ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯಗಳನ್ನು ಮೀರಿ ಬದುಕು ಕಟ್ಟಿಕೊಳ್ಳಿ

Last Updated 1 ಜನವರಿ 2014, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಮಾಜಿಕ ಹಾಗೂ ಕೌಟುಂಬಿಕ ವಾತಾ­ವರಣದ ಓರೆ–ಕೋರೆಗಳೇ ವ್ಯಕ್ತಿ­ಯನ್ನು ಅತ್ಯಾಚಾರಿ­ಯನ್ನಾಗಿ ಮಾಡು­ತ್ತವೆ’ ಎಂದು ಸ್ತ್ರೀವಾದಿ ಚಿಂತಕಿ ಮತ್ತು ಹೋರಾಟ­ಗಾರ್ತಿ ಕಮಲಾ ಬಾಸಿನ್  ಹೇಳಿದರು.

ಸ್ವರಾಜ್ ಸಂಘಟನೆ  ಮತ್ತು  ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಹ­ಯೋಗದಲ್ಲಿ ಮಂಗಳ­ವಾರ ಏರ್ಪಡಿಸಿದ್ದ  ‘ನೆಲತಾಯಿ’ ಪ್ರಶಸ್ತಿ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾ­ಟಿಸಿ ಅವರು ಮಾತನಾಡಿದರು.

‘ಜನ್ಮತಃ ಯಾರೂ ಅತ್ಯಾಚಾರಿ­ಗಳಲ್ಲ. ವ್ಯಕ್ತಿ ಸಮಾಜಕ್ಕೆ ತೆರೆದು­ಕೊಳ್ಳುವ ಹಂತದ ಲೋಪಗಳು ದುಷ್ಟರು ಹಾಗೂ ಅತ್ಯಾಚಾರಿಗಳನ್ನು ಸೃಷ್ಟಿಸು­ತ್ತದೆ. ವಿಧವೆಯರು, ಪುರುಷ ಪ್ರಧಾನ ವ್ಯವಸ್ಥೆಯ ಮೌಢ್ಯಗಳನ್ನು  ಮೀರಿ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದು ನುಡಿದರು.

ಲೇಖಕ ಬಂಜಗೆರೆ ಜಯಪ್ರಕಾಶ ‘ಮೌನ ಮಾತಾದಾಗ’ ಪುಸ್ತಕವನ್ನು ಬಿಡುಗಡೆ ಮಾಡಿ, ‘ಮೌನ ಮಾತಾ­ದಾಗ’ ಕೃತಿ ಕೊರಗ ಸಮುದಾಯದ ಜೀವನ ಮೌಲ್ಯಗಳನ್ನು ಕಟ್ಟಿಕೊಡು­ತ್ತದೆ. ಬದುಕಿನ ಅನುಭವಗಳು ಭಿನ್ನ­ವಾದಾಗ ಮಂಡಿಸುವ ಕ್ರಮವೂ ಭಿನ್ನ­ವಾಗುತ್ತದೆ. ತಳ ಮಟ್ಟದ ಅಕ್ಷರ­ಸ್ಥರು ರೂಪಿಸಿರುವ ಈ ಕೃತಿಯಲ್ಲಿ ಮುಖ್ಯ­ವಾಹಿನಿಯ ಸಂಸ್ಕೃತಿಗಳು ಕಲಿಯ­ಬೇಕಾದದ್ದು ಬಹಳಷ್ಟಿದೆ’ ಎಂ­ದರು.

‘ನೂರಾರು ವರ್ಷಗಳಿಂದ ಮೌನ­ವಾಗಿದ್ದ ಬುಡಕಟ್ಟು ಸಮುದಾಯವು ತನ್ನ ಬದುಕನ್ನು ತಾನೇ ಅಭಿವ್ಯಕ್ತಿಸುವ ಪ್ರಯತ್ನವನ್ನು ವಿಮರ್ಶೆಯ ಯಾವ ಪಟ್ಟುಗಳಿಂದಲೂ ಅಳೆಯುವ ಅವಶ್ಯ­ಕತೆ­ಯಿಲ್ಲ’ ಎಂದರು.

ಸ್ತ್ರೀವಾದಿ ಚಿಂತಕಿ ಡಾ.ಗಾಯತ್ರಿ ನಾವಡ, ‘ಅಪ್ಪೆ’ ಕೃತಿಯನ್ನು ಬಿಡುಗಡೆ ಮಾಡಿ, ‘ಈ ಕೃತಿಗಳು ಪರ್ಯಾಯ ಸಂಸ್ಕೃತಿಯ ಬೀಜಗಳನ್ನು ಒಳಗೊಂ­ಡಿವೆ. ಪರ್ಯಾಯ ಸಂಸ್ಕೃತಿಯೆಂದರೆ ಮುಖ್ಯವಾಹಿನಿಯ ಸಂಸ್ಕೃತಿಗೆ ವಿರುದ್ಧ­ವಾದುದಲ್ಲ. ಮಹಿಳೆಯರನ್ನು ಆರ್ಥಿಕ ಸಬಲೀಕರಣದಿಂದ ಬಿಡಿಸಿ ಸಾಂಸ್ಕೃತಿಕ ಸಬಲೀಕರಣದೆಡೆಗೆ ಕೊಂಡೊ­ಯ್ಯ­ಬೇಕಾಗಿದೆ’ ಎಂಬ ಹೊಳಹು ಈ ಕೃತಿ­ಗಳಲ್ಲಿವೆ’ ಎಂದರು.
ಆಕ್ಷನ್ ಏಡ್ ಸಂಸ್ಥೆಯ ಸದಸ್ಯ ಡಾ. ಕ್ಷಿತಿಜ್ ಅರಸ್ ‘ಕಾಡಿನ ನಾಡಿ ಮಿಡಿ­ದಾವು’ ಕೃತಿ ಬಿಡುಗಡೆ ಮಾಡಿದರು.

ವಿಧವಾ ಪದ್ಧತಿಯ ಆಚರಣೆಗಳ  ವಿರುದ್ಧ ದನಿ ಎತ್ತಿದ ಜ್ಯೋತಿ, ಮಹಾ­ದೇವಮ್ಮ, ಸಾಯಿರಾ ದರ್ಗಾ, ಮಾಸಾಬಿ ಮತ್ತು  ಕೊರಗ ಸಮು­ದಾಯದ ರಾಜಮ್ಮ, ಯಾದಮ್ಮ ಅವರಿಗೆ ‘ನೆಲತಾಯಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT