ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್, ಥಾಯ್ಲೆಂಡ್, ಚೀನಾದಲ್ಲಿ ನಡುಗಿದ ಭೂಮಿ

Last Updated 25 ಮಾರ್ಚ್ 2011, 19:30 IST
ಅಕ್ಷರ ಗಾತ್ರ

 ಯಾಂಗೂನ್ (ಮ್ಯಾನ್ಮಾರ್) (ಎಎಫ್‌ಪಿ): ದೇಶದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ 75ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 110ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಮೆರಿಕದ ಭೂವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯ ಪ್ರಕಾರ, 6.8 ಪ್ರಮಾಣದ ಭೂಕಂಪ ದಾಖಲಾಗಿದೆ. ಚೀನಾ ಭೂಕಂಪನ ಜಾಲ ಸಂಸ್ಥೆಯ ಪ್ರಕಾರ, ಸ್ಥಳಿಯ ಕಾಲಮಾನ ರಾತ್ರಿ 9.55ಕ್ಕೆ ರಿಕ್ಟರ್ ಮಾಪಕದಲ್ಲಿ 7.2ರ ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪನವು ಸುಮಾರು 20 ಕಿ.ಮೀ. ಆಳದವರೆಗೆ, 20.8 ಡಿಗ್ರಿಗಳ ಉತ್ತರ ಅಕ್ಷಾಂಶ ಮತ್ತು 99.8 ಡಿಗ್ರಿಗಳ ಪೂರ್ವ ರೇಖಾಂಶದಲ್ಲಿ ದಾಖಲುಗೊಂಡಿದೆ. ಭೂಕಂಪವು ಕೇಂದ್ರ ಸ್ಥಾನದಿಂದ ನೂರಾರು ಕಿ.ಮೀ. ಗಳವರೆಗೆ, ದೂರದ ಬ್ಯಾಂಕಾಕ್, ಹನಾಯ್ ಹಾಗೂ ಚೀನಾದ ಕೆಲವು ಪ್ರದೇಶಗಳಲ್ಲೂ ಪ್ರತಿಬಿಂಬಿಸಿದೆ.

ಭೂಕಂಪ ಹುಟ್ಟಿದ ಸ್ಥಳಕ್ಕೆ ಹತ್ತಿರದ ಐದು ಪ್ರದೇಶಗಳಲ್ಲಿ ಸುಮಾರು 240 ಕಟ್ಟಡಗಳು ನೆಲಸಮಗೊಂಡಿದ್ದು, ದೂರದ ಸ್ಥಳಗಳಿಗೆ ಸಂಪರ್ಕ ಕಡಿದು ಹೋಗಿರುವುದರಿಂದ ಸಾವಿನ ಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿಯಲಾಗಿಲ್ಲ, ಇನ್ನೂ ಹೆಚ್ಚುವ ಸಾಧ್ಯತೆಗಳು ಇರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸೇನೆ, ಪೊಲೀಸ್ ಹಾಗೂ ಸ್ಥಳೀಯ ಆಡಳಿತವು ಗಾಯಾಳುಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದು, ಆದರೆ ಕೆಲವೆಡೆ ರಸ್ತೆ ಸಂಪರ್ಕ ಕಡಿದುಹೋಗಿದೆ. ಇದರಿಂದ ದೂರದ ಸ್ಥಳ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಈ ಮಹಾದುರಂತವು ಮೂಲಭೂತ ಸೌಲಭ್ಯಗಳಿಗೆ ಹಾನಿ ಭಾರಿ ಉಂಟು ಮಾಡಿದೆ. ಹಲವೆಡೆ ಕಟ್ಟಡಗಳು ಬಿರುಕು ಬಿಟ್ಟಿದ್ದು ಕುಡಿಯುವ ನೀರಿನ ಪೂರೈಕೆ ಸ್ಥಗಿತವಾಗಿದೆ ಎಂದು ಮ್ಯಾನ್ಮಾರ್ ಚಾರಿಟಿ ವಲ್ಡ್ ವಿಷನ್‌ನ ನಿರ್ದೇಶಕ ಕ್ರಿಸ್ ಹೆರಿಂಕ್ ತಿಳಿಸಿದ್ದಾರೆ. ಸಾಗರೋತ್ತರ ದಾನಿಗಳ ನೆರವಿನಿಂದ ಹಾನಿಗೀಡಾದ ಕೆಂಗ್‌ತುಂಗ್, ತಾಚಿಲೇಕ್ ಮತ್ತಿತರ ಪ್ರದೇಶದಲ್ಲಿ ಸುಮಾರು 7,000 ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಾಗಿ ವಿಷನ್ ಹೇಳಿದೆ.

ಬ್ಯಾಂಕಾಕ್ ವರದಿ (ಟಿಎನ್‌ಎ): ಭೂಕಂಪದ ಪ್ರಭಾವವು ಮ್ಯಾನ್ಮಾರ್ ಗಡಿಯಲ್ಲಿರುವ ನೆರೆಯ ಥಾಯ್ಲೆಂಡ್‌ನ ಉತ್ತರ ಜಿಯಾಂಗ್ ರಾಯಿ ಪ್ರಾಂತ್ಯದ ಮಾಯೆ ಸಾಯಿ ಜಿಲ್ಲೆಗೂ ತಲುಪಿದ್ದು, ಮನೆಯ ಗೋಡೆ ಕುಸಿದು 52 ವರ್ಷದ ಮಹಿಳೆಯೊಬ್ಬಳು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನು ಖಚಿತಪಡಿಸಿದ ಚಿಯಾಂಗ್ ರಾಯಿ ಗವರ್ನರ್ ಸಾಮ್‌ಚಾಯಿ ಹಟಯತಂತಿ, ಥಾಯ್ಲೆಂಡ್- ಮ್ಯಾನ್ಮಾರ್ ಗಡಿ ಪ್ರದೇಶಗಳಲ್ಲಿ ಸರಣಿ ಭೂಕಂಪನದ ಅನುಭವವಾಗಿರುವುದಾಗಿ ಹೇಳಿದ್ದಾರೆ. ಎತ್ತರದ ಕಟ್ಟಡಗಳಲ್ಲಿನ ಜನರ ತೆರವಿಗೆ ಮತ್ತು ಮಾಯೆ ಸಾಯಿ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಚಿಯಾಂಗ್ ರಾಯಿಯಲ್ಲಿನ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅವರು ಆದೇಶಿಸಿದ್ದಾರೆ.

ಥಾಯ್ಲೆಂಡ್‌ನ ಎಲ್ಲ ಉತ್ತರದ ಪ್ರಾಂತ್ಯಗಳಲ್ಲಿ, ಅದರಲ್ಲೂ ಪ್ರಧಾನವಾಗಿ ಚಿಯಾಂಗ್ ರಾಯಿ, ಚಿಯಾಂಗ್ ಮಾಯಿ, ನ್ಯಾನ್ ಹಾಗೂ ಪ್ರಾಯಿ ಪ್ರದೇಶ ಮತ್ತು ಕೆಲವು ಈಶಾನ್ಯ ಸ್ಥಳಗಳಲ್ಲಿ ತೀವ್ರ ಪ್ರರಿಮಾಣದ ಭೂಕಂಪನ ವರದಿಯಾಗಿದೆ.

ಬೀಜಿಂಗ್ ವರದಿ (ಪಿಟಿಐ): ಮ್ಯಾನ್ಮಾರ್‌ಗೆ ಪಶ್ಚಿಮ ಮತ್ತು ನೈರುತ್ಯ ಗಡಿ ಹೊಂದಿರುವ ದಕ್ಷಿಣ ಚೀನಾದ ಯುನ್ನಾನ್ ಪ್ರಾಂತ್ಯ ಮತ್ತು ಗುವಾಂಗ್‌ಕ್ಸಿ ಜುವಾಂಗ್ ಸ್ವಾಯತ್ತಾಧಿಕಾರ ಪ್ರದೇಶದಲ್ಲೂ ಭೂಕಂಪನ ಪರಿಣಾಮ ಬೀರಿದೆ.

 ಈ ಭಾಗದಲ್ಲಿ ಕೆಲವು ನಿಮಿಷ ಭೂಮಿ ನಡುಗಿದ ಮತ್ತು ಕಟ್ಟಡಗಳು ಅಲುಗಾಡಿದ ಅನುಭವವಾಗಿದ್ದು, ಇದರಿಂದ ನಾಗರಿಕರು ತಮ್ಮ ಮನೆಗಳಿಂದ ಹೊರಗೋಡಿದ್ದಾರೆ.ಚೀನಾದಲ್ಲಿ ಯಾವುದೇ ಹಾನಿ ಸಂಭವಿಸಿರುವ ವರದಿಯಾಗಿಲ್ಲ ಮತ್ತು ಈ ಬಗ್ಗೆ ಆಡಳಿತವು ಪರಿಶೀಲನೆ ಮಾಡುತ್ತಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT