ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯವರ್ಧಿತ ಸೇವೆ ನಿಯಮ ಇನ್ನಷ್ಟು ಬಿಗಿ

ಮೊಬೈಲ್ ಮಾತು
Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಮೊಬೈಲ್ ಮೌಲ್ಯವರ್ಧಿತ ಸೇವೆಗಳನ್ನು (ವಿಎಎಸ್) ಚಾಲನೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನಿಯಮಗಳನ್ನು `ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ'(ಟ್ರಾಯ್) ಇನ್ನಷ್ಟು ಬಿಗಿಗೊಳಿಸಿದೆ. ಹೊಸ ಮಾರ್ಗಸೂಚಿಯನ್ನೂ ಕಳೆದ ವಾರ ಬಿಡುಗಡೆ ಮಾಡಿದೆ.
ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳು ಗ್ರಾಹಕರಿಂದ ಎರಡು ಬಾರಿ ಒಪ್ಪಿಗೆ ಪಡೆದ ನಂತರವೇ `ವಿಎಎಸ್' ಚಾಲನೆಗೊಳಿಸಬೇಕು. ಅಷ್ಟೇ ಅಲ್ಲ, ಗ್ರಾಹಕರು ಯಾವುದಾದರೂ ಸೇವೆ ಬೇಡವೆಂದರೆ 4 ಗಂಟೆಗಳ ಒಳಗಾಗಿ ಆ ಸೇವೆಯನ್ನು ರದ್ದುಗೊಳಿಸಬೇಕು. ಇದು ಕಡ್ಡಾಯ ಎಂದೂ `ಟ್ರಾಯ್' ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳು ಗ್ರಾಹಕರ ಅನುಮತಿ ಪಡೆಯದೇ ಕೆಲವು ಮೌಲ್ಯವರ್ಧಿತ ಸೇವೆಗಳನ್ನು ಚಾಲನೆಗೊಳಿಸಿ ಹಣ ವಸೂಲು ಮಾಡುತ್ತಿವೆ ಎಂಬ ದೂರುಗಳು ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ.

`ವಿಎಎಸ್'ಗೆ ಸಂಬಂಧಿಸಿದಂತೆ ಗ್ರಾಹಕರಿಂದ ಮನವಿ ಬಂದಾಗ ದರ ವಿವರ ಸೇರಿದಂತೆ ಆ ಸೇವೆ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ಸೇವೆಯನ್ನು ಚಾಲನೆಗೊಳಿಸುವ ಪೂರ್ವದಲ್ಲಿ ಮತ್ತೊಮ್ಮೆ ಗ್ರಾಹಕರನ್ನು ಸಂಪರ್ಕಿಸಿ ಖಾತರಿ ಪಡಿಸಿಕೊಳ್ಳಬೇಕು. ದೂರವಾಣಿ ಸೇವಾ ಸಂಸ್ಥೆಗಳ ಬದಲಿಗೆ ಮೂರನೇ ವ್ಯಕ್ತಿ ಇಲ್ಲವೇ ಸಂಸ್ಥೆಗಳಿಂದಲೇ ಗ್ರಾಹಕರ ಅಂತಿಮ ಅನುಮೋದನೆ ಪಡೆದುಕೊಳ್ಳಬೇಕು.  ಹೀಗೆ ಎರಡನೇ ಅನುಮೋದನೆ ಬಂದ ನಂತರವೇ ಸೇವೆ ಚಾಲನೆಗೊಳಿಸಬೇಕು ಎಂದು ಹೇಳಿದೆ.

ಎಸ್‌ಎಂಎಸ್, ಮೊಬೈಲ್ ಇಂಟರ್‌ನೆಟ್, ಇಂಟರ್ಯಾಕ್ಟೀವ್ ವಾಯ್ಸ ರೆಸ್ಪಾನ್ಸ್, ಟೆಲಿ ಕಾಲಿಂಗ್, ಯುಎಸ್‌ಎಸ್‌ಡಿ ತಂತ್ರಜ್ಞಾನದ ಮೂಲಕವೂ `ವಿಎಎಸ್' ಸೌಲಭ್ಯ ಒದಗಿಸುವಂತೆ ಸೇವಾ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಹೊಸ `ವಿಎಎಸ್' ಮಾರ್ಗಸೂಚಿಗೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಜಾಹೀರಾತು ನೀಡುವಂತೆಯೂ ತಿಳಿಸಿದೆ.

ಗ್ರಾಹಕರು 155223 ಸಂಖ್ಯೆಗೆ ಕರೆ ಮಾಡುವ ಮೂಲಕ ಮೌಲ್ಯವರ್ಧಿತ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು. ಒಂದು ವೇಳೆ ಗ್ರಾಹಕರು ಬೇಡಿಕೆ ಸಲ್ಲಿಸಿದ ಸೇವೆಗೆ ಬದಲಾಗಿ ಬೇರೆಯದೇ ಸೇವೆ ಚಾಲನೆಗೊಂಡಿದ್ದರೆ, 24 ಗಂಟೆಗಳ ಒಳಗಾಗಿ ಕಡಿತ ಮಾಡಿದ ಹಣ ಮರುಪಾವತಿಸುವಂತೆಯೂ `ಟ್ರಾಯ್' ಸೂಚಿಸಿದೆ.

ಒಂದು ವೇಳೆ `ವಿಎಎಸ್'ನ ಅವಧಿ 1 ದಿನವಾಗಿದ್ದರೆ ಸೇವಾ ಸಂಸ್ಥೆಗಳು 6 ಗಂಟೆಗಳ ಒಳಗೆ ಹಣ ಮರುಪಾವತಿಸಬೇಕಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT