ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್-ಅಮೆರಿಕ ಮೈತ್ರಿ: ಚೀನಾಗೆ ತಲೆನೋವು

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಏಷ್ಯಾದ ಅತಿ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿರುವ ಚೀನಾಗೆ ಈಗ ಒಳಗಿನಿಂದಲೇ ನಡುಕ. ಅದರ ಹಳೆಯ ಮಿತ್ರ ಮ್ಯಾನ್ಮಾರ್ (ಬರ್ಮಾ) ಜತೆ `ದೊಡ್ಡಣ್ಣ~ ಅಮೆರಿಕ ಆಪ್ತವಾಗುತ್ತಿರುವುದು ಚೀನಾ ರಾಜತಾಂತ್ರಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾದಂತಿದೆ.

ತನ್ನ ಬಗಲಲ್ಲೇ ಇರುವ ಮ್ಯಾನ್ಮಾರ್ ಹಾಗೂ ಪ್ರಜಾಪ್ರಭುತ್ವವಾದಿ ಅಮೆರಿಕದ ಸಂಬಂಧ ಸುಧಾರಿಸಿರುವುದನ್ನು ಚೀನಾ ಬಹಿರಂಗವಾಗಿ ಸ್ವಾಗತಿಸಿದೆ. ಆದರೆ, ಒಳಗೊಳಗೆ ಅಸಮಾಧಾನ ಹೊಗೆಯಾಡುವಂತಿದೆ.

ಚೀನಾ ಮತ್ತು ಮ್ಯಾನ್ಮಾರ್ ಮೊದಲಿನಿಂದಲೂ ಸಾಂಪ್ರದಾಯಿಕ ಮಿತ್ರರು. ಈ ಎರಡೂ ದೇಶಗಳ ನಡುವೆ ಇರುವ ಬೃಹತ್ ವಾಣಿಜ್ಯ ವಹಿವಾಟು ಮತ್ತು ಸೇನಾ ಸಹಕಾರವೇ ಇದಕ್ಕೆ ಸಾಕ್ಷಿ.

ಆದರೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಡಿಸೆಂಬರ್ ಮೊದಲ ವಾರದಲ್ಲಿ ಮ್ಯಾನ್ಮಾರ್‌ಗೆ ಬಂದು ಹೋದಾಗಿನಿಂದ ಈ ಸಂಬಂಧದಲ್ಲಿ ಎಲ್ಲೋ ಅಪಸ್ವರ ಕೇಳಿಬರುತ್ತಿದೆ. ಬೀಜಿಂಗ್ ಮತ್ತು ನೇ ಪ್ಯಾ ತಾ (ಮ್ಯಾನ್ಮಾರ್ ರಾಜಧಾನಿ) ನಡುವೆ ಏನೋ ತಿಕ್ಕಾಟ ನಡೆಯುತ್ತಿರುವಂತೆ ಕಾಣುತ್ತಿದೆ.
 
ಚೀನಾ-ಮ್ಯಾನ್ಮಾರ್ - ಅಮೆರಿಕ ನಡುವಿನ ಪ್ರಸ್ತುತ ರಾಜತಾಂತ್ರಿಕ ಸನ್ನಿವೇಶದ ಕುರಿತು ವಿಶ್ಲೇಷಿಸುವ ಮುನ್ನ ಈ ದೇಶಗಳ ನಡುವಿನ ಬಾಂಧವ್ಯ ಮೊದಲು ಹೇಗಿತ್ತು ಎಂದು ಅವಲೋಕಿಸುವುದು ಅಗತ್ಯ.

1998ರಲ್ಲಿ ಮ್ಯಾನ್ಮಾರ್ ಸೇನೆ ಅಲ್ಲಿನ ಸರ್ಕಾರದ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅಮೆರಿಕ -ಮ್ಯಾನ್ಮಾರ್ ಸಂಬಂಧ ಹದಗೆಟ್ಟಿತ್ತು. 1990ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಕ್ಕೂ ಮನ್ನಣೆ ನೀಡದೇ ಸರ್ಕಾರ ಕಿತ್ತೊಗೆದ ನಂತರ `ದೊಡ್ಡಣ್ಣ~ ಅಮೆರಿಕ ಹಲವು ಶಾಸನಗಳ ಮೂಲಕ ಮ್ಯಾನ್ಮಾರ್‌ದ ಸೇನಾ ಆಡಳಿತದ ವಿರುದ್ಧ ದಿಗ್ಬಂಧನ ವಿಧಿಸಿತು.

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ದಮನ, ಇನ್ನೂ ಚಾಲ್ತಿಯಲ್ಲಿರುವ ಜೀತದಾಳು ಪದ್ಧತಿಯಿಂದಾಗಿ ಅಮೆರಿಕ ತನ್ನ ರಾಯಭಾರಿಯನ್ನು ವಾಪಸು ಕರೆಯಿಸಿಕೊಂಡು, ಅವರಿಗಿಂತ ಕೆಳಗಿನ ಹಂತದ ಅಧಿಕಾರಿಯನ್ನು ಆ ದೇಶಕ್ಕೆ ನೇಮಿಸಿತು. 

ಐರೋಪ್ಯ ಒಕ್ಕೂಟದ ಬಹುತೇಕ ದೇಶಗಳು ಅಮೆರಿಕ ಹಾದಿಯನ್ನೇ ತುಳಿದವು. ಒಂದೆರಡು ವರ್ಷಗಳಲ್ಲೇ ಮ್ಯಾನ್ಮಾರ್‌ನ ಪ್ರಜಾಪ್ರಭುತ್ವ ಹೋರಾಟಗಾರರ ಒತ್ತಡಕ್ಕೆ ಮಣಿದ ಪಾಶ್ಚಿಮಾತ್ಯ ಕಂಪೆನಿಗಳು, ಉದ್ದಿಮೆಗಳು ಮ್ಯಾನ್ಮಾರ್‌ದಲ್ಲಿನ ತಮ್ಮ ಘಟಕಗಳ ಬಾಗಿಲು ಮುಚ್ಚಿದವು.
 
ಏಷ್ಯಾದ ನೆರೆಯ ದೇಶಗಳ ಕಂಪೆನಿಗಳು ಮಾತ್ರ ಅಲ್ಲಿ ಉಳಿದವು. ಬಹುತೇಕ ಕಂಪೆನಿಗಳು ಮ್ಯಾನ್ಮಾರ್‌ನ  ಸಮೃದ್ಧ ನೆಲ ಬಗೆದು ನೈಸರ್ಗಿಕ ಸಂಪನ್ಮೂಲ ಕೊಳ್ಳೆ ಹೊಡೆಯತೊಡಗಿದವು.

ಮ್ಯಾನ್ಮಾರ್ ವಿರುದ್ಧ ದಿಗ್ಬಂಧನ ಬಿಗಿಗೊಳಿಸಲು ಅಮೆರಿಕ 2003ರಲ್ಲಿ ಮ್ಯಾನ್ಮಾರ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಕಾಯ್ದೆ ಜಾರಿಗೆ ತಂದಿತು. ಈ ಕಾಯ್ದೆ ಅನುಸಾರ ಮ್ಯಾನ್ಮಾರ್‌ನಿಂದ ಆಮದು ಮಾಡಿಕೊಳ್ಳುವ ಎಲ್ಲ ವಸ್ತುಗಳ ಮೇಲೆ ನಿಷೇಧ ಹೇರಲಾಯಿತು.
 
ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮ್ಯಾನ್ಮಾರ್ ಹಣಕಾಸು ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಅಮೆರಿಕದ ಕಂಪೆನಿಗಳು ಮ್ಯಾನ್ಮಾರ್‌ನಲ್ಲಿ ಹಣಕಾಸು ಸೇವೆ ನೀಡುವುದರ ಮೇಲೆ ನಿರ್ಬಂಧ ವಿಧಿಸಲಾಯಿತು. ಅಮೆರಿಕದಲ್ಲಿರುವ ಮ್ಯಾನ್ಮಾರ್ ಅಧಿಕಾರಿಗಳ ವೀಸಾ ವಿಸ್ತರಣೆಗೂ ಅಡಚಣೆ ಒಡ್ಡಲಾಯಿತು. 

ತಿಂಗಳ ಹಿಂದೆ ಹಿಲರಿ ಕ್ಲಿಂಟನ್ ಆ ದೇಶಕ್ಕೆ ಭೇಟಿ ನೀಡಿದಾಗ 50 ವರ್ಷಗಳ ನಂತರ ಮ್ಯಾನ್ಮಾರ್‌ಗೆ ಭೇಟಿ ನೀಡಿದ ಅಮೆರಿಕದ ಮೊದಲ ವಿದೇಶಾಂಗ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೂ ಪಾತ್ರವಾದರು.

2010ರಲ್ಲಿ ಜನಮತಕ್ಕೆ ಬೆಲೆ ನೀಡಿ ಸೇನಾ ಆಡಳಿತ ಸಾರ್ವತ್ರಿಕ ಚುನಾವಣೆ ನಡೆಸಿದ್ದು, ಸೇನೆಯ ಬೆಂಬಲದಿಂದ ಚುನಾವಣೆಯಲ್ಲಿ ಅಕ್ರಮ ನಡೆಸಿ ಅಧಿಕಾರಕ್ಕೆ ಬಂದಿದೆ ಎಂಬ ಆರೋಪ ಕೇಳಿಬಂದಿದ್ದರೂ ಹೊಸ ಸರ್ಕಾರ ಕೆಲವೇ ತಿಂಗಳಲ್ಲಿ ಪ್ರಜಾಪ್ರಭುತ್ವವಾದಿ ನಾಯಕಿ ಸೂಕಿಯನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಿದ್ದು ಅಮೆರಿಕ, ಮ್ಯಾನ್ಮಾರ್‌ನ ಕುರಿತು ಮೃದು ಧೋರಣೆ ತಾಳಲು ಕಾರಣ. ಈಗ ಹಿಲರಿ ಭೇಟಿಯಂತೂ ಅಮೆರಿಕ-ಮ್ಯಾನ್ಮಾರ್ ಸಂಬಂಧದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದೆ.

ಸಾಂಪ್ರದಾಯಿಕ ಸ್ನೇಹಿತ: ಇನ್ನು ಚೀನಾವಂತೂ ಮ್ಯಾನ್ಮಾರ್‌ನ ಹಳೆಯ ಸ್ನೇಹಿತ. 1949ರಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಸ್ಥಾಪನೆಯಾದಾಗ ಆ ಸರ್ಕಾರಕ್ಕೆ ಮಾನ್ಯತೆ ನೀಡಿದ ಮೊದಲ ಕಮ್ಯುನಿಸ್ಟೇತರ ದೇಶ ಮ್ಯಾನ್ಮಾರ್. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವವಾದಿ ಸರ್ಕಾರ ಇರಲಿ, ಸೇನಾ ಆಡಳಿತ ಇರಲಿ ಚೀನಾ ತನ್ನ ಬಗಲಲ್ಲೇ ಇರುವ ಈ ದೇಶಕ್ಕೆ ಸೇನಾ ನೆರವು, ಆರ್ಥಿಕ ನೆರವು ಒದಗಿಸುತ್ತಲೇ ಇತ್ತು.

ಭಾರತದ ಜತೆ ದೊಡ್ಡದಾದ ಭೂ ಗಡಿ ಮತ್ತು ಕಡಲ ಗಡಿಯನ್ನು ಹೊಂದಿರುವ ಮ್ಯಾನ್ಮಾರ್‌ನ ಗೆಳೆತನ ಚೀನಾಕ್ಕೆ ಯಾವಾಗಲೂ ಲಾಭದಾಯಕವಾಗಿಯೇ ಇದೆ ಎಂಬುದನ್ನು ಅಲ್ಲಗಳೆಯುಂತಿಲ್ಲ.

ಆಗ್ನೇಯ ಏಷ್ಯಾ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹಿಡಿತ ಸಾಧಿಸಲು ಮ್ಯಾನ್ಮಾರ್  ಭಾಗಕ್ಕೆ ಸೇರಿರುವ ಬಂಗಾಳ ಕೊಲ್ಲಿಯ ಕ್ಯಾವಕ್‌ಪ್ಯೂನಲ್ಲಿ ಬಂದರು ನಿರ್ಮಿಸಿದ್ದು ಚೀನಾದ ಜಾಣತನ.
 
ಅಂಡಮಾನ್, ನಿಕೋಬಾರ್ ದ್ವೀಪ ಸಮೂಹದಿಂದ ಕೇವಲ 18 ಕಿ.ಮೀ. ದೂರದಲ್ಲಿರುವ ಗ್ರೇಟ್ ಕೋಕೊ ಐಲ್ಯಾಂಡ್‌ನಲ್ಲಿ ಚೀನಾ ನೌಕಾನೆಲೆ ಸ್ಥಾಪಿಸಿರುವುದು, ಅತ್ಯಾಧುನಿಕ ದೂರಸಂವೇದಿ ಸಲಕರಣೆಗಳನ್ನು ಇಟ್ಟಿರುವುದು ಭಾರತದ ಸೇನಾ ಚಟುವಟಿಕೆಗಳ ಮೇಲೆ ಕಣ್ಣಿಡಲು ಎಂಬುದೂ ರಹಸ್ಯವಾಗಿಲ್ಲ.

ಕಳೆದ ವರ್ಷದ ಆರಂಭದಲ್ಲಿ ಮ್ಯಾನ್ಮಾರ್ ಅಧ್ಯಕ್ಷ ಥೇನ್ ಸೇನ್ ಬೀಜಿಂಗ್‌ಗೆ ಭೇಟಿ ನೀಡಿದ್ದಾಗ ಅದನ್ನು ಹಳೆಯ ಮಿತ್ರ ದೇಶಗಳ ನಡುವೆ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವ ಮತ್ತೊಂದು ಯತ್ನ ಎಂದೇ ಅರ್ಥೈಸಲಾಗಿತ್ತು. ಚೀನಾದ ಜತೆಗಿನ ಸಂಬಂಧ ಅತ್ಯಂತ ಹತ್ತಿರದ್ದು ಮತ್ತು ಮಹತ್ತರವಾದದ್ದು ಎಂದು ಆತ ಹೇಳಿದ್ದರು.

ಆದರೆ, ಮ್ಯಾನ್ಮಾರ್‌ನಲ್ಲಿ ಈಗ ಬದಲಾವಣೆಯ ಗಾಳಿ. ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಸರ್ಕಾರ ಅಧಿಕಾರ ಹಿಡಿದಿದೆ. ದೇಶದೊಳಗೆ ಸುಧಾರಣೆಯ ಹೊಸ ಹೆಜ್ಜೆಗಳನ್ನು ಇಟ್ಟಿದೆ.

ಮ್ಯಾನ್ಮಾರ್ ಸಹ ತನ್ನ ವಿದೇಶಾಂಗ ನೀತಿಯನ್ನು ಪುನರಾವಲೋಕಿಸುತ್ತಿದೆ. ಹಿಲರಿ ಅವರು ಮ್ಯಾನ್ಮಾರ್‌ಗೆ ತೆರಳುತ್ತಿದ್ದಂತೆ ಅಮೆರಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಇತ್ತೀಚಿನ ಭೇಟಿಯಲ್ಲಿ ಆ ದೇಶದ ನಡವಳಿಕೆ ಎಷ್ಟು ಬದಲಾಗಿತ್ತು ಎಂಬುದನ್ನು ಬಹಿರಂಗಪಡಿಸಿದರು.

ಇದಕ್ಕೂ ಮೊದಲಿನ ಭೇಟಿಯಲ್ಲಿ ಮ್ಯಾನ್ಮಾರ್‌ನ ರಾಜತಾಂತ್ರಿಕರು ಬಂಡವಾಳಶಾಹಿಗಳ ದಬ್ಬಾಳಿಕೆ ಕುರಿತು ಅಮೆರಿಕದ ಅಧಿಕಾರಿಗಳಿಗೆ ಕನಿಷ್ಠ ಒಂದು ಗಂಟೆ ಉಪನ್ಯಾಸ ನೀಡುತ್ತಿದ್ದರಂತೆ. ಕಳೆದ ಕೆಲ ತಿಂಗಳಿನಿಂದ ಇದೆಲ್ಲ ನಿಂತುಹೋಗಿದೆ.

ಚೀನಾದ ಜತೆಗಿನ ಸಂಬಂಧದಲ್ಲೂ ಇತ್ತೀಚೆಗೆ ನಾಟಕೀಯ ತಿರುವು ಕಾಣಿಸಿಕೊಂಡಿದೆ. ಚೀನಾ ಆರ್ಥಿಕ ಸಹಕಾರದಲ್ಲಿ ಇರಾವತಿ ನದಿಗೆ ಕಟ್ಟುತ್ತಿದ್ದ ಮ್ಯಿಸ್ಟೋನ್ ಅಣೆಕಟ್ಟೆಯ ಕಾಮಗಾರಿ ನಿಲ್ಲಿಸುವಂತೆ ಮ್ಯಾನ್ಮಾರ್ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಏಕಾಏಕಿ ಆದೇಶ ಹೊರಡಿಸಿತು.

2006ರಲ್ಲಿ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಈ ಯೋಜನೆ ಆರಂಭಿಸಲಾಗಿತ್ತು. ಕಾಮಗಾರಿಯಿಂದ ಸಂತ್ರಸ್ತರಾದ ಜನರಿಗೆ ಪುನರ್ವಸತಿಯನ್ನೂ ಕಲ್ಪಿಸಲಾಗಿತ್ತು. ಅಣೆಕಟ್ಟೆ ನಿರ್ಮಿಸುವ ಸ್ಥಳದಲ್ಲಿ ನೆಲ ಸಮತಟ್ಟುಗೊಳಿಸಲಾಗಿತ್ತು. ಭಾರಿ ಮೊತ್ತದ ಹಣ ವ್ಯಯಿಸಲಾಗಿತ್ತು.

ಆದರೆ, ಏಕಾಏಕಿ ಕಾಮಗಾರಿಯನ್ನು ಮುಂದಕ್ಕೆ ಹಾಕಿದ್ದು ಚೀನಾಕ್ಕೆ ದೊಡ್ಡ ಅಚ್ಚರಿ. `ನನಗೆ ಮಾಧ್ಯಮದ ಮೂಲಕ ಇದು ತಿಳಿಯಿತು. ನನಗೆ ಏನು ಹೇಳಲು ತೋಚುತ್ತಿಲ್ಲ~ ಎನ್ನುತ್ತಾರೆ ಚೀನಾ ವಿದ್ಯುತ್ ಹೂಡಿಕೆ ನಿಗಮದ ಅಧ್ಯಕ್ಷ ಲು ಕಿಜೌ.

ಸ್ವತಃ ಮ್ಯಾನ್ಮಾರ್ ಪ್ರಧಾನಿ ಫೆಬ್ರುವರಿಯಲ್ಲಿ ಅಣೆಕಟ್ಟೆಯ ಸ್ಥಳಕ್ಕೆ ಭೇಟಿ ನೀಡಿದ್ದರು. ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸೂಚಿಸಿದ್ದರು. ಹಠಾತ್ತಾಗಿ ಈ ಯೋಜನೆ ಕೈಬಿಟ್ಟಿರುವುದು ಆಶ್ಚರ್ಯ ಹುಟ್ಟಿಸುತ್ತಿದೆ ಎಂದು ಲು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನುವಾ ಸುದ್ದಿಸಂಸ್ಥೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಆದರೆ, ಚೀನಾ ಮತ್ತು ಮ್ಯಾನ್ಮಾರ್ ಗೆಳೆತನ ಇನ್ನೂ ಗಟ್ಟಿಯಾಗಿ ಇರುವುದರಿಂದ ಇಂತಹ ಸಣ್ಣ, ಪುಟ್ಟ ಬೆಳವಣಿಗೆಯನ್ನು ದೊಡ್ಡದಾಗಿ ಅರ್ಥೈಸುವುದು ಸರಿಯಲ್ಲ. ಈ ಎರಡೂ ದೇಶಗಳ ನಡುವಿನ ವಾಣಿಜ್ಯ ವಹಿವಾಟು ಕಳೆದ ವರ್ಷ 440 ಕೋಟಿ ಡಾಲರ್ ಮುಟ್ಟಿತ್ತು. ಅದಕ್ಕಿಂತ ಹಿಂದಿನ ವರ್ಷ 290 ಕೋಟಿ ವ್ಯವಹಾರ ನಡೆದಿತ್ತು.

ನೈರುತ್ಯ ಚೀನಾಕ್ಕೆ ಪರ್ಯಾಯ ಇಂಧನ ಮಾರ್ಗ ಕಲ್ಪಿಸಲು ಮ್ಯಾನ್ಮಾರ್‌ಅನ್ನು ಸೀಳುವಂತೆ ಕೊಳವೆ ಮಾರ್ಗ ಅಳವಡಿಸುವ ಯೋಜನೆಯ ಹಿಂದೆಯೂ ಚೀನಾದ ಪಾತ್ರವಿದೆ.

ಚೀನಾದ `ಪೀಪಲ್ಸ್ ಲಿಬರೇಷನ್ ಆರ್ಮಿ~ಯ ಹಿರಿಯ ಅಧಿಕಾರಿಯೊಬ್ಬರು ಮ್ಯಾನ್ಮಾರ್ ಜತೆಗಿನ ಸೇನಾ ಸಂಬಂಧ ಮತ್ತಷ್ಟು ಬಲಗೊಳಿಸುವುದಾಗಿ ಕಳೆದ ವಾರವಷ್ಟೇ ಹೇಳಿದ್ದಾರೆ.

ಚೀನಾಕ್ಕೆ ಭೇಟಿ ನೀಡಿದ್ದ ಮ್ಯಾನ್ಮಾರ್ ಸೇನಾಪಡೆಗಳ ಮುಖ್ಯಸ್ಥ ಮಿನ್ ಅಂಗ್ ಹ್ಲ್ಯಾಂಗ್ ಕೂಡ ಇದೇ ಮಾತು ಪುನರುಚ್ಚರಿಸಿದ್ದಾರೆ. ಉಭಯ ದೇಶಗಳ ನಡುವೆ ಸೇನಾ ಸಲಕರಣೆ ವಿನಿಮಯ ಮತ್ತು ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಬೀಜಿಂಗ್‌ನ ಪೀಪಲ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿನ್ ಕಾನ್‌ರಾಂಗ್ ಮಾತ್ರ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮ್ಯಾನ್ಮಾರ್ ಈಗ ವಿಭಿನ್ನವಾದ ವಿದೇಶಾಂಗ ನೀತಿ ಅನುಸರಿಸುತ್ತಿದೆ ಎನ್ನುತ್ತಾರೆ ಅವರು.

ಆದಾಗ್ಯೂ ಚೀನಾ ಅಧಿಕಾರಿಗಳು ಮುಕ್ತ ಮನಸ್ಸಿನಿಂದ ಏನನ್ನೂ ಹೇಳುತ್ತಿಲ್ಲ. ಚೀನಾ ವಿದೇಶಾಂಗ ಇಲಾಖೆ ವಕ್ತಾರ ಹಾಂಗ್ ಲೈ ಇತ್ತೀಚೆಗೆ ಹೇಳಿಕೆ ನೀಡುವಾಗ `ಅಮೆರಿಕ, ಮ್ಯಾನ್ಮಾರ್ ಉನ್ನತ ಮಟ್ಟದ ಮಾತುಕತೆಯಲ್ಲಿ ತೊಡಗಿದ್ದರಿಂದ ಅತೀವ ಸಂತಸವಾಗಿದೆ~ ಎಂದಿದ್ದರು.
 
ಪಾಶ್ಚಿಮಾತ್ಯ ದೇಶಗಳು ಮತ್ತು ಮ್ಯಾನ್ಮಾರ್ ಪರಸ್ಪರ ಸಹಕಾರ ಹೆಚ್ಚಿಸಿಕೊಂಡು ಸಂಬಂಧ ಸುಧಾರಿಸಿಕೊಳ್ಳಬೇಕು ಎಂದು ಹೇಳಿದ್ದ ಅವರು, `ಪ್ರಮುಖ ದೇಶಗಳು ಮ್ಯಾನ್ಮಾರ್ ಮೇಲೆ ಇರುವ ದಿಗ್ಬಂಧನ ತೆರವುಗೊಳಿಸಬೇಕು~ ಎಂದೂ ಅಭಿಪ್ರಾಯ ಪಟ್ಟಿದ್ದರು.

ಆದರೆ, ಖಾಸಗಿಯಾಗಿ ಚೀನಾ ಸರ್ಕಾರ ಮತ್ತು ಅಧಿಕಾರಿಗಳು ಒಳಗೊಳಗೆ ಬೆವರುತ್ತಿದ್ದಾರೆ. `ಗ್ಲೋಬಲ್ ಟೈಮ್ಸ~ನಲ್ಲಿನ ಸಂಪಾದಕೀಯವೇ ಇದಕ್ಕೆ ಉದಾಹರಣೆ. ಪಶ್ಚಿಮದ ದೇಶಗಳ ಜತೆ ಮ್ಯಾನ್ಮಾರ್ ಸಂಬಂಧ ಸುಧಾರಿಸುವುದಕ್ಕೆ ಚೀನಾ ವಿರೋಧವೇನೂ ಇಲ್ಲ. ಅದೇ ಕಾಲಕ್ಕೆ ತನ್ನ ಹಿತಾಸಕ್ತಿಗೆ ಧಕ್ಕೆಯಾಗುವುದನ್ನು ಚೀನಾ ಸಹಿಸುವುದಿಲ್ಲ ಎಂದು ಈ ಸಂಪಾದಕೀಯ ಹೇಳಿದೆ.

ಈ ವಾರದ ಆರಂಭದಲ್ಲಿ ಚೀನಾದ ಉಪಾಧ್ಯಕ್ಷ ಕ್ಸಿ ಜಿನ್‌ಪಿಂಗ್, ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥರನ್ನು ಭೇಟಿಯಾದಾಗ ಅವರ ಮನದಲ್ಲೂ ಇದೇ ಮಾತು ಇತ್ತೇನೋ..?
`ಹಳೆಯ ತಲೆಮಾರಿನ ನಾಯಕರು ಬೆಸೆದಿದ್ದ ಸ್ನೇಹ ಸಂಬಂಧ, ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಬದಲಾವಣೆಗೆ ಒಳಗಾಗುವುದು ಸಹಜ~ ಎಂದು ಕ್ಸಿ ಈ ಭೇಟಿಯಲ್ಲಿ ಹೇಳಿದ್ದಾರೆ.
 
ಹಿಲರಿ ಕ್ಲಿಂಟನ್ ಹಿಂದಿರುಗಿ ಬಹು ದಿನಗಳಾದ ಹಿನ್ನೆಲೆಯಲ್ಲಿ ಈ ಮಿತ್ರತ್ವ (ಚೀನಾ-ಮ್ಯಾನ್ಮಾರ್) ಮೊದಲಿನಂತೆ ಮುಂದುವರಿಯಲಿದೆ ಎಂಬ ಆಶಯವನ್ನೂ ಕ್ಸಿ ಹೊಂದಿದ್ದಾರೆ ಅನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT