ್ಪಸಂಖ್ಯಾತರ ಪರವಾಗಿ ಇರಬೇಕು ಎಂದು ಘೋಷಣೆಗಳನ್ನು ಹೊರಡಿಸುತ್ತಾರೆ. ಆದರೆ, ಅವರು ತಾವು ಪ್ರೀತಿಸುವ ಅಲ್ಪಸಂಖ್ಯಾತರನ್ನಷ್ಟೇ ಗೌರವಿಸುತ್ತಾರೆ. ನಾವು ಕೂಡ ಅಲ್ಪಸಂಖ್ಯಾತರು. ನಾವು ಅವರಿಗೆ ಬೇಡ. ಈ ಪೂರ್ವಗ್ರಹ ಧೋರಣೆ ಸಿಟ್ಟು –ಬೇಸರ ತರಿಸುತ್ತೆ’’ ಎನ್ನುವಾಗ ಅವರ ಮಾತಿನಲ್ಲಿ ಬೇಸರ ಇಣುಕುತ್ತಿತ್ತು.

ಕಥೆ, ಸಿನಿಮಾ, ಮೋಹನಸ್ವಾಮಿ– ಹೀಗೆ, ಮಾತು ಒಂದು ಹಂತ ಮುಟ್ಟುವ ವೇಳೆಗೆ ಎರಡು ತಾಸುಗಳು ಕಳೆದಿದ್ದವು. ಅಕ್ಕಪಕ್ಕದ ಟೇಬಲ್‌ಗಳಲ್ಲಿನ ತಿನಿಸು, ಕಲರವಗಳು ಬದಲಾಗುತ್ತಿದ್ದರೂ ನಮ್ಮ ಮೇಜಿನ ಲೆಕ್ಕಾಚಾರ ಬೇರೆಯದೇ ಆಗಿತ್ತು– ಎರಡು ಇಡ್ಲಿ, ಎರಡು ತಾಸು ಎನ್ನುವ ಸಮೀಕರಣವದು.

‘ಕಾಫಿ ನನಗೆ ಇಷ್ಟ’ ಎಂದು ಮಾತುಕತೆಯ ಆರಂಭದಲ್ಲೇ ವಸುಧೇಂದ್ರ ಹೇಳಿದ್ದರು. ಆ ಇಷ್ಟವಾದ ಕಾಫಿ ಬಂದುದು ಕೊನೆಯಲ್ಲಿ! ಹಬೆಯಾಡುವ ಕಾಫಿಯನ್ನು ಆಘ್ರಾಣಿಸುತ್ತ, ತಮ್ಮ ಮತ್ತೊಂದು ವ್ಯಸನವಾದ ಪ್ರವಾಸದ ಬಗ್ಗೆ ಅವರು ಮಾತನಾಡತೊಡಗಿದರು. ‘‘ಪ್ರವಾಸ ನನಗಿಷ್ಟ. ವಿಶೇಷವಾಗಿ ಚಾರಣ. ಟ್ರೆಕ್ಕಿಂಗ್ ನಮ್ಮ ಅಹಂಕಾರ ಕಡಿಮೆ ಮಾಡುತ್ತದೆ. 

ಚಾರಣದ ಸಂದರ್ಭದಲ್ಲಿ ನಾನು ಅಲ್ಪ ಅನ್ನಿಸುತ್ತದೆ. ಅದರಲ್ಲೂ ಹಿಮಾಲಯದ ಸರಣಿಯ ಚಾರಣಗಳು ನಾವೊಂದು ಹುಳು ಎನ್ನುವ  ಭಾವನೆ ಉಂಟುಮಾಡುತ್ತವೆ. ಇಂಥ ಭಾವನೆ ಬದುಕಿಗೆ ಆಗಾಗ ಬೇಕು. ಚಾರಣದ ಸಂದರ್ಭದಲ್ಲಿ ಹೊಸ ಸ್ನೇಹಿತರು ದೊರೆಯುತ್ತಾರೆ. ಅಂದಹಾಗೆ, ಚಾರಣಕ್ಕೆ ಬರುವವರು ಸಾಮಾನ್ಯವಾಗಿ ಭ್ರಷ್ಟರಲ್ಲ. ಅವರು ಜೀವನಪ್ರೀತಿ ಉಳ್ಳವರು. ನನ್ನಂಥವರಿಗೆ ಒಂಟಿತನ ಹಾಗೂ ಆರೋಗ್ಯದ ಬಗೆಗಿನ ಕಾಳಜಿ ಕೂಡ ಚಾರಣಕ್ಕೆ ಹೋಗಲು ಪ್ರೇರಣೆ ನೀಡುತ್ತದೆ. ಒಂಟಿಯಾಗಿ ಇರುವವರಿಗೆ ಆರೋಗ್ಯದ ಬಗ್ಗೆ ಆತಂಕ ಕಾಡುತ್ತಿರುತ್ತದೆ. ಈ ಅಸುರಕ್ಷತೆ ಕೂಡ ಅವರು ಚಾರಣದಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಒಂದು ಕಾರಣ’’ ಎಂದರು.

‘‘ನಾನು ಟೀವಿ ನೋಡುವುದಿಲ್ಲ. ಅಡುಗೆ ಮಾಡಲು ಬರುತ್ತೆ, ಆದರೆ ಮಾಡಿಕೊಳ್ಳುವುದಿಲ್ಲ. ಅಡುಗೆಯವರನ್ನು ಅವಲಂಬಿಸಿದ್ದೇನೆ. ಆ ಸಮಯವನ್ನೆಲ್ಲ ಓದು–ಬರವಣಿಗೆಗೆ ಬಳಸುವ ಪ್ರಯತ್ನ ನನ್ನದು. ಆದರೆ, ಆರೋಗ್ಯಕ್ಕೆ ಅಗತ್ಯವಾದ ನಡಿಗೆ ಮತ್ತು ಯೋಗಾಭ್ಯಾಸ ತಪ್ಪಿಸುವುದಿಲ್ಲ. ಉಳಿದಂತೆ ಪ್ರವಾಸ, ಕೌನ್ಸೆಲಿಂಗ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ಸಿನಿಮಾ ಸಖ್ಯ ಇದ್ದೇ ಇದೆ’’ ಎಂದು ತಮ್ಮ ದಿನಚರಿ ಹೇಳಿಕೊಂಡರು. 

ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಸುಧೇಂದ್ರ ಈಗ ಪೂರ್ಣ ಪ್ರಮಾಣದ ಬರಹಗಾರರು. ತನ್ನಿಷ್ಟದ ಕೆಲಸ ಮಾಡುತ್ತ ಓಡಾಡಿಕೊಂಡಿರುವುದು ಅವರಿಗಿಷ್ಟ.

‘‘ನನ್ನ ಪುಸ್ತಕಗಳಿಂದ ಬರುವ ವರಮಾನ ನನ್ನೊಬ್ಬನ ಬದುಕಿಗೆ ಸಾಕೆನ್ನಿಸುತ್ತದೆ. ಕುಟುಂಬ ಇದ್ದರೆ ಬರವಣಿಗೆಯನ್ನೇ ನೆಚ್ಚಿಕೊಂಡು ಬದುಕುವುದು ಕಷ್ಟ. ಕನ್ನಡದ ಪುಸ್ತಕ ಮಾರುಕಟ್ಟೆ ಅಷ್ಟೊಂದು ದೊಡ್ಡದಾಗಿಲ್ಲ’’ ಎನ್ನುವ ಲೆಕ್ಕಾಚಾರ ಅವರದು.

ನಮ್ಮ ಎರಡು ತಾಸುಗಳ ಠಿಕಾಣಿಯನ್ನು ಸಹಿಸಿಕೊಂಡ ಮಾಣಿಗೆ ಧನ್ಯವಾದ ಹೇಳುತ್ತ, ಹೋಟೆಲ್‌ನಿಂದ ಹೊರಬೀಳುವ ಮುನ್ನ ಕೇಳಿದ ‘‘ನೀವು ಎಡವಾ ಬಲವಾ? ಸಹಿಷ್ಣುವಾ ಅಸಹಿಷ್ಣುವಾ?’’ ಎನ್ನುವ ಪ್ರಶ್ನೆಗೆ ವಸುಧೇಂದ್ರ ಥಟ್‌ ಎಂದು ಉತ್ತರಿಸಿದರು.

‘‘ನಾನು ಎಡವೂ ಅಲ್ಲ ಬಲವೂ ಅಲ್ಲ. ಸಹಿಷ್ಣುವೂ ಅಲ್ಲ ಅಸಹಿಷ್ಣುವೂ ಅಲ್ಲ. ಎರಡು ಗುಂಪುಗಳದೂ ಅತಿರೇಕ. ಅವರ ನಡವಳಿಕೆಗಳಲ್ಲಿ ಗುಂಪುಗಾರಿಗೆ, ಭ್ರಷ್ಟತೆ ಕಾಣಿಸುತ್ತಿದೆ. ಬಹಿಷ್ಕಾರದಿಂದ ನಾವು ಬೆಳೆಯುವುದಿಲ್ಲ; ಸ್ವೀಕಾರದಿಂದಷ್ಟೇ ಬೆಳವಣಿಗೆ ಸಾಧ್ಯ. ‘ಧಾರವಾಡ ಸಾಹಿತ್ಯ ಸಂಭ್ರಮ’ಕ್ಕೆ ವಿರೋಧ ವ್ಯಕ್ತಪಡಿಸಿದವರು ಕಲ್ಬುರ್ಗಿ ಅವರನ್ನೂ ವಿರೋಧಿಸಿದ್ದರು. ಆಗ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯವೆನ್ನಿಸಲಿಲ್ಲ. ಆಗ ಕಲ್ಬುರ್ಗಿ ಅವರನ್ನು ವಿರೋಧಿಸಿದವರು ಈಗ ಅವರ ಫೋಟೊ ಇಟ್ಟುಕೊಂಡು ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ. ಪ್ರಶಸ್ತಿ ಹಿಂತಿರುಗಿಸುತ್ತಿರುವ ಲೇಖಕರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರ ದ್ವಂದ್ವ ನಿಲುವನ್ನು ಹೇಗೆ ಒಪ್ಪುವುದು?’’ ಎಂದರು.

ಹೋಟೆಲ್‌ನಿಂದ ಹೊರಬಂದು ಕಾರು ಹತ್ತುವ ಮುನ್ನ ವಸುಧೇಂದ್ರ ಹೇಳಿದರು– ‘‘ಈವರೆಗೆ ನಾನು ಬರೆದಿರುವುದು ತುಂಬಾ ಕಡಿಮೆ. ಹೆಚ್ಚು ಬರೆಯಬೇಕಿದೆ. ಕಾದಂಬರಿ ಜಗತ್ತು ನನ್ನನ್ನು ಕರೀತಿದೆ. ಈ ನಿಟ್ಟಿನಲ್ಲಿ ಕುವೆಂಪು ನನಗೆ ಮಾದರಿ, ಬೃಹತ್ತಾದ ಮಹತ್ತಾದ ಒಂದೆರಡು ಕಾದಂಬರಿ ಬರೆಯುವ ಆಸೆ ಇದೆ. ಅದಕ್ಕಾಗಿ ತಯಾರಿಯೂ ನಡೆಸಿದ್ದೇನೆ. ನಾನು ಬಳ್ಳಾರಿಯವನಾದ್ದರಿಂದ ವಿಜಯನಗರದ ಇತಿಹಾಸವನ್ನು ಕಾದಂಬರಿ ರಚನೆಗೆ ಬಳಸಿಕೊಳ್ಳಬಹುದಾ ಎಂದು ಯೋಚಿಸುತ್ತಿರುವೆ’’. 

ಗಾಂಧಿಬಜಾರಿನ ಮುಖ್ಯರಸ್ತೆಯಿಂದ ವಸುಧೇಂದ್ರರ ಕಾರು ಮರೆಯಾಗುವಾಗ ಕಾಣಿಸಿದ್ದು ಅವರ ಫಳಫಳ ಹೊಳೆಯುವ ಬೋಳುತಲೆ. ಹೊಸ ಕೇಶವಿನ್ಯಾಸದ ಕುರಿತ ಪ್ರಶ್ನೆಯೊಂದು ಹಾಗೆಯೇ ಉಳಿಯಿತು.

***
"ಬರವಣಿಗೆ ನನಗೆ ದೇವರು ನೀಡಿರುವ ಕೌಶಲ. ಬರೆಯದೆ ಹೋದರೆ ನನಗೆ ದೊರೆತ ವರವನ್ನು ಅವಮಾನಿಸಿದಂತೆ."
*

"ಕಲ್ಬುರ್ಗಿ ಬದುಕಿದ್ದಾಗ ಅವರನ್ನು ವಿರೋಧಿಸಿದವರು ಈಗ ಅವರ ಫೋಟೊ ಇಟ್ಟುಕೊಂಡು ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ."
*

"ನಮ್ಮ ವಿಮರ್ಶಕರು ಅಲ್ಪಸಂಖ್ಯಾತರ ಪರವಾಗಿ ಇರಬೇಕು ಎಂದು ಘೋಷಣೆಗಳನ್ನು ಹೊರಡಿಸುತ್ತಾರೆ. ಆದರೆ, ಅವರು ತಾವು ಪ್ರೀತಿಸುವ ಅಲ್ಪಸಂಖ್ಯಾತರನ್ನಷ್ಟೇ ಗೌರವಿಸುತ್ತಾರೆ. ನಾವು ಕೂಡ ಅಲ್ಪಸಂಖ್ಯಾತರು. ನಾವು ಅವರಿಗೆ ಬೇಡ."

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT