ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಜಿಕ್ ಲೋಕದಲ್ಲಿ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇಂದ್ರಜಾಲ, ಯಕ್ಷಿಣಿ, ಜಾದೂ, ಕಣ್ಕಟ್ಟು, ಮಾಯೆ ಹೀಗೆ ಹತ್ತಾರು ಹೆಸರಿನಿಂದ ಕರೆಸಿಕೊಳ್ಳುವ ಮ್ಯಾಜಿಕ್‌ಗೆ ಪ್ರೇಕ್ಷಕರ ಸಕಲ ಇಂದ್ರಿಯಗಳನ್ನು ತನ್ನ ಜಾಲದಲ್ಲಿ ವಶಪಡಿಸಿಕೊಳ್ಳುವ ಶಕ್ತಿಯಿದೆ. ಮನರಂಜನೆ, ವೈಜ್ಞಾನಿಕತೆ, ಬೌದ್ಧಿಕತೆ ಹಾಗೂ ವೈಚಾರಿಕತೆಯ ಪ್ರಯೋಗಗಳು ಆತನನ್ನು ಕಲೆಯ ಉತ್ತುಂಗಕ್ಕೇರಿಸುತ್ತವೆ.

ಈ ಕಲೆಯ ಮುಖ್ಯ ಅಂಶವೆಂದರೆ ರಹಸ್ಯ, ಕುಶಲತೆ, ಮಾತುಗಾರಿಕೆ, ನಟನೆ ಹಾಗೂ ವೇಷಭೂಷಣಗಳ ಸಮ್ಮಿಲನ. ಇಂತಹ ಅಪರೂಪದ ವಿದ್ಯೆಗೆ ನಮ್ಮ ರಾಜ್ಯದಲ್ಲಿ ಮಾನ್ಯತೆ ಇಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಈ ಕಲೆಗೆ ಪ್ರಾಶಸ್ತ್ಯ ಕೊಟ್ಟಿವೆ. ಅದರಲ್ಲೂ ಕೇರಳದ ವಿಶ್ವವಿದ್ಯಾಲಯದಲ್ಲಿ ಈ ವಿದ್ಯೆಯನ್ನು ಬೋಧನೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕಲಾವಿದರು ಮೇಲ್ಮಟ್ಟಕ್ಕೆ ಬರಬೇಕಾದರೆ ಹಣಬಲ ಇರಬೇಕು ಇಲ್ಲವೇ ಪ್ರಭಾವಶಾಲಿಗಳಾಗಿರಬೇಕು. ಎಂತಹ ದೌರ್ಭಾಗ್ಯ!

ಇಂದು ಜಾದೂಗಾರರ ದಿನ
ಅದು 1937ನೇ ಇಸವಿ. ಬಂಗಾಳದ ಸಮ್ಮಿಶ್ರ ಸರ್ಕಾರದ ಪ್ರಧಾನ ಮಂತ್ರಿ (ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿ ಎಂದು ಕರೆಯುತ್ತಿದ್ದರು) ಹಾಗೂ ಎಲ್ಲಾ ಮಂತ್ರಿಗಳ ಹಸ್ತಾಕ್ಷರ ಪಡೆದು ಅದೇ ಪತ್ರವನ್ನು ರಾಜೀನಾಮೆ ಪತ್ರವನ್ನಾಗಿಸಿ ದೇಶದಲ್ಲೇ ಸಂಚಲನ ಮೂಡಿಸಿದವರು ಪಿ.ಸಿ.ಸರ್ಕಾರ್. ಫಜಲುಲ್ ಹಕ್, ಸುಹ್ರಾವಾಡಿ, ನಜೀಮುದ್ದೀನ್ ಅಂದು ಹಸ್ತಾಕ್ಷರ ಹಾಕಿ ಸಚಿವ ಸ್ಥಾನ ಕಳೆದುಕೊಂಡವರು.

ಭಯಾನಕ ಸಂದರ್ಭವೊಂದರಲ್ಲಿ ಚೀನಾದಲ್ಲಿ ಅವರಿಗೆ ಕೈಕೋಳ ಹಾಕಿ ರೈಲ್ವೆ ಹಳಿಗಳ ಮೇಲೆ ಕಟ್ಟಿಹಾಕಲಾಗಿತ್ತು. ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗವಾಗಿ ಎಕ್ಸ್‌ಪ್ರೆಸ್ ರೈಲು ಬಂಡಿ ಹಾದು ಹೋಗುವುದಿತ್ತು. ಕೆಲವೇ ಸೆಕೆಂಡುಗಳಲ್ಲಿ ದೊಡ್ಡ ಸದ್ದಿನೊಂದಿಗೆ ಬಂದಿದ್ದ ರೈಲಿನ ಗಾಲಿಗಳಿಂದ ಅವರು ತಪ್ಪಿಸಿಕೊಂಡು ಮತ್ತೊಮ್ಮೆ ಚತುರ ಎನಿಸಿಕೊಂಡರು.

1950ರಲ್ಲಿ ಪ್ಯಾರಿಸ್ ನಗರದ ಪ್ಯಾಲೆಸ್ ಡಿ ಒಪೆರಾದ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದಾಗ ಅವರಿಗೆ ಲಕ್ಷಾಂತರ ಅಭಿಮಾನಿಗಳ ಬಳಗ ಹುಟ್ಟಿಕೊಂಡಿತು.
ಪಿ.ಸಿ.ಸರ್ಕಾರ್ ತಮ್ಮ ಜೀವಿತಾವಧಿಯನ್ನು ಇಂದ್ರಜಾಲ ವಿದ್ಯೆಗಾಗಿ ಮೀಸಲಿಟ್ಟವರು. ಜಾದೂ ರಂಗ ಪರಿಕರಗಳೊಂದಿಗೆ ಭ್ರಮಾಲೋಕ ಸೃಷ್ಟಿಸುತ್ತಿದ್ದವರು. ವಿಜ್ಞಾನ, ಮನೋವಿಜ್ಞಾನ ಹಾಗೂ ನಾಟಕ ಜ್ಞಾನವನ್ನು ಇದರೊಂದಿಗೆ ಬೆರೆಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಮ್ಯಾಜಿಕ್ ಎಂದರೆ ಮಾಟ- ಮಂತ್ರ ಎಂಬ ತಪ್ಪು ಕಲ್ಪನೆಯಿಂದ ಈ ಕಲೆಯ ಪ್ರೋತ್ಸಾಹಕ್ಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಈ ಜಾದೂಗಾರರು ಹಸಿವಿನಿಂದ ನರಳುತ್ತಿದ್ದುದೂ ಇತ್ತು. ಹೀಗೆ ಪಾತಾಳಕ್ಕಿಳಿದಿದ್ದ ಕಲೆಯೊಂದನ್ನು ಮೇಲಕ್ಕೆತ್ತಿ ಸಂಗೀತ, ನಾಟಕ, ನಾಟ್ಯ, ಚಿತ್ರಕಲೆಯ ಸಾಲಿಗೆ ಎತ್ತಿ ತಂದ ಕೀರ್ತಿ ಇವರದು.

1963ರಲ್ಲಿ ಭಾರತ ಸರ್ಕಾರ `ಪದ್ಮಶ್ರೀ~ ಬಿರುದು ನೀಡಿ ಸನ್ಮಾನಿಸಿತು. ನಿಧನರಾದ ಎಂಟು ವರ್ಷಗಳ ಬಳಿಕ ಅವರು ವಾಸಿಸುತ್ತಿದ್ದ ರಸ್ತೆಗೆ ಅವರದ್ದೇ ಹೆಸರಿಡಲಾಯಿತು. 2010ರಲ್ಲಿ ಅವರ ಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು. ಇದೀಗ ಅವರ ಹುಟ್ಟುಹಬ್ಬದ ದಿನವನ್ನು ಜಾದೂಗಾರರ ದಿನವನ್ನಾಗಿ ಆಚರಿಸುತ್ತಿರುವುದು ಇಂದ್ರಜಾಲ ಸಮೂಹಕ್ಕೆ ಸಂದಿರುವ ಮತ್ತೊಂದು ಗೌರವದ ಸಂಗತಿ.

 


 ನಮ್ಮ ರಾಜ್ಯದಲ್ಲಿ ಜಾದೂಗಾರರಿಗೇನೂ ಕೊರತೆಯಿರಲಿಲ್ಲ. ಅಂದಿನ ಜಾದೂ ದಿಗ್ಗಜರಾದ ಡಾ. ಪಾಂಡುರಂಗರಾವ್, ಪ್ರೊ. ವಸಂತಕುಮಾರ್, ಪ್ರೊ. ಬಾಸ್, ಅಪ್ಪಯ್ಯ, ಗ್ರೇಟ್ ಹಕ್ಲ, ಜಂಬಾಗೋ ಮುಂತಾದವರು (ಈಗಾಗಲೇ ಕಾಲವಾಗಿದ್ದಾರೆ) ಹೊಸಬರಿಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದ್ದರು. ಪ್ರಸಕ್ತ ಸಾಲಿನಲ್ಲಿ ನಗರದವರೇ ಆದ ಉದಯ್ ಜಾದೂಗಾರ್, ಎ.ಕೆ.ದತ್, ಎಸ್.ಪಿ. ನಾಗೇಂದ್ರಪ್ರಸಾದ್, ಕೆ.ಎಸ್. ರಮೇಶ್, ಸತ್ಯಮೂರ್ತಿ, ಎಂ. ಪ್ರಭು, ಮೈಸೂರ್ ನಾಗೇಶ್, ಉಡುಪಿಯ ಶಂಕರ್, ಪ್ರಹ್ಲಾದಾಚಾರ್ಯ, ನಕುಲ್ ಶೆಣೈ, ಓಂ ಗಣೇಶ್, ಕುದ್ರೋಳಿ ಗಣೇಶ್, ಬೂಬ, ಸಿದ್ದರಾಜು, ಚಂದ್ರಶೇಖರ್, ರಾಜ್, ಗುರುರಾಜ್, ಕರುಣ್ ಕೃಷ್ಣ, ಚಿನ್ಮಯಿ, ಸುರೇಶ್‌ಬಾಬು, ರಾಮಾಂಜನೇಯ, ಮನೋಹರ್, ಶ್ರಿವತ್ಸ, ವೆಂಕಟೇಶ್‌ಮೂರ್ತಿ, ರಾವ್‌ಬದರಿ, ನಂದೀಶ್, ಎಂ.ಡಿ. ಕೌಶಿಕ್, ಗಿರಿ, ಶ್ರಿಕಾಂತ್, ತೇಜಸ್ವಿ ಅನಂತ್ ಅನ್ನು ಮೊದಲಾದವರು ಇಂದಿಗೂ ಜಾದೂವನ್ನು ವೃತ್ತಿಯಾಗಿ ಪರಿಗಣಿಸಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೀಗ ಜಾದೂ ಕಲೆ ಉದ್ಯಮವಾಗಿಯೂ ಬೆಳೆಯುತ್ತಿದೆ. ಹೋಟೆಲ್, ಕ್ಲಬ್- ಪಬ್, ಹುಟ್ಟುಹಬ್ಬ, ನಾಮಕರಣ, ಉತ್ಪನ್ನಗಳ ಜಾಹೀರಾತಿಗಾಗಿಯೂ ಜಾದೂ ಬಳಕೆಯಾಗುತ್ತಿದೆ. ಸಾಮಾಜಿಕ ಕಳಕಳಿಯೊಂದಿಗೆ ಜಾಗೃತಿ ಮೂಡಿಸಲು ಹಾಗೂ ರಿಯಾಲಿಟಿ ಶೋಗಳಲ್ಲಿಯೂ ಈ ಕಲೆ ತನ್ನ ಪಾರಮ್ಯ ಮೆರೆಯುತ್ತಿದೆ.

ಆತಂಕದ ಸುದ್ದಿಯೆಂದರೆ, ಇತ್ತೀಚಿನ ದಿನಗಳಲ್ಲಿ ಕೆಲ ಟಿ.ವಿ. ಮಾಧ್ಯಮಗಳು ಜಾದೂವಿನ ಹಿಂದಿನ ರಹಸ್ಯಗಳನ್ನು ಬಯಲು ಮಾಡಿ ಈ ಅದ್ಭುತ ಮನರಂಜನೆಯ ಸಾರವನ್ನ ಜನರಿಂದ ದೂರ ಮಾಡುತ್ತಿದೆ. ಈ ರಹಸ್ಯಗಳನ್ನು ಸಾರ್ವಜನಿಕವಾಗಿ ಪ್ರದರ್ಶನಗೊಂಡಾಗ ಸಮಾಜದ ದುಷ್ಟಶಕ್ತಿಗಳಿಗೆ ಇದು ವರವಾಗಿ ಪರಿಣಮಿಸಿ ಅವರಿಂದ ಅಪರಾಧ ಹೆಚ್ಚಳವಾಗುವ ಸಾಧ್ಯತೆಗಳಿದೆ.

ಜಾದೂ ಕಲೆಗಾರರನ್ನು ಡೋಂಗಿ ಸ್ವಾಮಿ ಇಲ್ಲವೇ ಸಮಾಜಘಾತುಕರೊಂದಿಗೆ ಹೋಲಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಅದನ್ನೇ ನಂಬಿ ಅದರಲ್ಲೇ ಬದುಕು ಸಾಗಿಸುವ ಸಾವಿರಾರು ಜಾದೂರರನ್ನು ನಿರುದ್ಯೋಗಿಗಳಾಗಿ ಮಾಡುವ ಪ್ರಯತ್ನ ಮಾಧ್ಯಮಗಳಲ್ಲಿ ನಡೆಯುತ್ತಿರುವುದು ಖಂಡನಾರ್ಹ.

ಜಾದೂ ಹೆಸರಿನಲ್ಲಿ ಇದೇ ವಿದ್ಯೆಯನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ `ಬ್ಲಾಕ್ ಮ್ಯಾಜಿಕ್~ ಎಂಬ ಹೆಸರಿನಿಂದ (ಮಾಟ-ಮಂತ್ರ) ಅಮಾಯಕರನ್ನು ಸುಲಿಗೆ ಮಾಡುತ್ತಿದ್ದಾರೆ. ಇವರ ಕುತಂತ್ರವನ್ನು ಬಯಲಿಗೆಳೆಯಬೇಕಾದ ಜವಾಬ್ದಾರಿಯೂ ಮಾಧ್ಯಮದ ಮೇಲಿದೆ. ಎಲ್ಲರ ನೋವನ್ನು ಮರೆಸಿ, ಮುಖದ ಮೇಲೆ ನಗು ಮೂಡಿಸುವ ಜಾದೂಗಾರರ ಬದುಕೂ ಸಂತೃಪ್ತಿಯಿಂದಿರಲಿ. 
 

ಮ್ಯಾಜಿಕ್ ಸರ್ಕಲ್ ಆಫ್ ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್, ಕೃಷ್ಣ ಪರಿಷನ್ಮಂದಿರ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ. ಜಾದೂ ಸಾಮ್ರಾಟ್ ದಿ.ಪಿ.ಸಿ.ಸರ್ಕಾರ್ ಅವರ ಜನ್ಮ ಶತಮಾನೋತ್ಸವ ಸಮಾರಂಭ. ಅಧ್ಯಕ್ಷತೆ- ಕನ್ನಡ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. ಅತಿಥಿಗಳು- ನಟ ನಿರ್ದೇಶಕ ದ್ವಾರಕೀಶ್, ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ. ಸಂಜೆ 6.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT