ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ಕಳೆದುಕೊಂಡ ರಾಜಕೀಯ ಕ್ಷೇತ್ರ

Last Updated 6 ಫೆಬ್ರುವರಿ 2012, 10:25 IST
ಅಕ್ಷರ ಗಾತ್ರ

ಕಡೂರು: ಮಹಿಳೆಯರಲ್ಲಿ ತಿಳಿವಳಿಕೆ ಸ್ವಾವಲಂಬನೆ ಆತ್ಮವಿಶ್ವಾಸ ಇದ್ದು ಮುಂದಿನ ದಿನಗಳು ಮಹಿಳೆಯರ ದಿನಗಳಾಗಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಆಶಿಸಿದರು.
ಕಡೂರು ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನ ಭಾನುವಾರ ಅವರು ಮಾತನಾಡಿದರು.

ಇಂದು ತಳಹಂತದ ರಾಜಕೀಯದಲ್ಲಿ ಮಹಿಳೆ ಶೇ.33 ಮೀಸಲಾತಿ ಪಡೆದಿದ್ದು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮೀಸಲಾತಿ ಪಡೆಯುವುದು ಬಾಕಿ ಇದೆ. ನಮ್ಮನ್ನು ನಾವು ಸಂಘಟಿತರಾಗಿ ಮಾಡಿಕೊಂಡಲ್ಲಿ ಮುಂದಿನ ದಿನಗಳು ಮಹಿಳೆಯರ ದಿನಗಳಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಪ್ರಸ್ತುತ ಎಲ್ಲ ರಂಗಗಳನ್ನು ಅವಲೋಕಿಸಿದಾಗ ಮೌಲ್ಯಗಳು ಗಾಳಿಗೆ ತೂರಲ್ಪಟ್ಟಿವೆ. ರಾಜಕೀಯ ಕ್ಷೇತ್ರದಲ್ಲಿ ಮೌಲ್ಯಗಳು ಉಳಿದಿಲ್ಲ, ರಾಜಕೀಯ ಎನ್ನುವುದು ಮಾರುಕಟ್ಟೆಯಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿಯೂ ಒಡಕಿದೆ, ಇನ್ನು ಕುಟುಂಬಗಳಲ್ಲಿ ಇಂದಿನ ಮಕ್ಕಳು ತಂದೆ-ತಾಯಿಯರ ಮಾತುಗಳನ್ನು ಕೇಳುವುದಿಲ್ಲ, ಏನಾದರೂ ಹೇಳಿದರೆ ತಲೆಮಾರಿನ ಅಂತರ(ಜನರೇಷನ್ ಗ್ಯಾಪ್) ಎನ್ನುತ್ತಾರೆ. ಇದರಿಂದ ಕುಟುಂಬದಲ್ಲಿ ಪ್ರೀತಿ ಎಲ್ಲಿದೆ? ಮಕ್ಕಳು ಹೆತ್ತವರನ್ನು ಮರೆತು ವೃದ್ಧಾಶ್ರಮಗಳಿಗೆ ಅಟ್ಟುವ ಕಾಲ ಬಂದಿದೆ ಎಂದು ವಿಷಾದಿಸಿದರು.

ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ತಾವು ಸ್ಥಾಪಿಸಿದ ಸ್ತ್ರೀಶಕ್ತಿ ಸಂಘಗಳು ಇಂದು ಚುನಾವಣೆ ಕಾಲದಲ್ಲಿ ರಾಜಕೀಯ ವ್ಯಾಪಾರಕ್ಕೆ ಸೀಮಿತಗೊಂಡಿವೆ. ಎಲ್ಲೋ ಕೆಲವರು ಸಂಘಗಳನ್ನು ಉಳಿಸಿ, ಬೆಳೆಸಿ, ಉಳಿತಾಯ ಮಾಡಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಏನೇ ಆದರೂ ಮಹಿಳೆಗೆ ಸ್ವಾವಲಂಬನೆ ಕಲಿಸುವ, ಶಕ್ತಿ ತುಂಬುವ ಕೆಲಸವನ್ನು ಅಧಿಕಾರದಲ್ಲಿದ್ದಾಗ ಮಾಡಿದೆವು ಎಂದರು.

ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಬಾರದೆಂಬ ನಿಲುವು ಇದೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರಾಜಕೀಯ ಶುದ್ಧೀಕರಣ ಮಾಡುವ ಮತ್ತು ಒಡೆದ ಮನಸುಗಳನ್ನು ಒಂದು ಮಾಡುವ ಪ್ರಯತ್ನ ಮಾಡುವುದಾಗಿ ಭರವಸೆ ಮೂಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗಳ ಒಳಗೆ ಇದು ನಡೆಯಲಿ ಎಂದು ಅವರು ಕೋರಿದರು.

ಕಾರ್ಯಕ್ರಮದ ನೇತೃತ್ವವನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸಭೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಗಿನೆಲೆ ಈಶ್ವರಾನಂದಪುರಿ ಸ್ವಾಮೀಜಿ, ಕೆರಗೋಡಿ ರಂಗಾಪುರದ ಗುರು ಪರದೇಶಿಕೇಂದ್ರ ಸ್ವಾಮೀಜಿ, `ಪ್ರಜಾವಾಣಿ~ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಸಂಸತ್ ಸದಸ್ಯ ಜಿ.ಎಸ್. ಬಸವರಾಜ್, ಶಾಸಕರಾದ ಸುರೇಶ್, ನಾಗೇಶ್, ವಿಶ್ವನಾಥ್, ಗಾಯತ್ರಿ ಶಾಂತೇಗೌಡ, ಭಾರತೀಯ ಕೃಷಿ ಅನುಸಂಧಾನ ಮಂಡಳಿಯ ಡಾ.ಪ್ರಭುಕುಮಾರ್ ಮುಂತಾದವರು ಇದ್ದರು.

ಗೀತೆ ಹಾಡಿದ ಮೋಟಮ್ಮ: ಭಾಷಣ ಮುಗಿಯುವ ಮುನ್ನ ಮೋಟಮ್ಮ ಒಂದು ಗಣಪತಿ ಸ್ತುತಿ, ಮತ್ತೊಂದು ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರ ಮನರಂಜಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT