ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ: ಇನ್ನಷ್ಟು ಎಡವಟ್ಟು!

Last Updated 5 ಡಿಸೆಂಬರ್ 2013, 19:32 IST
ಅಕ್ಷರ ಗಾತ್ರ

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್‌ ಅಧಿಕಾರಿಗಳ ನೇಮಕಾತಿ ಸಲು­ವಾಗಿ ಕೆಪಿಎಸ್‌ಸಿ ನಡೆಸಿದ ಮುಖ್ಯ ಪರೀ­ಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ­ಮಾ­ಪನದಲ್ಲಿ ಇನ್ನೂ ಹಲವು ಎಡವ­ಟ್ಟು­ಗಳಾ­ಗಿವೆ ಎಂಬುದನ್ನು  ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ಕನ್ನಡ ಮಾಧ್ಯಮದ ಮೌಲ್ಯ­ಮಾ­ಪ­ಕರು ಇಂಗ್ಲಿಷ್‌ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಹಾಗೂ ಇಂಗ್ಲಿಷ್‌ ಮಾಧ್ಯ­ಮದ ಮೌಲ್ಯಮಾಪಕರು ಕನ್ನಡ ಮಾಧ್ಯ­ಮದ ಉತ್ತರ ಪತ್ರಿಕೆಗಳನ್ನು ಮೌಲ್ಯ­ಮಾ­ಪ­ನ ಮಾಡಿದ್ದಾರೆ.

ಮೌಲ್ಯ­ಮಾಪನಕ್ಕೆ ಉತ್ತರ ಪತ್ರಿಕೆಗಳನ್ನು ನೀಡು­ವಾಗ  ಮಾಧ್ಯ­­ಮದ ಬಗ್ಗೆ ಕೆಪಿಎಸ್‌ಸಿ ತಲೆ ಕೆಡಿಸಿ­ಕೊಂಡಿಲ್ಲ. ಬೇರೆ ಬೇರೆ ವಿಶ್ವ­ವಿದ್ಯಾ­ಲಯ­ಗಳಿಂದ ಮೌಲ್ಯ­ಮಾಪಕರ ಪಟ್ಟಿ ತರಿಸು­ವಾಗಲೂ ಈ ಬಗ್ಗೆ ಎಚ್ಚರ ವಹಿ­ಸಲಿಲ್ಲ. ಮಹತ್ವ­ವಾದ ಪರೀಕ್ಷೆಯ ಉತ್ತರ ಪತ್ರಿಕೆ­ಗಳನ್ನು ಮೌಲ್ಯಮಾಪನ ಮಾಡು­ವಾ­ಗಲೂ ಈ ರೀತಿ ನಡೆದುಕೊಂಡಿದ್ದರಿಂದ ಬೇಕಾ­ಬಿಟ್ಟಿ ಮೌಲ್ಯ­ಮಾಪನವಾಗಿದೆ. ಅಲ್ಲ­ದೆ ಹಲವರಿಗೆ ಅನ್ಯಾಯವಾಗಿದೆ ಎಂದು ಸಿಐಡಿ ಅಭಿಪ್ರಾಯಪಟ್ಟಿದೆ.

ಭೂಗೋಳ ಮೋಹ: ಕೆಪಿಎಸ್‌ಸಿ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರು ಭೂಗೋಳ ಐಚ್ಛಿಕ ವಿಷಯ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನೀಡುವಂತೆ ಸೂಚಿಸಿದ್ದರು ಎಂಬ ಆರೋಪವಿತ್ತು. ಈ ಬಗ್ಗೆ ತನಿಖೆ ನಡೆಸಿ­ದಾಗ ಇದು ಸತ್ಯ ಎನ್ನು­ವುದು ಸಿಐಡಿ ಪೊಲೀಸರಿಗೆ ಗೋಚ­ರಿಸಿದೆ. ಮುಖ್ಯ ಪರೀಕ್ಷೆಯಲ್ಲಿ ಭೂಗೋಳ­ವನ್ನು ಐಚ್ಛಿಕ ವಿಷಯವ­ನ್ನಾಗಿ ತೆಗೆದು­ಕೊಂಡ 716 ಅಭ್ಯರ್ಥಿ­ಗಳು ಇದ್ದರು. ಇದರಲ್ಲಿ 571 ಅಭ್ಯರ್ಥಿ­ಗಳು ಪೇಪರ್‌–1 ಮತ್ತು ಪೇಪರ್‌–2 ಪರೀಕ್ಷೆಗೆ ಹಾಜ­ರಾಗಿದ್ದರು.

ಇದರಲ್ಲಿ 165 ಅಭ್ಯರ್ಥಿಗಳು ಸಂದ­ರ್ಶನಕ್ಕೆ ಅರ್ಹತೆ ಪಡೆ­ದುಕೊಂಡಿ­ದ್ದಾರೆ. ಅಂದರೆ ಸಂದರ್ಶನ­ಕ್ಕೆ ಹಾಜ­ರಾದ ಒಟ್ಟು ಅಭ್ಯರ್ಥಿಗಳ ಪೈಕಿ ಶೇ 15­ರಷ್ಟು ಮಂದಿ ಭೂಗೋಳವನ್ನು ಐಚ್ಛಿಕ ವಿಷಯ­ವ­ನ್ನಾಗಿ ಪಡೆದುಕೊಂಡವರೇ ಆಗಿ­ದ್ದಾರೆ. ಇದ­ರಿಂದ ಗೋನಾಳ ಭೀಮಪ್ಪ ಮೇಲಿನ ಆರೋಪ ಮೇಲ್ನೋಟಕ್ಕೆ ಸತ್ಯ ಎಂದು ಗೋಚರವಾಗುತ್ತದೆ. ಈ ಬಗ್ಗೆ ಇನ್ನಷ್ಟು ತನಿಖೆ ಅಗತ್ಯ­ವಿದೆ ಎಂದು ಸಿಐಡಿ ಅಭಿಪ್ರಾಯ­ಪಟ್ಟಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಉತ್ತರ ಪತ್ರಿಕೆಗಳನ್ನು ಅರ್ಥಶಾಸ್ತ್ರ ಮೌಲ್ಯ­­­ಮಾಪಕರು ಹಾಗೂ ಮಾನವ­ಶಾಸ್ತ್ರದ ಉತ್ತರ ಪತ್ರಿಕೆಗಳನ್ನು ಸಮಾಜ ವಿಜ್ಞಾನದ ಮೌಲ್ಯಮಾಪಕರು ಮೌಲ್ಯ­ಮಾಪನ ಮಾಡಿ­ದ್ದಾರೆ ಎನ್ನುವ ಆರೋ­ಪ­­­­ದ ಬಗ್ಗೆಯೂ ತನಿಖೆ ನಡೆಸಿ­ದಾಗ ಇವೆಲ್ಲಾ ಸತ್ಯ ಎನ್ನುವುದು ಗೊತ್ತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದಲ್ಲಿ 3,618 ಹಾಗೂ ಮಾನವ­­­ಶಾಸ್ತ್ರ ವಿಷಯದಲ್ಲಿ 614 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದ ಉತ್ತರ ಪತ್ರಿಕೆಗಳನ್ನು ಅರ್ಥಶಾಸ್ತ್ರದ 105 ಮೌಲ್ಯ­ಮಾಪಕರು ಮೌಲ್ಯಮಾಪನ ಮಾಡಿ­­ದ್ದಾರೆ.

ಮಾನವಶಾಸ್ತ್ರ ವಿಷಯದ ಉತ್ತರ ಪತ್ರಿಕೆಗಳನ್ನು 21 ಮಂದಿ ಸಮಾಜ ವಿಜ್ಞಾನದ ಮೌಲ್ಯಮಾಪಕರು ಮೌಲ್ಯ­ಮಾಪನ ಮಾಡಿದ್ದಾರೆ. ಗ್ರಾಮೀ­ಣಾ­ಭಿವೃದ್ಧಿ ಮತ್ತು ಸಹಕಾರ ವಿಷಯ­ದಲ್ಲಿ ವಿಶ್ವವಿದ್ಯಾಲಯ ಕಳು­ಹಿಸಿದ 10 ಮಂದಿ ತಜ್ಞರ ಪಟ್ಟಿ ಕೆಪಿಎಸ್‌ಸಿ ಬಳಿ ಇದ್ದರೂ ಅವರಲ್ಲಿ ಯಾರನ್ನೂ ಮೌಲ್ಯ­ಮಾಪನಕ್ಕೆ ಬಳ­ಸಿ­­­­ಕೊಳ್ಳದೇ ಇರುವುದರ ಬಗ್ಗೆ ಸಿಐಡಿ ಅಚ್ಚರಿ ವ್ಯಕ್ತಪಡಿಸಿದೆ.

ಮಾನವ ಶಾಸ್ತ್ರ ವಿಷಯದಲ್ಲಿ 18 ಮಂದಿ ತಜ್ಞ ಮೌಲ್ಯಮಾಪಕರ ಪಟ್ಟಿ­ಯನ್ನು ವಿಶ್ವವಿದ್ಯಾಲಯಗಳಿಂದ ಕೆಪಿ­ಎಸ್‌ಸಿ ತರಿಸಿಕೊಂಡಿತ್ತು. ಅವ­ರಲ್ಲಿ ಕೇವಲ ನಾಲ್ಕು ಮೌಲ್ಯ­ಮಾಪಕರನ್ನು ಬಳಸಿ­­ಕೊಳ್ಳ­ಲಾಗಿದೆ. ಮಾನವ ಶಾಸ್ತ್ರ ವಿಷಯದ ಮೌಲ್ಯ­ಮಾಪನ ಮಾಡಿದ 5 ಮಂದಿ ತಜ್ಞರಲ್ಲಿ ಒಬ್ಬರು ನಿವೃತ್ತ ಪ್ರಾಧ್ಯಾಪಕರು ಎನ್ನುವುದನ್ನೂ ಸಿಐಡಿ ಪತ್ತೆ ಮಾಡಿದೆ. ತಮ್ಮ ಜೊತೆ ಹೊಂದಾ­ಣಿಕೆ ಮಾಡಿ­ಕೊಂಡ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ನೀಡುವುದಕ್ಕಾಗಿಯೇ ಹೀಗೆ ಮಾಡ­ಲಾ­ಗಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ವಿವರ­ಗಳನ್ನು ಅಂತಿಮ ವರದಿ­ಯಲ್ಲಿ ನೀಡು­ವುದಾಗಿ ಸಿಐಡಿ ಹೇಳಿದೆ.

ಮಾತೃಪ್ರೇಮ: ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಪದ್ಮರೇಖಾ ಅವರ ಪುತ್ರ ಅಭಿಷೇಕ್‌ ಹೆಗಡೆ ಈ ಬಾರಿ ಪರೀಕ್ಷೆ ಬರೆದಿದ್ದು, ಅವರಿಗೆ ತಾಯಿಯೇ ಸಾಕಷ್ಟು ನೆರವು ನೀಡಿದ್ದಾರೆ ಎನ್ನು­ವು­ದರ ಕುರಿತು ಸಿಐಡಿ ಪೊಲೀಸರು ತನಿಖೆ ನಡೆಸಿದ್ದಾರೆ. ಅಭಿಷೇಕ್‌ ಪೂರ್ವ­ಭಾವಿ ಪರೀಕ್ಷೆಯಲ್ಲಿ 236 ಅಂಕ ಗಳಿಸಿ ಮುಖ್ಯ ಪರೀಕ್ಷೆಯ ಅರ್ಹತೆ ಪಡೆದಿ­ದ್ದರು. ಅವರಿಗೆ ಮುಖ್ಯ ಪರೀಕ್ಷೆಯಲ್ಲಿ 995 ಅಂಕ ಹಾಗೂ ಸಂದರ್ಶನದಲ್ಲಿ 150 ಅಂಕ ಬಂದಿತ್ತು.

ಪರೀಕ್ಷಾ ವಿಭಾಗ–2ರ  ಸಹಾಯಕ ಕಾರ್ಯ­ದರ್ಶಿಯೂ ಆಗಿ­ರುವ ಪದ್ಮ­ರೇಖಾ ಅವರು ತಮ್ಮ ಪುತ್ರ ಈ ಬಾರಿ ಕೆಪಿಎಸ್‌ಸಿ ಪರೀಕ್ಷೆಗೆ ಹಾಜರಾ­ಗಿದ್ದ ವಿಷ­ಯ­ವನ್ನು ಮೊದಲೇ ಆಯೋ­ಗಕ್ಕೆ ತಿಳಿಸಿ­ದ್ದರು. ಇದ­ರಿಂದಾಗಿ ಅವರನ್ನು ಪರೀಕ್ಷಾ ಪ್ರಕ್ರಿಯೆ­ಯಿಂದ ದೂರ ಇಡ­ಲಾ­ಗಿತ್ತು ಎಂದು ಸಿಐಡಿ ಪೊಲೀಸರಿಗೆ ಕೆಪಿಎಸ್‌ಸಿ ತಿಳಿಸಿದೆ. ಆದರೆ ಪದ್ಮರೇಖಾ ಅವರು ತಮ್ಮ ಕರ್ತವ್ಯಕ್ಕೆ ನೇರ ಸಂಬಂಧಪಡದ, 2011ರ ಗೆಜೆಟೆಡ್‌ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಸಕ್ರಿಯರಾಗಿದ್ದ ಕೆಪಿಎಸ್‌ಸಿ ಸದಸ್ಯರು ಹಾಗೂ ಅವರ ಆಪ್ತ ಕಾರ್ಯ­ದರ್ಶಿಗಳನ್ನು ಪದೇ ಪದೇ ಸಂಪ­ರ್ಕಿಸಿದ್ದರು ಎನ್ನುವುದನ್ನು ಸಿಐಡಿ ಪತ್ತೆ ಮಾಡಿದೆ.

ಪದ್ಮರೇಖಾ ಅವರು ಕೆಪಿಎಸ್‌ಸಿ ಸದಸ್ಯ ಪಾರ್ಶ್ವನಾಥ್‌ ಅವರನ್ನು 5 ಬಾರಿ ದೂರ­ವಾಣಿ ಮೂಲಕ ಸಂಪರ್ಕಿ­ಸಿದ್ದರು. ಪಾರ್ಶ್ವ­ನಾಥ್‌ ಅವರೂ ಕೂಡ ಪದ್ಮರೇಖಾ ಅವ­ರಿಗೆ ತಮ್ಮ ದೂರವಾಣಿ­­ಯಿಂದ ಕರೆ ಮಾಡಿ­ದ್ದರು. ಪಾರ್ಶ್ವ­ನಾಥ್‌ ಅವರ ಆಪ್ತ ಸಹಾಯಕ ನೇಮಿ­ರಾಜು ಅವರಿಗೆ ಪದ್ಮರೇಖಾ 10 ಬಾರಿ ದೂರವಾಣಿ ಕರೆ ಮಾಡಿದ್ದರು. ಅಲ್ಲದೆ 3 ಎಸ್‌ಎಂಎಸ್‌ ಕಳುಹಿಸಿದ್ದರು. ನೇಮಿ­ರಾಜು ಕೂಡ ಪದ್ಮರೇಖಾ ಅವರಿಗೆ 5 ಬಾರಿ ಕರೆ ಮಾಡಿ­ದ್ದರು ಮತ್ತು 5 ಎಸ್‌ಎಂಎಸ್‌ ಕಳುಹಿ­ಸಿದ್ದರು. ಮಂಗಳಾ ಶ್ರೀಧರ್‌ ಅವರ ಪತಿ ಶ್ರೀಧರ್‌ ನಾರಾ­ಯಣಿ ಅವರೂ ಪದ್ಮ­ರೇಖಾ ಅವರನ್ನು ಮೂರು ಬಾರಿ ದೂರ­­ವಾಣಿ ಮೂಲಕ ಸಂಪರ್ಕಿಸಿದ್ದರು. ಕೆಪಿ­ಎಸ್‌ಸಿ ಆಗಿನ ಕಾರ್ಯದರ್ಶಿ ಸುಂದರ್‌ ಅವರನ್ನೂ ಪದ್ಮರೇಖಾ ಸಂಪರ್ಕಿಸಿದ್ದರು.

ಪದ್ಮರೇಖಾ ಅವರು ಇಷ್ಟೆಲ್ಲಾ ಜನ­ರೊಂದಿಗೆ ದೂರವಾಣಿ ಸಂಪರ್ಕ ಹೊಂದಿ­ದ್ದು ಹಾಗೂ ಅಭೀಷೇಕ್‌ ಹೆಗಡೆ ಅವರಿಗೆ ಸಂದರ್ಶನದಲ್ಲಿ ಅತಿ ಹೆಚ್ಚಿನ ಅಂಕ ಲಭ್ಯ­ವಾಗಿದ್ದು ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸತ್ಯ­ವಾಗಿರು­ವಂತೆ ಕಾಣು­ತ್ತದೆ. ಈ ಬಗ್ಗೆ ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ವರದಿ­ಯಲ್ಲಿ ಹೇಳಲಾಗಿದೆ.

ಕೆಪಿಎಸ್‌ಸಿ ನಿಯಮದ ಪ್ರಕಾರ ಆಯೋ­ಗದ ಸದಸ್ಯರು, ಅಧಿಕಾರಿಗಳು ಹಾಗೂ ಯಾವುದೇ ಸಿಬ್ಬಂದಿಯ ಸಂಬಂಧಿ­ಕರು ಪರೀಕ್ಷೆಗೆ ಹಾಜರಾಗಿದ್ದರೆ ಆ ವಿಷಯ­ವನ್ನು ಮೊದಲೇ ಅವರು ಆಯೋಗದ ಕಾರ್ಯದರ್ಶಿ ಬಳಿ ಘೋಷಿಸಿ­­ಕೊಳ್ಳಬೇಕು. ಅಲ್ಲದೆ ಅವರನ್ನು ಪರೀಕ್ಷಾ ಪ್ರಕ್ರಿಯೆ­ಯಿಂದ ದೂರವಿಡ­ಬೇಕು. ಆದರೆ ಈ ಬಾರಿ ಕೆಪಿಎಸ್‌ಸಿಯ ಹಲವಾರು ಸಿಬ್ಬಂದಿ ತಮ್ಮ ಮಕ್ಕಳು ಅಥವಾ ಸಂಬಂಧಿಗಳು ಪರೀಕ್ಷೆ ಬರೆಯು­ತ್ತಿರುವ ವಿಷಯ­ವನ್ನು ಕಾರ್ಯ­ದರ್ಶಿಗೆ ತಿಳಿಸಿಲ್ಲ.

ಅಚ್ಚರಿಯ ಅಂಶ ಎಂದರೆ ಆಯೋಗದ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಪತ್ನಿಯ ಹತ್ತಿ­ರದ ಸಂಬಂಧಿ ಎಚ್‌.ಎಸ್‌.ಸಿಂಧು ಪರೀಕ್ಷೆ­ಗೆ ಹಾಜರಾಗಿದ್ದರು. ಈ ವಿಷಯವನ್ನು ಭೀಮಪ್ಪ ಅವರು ಆಯೋಗದ ಕಾರ್ಯ­ದರ್ಶಿ ಮುಂದೆ ಅಧಿಕೃತವಾಗಿ ಘೋಷಿಸಿ­ರಲಿಲ್ಲ. ಇದು ಅವರಿಗೆ ಆಯೋಗ­ದ ನಿಯಮಾ­ವಳಿಯ ಬಗ್ಗೆ ಯಾವುದೇ ಗೌರವ ಇರಲಿಲ್ಲ ಎನ್ನುವುದನ್ನು ತೋರಿ­ಸುತ್ತದೆ ಎಂದು ಸಿಐಡಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

2011ರ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿದ ನಂತರ ನೂರಾರು ಅಭ್ಯರ್ಥಿ­ಗಳು ಅಹ­ವಾಲು ನೀಡಿರುವುದರ ಜತೆಗೆ ಕೆಲವು ದಾಖಲೆಗಳನ್ನೂ ಒದಗಿ­ಸಿದ್ದಾರೆ. ಸಿಐಡಿಗೆ 116 ದೂರುಗಳು ಬಂದಿ­ದ್ದವು. ಅದರಲ್ಲಿ 40 ದೂರುಗಳನ್ನು ಸರ್ಕಾರ ಕಳುಹಿಸಿಕೊಟ್ಟಿತ್ತು.

ನೇರವಾಗಿ 76 ದೂರುಗಳು ಬಂದವು. ಅದರಲ್ಲಿ ಮುಖ್ಯ ಪರೀಕ್ಷೆಯ ಬಗ್ಗೆ 39, ಸಂದರ್ಶ­ನದ ಬಗ್ಗೆ 31, ಸಂದರ್ಶನ ಮತ್ತು ಮುಖ್ಯ ಪರೀಕ್ಷೆ ಎರಡೂ ಸೇರಿದಂತೆ 13 ಹಾಗೂ ಕೆಪಿಎಸ್‌ಸಿ ನಡೆಸುವ ಇತರ ಪರೀಕ್ಷೆ ಹಾಗೂ ಹಿಂದಿನ ಪರೀಕ್ಷೆಗಳ ಬಗ್ಗೆ 33 ದೂರು­ಗಳು ಬಂದಿದ್ದವು. ಇವು ಗಳನ್ನೆಲ್ಲಾ ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಂಗ್ರ­ಹಿಸಿ ಸಿಐಡಿ ಮಧ್ಯಂತರ ವರದಿ ನೀಡಿದೆ.
(ಕಳ್ಳನ ಕೈಗೇ ಕೀ ಕೊಟ್ಟ ಕೆಪಿಎಸ್‌ಸಿ: ನಾಳಿನ ಸಂಚಿಕೆಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT