ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯವರ್ಧಿತ ಕಾಫಿ ರಫ್ತು ಹೆಚ್ಚಳ

Last Updated 20 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ಭಾರತದ ಕಾಫಿ ಉದ್ಯಮ ಉತ್ತಮ ಬೆಳವಣಿಗೆ ತೋರಿದೆ, ಮೌಲ್ಯವರ್ಧಿತ ಕಾಫಿ ರಫ್ತಿನಲ್ಲೂ ಏರಿಕೆ ಕಂಡುಬಂದಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು ಅಭಿಪ್ರಾಯಪಟ್ಟರು.

ಕಾಫಿ ಮಂಡಳಿ ಭಾನುವಾರ ಇಲ್ಲಿ ಆಯೋಜಿಸಿದ್ದ 2010ನೇ ಸಾಲಿನ ‘ಕಾಫಿ ರಫ್ತು ಪ್ರಶಸ್ತಿ’ ಮತ್ತು ‘ಫ್ಲೇವರ್ ಆಫ್ ಇಂಡಿಯಾ-ಫೈನ್ ಕಪ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಫಿ ಮಂಡಳಿ ನೀಡುವ ಈ ಎರಡು ವಾರ್ಷಿಕ ಪ್ರಶಸ್ತಿಗಳು ಭಾರತದ ಕಾಫಿಯ ಗುಣಮಟ್ಟದ ಮೇಲೆ ಉತ್ತಮ ಪರಿಣಾಮ ಬೀರಿವೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರಮುಖ ಕಾಫಿ ಉತ್ಪಾದಕ ದೇಶ ಎಂದು ಬಿಂಬಿಸುವಲ್ಲಿಯೂ ಸಾಕಷ್ಟು ಕೊಡುಗೆ ನೀಡಿದೆ’ ಎಂದು ಹೇಳಿದರು.

ಮೌಲ್ಯವರ್ಧಿತ ಕಾಫಿಯ ರಫ್ತು ಪ್ರಮಾಣದಲ್ಲಿ ಏರಿಕೆ, ಆಂತರಿತ ಮಾರುಕಟ್ಟೆ ಬಲಗೊಂಡಿರುವುದು ಮತ್ತು ಕಾಫಿಯ ಬೆಲೆ ಏರಿಕೆ ಕಂಡಿರುವುದು ಉತ್ತಮ ಬೆಳವಣಿಗೆ ಎಂದರು. ಕಾಫಿ ಮಂಡಳಿಯ ಅಧ್ಯಕ್ಷ ಜಾವೆದ್ ಅಖ್ತರ್ ಮಾತನಾಡಿ, ‘2010-11ನೇ ಆರ್ಥಿಕ ವರ್ಷ ಕಾಫಿ ಬೆಳೆಗಾರರ ಪಾಲಿಗೆ ಬಹಳ ಮಹತ್ವದ್ದಾಗಿತ್ತು. ಕೇಂದ್ರ ಸರ್ಕಾರ ಈ ಅವಧಿಯಲ್ಲಿ ಕಾಫಿ ಬೆಳೆಗಾರರ ಸಾಲ ಮನ್ನಾ ಯೋಜನೆಗೆ ಹಣ ಬಿಡುಗಡೆ ಮಾಡಿತು’ ಎಂದರು.

ಕಾಫಿ ತೋಟದಲ್ಲಿ ಕೆಲಸ ಮಾಡಲು ಕೂಲಿಯಾಳುಗಳ ಅಭಾವ ಇರುವ ಕಾರಣ ಯಂತ್ರಗಳನ್ನು ಕೊಳ್ಳಲು ಕೇಂದ್ರ ಸರ್ಕಾರ ಸಬ್ಸಿಡಿ ನೀಡಲು ಆರಂಭಿಸಿದೆ. ಕಾಫಿ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

‘ಈ ಆರ್ಥಿಕ ವರ್ಷದಲ್ಲಿ ಮೂರು ಲಕ್ಷ ಮೆಟ್ರಿಕ್ ಟನ್ ಕಾಫಿ ರಫ್ತಾಗಿದೆ. ಇದರ ಮೌಲ್ಯ 750 ದಶಲಕ್ಷ ಡಾಲರ್‌ಗಳು. 2009-10ನೇ ಸಾಲಿನಲ್ಲಿ 426.95 ದಶಲಕ್ಷ ಡಾಲರ್ ಮೌಲ್ಯದ 1.96 ಲಕ್ಷ ಮೆಟ್ರಿಕ್ ಟನ್ ಕಾಫಿ ರಫ್ತಾಗಿದೆ’ ಎಂದು ಮಾಹಿತಿ ನೀಡಿದರು.

ರಫ್ತಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ‘ಕಾಫಿ ರಫ್ತು ಪ್ರಶಸ್ತಿ’ಯನ್ನು 1999-2000ನೇ ಇಸವಿಯಲ್ಲಿ ಆರಂಭಿಸಲಾಯಿತು. ಕಾಫಿ ಬೆಳೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದೊಂದಿಗೆ ‘ಫ್ಲೇವರ್ ಆಫ್ ಇಂಡಿಯಾ-ಫೈನ್ ಕಪ್ ಪ್ರಶಸ್ತಿ’ಯನ್ನು 2002ರಲ್ಲಿ ಆರಂಭಿಸಲಾಯಿತು ಎಂದರು.ಕಾಫಿ ಮಂಡಳಿಯ ಉಪಾಧ್ಯಕ್ಷ ಪ್ರೊ.ಕೆ.ಪಿ.ಥಾಮಸ್ ಉಪಸ್ಥಿತರಿದ್ದರು.

ಕಾಫಿ ರಫ್ತು ಪ್ರಶಸ್ತಿ ಪಡೆದ ಸಂಸ್ಥೆಗಳು

ಬೆಂಗಳೂರಿನ ಎನ್‌ಕೆಜಿ ಜಯಂತಿ ಕಾಫಿ ಲಿಮಿಟೆಡ್, ಮುಂಬಯಿಯ ಅಲ್ಲಾನಾಸನ್ಸ್ ಲಿಮಿಟೆಡ್

ಹೈದರಾಬಾದ್‌ನ ಸಿಸಿಎಲ್ ಪ್ರಾಡಕ್ಟ್ಸ್ ಲಿಮಿಟೆಡ್, ಮಂಗಳೂರಿನ ಆಸ್ಪಿನ್‌ವಾಲ್ ಕಂಪೆನಿ ಲಿಮಿಟೆಡ್

ನೆಸ್ಲೆ ಇಂಡಿಯಾ ಲಿಮಿಟೆಡ್, ನರಾಸಸ್ ಎಕ್ಸ್‌ಪೋರ್ಟ್, ಕೋಕಾ-ಕೋಲಾ ಇಂಡಿಯಾ ಲಿಮಿಟೆಡ್

ನೆಡ್ ಕಮಾಡಿಟಿಸ್ ಲಿಮಿಟೆಡ್, ಓಲಾಮ್ ಆಗ್ರೊ ಇಂಡಿಯಾ ಲಿಮಿಟೆಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT