ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನ ನಿಧಾನವೇ ಪ್ರಧಾನ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಎದುರಿಸಾಯಿತು ವಿದ್ಯಾರ್ಥಿಗಳು
ಪ್ರಶ್ನೆಗಳನು
ಎದುರಿಸಬೇಕೀಗ ಗುರುಗಳು
ಅವರ ಉತ್ತರಗಳನು...'

ಹೌದು, ಪರೀಕ್ಷಾರ್ಥಿಗಳು ಬರೆದ ಉತ್ತರಗಳ ಅಂಕ ನಿರ್ಣಯ ಶಿಕ್ಷಕರ ಪಾಲಿಗೆ ಸಾಟಿಯಿಲ್ಲದ ಹೊಣೆ. ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಭವಿಷ್ಯದ ಮೇಲೆ ಅದು ಬೀರುವ ಪರಿಣಾಮ ತೀವ್ರ. ವಿದ್ಯಾರ್ಥಿಗಳು (ಪೋಷಕರೂ!) ತಮ್ಮ ಶೈಕ್ಷಣಿಕ ವರ್ಷದುದ್ದಕ್ಕೂ ಬಗೆಬಗೆ ಒತ್ತಡಕ್ಕೆ ಒಳಗಾಗುತ್ತಲೇ ಇರುತ್ತಾರೆ. ಶಾಲಾ ಕಾಲೇಜಿಗೆ ಪ್ರವೇಶ ದಕ್ಕಿಸಿಕೊಂಡ ಬಳಿಕ ಪುಸ್ತಕ, ಸಮವಸ್ತ್ರ ಹೊಂದಿಸಿಕೊಳ್ಳುವಾಗ, ಹೋಂವರ್ಕ್ ನಿಭಾಯಿಸುವಾಗ, ಮೇಲಿಂದ ಮೇಲೆ ಬರುವ ಕಿರು ಪರೀಕ್ಷೆಗಳು, ಸಿದ್ಧತಾ ಪರೀಕ್ಷೆಗಳನ್ನು ಎದುರಿಸುವಾಗ ಒಂದಲ್ಲ ಒಂದು ರೀತಿಯ ಒತ್ತಡಕ್ಕೆ ಅವರು ಸಿಲುಕಿಯೇ ಇರುತ್ತಾರೆ.

ಇನ್ನು ನಿರ್ಣಾಯಕ ಪರೀಕ್ಷೆಯ ಸಂದರ್ಭದ್ಲ್ಲಲಂತೂ ಅತಿಯಾದ ವರ್ಣರಂಜಿತ ಹಿತೋಕ್ತಿಗಳೇ ಅವರಲ್ಲಿ ಇರುವ ಧೈರ್ಯ, ಆತ್ಮವಿಶ್ವಾಸವನ್ನು ವಿಚಲಿತಗೊಳಿಸಬಹುದು. ಪ್ರಶ್ನೆಪತ್ರಿಕೆಗಳು ಎಲ್ಲಿ ಬಯಲಾಗಿ ಮರುಪರೀಕ್ಷೆ ನಡೆದೀತೋ ಎನ್ನುವ ಆತಂಕ ಬೇರೆ. ಪೊಳ್ಳು ಸುದ್ದಿಗಳಿಗೆ ಕಿವಿಯಾದರೂ ಏಕಾಗ್ರತೆ ಕಾಪಾಡಿಕೊಳ್ಳಬೇಕು, ಪರೀಕ್ಷೆಯ ನಂತರ ಬಂದೇ ಬಂತು ಮಗದೊಂದು ದುಗುಡ. ತಾವು ಬರೆದ ಉತ್ತರಗಳಿಗೆ ಮೌಲ್ಯಮಾಪಕರು ಯುಕ್ತ ಅಂಕಗಳನ್ನು ನೀಡುವರೋ ಇಲ್ಲವೋ ಎನ್ನುವ ಆತಂಕ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮೌಲ್ಯಮಾಪನದಲ್ಲಿ ತಪ್ಪೆಸಗುವ ಶಿಕ್ಷಕರಿಗೆ ದಂಡ, ಬಡ್ತಿ ಕಡಿತ, ನೋಟಿಸ್, ಸೇವಾ ಪುಸ್ತಕದಲ್ಲಿ ನಮೂದು ಮುಂತಾಗಿ ಹಿಂದೆಂದೂ ಇರದಿದ್ದ ಶಿಕ್ಷೆಯನ್ನೇ ಘೋಷಿಸಿದೆ. ಈ ಪ್ರಸ್ತಾವ ಹೇಗೂ ಇರಲಿ. ಮೌಲ್ಯಮಾಪನ ಕಾರ್ಯವನ್ನು ಶಿಕ್ಷಕರು ಸಮರ್ಥವಾಗಿ ನಿರ್ವಹಿಸುವುದು ಹೇಗೆ? ತನ್ಮೂಲಕ, ವೃಥಾ ವಿದ್ಯಾರ್ಥಿಗಳಿಗೆ ಆಗಬಹುದಾದ ಅನ್ಯಾಯಗಳನ್ನು ತಡೆಗಟ್ಟುವ ಮಾರ್ಗ ಹೇಗೆ ಎಂಬುದರತ್ತ ಗಮನಹರಿಸೋಣ.  ವಾಸ್ತವವಾಗಿ ಮೌಲ್ಯಮಾಪನವು ಶಿಕ್ಷಕರು ಎದುರಿಸುವ ಪರೀಕ್ಷೆಯೇ! ಹನ್ನೆರಡು- ಹದಿನೈದು ದಿನಗಳವರೆಗೆ ಆಯಾಯ ವಿಷಯ ಬೋಧಕರು ಒಂದೇ ಸೂರಿನಡಿ ಕಲೆಯುತ್ತಾರೆ.

ಶೈಕ್ಷಣಿಕ ಲೋಕಾನುಭವ, ಪಠ್ಯ, ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಗಿ ಬೋಧನೆ, ಪಠ್ಯೇತರ ಚಟುವಟಿಕೆಗಳು, ಪ್ರತಿಭಾ ವಿಕಾಸ, ಶಿಸ್ತು... ಹೀಗೆ ತರಾವರಿ ಸಂಗತಿಗಳು, ಸವಾಲುಗಳು ಅವರ ಉಭಯ ಕುಶಲೋಪರಿಯಲ್ಲಿ ತೆರೆದುಕೊಳ್ಳುತ್ತವೆ. ಮೌಲ್ಯಮಾಪನವೇ ನಿಮಿತ್ತವೆಂದು ತೋರಿ ಒಂದೊಂದು ದಿನವೂ ಕಮ್ಮಟವಾಗಿರುತ್ತದೆ.

ಯಶಸ್ವಿ ಮೌಲ್ಯಮಾಪನಕ್ಕೆ ಶಿಕ್ಷಕರಿಗೆ ಆಯಾಯ ವಿಷಯದ ಮೇಲಿನ ಪಾಂಡಿತ್ಯ, ಹಿಡಿತ ಇರಲೇಬೇಕು. ಕನಿಷ್ಠ ಮೂರು ವರ್ಷ ಸಂಬಂಧಿಸಿದ ವಿಷಯವನ್ನು ಅವರು ಬೋಧಿಸಿರದಿದ್ದರೆ ಮೌಲ್ಯಮಾಪನ ಕಾರ್ಯ ಅವರಿಗೇ ತ್ರಾಸವೆನ್ನಿಸೀತು. ಕೇಳಿರುವ ಪ್ರಶ್ನೆ ಯಾವುದು, ಅದಕ್ಕೆ ಉತ್ತರ ಏನು ಎನ್ನುವುದರ ಪೂರ್ಣಪ್ರಜ್ಞೆ ಅವರಿಗಿದ್ದರೆ ನಿರ್ವಹಣೆ ಸರಾಗ. ಸಾಕಷ್ಟು ಮುಂಚಿತವಾಗಿಯೇ ಪ್ರಶ್ನೆಪತ್ರಿಕೆಯನ್ನು ಇಡಿಯಾಗಿ ಅಧ್ಯಯನ ಮಾಡಿ `ಉತ್ತರ ಇಂತು, ಹೀಗೆ' ಎಂದು ಮೌಲ್ಯಮಾಪಕರು ಟಿಪ್ಪಣಿ ತಯಾರಿಸಿಕೊಳ್ಳಬೇಕಾದುದು ಅತ್ಯಗತ್ಯ.

ಸರ್ಕಾರದ ವತಿಯಿಂದಲಾಗಲಿ, ಯಾವುದೇ ಶೈಕ್ಷಣಿಕ ಸಂಸ್ಥೆಯಾಗಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಗುಣಮಟ್ಟ ಸುಧಾರಣೆ ಬಗ್ಗೆ ಚರ್ಚೆ, ಸಂವಾದಗಳನ್ನು ಏರ್ಪಡಿಸಬೇಕು. ಅದರಲ್ಲೂ ಹೊಸದಾಗಿ ನೇಮಕಗೊಳ್ಳುವ ಮೌಲ್ಯಮಾಪಕರಿಗೆ ತರಬೇತಿ ಬೇಕೇಬೇಕು.

ಒಂದೇ ಪ್ರಶ್ನೆಗೆ ಮೂರ್ನಾಲ್ಕು ಸರಿಯುತ್ತರಗಳು, ವಿಶೇಷವಾಗಿ ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಲ್ಲಿ ಇರುವ ಸಾಧ್ಯತೆ ಇರುತ್ತದೆ. ಪರ್ಯಾಯ ಉತ್ತರಗಳ ಸಂಪೂರ್ಣ ಅರಿವು ಶಿಕ್ಷಕರಿಗೆ ಇಲ್ಲದಿದ್ದರೆ ಆಭಾಸ ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿ ಸಮರ್ಪಕವಾಗಿ ಉತ್ತರಿಸಿದ್ದರೂ ಮೌಲ್ಯಮಾಪಕರು ಸೊನ್ನೆ ಸುತ್ತಿರುತ್ತಾರೆ! ಮುಖ್ಯ ಮೌಲ್ಯಮಾಪಕರು ಸೂಚನಾ ಸಭೆಯಲ್ಲಿ ನೀಡುವ `ಮೌಲ್ಯಮಾಪನ ವಿನ್ಯಾಸ'ಕ್ಕೆ ಅನುಗುಣವಾಗಿ ಎಲ್ಲ ಮೌಲ್ಯಮಾಪಕರೂ ಬದ್ಧರಾದರೆ, ಅಂಕ ನಿರ್ಣಯದಲ್ಲಿ ಸಮಾನತೆ ಇದ್ದೀತು. ಸಂದೇಹ ಬಂದರೆ ಚರ್ಚೆಗೆ ಅವಕಾಶ ಇದ್ದೇ ಇದೆ. ಸಮಾಲೋಚನೆ ಫಲಕಾರಿ.

ಪ್ರಸ್ತುತ ಮೌಲ್ಯಮಾಪನ ಕ್ರಮವು ವಿದ್ಯಾರ್ಥಿ ಪರವೇ ಆಗಿದೆ. ಸರ್ವ ದೃಷ್ಟಿಯಿಂದಲೂ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ನೀತಿ ನಿಯಮಾವಳಿಗಳಿವೆ. `ಆಯ್ಕೆ ಪ್ರಶ್ನೆಗಳಿಗೆ' (ಚಾಯ್ಸ ಕ್ವಶ್ಚನ್ಸ್) ವಿದ್ಯಾರ್ಥಿ ಏನಾದರೂ ಹೆಚ್ಚುವರಿಯಾಗಿ ಉತ್ತರಿಸಿದ್ದಲ್ಲಿ ಯಾವುವು ಹೆಚ್ಚಿನ ಅಂಕಗಳನ್ನು ಪಡೆದಿವೆಯೋ ಅವನ್ನು ಪರಿಗಣಿಸಬೇಕು ಎಂದಿದೆ. ಉತ್ತರಗಳನ್ನು ಉತ್ತರ ಪತ್ರಿಕೆಯ ಯಾವ ಮೂಲೆಯಲ್ಲಿ ಬರೆದಿದ್ದರೂ ಅದನ್ನು ಮೌಲ್ಯಮಾಪನ ಮಾಡಬೇಕು. ಪೆನ್ಸಿಲ್‌ನಿಂದ ಬರೆದಿದ್ದರೂ, ಬರೆದು ಒಡೆದು ಹಾಕಿದ್ದರೂ ಅಂಕಗಳನ್ನು ನಿಗದಿಪಡಿಸಬೇಕು. ಅಂತೆಯೇ ಬೇರೆ ಬೇರೆ ಕಡೆಗಳಲ್ಲಿ ಕಂತಿನಂತೆ ಉತ್ತರಗಳನ್ನು ಬರೆದರೂ ಮೌಲ್ಯಮಾಪನ ಮಾಡಬೇಕು. ಒತ್ತಡಕ್ಕೆ ಒಳಗಾಗದಿರಿ ಎಂದು ಶಿಕ್ಷಕರಿಗೆ ಹೇಳಬೇಕಾದ ಸಮಯವಿದು.

ಸಮರ್ಥ ಮೌಲ್ಯಮಾಪನಕ್ಕೆ ನಿಧಾನವೇ ಪ್ರಧಾನ. `ಅಯ್ಯೋ ಸಹೋದ್ಯೋಗಿಗಳು ಎಷ್ಟೆಷ್ಟು ತ್ವರಿತವಾಗಿ ಮುಗಿಸುತ್ತಿದ್ದಾರಲ್ಲ. ನಾನೇಕೆ ಹೀಗೆ ಮಂದಗತಿಯಲ್ಲಿ ಸಾಗುತ್ತಿದ್ದೇನೆ' ಎನ್ನುವ ಇರಾದೆಯಿಂದ ಹೊರಬರಬೇಕು. ವೇಗವು ಎಲ್ಲ ಸಂದರ್ಭದಲ್ಲೂ ಕಾರ್ಯಪಟುತ್ವವಲ್ಲ. ಹಿರಿಯ ಮೌಲ್ಯಮಾಪಕರು, ಅಧಿಕಾರಿಗಳೊಂದಿಗೆ ವಾಕ್ ಸಮರ ಬೇಡ. ಅಹಮಿಕೆಯಿಂದ ತಲ್ಲೆನತೆಗೆ ಭಂಗ. ಉಳಿದವರಿಗೂ ಉಪದ್ರವ.

ಚಾಣಾಕ್ಷರು...!
ಇನ್ನು ಪರೀಕ್ಷಾರ್ಥಿಗಳೋ ಧಾರಾಳವಾಗಿಯೇ `ಚಾಣಾಕ್ಷತನ'ವನ್ನು ಉತ್ತರ ಪತ್ರಿಕೆಗಳಲ್ಲಿ ಪ್ರದರ್ಶಿಸಿರುತ್ತಾರೆ. ಒಂದೇ ಪ್ರಶ್ನೆಗೆ ಎರಡು ಮೂರು ಕಡೆ ಉತ್ತರ ಬರೆದಿರುತ್ತಾರೆ. ಮೌಲ್ಯಮಾಪಕರ ದಿಕ್ಕು ತಪ್ಪಿಸಿ ಅಧಿಕ ಅಂಕಗಳನ್ನು ಗಳಿಸುವುದು ಅವರ ಗುರಿ! ಅಂಕ ಬಂದರೂ ಬರಲಿ ಎಂದು ಬೇಕೆಂದೇ ಅಸ್ಪಷ್ಟವಾಗಿ, ತಿದ್ದಿ ಬರೆದಿರುತ್ತಾರೆ. ಹಾಗೂ ಆದೀತು ಹೀಗೂ ಸರಿ ಎನ್ನುವಂತಹ ಒಕ್ಕಣೆಗಳೂ ಇರುತ್ತವೆ. ಕೆಲವು ವಿನಮ್ರರು ನೇರವಾಗಿಯೇ `ದಯಮಾಡಿ ತೇರ್ಗಡೆ ಮಾಡಿ, ಕನಿಷ್ಠ ಅಂಕವನ್ನಾದರೂ ಕೊಡಿ' ಎಂದು ಕೋರಿರುತ್ತಾರೆ. ಮನವಿಗಳು ಎಗ್ಗಿಲ್ಲದೆ ಪುಟಗಟ್ಟಲೆ ಹರಿದಿರುತ್ತವೆ.

ನನಗೆ ಸಿಕ್ಕ ಒಂದು ಉತ್ತರ ಪತ್ರಿಕೆಯಲ್ಲಿ `ಪ್ಲೀಸ್ ಪಾಸು ಮಾಡಿ. ಇಲ್ಲದಿದ್ದರೆ ಭಾವಿ ಮಾವ ಸೂಟು ಹೊಲಿಸಲ್ಲ...' ಎಂಬ ಬಿನ್ನಹ ಇತ್ತು. ಮೌಲ್ಯಮಾಪನ ಕಾರ್ಯಕ್ಕೆ ದೂರದೂರುಗಳಿಂದ ಬರುವ ಶಿಕ್ಷಕರು ಹವಾಗುಣ, ಆಹಾರ ಕ್ರಮ, ನೀರಿನ ವ್ಯತ್ಯಾಸಕ್ಕೆ ಒಗ್ಗಿಕೊಳ್ಳಬೇಕಾದ ಅನಿವಾರ್ಯ ಇರುತ್ತದೆ. ಅನಾರೋಗ್ಯದಿಂದ ಬಳಲಿದ ನಿದರ್ಶನಗಳೂ ಇವೆ. 55 ವರ್ಷ ದಾಟಿದವರಿಗೆ ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯಗೊಳಿಸದೇ ಇರುವುದು, ಭಾನುವಾರ ಬಿಡುವು ನೀಡುವುದು ಸರಿ ಎನ್ನಿಸುತ್ತದೆ.

ಇದೆಲ್ಲದರ ನಡುವೆಯೇ ವಿದ್ಯಾರ್ಥಿಗಳ ಧ್ವನಿಯೊಂದು `ಅಂಬಿಗ ನಾ ನಿನ್ನ ನಂಬಿದೆ...' ಎನ್ನುತ್ತಾ ಮೌಲ್ಯಮಾಪಕರತ್ತ ಹೊರಡುವಂತೆ ಭಾಸವಾಗುತ್ತದೆ. ನಿಮ್ಮ ಊಹೆ ಸರಿ. ಹೀಗೆ ಅವರು ನಂಬುವುದು ನ್ಯಾಯಯುತ ಅಂಕಗಳಿಗೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT