ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲಾಲಿ ಈಗ ಹಮಾಲಿಯಲ್ಲ!

Last Updated 16 ಜನವರಿ 2013, 19:59 IST
ಅಕ್ಷರ ಗಾತ್ರ

ಹಮಾಲಿ ಕೆಲಸ ಮಾಡಿಕೊಂಡಿದ್ದ ಈ ಬಾಲಕ  ಶಾಲೆಯ ಮುಖವನ್ನೇ ಕಂಡವನಲ್ಲ. ಹುಬ್ಬಳ್ಳಿಯ ದುರ್ಗದ ಬೈಲ್, ಭೂಸಪೇಟೆ, ಅಕ್ಕಿಹೊಂಡದಲ್ಲಿ ಲಾರಿಗಳಿಗೆ ಮೂಟೆ ಏರಿಸುವುದು, ಇಳಿಸುವುದು, ಕಿರಾಣಿ ಅಂಗಡಿಗಳಲ್ಲಿ ಸಾಮಾನು ಕಟ್ಟುವುದು ಅವನ ಕೆಲಸವಾಗಿತ್ತು.

`ಲಕ್ಷ ಲಕ್ಷ ಗಳಿಸುವ ವ್ಯಾಪಾರಿಗಳು ನಮಗೇಕೆ ದಿನಕ್ಕೆ 5 ರೂಪಾಯಿ ಕೊಡುತ್ತಾರೆ' ಎನ್ನುವ ಪ್ರಶ್ನೆ 10 ವರ್ಷ ವಯಸ್ಸಿನ ಹುಡುಗನಾಗಿದ್ದಾಗಲೇ ಅವನ ಮನದೊಳಗೆ ಸುಳಿದಿತ್ತು. ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಮೋಸಗಳನ್ನು ಕಣ್ಣಾರೆ ಕಾಣುತ್ತಿದ್ದ ಮೌಲಾಲಿ ಮೋಸಗಾರರ ಜೊತೆ ಜಗಳಕ್ಕಿಳಿಯುತ್ತಿದ್ದ. ಮೋಸವನ್ನು ಪ್ರಶ್ನಿಸಿ ಏಟು ತಿನ್ನುತ್ತಿದ್ದ.

ಮಾರುಕಟ್ಟೆಯಲ್ಲಿ ಏಟು ಕೊಡುತ್ತಿದ್ದ ಜನರಿಗೆ ಬುದ್ಧಿ ಕಲಿಸಲು ಮೌಲಾಲಿ ಕರಾಟೆಗೆ ಸೇರಿದ. ದುಡಿದ ಅಷ್ಟಿಷ್ಟು ಹಣವನ್ನು ಕರಾಟೆ ಕಲಿಯಲು ಕೊಟ್ಟ. ಕುದಿಯುವ ಬಿಸಿರಕ್ತ, ಆಗ ಎದುರಾಳಿಗಳನ್ನು ಹೊಡೆದುರುಳಿಸುವ ಧ್ಯೇಯ ಮಾತ್ರ ಅವನೊಳಗಿತ್ತು. ಕಾಮನಬಿಲ್ಲಿನ ಬಣ್ಣಗಳ ಬೆಲ್ಟ್‌ಗಳನ್ನು ಸೊಂಟಕ್ಕೆ ಕಟ್ಟಿದ. ಕ್ರಮೇಣ ಅವನ ಕರಾಟೆ ಆಸಕ್ತಿ ನೂರ್ಮಡಿಯಾಯಿತು. ಕಡೆಗೆ ಮಾರುಕಟ್ಟೆ ಶತ್ರುಗಳನ್ನು ಮರೆತುಬಿಟ್ಟ!

ಮೌಲಾಲಿ ಈಗ ಹಮಾಲಿ ಹುಡುಗನಲ್ಲ. ಕರಾಟೆ `ಗ್ರ್ಯಾಂಡ್ ಮಾಸ್ಟರ್'. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹಲವು ಬಾರಿ ಗ್ರ್ಯಾಂಡ್ ಚಾಂಪಿಯನ್ ಆಗಿರುವ ಅವರು ಹುಬ್ಬಳ್ಳಿ ಶಾಲಾ ಮಕ್ಕಳ, ಯುವಕ, ಯುವತಿಯರ ಪ್ರೀತಿಯ ಕರಾಟೆ ಮೇಸ್ಟ್ರು. 20 ಶಾಲೆಗಳ 5,000 ಮಕ್ಕಳಿಗೆ ದಿನನಿತ್ಯ ಪಾಠ.

ಸೂರ್ಯ ಉದಯಿಸುವುದಕ್ಕೆ ಮೊದಲು ಸೊಂಟಕ್ಕೆ ಬೆಲ್ಟು ಕಟ್ಟಿದರೆ, ತೆಗೆಯುವುದು ಸೂರ್ಯ ಮುಳುಗಿದ ಮೇಲೆ. ಹುಬ್ಬಳ್ಳಿಯ ಯಾವುದೇ ಶಾಲಾ ಆವರಣದಲ್ಲಿ ಮೌಲಾಲಿ ಅಂದರೆ ಸಾಕು, ಮಕ್ಕಳ ಮುಖದ ಮೇಲೊಂದು ಚೈತನ್ಯ ಅರಳುತ್ತದೆ. ಈಗ ಮೌಲಾಲಿ ನಾಲ್ಕನೇ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಗ್ರಾಂಡ್‌ಮಾಸ್ಟರ್(ಕರಾಟೆ ಮಾಸ್ಟರ್‌ಗಳಿಗೆ ಮಾಸ್ಟರ್), ಟ್ರಿನಿಟಿ ಶೋಟಕಾನ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ.

ಮೌಲಾಲಿಯ ಇನ್ನೊಂದು ಮುಖ!
ಮೌಲಾಲಿಯ ಇನ್ನೊಂದು ಮುಖ ಇನ್ನಷ್ಟು ಆಶ್ಚರ್ಯ ಹುಟ್ಟಿಸುವಂಥದ್ದು. ಶಾಲೆಯ ಮುಖವನ್ನೇ ಕಾಣದ ಮೌಲಾಲಿ ಶಿಕ್ಷಣ ಸಂಸ್ಥೆಯೊಂದರ ಮಾಲೀಕ. ಶಾಲೆಗೆ ಹೋಗದ ಹುಡುಗನಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವ ಕನಸು ಅರಳಿದ್ದು ಆಶ್ಚರ್ಯವೇ. ಹುಬ್ಬಳ್ಳಿಯಲ್ಲಿ ಟ್ರಿನಿಟಿ ಎಜುಕೇಶನ್ ಸೊಸೈಟಿಯ ಇಂಗ್ಲಿಷ್ ಮಾಧ್ಯಮ ಶಾಲೆ ಅಭಿವೃದ್ಧಿ ಹೊಂದುತ್ತಿರುವ ಶಾಲೆಗಳಲ್ಲೊಂದು.

ನಾಲ್ಕನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶಾಲೆಗೆ ಮೌಲಾಲಿ ಅವರ ಚಿಂತನೆಗಳೇ ಆಧಾರ. ಅವರ ಕನಸುಗಳೇ ಅಡಿಪಾಯ. ಗೋಕುಲ ರಸ್ತೆಯ ಸಣ್ಣ ಬಾಡಿಗೆ ಕೊಠಡಿಯಲ್ಲಿ ಕಾಣಿಸಿಕೊಂಡ ಈ ಶಾಲೆ ಇಂದು ಎತ್ತರಕ್ಕೆ ಏರುತ್ತಿದೆ. ಮೌಲಾಲಿ ಕಂಡ ಸ್ವಂತ ಕಟ್ಟಡದ ಕನಸು ಸಾಕಾರಗೊಂಡಿದೆ.

ಹುಬ್ಬಳ್ಳಿಯ ಗುಡಿಯಾಳ ರಸ್ತೆಯಲ್ಲಿ ಐದು ಗುಂಟೆ ಭೂಮಿ ಕೊಂಡು ಮೌಲಾಲಿ ಸ್ವಂತ ಕಟ್ಟಡ ಕಟ್ಟಿದ್ದಾರೆ. ಸ್ವಂತ ಶಾಲೆಯಿದ್ದರೂ ಮೌಲಾಲಿ ಬೇರೆ ಶಾಲೆಗಳಿಗೆ ತೆರಳಿ ಕರಾಟೆ ಪಾಠ ಮಾಡುವುದನ್ನು ಬಿಟ್ಟಿಲ್ಲ. ಹಳೇಹುಬ್ಬಳ್ಳಿಯ ಸಣ್ಣ ಮನೆಯೊಂದರಲ್ಲಿ ವಾಸವಿದ್ದರೂ, ಅವರ ಕೆಲಸಗಳು, ಕನಸುಗಳು ಸಣ್ಣವಲ್ಲ. ಎಲ್ಲರ ಪ್ರೀತಿ ಗಳಿಸುವ ಗುಣವಿರುವ ಮೌಲಾಲಿ ದಾರಿಯಲ್ಲಿ ಹೊರಟು ನಿಂತರೆ, ರಸ್ತೆಯುದ್ದಕ್ಕೂ `ಕರಾಟೆ ನಮಸ್ಕಾರ'ಗಳ ಮಳೆ ಸುರಿಯುತ್ತದೆ.

ಹುಬ್ಬಳ್ಳಿಗೆ ಬಂದ ಜಪಾನ್!
ಈಚೆಗೆ ಮೌಲಾಲಿ ಹುಬ್ಬಳ್ಳಿಯಲ್ಲಿ ತಮ್ಮ ಕರಾಟೆ ಸಂಘದ ವತಿಯಿಂದ `ಅಂತರರಾಷ್ಟ್ರೀಯ ಶೋಟಕಾನ್ ಕರಾಟೆ ತರಬೇತಿ' ಶಿಬಿರ ಆಯೋಜಿಸಿದ್ದರು. ನೂರಾರು ಕರಾಟೆಪಟುಗಳು ಈ ಶಿಬಿರದಲ್ಲಿ ವಿವಿಧ ಡಿಗ್ರಿಗಳ ಬ್ಲ್ಯಾಕ್‌ಬೆಲ್ಟ್ ಪಡೆದರು. ಅವರಿಗೆಲ್ಲಾ ಬ್ಲ್ಯಾಕ್ ಬೆಲ್ಟ್ ತೊಡಿಸಲು ಜಪಾನ್‌ನ ಕರಾಟೆ ದಂತಕತೆ, 65 ವರ್ಷ ವಯಸ್ಸಿನ ಯುವಕ ಹುಬ್ಬಳ್ಳಿಗೆ ಬಂದಿದ್ದರು.

ಅವರು ಯೂನಿವರ್ಸಲ್ ಶೋಟಕಾನ್ ಕರಾಟೆ ಅಸೋಸಿಯೇಷನ್ (ಯುಎಸ್‌ಕೆಯು)ನ ಹಿರಿಯ ಅಂತರರಾಷ್ಟ್ರೀಯ ತರಬೇತುದಾರ, ಜಪಾನ್ ಕರಾಟೆ ಫೆಡರೇಷನ್(ಜೆಕೆಎಫ್) ರೆಫರಿ, ಶಿಯಾನ್ ಕೆನೆಚಿ ಫುಕಮಿಜು.

ಮೌಲಾಲಿ ಮಾಡಿದ ಇನ್ನೊಂದು ಕೆಲಸವೆಂದರೆ, ಹುಬ್ಬಳ್ಳಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಶಿಯಾನ್ ಅವರನ್ನು ಕರೆದುಕೊಂಡು ಹೋಗಿ ಕರಾಟೆ ಬಗ್ಗೆ ಉಪನ್ಯಾಸ ಕೊಡಿಸಿದರು. ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತ ಚರ್ಚೆಯನ್ನು ಉಪನ್ಯಾಸದಲ್ಲಿ ಉಲ್ಲೇಖಿಸಿದ ಶಿಯಾನ್, `ಹೆಣ್ಣುಮಕ್ಕಳು ಶೋಟಕಾನ್ ಕರಾಟೆ ಕಲಿತು ಅತ್ಯಾಚಾರಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು' ಎಂದು ಬಲವಾಗಿ ಪ್ರತಿಪಾದಿಸಿದರು. ಶಿಯಾನ್ ಹುಬ್ಬಳ್ಳಿಯಲ್ಲಿದ್ದಷ್ಟು ದಿನ ವಿದ್ಯಾರ್ಥಿಗಳಿಗೆ ಒಂದು ರೀತಿಯ `ಕರಾಟೆ ಜ್ವರ' ಬಂದಿತ್ತು.

ಮೌಲಾಲಿ 2007ರಲ್ಲಿ ಕೇರಳದಲ್ಲಿ ಶಿಯಾನ್ ಅವರನ್ನು ಭೇಟಿ ಮಾಡಿದ್ದರು. ಅಲ್ಲಿಂದ ಮೌಲಾಲಿಯ ಕರಾಟೆ ಬದುಕಿಗೆ ಹೊಸ ತಿರುವು ದೊರೆಯಿತು. ಮೌಲಾಲಿಯ ಪ್ರತಿಭೆಯನ್ನು ಮೆಚ್ಚಿದ ಶಿಯಾನ್, ಕಾಟ (ಕಾಳಗ), ಕುಮ್ಟೆ (ಸಾಹಸ) ಕರಾಟೆ ಪ್ರಕಾರಗಳನ್ನು ಕಲಿಸಿದರು. ಶಿಯಾನ್ ಭಾರತಕ್ಕೆ ಬಂದಾಗಲೆಲ್ಲಾ ಮೌಲಾಲಿ, ಅವರನ್ನು ಭೇಟಿಯಾಗಿ ಪಾಠ ಹೇಳಿಸಿಕೊಳ್ಳುವ ಪರಿಪಾಠ ಈಗಲೂ ಮುಂದುವರಿದಿದೆ.

ಟ್ರಿನಿಟಿ ಶಿಕ್ಷಣ ಸಂಸ್ಥೆ 
20 ಶಾಲೆಗಳಲ್ಲಿ ಕರಾಟೆ ಕಲಿಸುತ್ತಿದ್ದ ಮೌಲಾಲಿ ಶಾಲೆ ನಡೆಸುವ ಸಾಧಕ, ಬಾಧಕಗಳನ್ನು ಕಣ್ಣಾರೆ ಕಂಡಿದ್ದರು. ಸರ್ಕಾರದ ಅನುಮತಿಗಾಗಿ ಮೌಲಾಲಿ ಫೈಲ್ ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದರು. `ಈ ಹುಡುಗನಿಗೇನೋ ಭ್ರಮೆ' ಎಂದವರಿಗೆ, `ಶಾಲೆ ಅಂದರೆ ಹುಡುಗಾಟವೆ' ಎಂದವರಿಗೆ ಲೆಕ್ಕವಿಲ್ಲ.

ಕ್ರೀಡಾ ಮನೋಭಾವದ ಮೌಲಾಲಿ ಸೋಲಿನ ಮಾತುಗಳಿಗೆ ಗೋಲಿ ಹೊಡೆದರು. ಮನೆ ಮನೆ ಅಲೆದು, ಕಚೇರಿ ಕಚೇರಿ ಸುತ್ತಿ ಸರ್ಕಾರದ ಅನುಮತಿಯನ್ನು ಗಿಟ್ಟಿಸಿಕೊಂಡೇ ಬಿಟ್ಟರು. 2009ರಲ್ಲಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಬಾಡಿಗೆ ಕೊಠಡಿಯೊಂದರಲ್ಲಿ ಪ್ರಿ- ನರ್ಸರಿಯಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. ಈಗ ಸ್ವಂತ ಕಟ್ಟಡ ಹೊಂದಿದ್ದು, ಮೌಲಾಲಿ ಆಡಳಿತದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಬೆನ್ನಟ್ಟಿಯಲ್ಲಿ ಬರ ಬೆನ್ನಟ್ಟಿದಾಗ
ಒಂಬತ್ತು ಮಂದಿ ಸಹೋದರ, ಸಹೋದರಿಯರಲ್ಲಿ ಮೌಲಾಲಿ ಏಳನೆಯವರು. ಅವರ ಮೂಲ ಯಾದಗಿರಿ ಜಿಲ್ಲೆಯ ಬೆನ್ನಟ್ಟಿ. ಚಾಂದ್‌ಬೀಬಿ, ಮೆಹಬೂಬ್ ಸಾಬ್ ಅವರ ಪೋಷಕರು. ಅವರ ಮೂಲ ಕಸುಬು ಕೃಷಿ. ಯಾದಗಿರಿಯ ಬರ ಅವರ ಜಮೀನು ಕಿತ್ತುಕೊಂಡಿತು. ಮಾಡಿದ ಸಾಲಕ್ಕೆ ತಮ್ಮ ಎಂಟು ಎಕರೆ ಜಮೀನನ್ನೇ ವಜಾ ಮಾಡಿ ಹುಬ್ಬಳ್ಳಿಗೆ ಗುಳೆ ಬಂದ ಕುಟುಂಬವದು.

ನಂತರ ಕೂಲಿ ಅವರ ಉದ್ಯೋಗವಾಯಿತು. ಮಕ್ಕಳಿಗೆ ಶಾಲೆ ಮಾತು ಹಾಗಿರಲಿ, ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಕಷ್ಟವಾಗಿತ್ತು. ಶಾಲೆ ಕಲಿಯಬೇಕೆಂಬ ಮೌಲಾಲಿಯ ಮಹದಾಸೆ ಭಗ್ನವಾಯಿತು. ಕೈಗೆ ತಳ್ಳುವ ಗಾಡಿ ಬಂತು. ಬೆನ್ನಿಗೆ ಮೂಟೆಗಳು ಏರಿದವು. ಸಂಸಾರದ ನೊಗವೂ ಮೌಲಾಲಿ ಮೇಲೆ ಬಿತ್ತು.

ಹಮಾಲಿಯಿಂದ ಶಿಕ್ಷಕನಾಗಿ ಬಡ್ತಿ!
2003ರ ನಂತರ ಮೌಲಾಲಿ ಒಂದನೇ ಡಿಗ್ರಿ ಬ್ಲ್ಯಾಕ್ ಬೆಲ್ಟ್ ಗಳಿಸಿದ ಮೇಲೆ ಹಮಾಲಿ ಕೆಲಸಕ್ಕೆ ಗುಡ್ ಬೈ ಹೇಳಿ, ಕರಾಟೆ ಶಾಲಾ ಶಿಕ್ಷಕರಾಗಿ ಶಾಲೆಯೊಂದರಲ್ಲಿ ನೇಮಕಗೊಂಡರು. ಬಹುಶಃ ಹಮಾಲಿ ಕೆಲಸದಿಂದ ಶಿಕ್ಷಕನಾಗಿ ಬಡ್ತಿ ಪಡೆದವರು ಮೌಲಾಲಿ ಒಬ್ಬರೇ ಇರಬೇಕು!

ಕರಾಟೆಯಲ್ಲಿ ಬೆಳೆಯುತ್ತ ಹೋದ ಮೌಲಾಲಿ ಹಲವು ರಾಷ್ಟ್ರಮಟ್ಟದ ಬಹುಮಾನಗಳನ್ನು ಮುಡಿಗೇರಿಸಿಕೊಂಡರು. ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರೀಯ ಶೋಟಕಾನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ 2003ರಿಂದ 2006ರವರೆಗೂ ಗ್ರ್ಯಾಂಡ್ ಚಾಂಪಿಯನ್ ಆದರು.

2005ರಲ್ಲಿ ಹೊಸಪೇಟೆಯಲ್ಲಿ ನಡೆದ ರಾಷ್ಟೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್, 2009ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು. ಆನಂತರ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿ ತಮ್ಮ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಸನ್ನದ್ಧಗೊಳಿಸಲು ಆರಂಭಿಸಿದರು. ಈಗ ಅವರ ವಿದ್ಯಾರ್ಥಿಗಳೇ ಕರಾಟೆ ಮಾಸ್ಟರ್ ಆಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ್ದಾರೆ.

ಕನಸು ಕನವರಿಕೆ
ಮೌಲಾಲಿ ದೊಡ್ಡ ಕನಸು ಕಾಣುವ ಹುಡುಗ. ಅವುಗಳನ್ನು ಸಾಕಾರಗೊಳಿಸಲು ಟೊಂಕ ಕಟ್ಟಿ ನಿಲ್ಲುವವರು. ಇಷ್ಟೆಲ್ಲಾ ಸಾಧನೆಗಳು ಮೌಲಾಲಿ ಲೆಕ್ಕದಲ್ಲಿ ಸಾಧನೆಗಳೇ ಅಲ್ಲ, ಬರೀ ಆರಂಭವಷ್ಟೆ. ಇನ್ನೂ ಹಲವು ಕನಸು, ಕನವರಿಕೆಗಳಿವೆ. `ಇನ್ನೂ ಜಪಾನ್, ಚೀನಾ, ಮಲೇಶಿಯಾಗಳಿಗೆ ತೆರಳಬೇಕು.

ಅಂತರರಾಷ್ಟ್ರೀಯ ಮಟ್ಟದ ಕರಾಟೆ ತರಬೇತುದಾರನಾಗಬೇಕು, ಭಾರತ ದೇಶವನ್ನು ಪ್ರತಿನಿಧಿಸಬೇಕು...ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಗಬೇಕು. ಕಾರವಾರ ರಸ್ತೆಯಲ್ಲಿ ಕಾಲೇಜೊಂದನ್ನು ಕಟ್ಟಬೇಕು. ಶಾಲಾ ವಂಚಿತ ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸಬೇಕು...' ಇಷ್ಟೆಲ್ಲಾ ಕನವರಿಕೆಗಳಿರುವ ಮೌಲಾಲಿ ಒಬ್ಬ ಕನಸುಗಾರ.

ಅತ್ಯಾಚಾರಿಗಳ ವಿರುದ್ಧ `ಅಸ್ತ್ರ'
ಮೌಲಾಲಿ ಈಗ ವಿದ್ಯಾರ್ಥಿನಿಯರಿಗಾಗಿ ಶೋಟಕಾನ್ ಕರಾಟೆ ಕಲಿಸುತ್ತಿದ್ದಾರೆ. ಹುಬ್ಬಳ್ಳಿಯ ಎಲ್ಲಾ ಕಾಲೇಜುಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿನಿಯರನ್ನು ಸಂಘಟಿಸಿ ಕರಾಟೆ ಕಲಿಕಾ ಶಿಬಿರ ಆಯೋಜಿಸುತ್ತಿದ್ದಾರೆ. `ಶೋಟಕಾನ್ ಕರಾಟೆಯಲ್ಲಿರುವ ಸರಳ ತಂತ್ರಗಳ ಮೂಲಕ ಆಕ್ರಮಣಕಾರರನ್ನು, ಅತ್ಯಾಚಾರಿಗಳನ್ನು ಎದುರಿಸಿ ಓಡಿಸಬಹುದು.

ಹೆಣ್ಣುಮಕ್ಕಳು ತಮ್ಮ ಮಾನ ಮತ್ತು ಪ್ರಾಣ ರಕ್ಷಣೆಗೆ ಕರಾಟೆಯನ್ನು ಅಸ್ತ್ರವಾಗಿ ಬಳಸಬೇಕು' ಎಂದು ವಿದ್ಯಾರ್ಥಿನಿಯರ ಮುಂದೆ ಸಾರಿ ಹೇಳುತ್ತಿದ್ದಾರೆ. ಮಾಲಾಲಿ ಅವರನ್ನು ಕಾಲೇಜುಗಳು, ಸಂಘ-ಸಂಸ್ಥೆಗಳು ಆಹ್ವಾನಿಸಿ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿ ಕೊಡಿಸಬಹುದು. 

ಅವರನ್ನು ಸಂಪರ್ಕಿಸಲು ಮೊ; 9916871904 ಸಂಖ್ಯೆಯನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT