ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಮಾಪನವಿನ್ನು ಹೈಟೆಕ್ !

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯವು ಮೊದಲ ಹಂತವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಾಫ್ಟ್‌ವೇರ್ ಸಹಾಯದಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕಂಪ್ಯೂಟರ್‌ನಲ್ಲಿಯೇ ನಿರ್ವಹಿಸಲು ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಶೀಘ್ರ ಫಲಿತಾಂಶವನ್ನು ನೀಡುವಲ್ಲಿ ಇದು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಉ ತ್ತರ ಪತ್ರಿಕೆಗಳನ್ನು ಗುಡ್ಡೆ ಹಾಕಿಕೊಂಡ ಮೌಲ್ಯಮಾಪನ ಮಾಡುವ ಉಪನ್ಯಾಸಕರ ಚಹರೆ ಬೆಂಗಳೂರು ವಿಶ್ವವಿದ್ಯಾಲಯದ ಮಟ್ಟಿಗೆ ಇನ್ನು ಮುಂದೆ ಬದಲಾಗಲಿದ್ದು, ಅಂಕಗಳನ್ನು ನೀಡಲು ಪೆನ್ನಿನ ಬದಲು ಕಂಪ್ಯೂಟರ್ ಮೌಸ್ ಹಿಡಿಯಲಿದ್ದಾರೆ!

ರಾಜ್ಯದಲ್ಲಿ ಮೊದಲ ಪ್ರಯತ್ನವೆನ್ನಬಹುದಾದ ಕಂಪ್ಯೂಟರ್ ಮೂಲಕ ಮೌಲ್ಯಮಾಪನ ಮಾಡುವ ಮಹತ್ವದ ನಿರ್ಧಾರವನ್ನು ಬೆಂಗಳೂರು ವಿವಿ ಕೈಗೊಂಡಿದೆ. ಮೊದಲ ಹಂತದಲ್ಲಿ 45 ಸಾವಿರ ಬಿಸಿಎ ಉತ್ತರ ಪತ್ರಿಕೆಗಳನ್ನು ಪೈಲಟ್ ಯೋಜನೆಯಡಿ ಮೌಲ್ಯಮಾಪನ ಮಾಡುವ ಕಾರ್ಯ ಈಗಾಗಲೇ ಸಾಗಿದ್ದು,

ಇದು ಯಶಸ್ವಿಯಾದರೆ ಬರುವ ಅಕ್ಟೋಬರ್ ತಿಂಗಳಿಂದ ವಿವಿ ನಡೆಸುವ ಎಲ್ಲ ಪರೀಕ್ಷೆಗಳನ್ನೂ (ಸರಿ ಸುಮಾರು 20 ಲಕ್ಷ ಉತ್ತರ ಪತ್ರಿಕೆಗಳು) ಕಂಪ್ಯೂಟರ್‌ನಲ್ಲೇ ಮಾಡುವ ಉದ್ದೇಶವನ್ನು ಹೊಂದಿದೆ.

ಮೈಂಡ್‌ಲಾಜಿಕ್ಸ್ ಸಂಸ್ಥೆ ಈ ಸಾಫ್ಟವೇರ್ ಅಭಿವೃದ್ಧಿಪಡಿಸಿದೆ. ಮೊದಲ ಹಂತದಲ್ಲಿ 100 ಕಂಪ್ಯೂಟರ್ ಹಾಗೂ ಹೈಸ್ಪೀಡ್ ಸ್ಕ್ಯಾನರ್‌ಗಳನ್ನು ಬಳಸಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡುತ್ತದೆ. ಈಗ 75 ಕಂಪ್ಯೂಟರ್‌ಗಳ ಮೂಲಕ ಬಿಸಿಎ ಉತ್ತರ  ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಅನುಕೂಲತೆಗಳೇನು?
ನೂತನ ವ್ಯವಸ್ಥೆಯಿಂದಾಗಿ ಹಲವಾರು ಅನುಕೂಲಗಳು ವಿದ್ಯಾರ್ಥಿಗಳಿಗೆ ದೊರೆಯಲಿವೆ. ಪರೀಕ್ಷೆಗಳು ಮುಗಿದ ನಂತರ ಎಲ್ಲ ಉತ್ತರ ಪತ್ರಿಕೆಗಳನ್ನು ಕ್ರೋಡೀಕರಿಸಿ ಹೈಸ್ಪೀಡ್ ಸ್ಕ್ಯಾನರ್ ಯಂತ್ರಗಳನ್ನು ಬಳಸಿ ಸ್ಕ್ಯಾನ್ ಮಾಡಲಾಗುತ್ತದೆ.
 
ನಂತರ ಎಲ್ಲ ಪತ್ರಿಕೆಗಳಿಗೆ ಪ್ರತ್ಯೇಕ ಬಾರ್‌ಕೋಡ್ ಕೊಡಲಾಗುತ್ತದೆ. ಮೂಲ ಉತ್ತರ ಪತ್ರಿಕೆಗೂ, ಸ್ಕ್ಯಾನ್ ಮಾಡಲಾದ ಉತ್ತರ ಪತ್ರಿಕೆಗೂ ಪ್ರತ್ಯೇಕ ಸಂಖ್ಯೆ ಇರುವುದರಿಂದ ಮೌಲ್ಯಮಾಪಕರು ತಮಗೆ ಬೇಕಾದವರ ಪತ್ರಿಕೆ ಸಂಖ್ಯೆಯನ್ನು ಪತ್ತೆ ಹಚ್ಚಿ ಅಧಿಕ ಅಂಕ ಕೊಡುವ ಕ್ರಮಕ್ಕೂ ಬ್ರೇಕ್ ಬೀಳಲಿದೆ.

ಇತ್ತೀಚೆಗೆ ಪಿಯು ವಿದ್ಯಾರ್ಥಿಯೊಬ್ಬರಿಗೆ ಆದ ಅನ್ಯಾಯವನ್ನು ಪತ್ರಿಕೆಗಳಲ್ಲಿ ಓದಿರಬಹುದು. ಒಬ್ಬ ಮೌಲ್ಯಮಾಪಕ ಮಹಾಶಯ ಉತ್ತರ ಪತ್ರಿಕೆಯ ಹಲವು ಪುಟಗಳನ್ನು ಹಾಗೇ ಬಿಟ್ಟು ಅಂಕ ನೀಡಿದ್ದರು. ಇಂಥ ಅವಘಡಗಳೂ ಈ ಸಾಫ್ಟವೇರ್‌ನಿಂದ ತಪ್ಪಲಿವೆ.

ಪ್ರತಿ ಉತ್ತರಕ್ಕೂ ನೀವು ಅಂಕಗಳನ್ನು ನೀಡಲೇಬೇಕು. ಇಲ್ಲದಿದ್ದರೆ ಈ ಬಗ್ಗೆ ನಿಮಗೊಂದು ಎಚ್ಚರಿಕೆ ಸಂದೇಶ ಬರಲಿದೆ.ಮೌಲ್ಯಮಾಪನ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಒಂದು ಕಡೆ ಉತ್ತರ ಪತ್ರಿಕೆ, ಮತ್ತೊಂದು ಕಡೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯ ಪುಟಗಳು ತೆರೆದುಕೊಳ್ಳುತ್ತವೆ.

ಇದರಿಂದ ಅಂಕ ನೀಡುವಿಕೆ ಸುಲಭವಾಗುತ್ತದೆ. ಇನ್ನು ಅಂಕಗಳನ್ನು ಸಾಂಪ್ರದಾಯಿಕ ಪದ್ಧತಿಯಂತೆ ಪತ್ರಿಕೆಯ ಮೇಲೆ ಹಾಕುವಂತಿಲ್ಲ. ಕಂಪ್ಯೂಟರ್ ಮಾನಿಟರ್‌ನ ಬಲಭಾಗದಲ್ಲಿ ಆಯಾ ವಿಷಯಕ್ಕೆ ಅನುಗುಣವಾಗಿ ಪ್ರಶ್ನೆ ಸಂಖ್ಯೆ ಹಾಗೂ ಗರಿಷ್ಠ ಅಂಕಗಳನ್ನು ಪ್ರದರ್ಶಿಸಲಾಗಿರುತ್ತದೆ.

ಅಲ್ಲಿ ವಿದ್ಯಾರ್ಥಿ ಪಡೆದ ಅಂಕಗಳನ್ನು ನಮೂದಿಸಬೇಕು. ಅಂಕ ಹಾಕುತ್ತಾ ಹೋದಂತೆ ಜಾಣ ಕಂಪ್ಯೂಟರ್ ಒಟ್ಟು ಅಂಕಗಳನ್ನು ಕೂಡಿಸುತ್ತಾ ಹೋಗುತ್ತದೆ. ಹಾಗಾಗಿ ಅಂಕಗಳನ್ನು ಹೆಚ್ಚು ಅಥವಾ ಕಡಿಮೆ ನೀಡಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಬರುವುದಿಲ್ಲ. 

ಶೀಘ್ರ ಫಲಿತಾಂಶ ಪ್ರಕಟ
ಪರೀಕ್ಷೆ ಮುಗಿದು ಮತ್ತೆ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವ ಸಮಯ ಬಂದಿದ್ದರೂ ಇನ್ನೂ ಫಲಿತಾಂಶ ಪ್ರಕಟಿಸದೇ ವಿವಿಯು ವಿದ್ಯಾರ್ಥಿಗಳ ಮುಂದೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದು ಹಲವು ಬಾರಿ.
 
ಆದರೆ ಈ ವ್ಯವಸ್ಥೆ ಅಳವಡಿಸಿಕೊಂಡಿದ್ದರಿಂದ ಅತ್ಯಂತ ವೇಗವಾಗಿ ಮೌಲ್ಯಮಾಪನ ಕಾರ್ಯ ಮುಗಿದು ಕೇವಲ 10ರಿಂದ 12 ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಜೊತೆಗೆ ವಿದ್ಯಾರ್ಥಿಗಳು ತಮ್ಮ ಉತ್ತರಕ್ಕೆ ಕಡಿಮೆ ಅಂಕ ಬಂದಿದೆ ಎಂದು ಅನಿಸಿದರೆ ಅದಕ್ಕೆ ನಕಲು ಪ್ರತಿ ಪಡೆಯಲು ಪ್ರತ್ಯೇಕ ಶುಲ್ಕವನ್ನೇನೂ ಕಟ್ಟಬೇಕಾಗಿಲ್ಲ.

ಅದು ಉಚಿತವಾಗಿ ವಿದ್ಯಾರ್ಥಿಯ ಇ ಮೇಲ್‌ಗೇ ರವಾನೆಯಾಗುತ್ತದೆ. ಅದರಲ್ಲಿ ಏನಾದರೂ ಹೆಚ್ಚು ಕಡಿಮೆಯಾಗಿದ್ದನ್ನು ನೋಡಿಕೊಂಡು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು~ ಎನ್ನುತ್ತಾರೆ ಬೆಂಗಳೂರು ವಿವಿ ಕುಲಪತಿ   ಡಾ.ಎನ್.ಪ್ರಭುದೇವ್.

ಇನ್ನೊಂದು ಅನುಕೂಲವೂ ಇದರಿಂದ ಆಗಲಿದೆ. ಹೈಟೆಕ್ ತಂತ್ರಜ್ಞಾನದ ಫಲಶ್ರುತಿಯಾಗಿ ಇನ್ನುಮುಂದೆ ಫಲಿತಾಂಶ ಪ್ರಕಟವಾದ ಜೊತೆಗೇ ಅಂಕಪಟ್ಟಿಯೂ ದೊರೆಯಲಿದೆ.

ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಉತ್ತರ ಪತ್ರಿಕೆಗೆ 15 ರೂಪಾಯಿ ಮಾತ್ರ ವೆಚ್ಚವಾಗಲಿದೆ. ಪ್ರಾಯೋಗಿಕವಾಗಿ ನಡೆಸುತ್ತಿರುವ ಈ ಪ್ರಕ್ರಿಯೆಯ ನಂತರ ಬರುವ ಅಕ್ಟೋಬರ್‌ನಲ್ಲಿ 20 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲೂ ಯೋಜಿಸಿದೆ.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT